ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

133

"ನನ್ಜತೇಲಿ ಯಾರಾದರೂ ಬನ್ನಿ. ಔ‍ಷಧಿ ಕೊಡಿಸ್ತೀನಿ."
ತಾಯಿ ಮಗಳ ಮುಖ ನೋಡಿದಳು.
"ಹೋಗಿ ತರ್ತೀಯಾ ಅಹಲ್ಯಾ?"
"ಹೂಂ."
"ಒಬ್ಬಳೇ ಬರೋಕಾಗುತ್ತಾ ವಾಪಸ್ಸು?"
"ಹೂಂ."
ಅಹಲ್ಯಾ ವೆಂಕಟೇಶನ ಹಿಂದೆ ಹೊರಟು ಹೋದಳು. ವಠಾರದ ಹಲವರು
ಅದನ್ನು ನೋಡಿದರು. ರಾಮಚಂದ್ರಯ್ಯ ಕಾಹಿಲೆ ಮಲಗಿದ್ದ. ಯಾರೂ ಮಾತ
ನಾಡಲಿಲ್ಲ.
ಅಹಲ್ಯಾ ಔಷಧಿ ತಂದಾಗ, ಮಗನ ಯೋಚನೆಯಲ್ಲೇ ಇದ್ದ ತಾಯಿ, 'ಒಬ್ಬಳೇ
ಬರೋದು ಕಷ್ಟವಾಯ್ತೇ?' ಎಂದು ಮಗಳನ್ನು ಕೇಳಲಿಲ್ಲ.
ಔಷಧಿ ಸೇವನೆ ಕ್ರಮವಾಗಿ ನಡೆಯಿತು.
ಮಾರನೆಯ ದಿನವೂ ವೆಂಕಟೇಶನ ಜತೆಯಲ್ಲಿ ಅಹಲ್ಯೆ ಆಸ್ಪತ್ರೆಗೆ ಹೋದಳು.
ಜ್ವರ ಹಾಗೆಯೇ ಇತ್ತು.
ಮೂರನೆಯ ಸಂಜೆ ಪುಟ್ಟ ಕಾರೊಂದು ವಠಾರರೆದುರು ಬೀದಿಯಲ್ಲಿ ನಿಂತಿತು.
'ಯಾರೋ ವಿಳಾಸ ತಪ್ಪಿ ಬಂದಿರಬೇಕು,' ಎಂದುಕೊಂಡರು, ಹೊರಗೇ
ನಿಂತಿದ್ದ ರಂಗಮ್ಮ.
ರಂಗಮ್ಮನ ವಠಾರದ ಮುಂದೆ ಕಾರು ನಿಂತಿದನ್ನು ಬೀದಿಯ ಆಚೆಗಿನವರೂ
ವಠಾರದವರೂ ಜತೆಯಾಗಿಯೇ ನೋಡಿದರು.
ವೆಂಕಟೇಶ ಹೊರಕ್ಕಿಳಿದಾಗ, ಕಾರು ತಮ್ಮ ವಠಾರಕ್ಕೇ ಬಂದುದೆಂದು ತಿಳಿದು
ರಂಗಮ್ಮನಿಗೆ ಸಂತೋಷವಾಯಿತು. ಆತನ ಕೈಯಲ್ಲಿ 'ಬ್ಯಾಗ್' ಇತ್ತು. ಅವನ
ಹಿಂದೆ ಡಾಕ್ಟರು ಬಂದರು.
ಆಗ ಎಲ್ಲರಿಗೂ ರಾಮಚಂದ್ರಯ್ಯನನ್ನು ನೋಡಲು ಡಾಕ್ಟರು ಬಂದರೆಂಬುದು
ಸ್ಪಷ್ಟವಾಯಿತು. ರಾಜಮ್ಮ ಬೀಗುತ್ತ ಮಗನ ಹಿಂದೆ ತಾನೂ ನಡೆದಳು.
ವಠಾರವನ್ನು ನೋಡಿ 'ಹುಂ' ಎಂದರು ಡಾಕ್ಟರು. ರೋಗಿಯನ್ನು ಆಸ್ಪತ್ರೆಗೆ
ಸಾಗಿಸಬೇಕಾಗುವುದೇನೋ ಅನಿಸಿತು ಅವರಿಗೆ. ಪರೀಕ್ಷಿಸಿದರು. ಅವರು ಮುಖ
ಗಂಟಿಕ್ಕಲಿಲ್ಲ ಎಂದು ವೆಂಕಟೇಶನಿಗೆ ಸಮಾಧಾನ.
"ಛಳಿ ಜ್ವರ. ಮಲೇರಿಯಾ. ಇನ್ನೆರಡೇ ದಿವಸ. ಇಳಿದು ಹೋಗುತ್ತೇ,"
ಎಂದು ಡಾಕ್ಟರು ವೆಂಕಟೇಶನನ್ನೂ ರೋಗಿಯ ತಾಯಿ ಮತ್ತು ತಾಯಿಯ ಮಗಳನ್ನೂ
ನೋಡುತ್ತ ಹೇಳಿದರು.
ಮತ್ತೆ ಕಾರಿನತ್ತ ಹೋಗುತ್ತ ಅವರೆಂದರು:

"ಇದೇ ಏನಯ್ಯಾ ನಿನ್ನ ವಠಾರ? ಮೈ ಗಾಡ್! ಹುಂ!"