ಈ ಪುಟವನ್ನು ಪ್ರಕಟಿಸಲಾಗಿದೆ

132

ಸೇತುವೆ

ಮೀನಾಕ್ಷಮ್ಮ ಚಂಪಾವತಿ ಹೇಳಿದಳು:
"ರಂಗಮ್ಮ ಗಟ್ಟಿ ಜೀವ ಕಣ್ರೀ. ಎಂಥ ಕಾಹಿಲೇನೇ ಬರ್ಲಿ. ಹುಷಾರಾಗಿ
ಏಳ್ತಾರೆ."
ಅಹಲ್ಯೆಯ ಅಣ್ಣ ರಾಮಚಂದ್ರಯ್ಯ ನೋಡಲು ಹೃಷ್ಟಪುಷ್ಟನಾಗಿಯೇ ಇದ್ದ.
ಆತ ಕಾಹಿಲೆ ಬೀಳಬಹುದೆಂದು ಯಾರೂ ಭಾವಿಸಿರಲಿಲ್ಲ. ಒಂದು ಸಂಜೆ ಹಿಂತಿರು
ಗಿದವನು "ಮೈ-ಕೈ ನೋವು" ಎಂದ. "ಹಸಿವಿಲ್ಲ, ಊಟ ಬೇಡ" ಎಂದು ಬೆಚ್ಚನೆ
ಹೊದ್ದು ಮಲಗಿದ. ಮೈ ಕಾದು ಕೆಂಡವಾಯಿತು. ತಾಯಿ ಗಾಬರಿಯಾದಳು.
ಕಾಯಿಲೆ ಎಂಬ ಪದಕ್ಕೆ ಸಾವು ಎಂಬ ಅರ್ಥವೇ ಆಕೆಗೆ ತೋರುತ್ತಿದ್ದುದು. ಆಕೆಯ
ಗಂಡ ತೀರಿಕೊಂಡಿದ್ದುದೂ ಹಾಗೆಯೇ. ಮಗ ಒಪ್ಪಲಿಲ್ಲವೆಂದು ಆಕೆ ಕೇಶಮುಂಡನ
ಮಾಡಿಸಿಕೊಂಡಿರಲಿಲ್ಲ. "ಯಾವುದಾದರೂ ಕ್ಷೇತ್ರಕ್ಕೆ ಹೋಗಿ ಮಾಡಿಸ್ಕೋಬೇಕು"
ಎಂದು, ಕೇಳಿದವರಿಗೆ ಹೇಳುತಿದ್ದಳು. 'ಸಕೇಶಿಯಾಗಿ ಉಳಿದದ್ದಕ್ಕೆ ದೇವರು ಈ
ಶಿಕ್ಷೆ ಕೊಡುತ್ತಿದ್ದಾನೆಯೆ?' ಎಂದು ಆ ತಾಯಿ ಮನಸ್ಸಿನಲ್ಲೆ ಹೆದರಿದಳು.
ಬಂದು ನೋಡಿದ ಚಂಪಾ ಅಂದಳು:
"ಔಷಧಿ ತರೋಕೆ ತಡಮಾಡ್ಬೇಡಿ."
ಕಂಗಾಲಾಗಿದ್ದ ತಾಯಿ ಕೇಳಿದಳು:
"ಎಲ್ಲಿಂದ ತರೋಣ್ವೆ ಅಹಲ್ಯಾ? ಮುನಿಸಿಪಾಲ್ಟಿ ಆಸ್ಪತ್ರೆಯಿಂದ್ಲೇನೇ!"
ಆಕೆಯ ಗಂಡನಿಗೆ- ಅಹಲ್ಯೆಯ ತಂದೆಗೆ- ಅಲ್ಲಿಂದಲೇ ತಂದಿದ್ದರು.
"ಬೇಡಮ್ಮ. ಮಲ್ಲೇಶ್ವರದಲ್ಲಿ ಒಬ್ರು ಡಾಕ್ಟರಿದಾರೆ."
"ನಿಂಗೆ ಗೊತ್ತೆ ಅಹಲ್ಯಾ?"
ಅಹಲ್ಯೆ ತಡವರಿಸಿ ಹೇಳಿದಳು:
"ರಾಜಮ್ಮನವರ ಮಗ ಅಲ್ಲೇ ಕೆಲಸ ಮಾಡ್ತಾರಮ್ಮ."
ಅಹಲ್ಯೆಯ ತಾಯಿ ಅಳುತ್ತ ರಾಜಮ್ಮನವರಲ್ಲಿಗೆ ಹೋದಳು.
"ಏನಾದರೂ ಮಾಡಿ ರಾಜಮ್ಮ. ನಿಮ್ಮ ಮಗನಿಗೆ ಹೇಳಿ."
"ಅಳಬೇಡಿ. ಯಾಕೆ ಅಳ್ತೀರಾ?" ಎಂದು ರಾಜಮ್ಮನ ಮಗ ವೆಂಕಟೇಶ ಆ
ತಾಯಿಯನ್ನು ಹಿಂಬಾಲಿಸಿ ಬಂದ. ರಾಮಚಂದ್ರಯ್ಯನ ನಾಡಿ ಹಣೆ ಮುಟ್ಟಿ
ನೋಡಿದ. ಅಹಲ್ಯಾ ಸಜಲನಯನೆಯಾಗಿ ವೆಂಕಟೇಶನನ್ನೇ ನೋಡಿದಳು.
"ಡಾಕ್ಟರನ್ನ ಕರಕೊಂಡು ಬರ್ಬೇಕೇನಪ್ಪಾ?" ಎಂದು ತಾಯಿ ಕೇಳಿದಳು.
"ಈಗೇನು ಬೇಡಿ. ಒಂದೆರಡು ದಿವಸ ಔಷಧಿ ತಗೊಳ್ಲಿ. ಆಮೇಲೆ ಬೇಕಾ
ದರೆ ಡಾಕ್ಟರನ್ನು ಕರಕೊಂಡ್ಬರ್ತೀನಿ."
"ದುಡ್ಡು ಎಷ್ಟು ಕೊಡ್ಬೇಕಪ್ಪ ಈಗ?"
"ಈಗ ಬೇಡಿ. ಆಮೇಲೆ ಕೊಟ್ಟೀರಂತೆ...ಶೀಷೆ ಇದೆಯೇನು?"

"ಇದೆ."