ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

23

"ನೀವೆಲ್ಲಾ ಊಟ ಮಾಡಿ ಮಲಕೊಂಡ್ಬಿಡೀಪ್ಪಾ ಪುಟ್ಟೂ. ಎಷ್ಟು ಹೊತ್ತಿಗೆ
ಬರ್ತಾರೋ ಏನೋ ನಿಮ್ಮಪ್ಪ."
"ಹೂಂ."
"ಊಟಕ್ಕಿಡ್ಲೇನು?"
"ಬೇಡಿ ಅತ್ತೆ. ನಾವೇ ಬಡಿಸ್ಕೋತೀವಿ ಅತ್ತೆ."

ಅತ್ತೆ ಕವ:ಲಮ್ಮ! ಆಕೆಗೆ ಹೆಣ್ಣು ಮಗುವಿರಲಿಲ್ಲ...ಯಾವ ಮಗುವೂ ಇರ
ಲಿಲ್ಲ. ಲಂಗ ತೊಡುವ ಪುಟ್ಟ ಮಗಳು ಇದ್ದಿದ್ದರೆ ಆ ಹುಡುಗನನ್ನೇ ಕಮಲಮ್ಮ
ಖಂಡಿತವಾಗಿಯೂ ಅಳಿಯನನ್ನಾಗಿ ಮಾಡಿಕೊಳ್ಳುತ್ತಿದ್ದಳು.
ಕಮಲಮ್ಮ ನಿಟ್ಟುಸಿರುಬಿಟ್ಟು ಗಂಜಿಯ ಪಾತ್ರೆಯತ್ತ ಮತ್ತೊಮ್ಮೆ ನೋಡಿದಳು.
ಅಲ್ಲಿ ಹೆಚ್ಚೇನೂ ಇರಲಿಲ್ಲ
"ಇದರಲ್ಲೇನೂ ಮಿಗಿಸ್ಬೇಡಿ. ನಿಮ್ಮಪ್ಪ ಊಟ ಮಾಡ್ಕೊಂಡೇ ಬರ್ತಾರೆ."
"ಹೂಂ ಅತ್ತೆ."
....ಮಕ್ಕಳು ಊಟ ಮಾಡಿ ಒಂದನ್ನೊಂದು ತಬ್ಬಿಕೊಂಡು ನಿದ್ದೆಹೋದವು.
ಬಲು ಭಾರವಾದ ಹೃದಯವನ್ನು ಹೊತ್ತು ಅತ್ಯಂತ ಹಗುರವಾದ ಕಳ್ಳ ಹೆಜ್ಜೆ
ಗಳನ್ನಿ ಡುತ್ತ ಒಂಭತ್ತು ಘಂಟೆಯ ಸುಮಾರಿಗೆ ನಾರಾಯಣಿಯ ಗಂಡ ಮನೆಗೆ ಬಂದ.
ಇನ್ನು ರಂಗಮ್ಮ ಹೆಚ್ಚು ದಿನ ತಡೆಯಲಾರರೆಂಬ ಭಯ ಆತನಿಗಿದ್ದೇ ಇತ್ತು. ವಠಾರಕ್ಕೆ
ಹಿಂತಿರುಗಿದಾಗಲೆಲ್ಲ ಅಳುಕು ಹೆಚ್ಚುತ್ತಿತ್ತು....ಹಗಲು ಉದ್ಯೋಗಕ್ಕಾಗಿ ಆತ ಅಲೆ
ಯುತ್ತಿದ್ದ. ಆದರೆ ಎಲ್ಲ ಯತ್ನಗಳೂ ಪರಿಚಯದವರಿಂದ ಪುಡಿಕಾಸು ಸಾಲ ಪಡೆ
ಯುವುದರಲ್ಲೇ ಮುಕ್ತಾಯವಾಗುತ್ತಿದ್ದುವು. ಹೇಡಿ ಮನಸ್ಸು ಒಮ್ಮೊಮ್ಮೆ ‌ಎಲ್ಲಿ
ಗಾದರೂ ಓಡಿಹೋಗೆನ್ನುತ್ತಿತ್ತು. ಆದರೆ, ಮಕ್ಕಳ ನೆನಪಾದಗಲೆಲ್ಲ ಒತ್ತರಿಸಿ ಬರು
ತ್ತಿತ್ತು ಅಳು.
ನಿದ್ದೆ ಹೋಗುತ್ತಿದ್ದ ಮಕ್ಕಳನ್ನು ಕಂಡು ಆತನಿಗೆ ತುಸು ಸಮಾಧಾನವೆನಿಸಿತು.
ಗಂಜಿಯ ಪಾತ್ರೆಯನ್ನು ನೋಡಿದ. ಅಲ್ಲೇನೂ ಇರಲಿಲ್ಲ. ಹಸಿವೆಯಾಗಿತ್ತು. ಆತ
ಸಂಜೆ ಒಮ್ಮೆ ಬರಿಯ ಕಾಫಿ ಕುಡಿದಿದ್ದ; ಯಾರೋ ಸ್ನೇಹಿತ ಕೊಟ್ಟಿದ್ದ ಸಿಗರೇಟು
ಸೇದಿದ್ದ_ಅಷ್ಟೆ. ಈಗ ಮನೆಯಲ್ಲಿ ಒಲೆ ಹಚ್ಚಲು ಮನಸ್ಸಾಗಲಿಲ್ಲ. ಅಲ್ಲದೆ ಇರುವ
ಸ್ವಲ್ಪ ಅಕ್ಕಿ ಆದಷ್ಟು ದಿನ ಬರಬೇಕಲ್ಲವೆ?.... ಆತ ಎರಡು ಲೋಟ ನೀರು
ಕುಡಿದ. ದೀಪ ಆರಿಸಿ ಮಲಗಿಕೊಳ್ಳಬೇಕೆಂದು, ಚಾಪೆಯನ್ನೆತ್ತಿ ಮಕ್ಕಳ ಬಳಿಯಲ್ಲೇ
ಸುರುಳಿ ಬಿಡಿಸಿದ.
ಅಷ್ಟರಲ್ಲಿ ರಂಗಮ್ಮ ಬರುತ್ತಿದ್ದ ಸದ್ದಾಯಿತು. ಅವರ ದೃಷ್ಟಿಗೆ ಬೀಳುವುದಕ್ಕೆ
ಮುಂಚೆಯೇ ದೀಪ ಆರಿಸಬೇಕೆಂದು ಆತ ಮುಂದಾದ. ಸಾಧ್ಯವಾಗಲಿಲ್ಲ. ರಂಗಮ್ಮ
ಆಗಲೇ ಬಾಗಿಲು ಸಮೀಪಿಸಿದ್ದರು. ಅಲ್ಲಿಗೇ ಬಂದಿದ್ದರು ಅವರು.
ನಾರಾಯಣಿಯ ಗಂಡ ವಠಾರದೊಳಕ್ಕೆ ಬಂದುದನ್ನು ರಂಗಮ್ಮ ಗಮನಿಸಿದ್ದರು.