ಈ ಪುಟವನ್ನು ಪ್ರಕಟಿಸಲಾಗಿದೆ

24

ಸೇತುವೆ

ಹುಡುಗ ಹೇಳಿದೊಡನೆ ತಮ್ಮನ್ನು ಕಾಣಲು ಆತ ಬರಬಹುದು ಎಂದು ಕಾದು ಕುಳಿ
ತರು. ಬರಲಿಲ್ಲ. ಹುಡುಗ ಹೇಳಲು ಮರೆತನೇನೋ ಎಂದುಕೊಂಡರು. ಹೇಳಿದರೂ
ಬರದೇ ಇರಬಹುದು-ಎಂಬ ಶಂಕೆ ತಲೆದೋರಿ, ಬಲವಾಯಿತು. ಆತ ತಪ್ಪಿಸಿಕೊಳ್ಳಲು
ಯತ್ನಿಸುತ್ತಿದ್ದಾನೆಂದು ರಂಗಮ್ಮ ಸಿಟ್ಟಾದರು. ತಾವೇ ಹೋಗಿ ನೋಡುವುದು
ಮೇಲೆಂದು ಎದ್ದರು.
ಬಾಗಿಲ ಬಳಿ ನಿಂತು, ಮಕ್ಕಳು ಆಗಲೆ ಮಲಗಿದ್ದುವೆಂಬುದನ್ನು ಮನಗಂಡಾಗ,
ತಮ್ಮ ಸಂದೇಶ ಆತನಿಗೆ ತಲುಪಿಯೇ ಇಲ್ಲವೆಂಬುದು ಸ್ಪಷ್ಟವಾದಗ, ರಂಗಮ್ಮನ ಸಿಟ್ಟು
ಅರ್ಧ ಇಳಿಯಿತು. ಆ ಕ್ಷಣವೇ ಕನಿಕರದ ಹೊನಲಿನಲ್ಲಿ ಕರ್ತವ್ಯ ತೇಲಿ ಹೋದೀತೆಂದು
ಹೆದರಿ, ಅವರು ಬಿಗಿಯಾದರು.
ಆದರೂ ಒರಟಾಗಿ ವರ್ತಿಸುವುದು ಅವರಿಂದಾಗಲಿಲ್ಲ. ಗಲಾಟೆ ಇಲ್ಲದೆ ಒಮ್ಮೆ
ಮನೆ ಖಾಲಿಯಾದರೆ ಸಾಕಪ್ಪ- ಎಂದುಕೊಂಡರು. ಮಾತುಗಳು ನಯವಾಗಿಯೇ
ಬಂದುವು.
"ಊಟ ಆಯ್ತೆ?"
"ಆಯ್ತು ರಂಗಮ್ನೋರೆ."
ಇಲ್ಲಿ ನಿಜದ ಬದಲು ಸುಳ್ಳು ಸಹ್ಯವಾಗಿತ್ತು.
ಆತನ ಉತ್ತರ ನಿಜವೋ ಅಲ್ಲವೋ ಎಂದು ಪರೀಕ್ಷಿಸುವ ಆಕಾಂಕ್ಷೆಯೇನೂ
ರಂಗಮ್ಮನಿಗಿರಲಿಲ್ಲ.
"ಸ್ವಲ್ಪ ಮನೇ ಕಡೆ ಬಾಪ್ಪಾ."
"ಬಂದೆ, ನಡೀರಿ."
ಆತ ಹಾಗೆಯೇ ಹೊರಡಲು ಸಿದ್ಧನಾದ.
"ದೀಪ ಆರಿಸ್ಬಿಡು" ಎಂದು ಹೇಳಿ ರಂಗಮ್ಮ ತಮ್ಮ ಮನೆಯತ್ತ ಹೆಜ್ಜೆ ಇಟ್ಟರು.
ನಾರಾಯಣಿಯ ಗಂಡ ದೀಪ ಆರಿಸಿ, ಮೌನವಾಗಿ ಅವರನ್ನು ಹಿಂಬಾಲಿಸಿದ
....ಗೋಡೆಗೊರಗಿ ನೆಲದಮೇಲೆ ಕುಳಿತ ನಾರಾಯಣಿಯ ಗಂಡನನ್ನು ರಂಗಮ್ಮ
ದಿಟ್ಟಿಸಿದರು.
"ಕೆಲಸ ಸಿಗಲಿಲ್ಲ?..."
"ಹುಡುಕ್ತಾ ಇದೀನಿ ರಂಗಮ್ನೋರೆ."
"ಇದೇನೂ ಮೊದಲ್ನೇ ಸಲ ಅಲ್ವಲ್ಲಾ? ಹಿಂದೆ ಕೆಲಸ ಸಿಕ್ದಾಗ್ಲೆಲ್ಲ ಕಳ
ಕೊಂಡ್ಬಿಟ್ಟೆ."
"ಏನು ಮಾಡ್ಲಿ ಹೇಳಿ? ನನ್ನ ಹಣೇ ಬರಹ."
ರಂಗಮ್ಮ ಮಾತ್ರ ಹಾಗೆಂದು ಒಪ್ಪಲು ಸಿದ್ಧರಿರಲಿಲ್ಲ. ಈ ಗಂಡಸಿನ ಯೋಗ್ಯ
ತೆಯೇ ಅಷ್ಟು ಎಂಬುದು ಅವರಿಗೆ ಖಚಿತವಾಗಿತ್ತು. ಅವರ ಗಂಟಲಿನಿಂದ ಅಸ್ಪಷ್ಟವಾದ
ಸ್ವರಗಳು ಹೊರಬಿದ್ದುವು: