ಈ ಪುಟವನ್ನು ಪ್ರಕಟಿಸಲಾಗಿದೆ

"ಗಾಬರಿಯಾಗಬೇಡಿ. ನಿಮ್ಮಂಥ ಸದ್ಗೃಹಸ್ಥರನ್ನು ಪೋಲೀ ಸರಿಗೆ ಒಪ್ಪಿಸೋಕೆ ನಾನೇಕೆ ಮೂರ್ಖನೆ?"

ಸದ್ಗೃಹಸ್ಥನಾದ ನಾನು ಏನು ಉತ್ತರ ಕೊಡಬೇಕೊ ತಿಳಿಯಲಿಲ್ಲ. ಆತನೇ ಹೇಳಿ;

"ನೀವು ಯಾರೇ ಆಗಿರಿ. ಅದು ನನಗೆ ಮುಖ್ಯವಲ್ಲ. ನಮ್ಮ ಗಿರಾಕಿಯಾಗಿ ಯಾವಾಗಲೂ ಬನ್ನಿ. ನಿಮಗೆ ಸ್ವಾಗತ ಇದ್ದೇ ಇದೆ."

ಆತ ನೂರರ ಎರಡು ನೋಟುಗಳನ್ನು ಹೊರ ತೆಗೆದು ಮೇಜಿನ ಮೇಲಿಟ್ಟ.

"ನಾನ್ನೂರು " ಎಂದೆ ನಾನು.

"ಚರ್ಚೆ ಬೇಡಿ."

"ಅದು ಸರಿಯಲ್ಲ. ಹೊಸ ಪರಿಚಯ ಆಗೋ ರೀತಿ ಹೀಗಲ್ಲ."

ಆತ ಹತ್ತು ರೂಪಾಯಿಗಳ ಐದು ನೋಟುಗಳನ್ನು ಮತ್ತೆ ಎಣಿಸಿ,ಮೇಜಿನ ಮೇಲಿಟ್ಟ.

"ತೃಪ್ತಿಯಾಯಿತೋ?"

"ಇಲ್ಲ."

"ಅಪ್ಪಾ. ನೀವಿನ್ನೂ ಹುಡುಗ. ತಿಳಿವಳಿಕೆಯಿಲ್ಲದೆ ಹೀಗೆ ಚಂಡಿತನ ಮಾಡ್ಬೇಡಿ. ಅಪಾಯಾನ ಹಂಚಿಕೋ ಬೇಕಾದರೆ ಲಾಭಾನೂ ಹಾಗೆಯೇ ಹಂಚಿಕೋ ಬೇಕು."

ನಾನು ನೋಟುಗಳನ್ನು ಜೇಬಿನೊಳಕ್ಕೆ ತುರುಕಿದೆ. ಆ ಸರ ಕಾಣಿಸಲೇ ಇಲ್ಲ. ಆತನ ಕೈ ಬೆರಳುಗಳ ಎಡೆಯಿಂದ ಇಳಿದು ಅದೆಲ್ಲಿಗೋ ಮಾಯವಾಗಿತ್ತು.

ಆತ ನನ್ನನ್ನು ಬೀಳ್ಕೊಡಲೆಂದು ಬಾಗಿಲವರೆಗೂ ಬಂದು ಬರುತ್ತಾ ಗಟ್ಟಿಯಾಗಿ ಹೇಳಿದ.

"ನಿಮಗೆ ಬೇಕಾದ ಸರ ಮಾಡ್ಸಿ ಇಟ್ಟಿರ್ತೀವಿ. ನೀವು ಯಾವತ್ತು ಬೇಕಾದರೂ ಬನ್ನಿ."

"ಸರಿ."