ಈ ಪುಟವನ್ನು ಪ್ರಕಟಿಸಲಾಗಿದೆ

ದ್ದುವು. ಎಲ್ಲ ಸವಾಲುಗಳೂ ಒಂದರಲ್ಲೊಂದು ಬೆರೆತು,ಮುಂದೇನು? ಎಂಬ ದೊಡ್ಡ ಪ್ರಶ್ನೆ ನನ್ನನ್ನು ಅಣಕಿಸುತ್ತಿತ್ತು.

ನಾನು ಮನೆಗೆ ಹೋಗಲಿಲ್ಲ. ಮನೆಯಿಂದ ಸ್ವಲ್ಪ ದೂರದಲ್ಲೆ ಒಂದು ಮರದ ಕೆಳಗೆ ಒಬ್ಬಂಟಿಗನಾಗಿ ಕುಳಿತೆ. ಬೀದಿಯಲ್ಲಿ ಬರಿಯ ಲಂಗೋಟಿಯುಟ್ಟಿದ್ದ ಹುಡುಗರು 'ಉತ್ತುತ್ತೂ' ಆಡುತ್ತಿದ್ದರು. ಅವರೇ ಸುಖಿಗಳು. ಆವರು ಶಾಲೆಗೆ ಹೋಗಬೇಕಾದುದಿಲ್ಲ. ದೊಡ್ಡ ಮನುಷ್ಯರಾಗಬೇಕಾದುದಿಲ್ಲ. ಅವರಲ್ಲಿ ಯಾರೂ ತರಗತಿಗೆ ಮೊದಲಿ ಗರೆನ್ನಿಸಿಕೊಂಡು ಶ್ರೀಮಂತ ಹುಡುಗರ ದುರಾಗ್ರಹಕ್ಕೆ ತುತ್ತಾಗ ಬೇಕಾದುದಿಲ್ಲ. ಅವರು ಏನು ಇಲ್ಲದ ಕಡುಬಡವರು. ನಾನೂ ಬಡವ ನಿಜ. ಆದರೆ ಶಾಲೆಗೆ ಹೋಗುತ್ತಿರುವವನು-ವಿದ್ಯಾರ್ಥಿ.

ಮೆಲ್ಲಮೆಲ್ಲನೆ ಕತ್ತಲಾಯಿತು. ಹಾಲು ಕರೆಯಲು ಅಜ್ಜಿಗೆ ನೆರವಾಗುವ ಹೊತ್ತು. ಆದರೆ ನಾನಿನ್ನೂ ಮನೆಗೇ ಹೋಗಿಲ್ಲ. ಇನ್ನು ಸ್ವಲ್ಪ ಸಮಯದಲ್ಲಿ ತಂದೆ ಕೆಲಸದಿಂದ ಹಿಂತಿರುಗಿಬರುವನು. ಬಂದೊಡನೆಯೆ "ಇವತ್ತು ಏನು ಹೇಳ್ಕೊಟ್ರು ಚಂದ್ರು?" ಎಂದು ಕೇಳುವುದು ಪದ್ಧತಿ. ಈ ದಿನ ಆತ ಏನು ಮಾಡಬಹುದು?

ಮತ್ತೂ ಕತ್ತಲಾಯಿತು. ಉತ್ತುತ್ತೂ ಹುಡುಗರು ಮನೆಗೆ ಹೋದರು. ಪ್ರದೇಶ ನಿರ್ಜನವಾಯಿತು. ಒಬ್ಬನೇ ಅಲ್ಲಿರಲು ಹೆದರಿಕೆ ಎನಿಸಿತು. ಆದರೆ ಹಾಗೆ ಯಾರಾದರೂ ಹೇಳಿದ್ದರೆ ನಾನು ಒಪ್ಪು ತ್ತಿರಲಿಲ್ಲ. ಕತ್ತಲಾದ ಮಾತ್ರಕ್ಕೆ ಹೆದರಿಕೊಳ್ಳುವುದುಂಟೆ? ಅದು ಹೊರ ಜಗತ್ತಿಗೆ ನಾವು ತೋರಿಸುವ ಮುಖ. ಆದರೆ ಅಂತರ್ಯದೊಳಗೆ ಮಾತ್ರ ಮುಖ ಮುದುಡಿತ್ತು....ನಾನು ಮೆಲ್ಲನೆ ಮನೆಯತ್ತ ನಡೆದೆ.

"ಎಲ್ಗೋಗಿದ್ದೆ ಮರಿ?ಯಾಕೋ ತಡ?"ಎಂದರು ಅಜ್ಜಿ.ತಂದೆ ನಾನು ಬಂದ ಸದ್ದು ಕೇಳಿ ಓಡಿಯೋಡಿ ಹೊರಗೆ ಬಂದ.

"ಏನಾಯ್ತು ಚಂದ್ರು? ಏನಾಯ್ತು ಮಗ?"

ನನಗೇನಾಗಿತ್ತು? ಅದನ್ನು ಹೇಗೆ ಹೇಳಬೇಕು? ನಾನು ಬಹಳ ಹೊತ್ತು ಮಾತನಾಡಲೇ ಇಲ್ಲ. ತಂದೆ ತಿರುತಿರುಗಿ ಅದೇ ಪ್ರಶ್ನೆ ಕೇಳಿದ. ನಾನು ಉತ್ತರ ಕೊಡಲೇ ಇಲ್ಲ.