ಉಯಿಲು: ಸ್ವತ್ತಿನ ಮಾಲೀಕನ ಮರಣ ಸಂಭವಿಸಿದಾಗ ಆತನ ಆಸ್ತಿಗಳ ವಿಲೆಯ ಬಗ್ಗೆ ಆತ ಮಾಡಿದ ಕಾಯಿದೆಬದ್ಧ ವಹಿವಾಟು (ವಿಲ್). ಮೃತ್ಯು ಪತ್ರ ಎಂಬುದು ಇದರ ಇನ್ನೊಂದು ಹೆಸರು. ಒಬ್ಬಾತ ತನ್ನ ಮರಣಾನಂತರ ತನ್ನ ಸ್ವತ್ತು ಹೇಗೆ ವಿಲೆ ಆಗಬೇಕೆಂಬುದನ್ನು ವ್ಯಕ್ತಪಡಿಸುವ ಕೊಟ್ಟಕೊನೆಯ ಬಯಕೆ-ಎಂಬುದಾಗಿ ಭಾರತೀಯ ಉತ್ತರಾಧಿಕಾರ ಕಾಯಿದೆಯಲ್ಲಿ ಹೇಳಲಾಗಿದೆ. ಇದು ಇಂಗ್ಲೀಷಿನ ವಿಲ್ ಎಂಬ ಶಬ್ದದಿಂದ ಬಂದದ್ದು. ವಿಲ್ ಎಂಬ ಪದಕ್ಕೆ ಸಮಾನವಾದ ಶಬ್ದ ಸಂಸ್ಕೃತದಲ್ಲಾಗಲಿ, ಇತರ ಯಾವ ಭಾರತೀಯ ಭಾಷೆಯಲ್ಲೇ ಆಗಲಿ ಹಿಂದೆ ಇರಲಿಲ್ಲ. ಭಾರತದ ಪ್ರಾಚೀನ ನ್ಯಾಯಶಾಸ್ತ್ರದಲ್ಲಿ ಉಯಿಲಿನ ಕಲ್ಪನೆಯೇ ಇರದಿದ್ದದ್ದೇ ಇದಕ್ಕೆ ಮುಖ್ಯ ಕಾರಣ. ಶುದ್ಧ ಹಿಂದೂ ನ್ಯಾಯಶಾಸ್ತ್ರಕ್ಕೆ ಉಯಿಲಿನ ಕಲ್ಪನೆ ತೀರ ಹೊರಗು. ಉಯಿಲಿಗೆ ಸಂಬಂಧಪಟ್ಟ ನ್ಯಾಯವೇನಿದ್ದರೂ ರೋಮನ್ ನ್ಯಾಯದಿಂದ ಹುಟ್ಟಿದ್ದು. ಆದರೂ 1867ರಷ್ಟು ಹಿಂದೆಯೇ ಬೀರ್ ಪ್ರತಾಪ್ ವಿರುದ್ಧ ರಾಜೇಂದ್ರ ಪರ್ತಾಬ್ (12 ಮೂರ್ಸ್ ಇಂಡಿಯನ್ ಅಪೀಲ್ಸ್ 1-37-38) ಮೊಕದ್ದಮೆಯಲ್ಲಿ ಪ್ರಿವಿ ಕೌನ್ಸಿಲ್ ತನ್ನ ತೀರ್ಪುಕೊಡುತ್ತಾ, ಪ್ರಾಚೀನ ಹಿಂದೂ ನ್ಯಾಯಶಾಸ್ತ್ರ ದಲ್ಲಿ ಉಯಿಲುಗಳ ಉಲ್ಲೇಖ ಇಲ್ಲ ಎಂಬ ಕಾರಣದಿಂದ ಹಿಂದುಗಳು ತಮ್ಮ ಆಸ್ತಿಯನ್ನು ಉಯಿಲು ಮೂಲಕ ವಿಲೆ ಮಾಡಲಾರರು ಎಂಬುದನ್ನು ಸಾಧಿಸುವ ಕಾಲ ಎಂದೋ ಮುಗಿದುಹೋಗಿದೆಯೆಂದು ಸುಸ್ಪಷ್ಟವಾಗಿ, ನಿರ್ವಿವಾದವಾಗಿ ಘೋಷಿಸಿದೆ. ಉಯಿಲುಗಳಿಗೆ ಸಂಬಂಧಿಸಿದ ನ್ಯಾಯ ಇಂದು ಭಾರತದ ನ್ಯಾಯ ಪದ್ಧತಿಯಲ್ಲಿ ಸ್ಥಿರವಾದ ಸ್ಥಾನ ಪಡೆದಿದೆ. ಉಯಿಲಿನ ಮುಖ್ಯ ಲಕ್ಷಣಗಳು ಮೂರು: 1 ಇದರಲ್ಲಿ ಸ್ವತ್ತಿನ ವಿಲೆಯ ಉಲ್ಲೇಖವಿರುತ್ತದೆ. 2 ಈ ವಿಲೆ ಆಗತಕ್ಕದ್ದು ಉಯಿಲು ಬರೆದಾತನ ಮರಣಾನಂತರ. 3 ಇದನ್ನು ಮಾಡಿದಾತ ತನಗಿಷ್ಟ ಬಂದಂತೆ ಇದನ್ನು ರದ್ದು ಪಡಿಸಲು, ಬದಲಾಯಿಸಲು ಅಥವಾ ಮೊಟಕು ಮಾಡಲು ಅವಕಾಶ ಇರುತ್ತದೆ. ಈ ಮೇಲಿನ ಮೂರು ಲಕ್ಷಣಗಳಲ್ಲಿ ಕೊನೆಯ ಎರಡು ಲಕ್ಷಣಗಳು ಉಯಿಲುಗಳಿಗೇ ವಿಶಿಷ್ಟವಾದಂಥವು. ವಿಕ್ರಯ, ಭೋಗ್ಯ, ಗುತ್ತಿಗೆ ಮುಂತಾದ ರೀತಿಯಲ್ಲಿ ನಡೆಯುವ ಸ್ವತ್ತಿನ ವಿಲೆಗೂ ಉಯಿಲು ಮೂಲಕ ನಡೆಯುವ ವಿಲೆಗೂ ಇದೇ ಮುಖ್ಯ ವ್ಯತ್ಯಾಸ.
ಒಬ್ಬಾತ ತನ್ನ ಹೆಂಡತಿಗೆ ತನ್ನ ಮರಣಾನಂತರ ದತ್ತು ತೆಗೆದುಕೊಳ್ಳುವ ಅಧಿಕಾರ ಕೊಟ್ಟು ಬರೆದಿಡುವ ಪತ್ರವನ್ನು ಆತ ಉಯಿಲು ಎಂದು ಕರೆದರೂ ಅದು ಉಯಿಲಲ್ಲ. ಏಕೆಂದರೆ ಅದರಲ್ಲಿ ಸ್ವತ್ತಿನ ವಿಲೆಗೆ ಸಂಬಂಧಿಸಿದ ಅಂಶವಿಲ್ಲ. ಹಾಗೆಯೇ, ಪತ್ರ ಬರೆದ ಕೂಡಲೇ ಒಂದು ಸ್ವತ್ತು ಇನ್ನೊಬ್ಬನಿಗೆ ಹಸ್ತಾಂತರವಾಗಿ ಆತನಿಗೆ ಅದರ ಮೇಲೆ ಅಧಿಕಾರ ಪ್ರಾಪ್ತವಾದರೆ ಅಂಥ ಪತ್ರವೂ ಉಯಿಲಲ್ಲ. ಏಕೆಂದರೆ, ಅಂಥ ದಸ್ತವೇಜನ್ನು ಬರೆದಾತನ ಜೀವಿತ ಕಾಲದಲ್ಲೇ ಸ್ವತ್ತು ಹಸ್ತಾಂತರಗೊಳ್ಳುತ್ತದೆ. ಕೊನೆಯದಾಗಿ, ಯಾವ ದಸ್ತಾವೇಜನ್ನು ರದ್ದು ಪಡಿಸಲಾಗದ ರೀತಿಯಲ್ಲಿ ರಚಿಸಲಾಗುವುದೋ ಅದು ಉಯಿಲು ಎನ್ನಿಸಿಕೊಳ್ಳಲಾರದು, ಏಕೆಂದರೆ, ಬರೆದಾತನಿಗೆ ಅದನ್ನು ರದ್ದುಪಡಿಸುವ ಅಧಿಕಾರವಿಲ್ಲದಿದ್ದರೆ ಅಂಥ ದಸ್ತಾವೇಜು ಉಯಿಲಾಗಲಾರದು.
ಉಯಿಲನ್ನು ಮೊಟಕು ಮಾಡುವ, ವಿವರಿಸುವ, ಸ್ಪಷ್ಟೀಕರಿಸುವ ಇಲ್ಲವೇ ಮತ್ತಾವ ರೀತಿಯಲ್ಲಾದರೂ ಮೂಲದಲ್ಲಿ ಬದಲಾವಣೆ ಮಾಡುವ ಪತ್ರವನ್ನು ಉಪಮೃತ್ಯುಪತ್ರ, ಉಪಉಯಿಲು ಅಥವಾ ಅನುಬಂಧ (ಕಾಡಿಸಿಲ್) ಎಂದು ಕರೆಯುತ್ತಾರೆ. ಇದಕ್ಕೂ ಉಯಿಲಿಗೆ ಇರಬೇಕಾದ ಎಲ್ಲ ಲಕ್ಷಣಗಳೂ ಇರಲೇಬೇಕು. ಆದರೆ ಇದು ಉಯಿಲು ಎನಿಸಿಕೊಳ್ಳಲಾರದು. ಮೂಲ ಉಯಿಲು ಇದ್ದಾಗ ಮಾತ್ರ ಇದು ಹುಟ್ಟಲು ಅವಕಾಶವುಂಟು.
ಉಯಿಲುಗಳ ಪ್ರಭೇದಗಳು
ಸಂಪಾದಿಸಿಭಾರತೀಯ ಉತ್ತರಾಧಿಕಾರ ಕಾಯಿದೆಯ ಪ್ರಕಾರ ವಿಶೇಷ ಸೌಲಭ್ಯಯುಕ್ತ ಹಾಗೂ ಸಾಮಾನ್ಯ ಉಯಿಲು ಎಂಬ ಎರಡು ಬಗೆಯ ಉಯಿಲುಗಳಿವೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಸೈನಿಕರು, ವೈಮಾನಿಕರು ಅಥವಾ ನಾವಿಕರು ಮಾಡಬಹುದಾದ ಉಯಿಲು ವಿಶೇಷ ಸೌಲಭ್ಯಯುಕ್ತ ಉಯಿಲು, ಯುದ್ಧರಂಗಕ್ಕೆ ಕಳಿಸಿದ ಅಥವಾ ಯುದ್ಧದಲ್ಲಿ ವಾಸ್ತವವಾಗಿ ಹೋರಾಟದಲ್ಲಿ ತೊಡಗಿದ ಹದಿನೆಂಟು ವರ್ಷ ತುಂಬಿದ ಸೈನಿಕರಿಗೂ ನಾವಿಕರಿಗೂ ವೈಮಾನಿಕರಿಗೂ ಇಂಥ ಉಯಿಲುಗಳನ್ನು ಮಾಡುವ ವಿಶೇಷ ಅಧಿಕಾರ ಕೊಡಲಾಗಿದೆ. ಇಂಥ ಉಯಿಲು ಬರೆವಣಿಗೆಯಲ್ಲೇ ಇರಬೇಕಾದ್ದಿಲ್ಲ; ಬಾಯಿಮಾತಿನಲ್ಲಿದ್ದರೂ ಇದು ಕಾಯಿದೆಬದ್ಧ. ಈ ಉಯಿಲುಗಳನ್ನು ಮಾಡುವುದರಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಭಾರತೀಯ ಉತ್ತರಾಧಿಕಾರ ಕಾಯಿದೆಯ 66ನೆಯ ಕಲಮಿನಲ್ಲಿ ನಮೂದಿಸಲಾಗಿದೆ. ಈ ನಿಯಮಗಳು ಯಾವುದೆಂದರೆ: 1. ಸ್ವತ್ತು ವಿಲೆ ಮಾಡಬೇಕೆಂದಿರುವಾತ ತನ್ನ ಹಸ್ತದಿಂದ ಉಯಿಲನ್ನು ಬರೆದದ್ದಾದರೆ, ಅದಕ್ಕೆ ಆತ ತನ್ನ ಸಹಿ ಹಾಕಲೇ ಬೇಕಾಗಿಲ್ಲ. ಅದಕ್ಕೆ ಸಾಕ್ಷಿಗಳೂ ಬೇಕಿಲ್ಲ. 2. ಇದನ್ನು ಇತರರು ಪೂರ್ಣವಾಗಿ ಅಥವಾ ಆಂಶಿಕವಾಗಿ ಬರೆದದ್ದಾದರೆ, ಸ್ವತ್ತಿನ ವಿಲೆದಾರ ಸಹಿಮಾಡಬೇಕಾದ್ದು ಅಗತ್ಯ. ಸಾಕ್ಷಿಗಳು ಇರಲೇಬೇಕೆಂದಿಲ್ಲ. 3. ಒಂದು ವೇಳೆ ಇಂಥ ಉಯಿಲನ್ನು ಪೂರ್ಣವಾಗಿ ಅಥವಾ ಆಂಶಿಕವಾಗಿ ಬೇರೆಯವರು ಯಾರಾದರೂ ಬರೆದಿದ್ದು, ವಿಲೆದಾರ ಇದಕ್ಕೆ ಸಹಿಮಾಡಿಲ್ಲದಿದ್ದರೂ ಇದು ಆತನೇ ಹೇಳಿ ಬರೆಸಿದ್ದೆಂದು ರುಜುವಾತು ಮಾಡಬೇಕು, ಇಲ್ಲವೇ ಇದು ತನ್ನದೆಂದು ಆತ ಒಪ್ಪಿಕೊಳ್ಳಬೇಕು. 4. ಹೀಗೆ ದಸ್ತಾವೇಜು ವಿಲೆದಾರನ ಇಚ್ಛೆಗೆ ಅನುಗುಣವಾಗಿ ಪೂರ್ಣಗೊಳ್ಳದೆ ಇದ್ದ ಪಕ್ಷದಲ್ಲಿ, ಇದು ಅಪೂರ್ಣವೆಂಬ ಕಾರಣದಿಂದಲೇ ನ್ಯಾಯಬಾಹಿರವೆಂದು ಪರಿಗಣಿಸತಕ್ಕದ್ದಲ್ಲ. ಆದರೆ ಹಾಗೆ ಇದು ಅಪೂರ್ಣವಾಗಿ ಉಳಿಯಲು ಬೇರೆ ಯಾವುದಾದರೂ ಕಾರಣಗಳಿದ್ದುವೆಂದು ರುಜುವಾತಾದರೆ ಸಾಕು. 5. ಯಾವನೇ ಸೈನಿಕ, ವೈಮಾನಿಕ ಅಥವಾ ನಾವಿಕ ಉಯಿಲು ಬರೆಯಲೆಂದು ಬರೆವಣಿಗೆಯ ಮೂಲಕ ಸೂಚನೆಗಳನ್ನು ಕೊಟ್ಟಿದ್ದು, ಆ ರೀತಿ ಉಯಿಲು ರಚನೆಯಾಗುವ ಮೊದಲೇ ಆತ ಸತ್ತರೆ, ಆಗ ಆತ ಬರೆದ ಸೂಚನೆಗಳೇ ಉಯಿಲು ಎಂದು ಭಾವಿಸತಕ್ಕದ್ದು. 6. ಒಂದು ವೇಳೆ ಆತ ಉಯಿಲು ತಯಾರಿಸಲು ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಬಾಯಿಮಾತಿನ ಸೂಚನೆ ಕೊಟ್ಟಿದ್ದು ಆ ಸೂಚನೆಗಳನ್ನು ಆತನ ಎದುರಿನಲ್ಲೇ ಬರೆದು ಓದಿ ಹೇಳಿದ್ದ ಪಕ್ಷದಲ್ಲಿ ಆ ಸೂಚನೆಗಳೇ ಆತನ ಉಯಿಲು ಎಂದು ಭಾವಿಸತಕ್ಕದ್ದು. 7. ಏಕಕಾಲಕ್ಕೆ ಹಾಜರಿದ್ದ ಕನಿಷ್ಠ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಬಾಯಿಮಾತಿನಲ್ಲಿ ಆತ ತನ್ನ ಇಚ್ಛೆ ವ್ಯಕ್ತಪಡಿಸುವುದರ ಮೂಲಕ ಉಯಿಲು ಮಾಡುವುದು ಸಾಧ್ಯ. 8. ಬಾಯಿ ಮಾತಿನಲ್ಲಿ ಉಯಿಲುಮಾಡಿದ ಒಂದು ತಿಂಗಳ ಅನಂತರ ಉಯಿಲು ಮಾಡಿದಾತನಿಗೆ ವಿಶೇಷ ಸೌಲಭ್ಯಯುಕ್ತ ಉಯಿಲುಮಾಡುವ ಅಧಿಕಾರ ತಪ್ಪಿಹೋಗಿ, ಆತ ಇನ್ನೂ ಬದುಕಿದ್ದರೆ ಆಗ ಅಂಥ ಉಯಿಲು ಅನೂರ್ಜಿತವೆನಿಸುತ್ತದೆ. ಹಿಂದೆ ವಿವರಿಸಲಾದ ಸಂದರ್ಭದಲ್ಲಿನ ಸೈನಿಕ, ವೈಮಾನಿಕ, ನಾವಿಕರ ಹೊರತು ಇತರ ಯಾರೇ ಆಗಲಿ ಮಾಡುವ ಉಯಿಲುಗಳು ಸಾಮಾನ್ಯ ಉಯಿಲುಗಳು-ಇವುಗಳ ರಚನೆಯ ನಿಯಮಗಳನ್ನು ಭಾರತೀಯ ಉತ್ತರಾಧಿಕಾರ ಕಾಯಿದೆಯ 63ನೆಯ ಕಲಮಿನಲ್ಲಿ ಈ ರೀತಿ ನಮೂದಿಸಲಾಗಿದೆ: 1. ಸ್ವತ್ತು ವಿಲೇವಾರಿ ಮಾಡುವಾತ ಉಯಿಲಿಗೆ ತನ್ನ ಸಹಿ ಅಥವಾ ಗುರುತನ್ನು ತಾನೇ ಆಗಲಿ ತನ್ನ ಸಮಕ್ಷಮದಲ್ಲಿ ತನ್ನ ನಿರ್ದೇಶನದ ಪ್ರಕಾರ ಇನ್ನೊಬ್ಬನಾಗಲಿ ಹಾಕಿರಬೇಕು. 2. ಆತ ಮಾಡಿದ ಅಥವಾ ಆತನ ನಿರ್ದೇಶದ ಪ್ರಕಾರ ಇನ್ನೊಬ್ಬರು ಮಾಡಿದ ಸಹಿಯ ಉದ್ದೇಶ ಸ್ಪಷ್ಟವಾಗಿರಬೇಕು. ಉಯಿಲನ್ನು ಆಚರಣೆಯಲ್ಲಿ ತರುವ ಉದ್ದೇಶವನ್ನು ಅದು ಸ್ಪಷ್ಟವಾಗಿ ವ್ಯಕ್ತಪಡಿಸುವಂತಿರಬೇಕು. 3. ಸ್ವತ್ತಿನ ವಿಲೆದಾರನೋ ಆತನ ಪರವಾಗಿ ಇನ್ನೊಬ್ಬನೋ ಆ ಉಯಿಲಿಗೆ ಸಹಿ ಅಥವಾ ಗುರುತು ಹಾಕಿದ್ದನ್ನು ಕಣ್ಣಾರೆ ಕಂಡ ಕನಿಷ್ಠ ಇಬ್ಬರು ಸಾಕ್ಷ್ಯ ಹಾಕಿರತಕ್ಕದ್ದು. ಒಂದು ವೇಳೆ ಆತ ತಮ್ಮ ಸಮಕ್ಷವೇ ಸಹಿ ಹಾಕಿರದಿದ್ದರೂ ತಾನೇ ಹಾಕಿದುದಾಗಿ ಆತ ತಮ್ಮೆದುರಿಗೆ ಒಪ್ಪಿಕೊಂಡ ಮೇಲೆ ಇವರು ಸಾಕ್ಷ್ಯ ಹಾಕಿರಬೇಕು. ಈ ಸಾಕ್ಷಿಗಳು ಮಾತ್ರ ಉಯಿಲಿಗೆ ವಿಲೆದಾರನ ಸಮಕ್ಷದಲ್ಲೇ ಸಾಕ್ಷ್ಯ ಹಾಕಿರಬೇಕಾದ್ದು ಅವಶ್ಯ. ಇವರು ಏಕಕಾಲದಲ್ಲಿ ಹಾಜರಿರಬೇಕಾದ್ದಿಲ್ಲ. ಹೀಗೇ ಸಾಕ್ಷ್ಯ ಹಾಕಬೇಕೆಂಬ ಯಾವ ನಿರ್ದಿಷ್ಟ ನಿಯಮವೂ ಇಲ್ಲ.
ಉಯಿಲುದಾರನ ಅರ್ಹತೆ
ಸಂಪಾದಿಸಿಅಪ್ರಾಪ್ತವಯಸ್ಕನಲ್ಲದ, ಸ್ವಸ್ಥಚಿತ್ತನಾದ ಯಾವನಾದರೂ ಸ್ವಂತ ಇಚ್ಛೆಯಿಂದ ಯಾವ ಆತಂಕ ನಿರ್ಬಂಧಗಳಿಗೂ ಒಳಗಾಗದೆ ಉಯಿಲು ಮಾಡಬಹುದು. ಆತ ಯಾವ ಮತದವನಾದವನಾದರೂ ಆಗಿರಬಹುದು. ಭಾರತೀಯ ಉತ್ತರಾಧಿಕಾರ ಕಾಯಿದೆ ಹಿಂದೂ, ಮುಸ್ಲಿಂ, ಬೌದ್ಧ, ಸಿಖ್ ಅಥವಾ ಜೈನರಿಗೆ ಅನ್ವಯಿಸದೆ ಇದ್ದರೂ ಆಯಾ ಮತದವರು ತಾವು ವಿಲೆ ಮಾಡಬಹುದಾದಂಥ ಆಸ್ತಿಯನ್ನು ಉಯಿಲು ಮೂಲಕ ವಿಲೆ ಮಾಡಬಯಸಿದರೆ, ಆ ಕಾಯಿದೆಯ ಆರನೆಯ ಪರಿಚ್ಛೇದದಲ್ಲಿನ ಕಲಮುಗಳಿಗೆ ಅನುಗುಣವಾಗಿಯೇ ಉಯಿಲು ಮಾಡಬೇಕಾಗುತ್ತದೆ. ಇದರಲ್ಲಿನ ಕೆಲವು ಕಲಮುಗಳು ಹಿಂದೂಗಳಿಗೆ ಅನ್ವಯಿಸುವುದಿಲ್ಲ. 1956ರ ಹಿಂದೂ ಉತ್ತರಾಧಿಕಾರ ಕಾಯಿದೆ ಹಿಂದುಗಳಿಗೂ ಅನ್ವಯಿಸುತ್ತದೆ.
ನ್ಯಾಯದ ಅನ್ವಯ
ಸಂಪಾದಿಸಿಎಂಥ ಸ್ವತ್ತನ್ನು ಉಯಿಲು ಮೂಲಕ ವಿಲೆ ಮಾಡಬಹುದು ಎಂಬುದು ಇನ್ನೊಂದು ಪ್ರಶ್ನೆ. ಹಿಂದೆ ಭಾರತೀಯ ನ್ಯಾಯ ಬಹುಮಟ್ಟಿಗೆ ವ್ಯಕ್ತಿಯ ಮತವನ್ನೇ ಅವಲಂಬಿಸಿತ್ತು. ಹಿಂದೂಗಳಿಗೆ ಹಿಂದೂಧರ್ಮಶಾಸ್ತ್ರದ ಆಧಾರದ ಮೇಲೆ ರೂಪಿತವಾದ ನ್ಯಾಯವೂ ಮುಸ್ಲಿಮರಿಗೆ ಷರಿಯತ್ ನ್ಯಾಯವೂ ಅನ್ವಯವಾಗುತ್ತಿದ್ದುವು. 1956ನೆಯ ಹಿಂದೂ ಉತ್ತರಾಧಿಕಾರ ಕಾಯಿದೆ ಜಾರಿಗೆ ಬರುವ ತನಕ ಹಿಂದೂಗಳಿಗೆ ಸಂಬಂಧಿಸಿದಂತೆ ಈ ಹಕ್ಕು ಬಹು ಕುಂಠಿತವಾಗಿತ್ತು. ತಾನು ಬದುಕಿರುವಾಗ ಯಾವ ಸ್ವತ್ತನ್ನು ದಾನಮಾಡಲು ಹಿಂದೂವಿಗೆ ಅಧಿಕಾರವಿತ್ತೋ ಅದನ್ನು ಮಾತ್ರ ಆತ ಉಯಿಲು ಮೂಲಕ ವಿಲೆ ಮಾಡಲು ಸಮರ್ಥನಾಗಿದ್ದ. ಆದರೆ 1956ರ ಕಾಯಿದೆ ಜಾರಿಗೆ ಬಂದಮೇಲೆ ಹಿಂದೂವಿನ ಈ ಅಧಿಕಾರ ಬಹಳ ಮಟ್ಟಿಗೆ ವಿಸ್ತಾರವಾಗಿದೆ. ಮಿತಾಕ್ಷರ ನ್ಯಾಯ ಅನ್ವಯಿಸುವ ಪ್ರತಿಯೊಬ್ಬ ಹಿಂದುವೂ ಅವಿಭಕ್ತ ಕುಟುಂಬದಲ್ಲಿರುವ ತನ್ನ ಅವಿಭಕ್ತ ಹಿಸ್ಸೆಯನ್ನು ಉಯಿಲು ಮೂಲಕ ವಿಲೆ ಮಾಡಬಹುದು. ಆದರೆ ತನ್ನ ಹೆಂಡತಿಯ ಹಕ್ಕಿಗಾಗಲಿ ತನ್ನಿಂದ ಜೀವನಾಂಶವನ್ನೋ ರಕ್ಷಣೆಯನ್ನೋ ಪಡೆಯಬಲ್ಲ ಯಾರ ಹಕ್ಕಿಗಾಗಲಿ ಧಕ್ಕೆ ಬಾರದ ರೀತಿಯಲ್ಲಿ ಮಾತ್ರ ಆತ ತನ್ನ ಸ್ವತ್ತು ವಿಲೆ ಮಾಡುವುದು ಸಾಧ್ಯ.
ಈಗ ಜಾರಿಯಲ್ಲಿರುವ ಶಾಸನದ ಪ್ರಕಾರ ಹಿಂದೂಗಳು ತಮ್ಮ ಸ್ವಯಾರ್ಜಿತ ಸ್ವತ್ತನ್ನು ಯಾವತ್ತೂ ಉಯಿಲು ಮೂಲಕ ವಿಲೆ ಮಾಡಬಹುದು. ದಾಯಭಾಗಾ ಹಿಂದೂ ನ್ಯಾಯಪದ್ಧತಿ ಅನ್ವಯಿಸುವ ಹಿಂದೂ ತಂದೆ ತನ್ನ ಎಲ್ಲ ಸ್ವತ್ತನ್ನೂ-ಅದು ಪುರ್ವಾರ್ಜಿತವಾ ಗಿರಲಿ ಸ್ವಯಾರ್ಜಿತವಾಗಿರಲಿ-ಉಯಿಲು ಮೂಲಕ ವಿಲೆ ಮಾಡಬಹುದು. ಅಂಥ ಹಿಂದೂ ಕುಟುಂಬದ ಸದಸ್ಯನೂ ಅವಿಭಕ್ತ ಕುಟುಂಬದಲ್ಲಿರುವ ತನ್ನ ಹಿಸ್ಸೆಯನ್ನು ಉಯಿಲು ಮೂಲಕ ವಿಲೇವಾರಿ ಮಾಡಬಹುದು. ಹಿಂದೂ ಸ್ತ್ರೀ ತನ್ನ ಸ್ತ್ರೀಧನವನ್ನು ತನ್ನ ಗಂಡನ ಒಪ್ಪಿಗೆಯಿಂದ ಉಯಿಲು ಮೂಲಕ ವಿಲೆ ಮಾಡಬಹುದು. ಹಿಂದೂ ಉತ್ತರಾಧಿಕಾರ ಕಾಯಿದೆ ಬಂದ ಮೇಲೆ ಆಕೆಯ ಅಧಿಕಾರ ಇನ್ನೂ ಅಧಿಕವಾಗಿದೆ. ಅವಿಭಾಜ್ಯದಾಯದ ಮಾಲೀಕ ಯಾವುದಾದರೂ ವಿಶೇಷವಾದ ರೂಢಿ ಇಲ್ಲವೇ ನಿಷೇಧದ ಷರತ್ತಿಗೆ ಒಳಗಾಗಿಲ್ಲದ ಆಸ್ತಿಯನ್ನು ಉಯಿಲಿನ ಮೂಲಕ ವಿಲೆಮಾಡಬಹುದು. (ನೋಡಿ-ಅವಿಭಾಜ್ಯದಾಯ)
ಮುಸ್ಲಿಂ ನ್ಯಾಯಪದ್ಧತಿಯ ಪ್ರಕಾರ ಯಾವುದೇ ಒಬ್ಬ ಮುಸ್ಲಿಂ ಮತಸ್ಥನು/ಳು ತನ್ನ ಉತ್ತರಕ್ರಿಯೆ ಮತ್ತು ಸಾಲಗಳಿಗೆ ಸಂದಾಯವಾಗಿ ಮಿಗತೆ ಉಳಿದ ಸ್ವತ್ತಲ್ಲಿ ಮೂರನೇ ಒಂದು ಭಾಗಕ್ಕೆ (1/3) ಮೀರದಷ್ಟು ಭಾಗವನ್ನು ಮಾತ್ರ ಉಯಿಲು ಮೂಲಕ ವಿಲೆ ಮಾಡಬಹುದು. ಈ ಮಿತಿಯನ್ನು ಉಲ್ಲಂಘಿಸಿದ ಯಾವುದೇ ಉಯಿಲು ವ್ಯಕ್ತಿಯ ಮರಣಾಂತರದಲ್ಲಿ ಉತ್ತರಾಧಿಕಾರಿಗಳು ಸಮ್ಮತಿ ಕೊಡದ ಪಕ್ಷದಲ್ಲಿ ಮಿತಿಯನ್ನು ಉಲ್ಲಂಘಿಸಿದ ಅಂಶಕ್ಕೆ ಸಂಬಂಧಿಸಿದಂತೆ ಅನ್ವಯವಾಗುವುದಿಲ್ಲ.
ಉಯಿಲುಗಳ ರೂಪ
ಸಂಪಾದಿಸಿಉಯಿಲುಗಳು ಲಿಖಿತವಾಗಿರಬೇಕು. ಆದರೆ ರಿಜಿಸ್ಟರ್ ಮಾಡಿಸಬೇಕಾದ ನಿಯಮವೇನೂ ಇಲ್ಲ. ವಿಶೇಷ ಸೌಲಭ್ಯಯುಕ್ತ ಉಯಿಲುಗಳು ಬಾಯಿ ಮಾತಿನಲ್ಲೂ ಇರಬಹುದು. ಆದರೆ ಕನಿಷ್ಠ ಇಬ್ಬರು ಸಾಕ್ಷಿಗಳ ಸಹಿ ಅನಿವಾರ್ಯ.
ಉಯಿಲುಗಳನ್ನು ಅರ್ಥೈಸುವ ರೀತಿ
ಸಂಪಾದಿಸಿಉಯಿಲು ಸತ್ತ ಮನುಷ್ಯನ ಕೊಟ್ಟಕೊನೆಯ ಇಚ್ಛೆಯಾದ್ದರಿಂದ ಅದನ್ನು ಆತನ ಉದ್ದೇಶಕ್ಕೆ ಅನುಗುಣವಾಗಿಯೇ ಅರ್ಥೈಸಬೇಕಾದ್ದು ನ್ಯಾಯ ಮತ್ತು ಧರ್ಮ. ಉಯಿಲು ಸ್ಪಷ್ಟವಾಗಿ ನಿಸ್ಸಂದಿಗ್ಧವಾಗಿದ್ದರೆ ಅದನ್ನು ಅರ್ಥೈಸುವ ಕಷ್ಟ ಕಡಿಮೆ. ಒಂದು ವೇಳೆ ಅದು ಸ್ಪಷ್ಟವಾಗಿಲ್ಲದೆ ಇದ್ದರೆ, ಅದನ್ನು ಅರ್ಥೈಸುವಾಗ ಉಯಿಲುದಾರನ ಉದ್ದೇಶಕ್ಕೆ ಭಂಗಬಾರದ ರೀತಿಯಲ್ಲಿ, ಅವನ ಅಂತಿಮ ಇಚ್ಛೆಗೆ ದ್ರೋಹವಾಗದಂತೆ, ಅರ್ಥೈಸಬೇಕಾದ ಮಹತ್ತರ ಹೊಣೆ ನ್ಯಾಯಾಲಯಗಳ ಮೇಲೂ ಉಯಿಲನ್ನು ಆಚರಣೆಯಲ್ಲಿ ತರಬೇಕಾದವರ ಮೇಲೂ ಇದೆ. ಉಯಿಲಿನ ಅರ್ಥವನ್ನು ಅನಾವಶ್ಯಕವಾಗಿ ಹಿಗ್ಗಿಸಲೂ ಕೂಡದು; ಅದಕ್ಕೆ ತೀರ ಸಂಕುಚಿತ ಅರ್ಥವನ್ನು ಕಲ್ಪಿಸಬಾರದು. ತೀರಿದವನ ಕೊನೆಯ ಬಯಕೆಯನ್ನು ಈಡೇರಿಸಲು ಎಲ್ಲ ರೀತಿಯ ಎಚ್ಚರಿಕೆಯಿಂದ ಪ್ರಯತ್ನಿಸಬೇಕು. ಇದೊಂದು ಪವಿತ್ರ ಕರ್ತವ್ಯ. (ಕೆ.ಸಿ.)