ಕರಗ : ಆದಿಶಕ್ತಿಯನ್ನು ಆರಾಧಿಸುವ ಹಲವಾರು ಸಂಪ್ರದಾಯಗಳಲ್ಲಿ ಒಂದು. ಕರಗ (ಕರಕ) ಎಂಬ ಮಾತಿಗೆ ಇಲ್ಲಿ ಕುಂಭ ಎಂಬ ಅರ್ಥ ಸರಿಹೋಗುತ್ತದೆ. ಕರಗಪುಜೆ ಮತ್ತು ಉತ್ಸವಗಳು ತಮಿಳುನಾಡಿನಲ್ಲಿ ಬಹು ಹಿಂದಿನಿಂದಲೂ ವೈಭವದಿಂದ ಆಚರಿಸಲ್ಪಡುತ್ತಿವೆ.

ಕರ್ನಾಟಕ ರಾಜ್ಯದಲ್ಲಿ ಕೋಲಾರ ಜಿಲ್ಲೆಯ ಕೆಲವು ಭಾಗಗಳಲ್ಲಿ ಮತ್ತು ಬೆಂಗಳೂರಿನಲ್ಲಿ ಇದರ ಆಚರಣೆ ಬಳಕೆಯಲ್ಲಿದೆ. ಬೆಂಗಳೂರಿನದಂತೂ ಈಚೆಗೆ ಬಹು ಪ್ರಸಿದ್ಧವೆನಿಸಿದೆ.

ಕರಗ ಅಚರಣೆಯ ಮೂಲವನ್ನು ಹೇಳುವ ಒಂದು ಐತಿಹ್ಯ ಹೀಗಿದೆ : ಕುರುಕ್ಷೇತ್ರ ಸಮರದ ಅನಂತರ ಪಾಂಡವರ ಸ್ವರ್ಗಾರೋಹಣ ಸಂದರ್ಭದಲ್ಲಿ ದ್ರೌಪದಿ ಮೂರ್ಛಿತಳಾಗಿ ಹಿಂದೆ ಬಿದ್ದಳಂತೆ. ಎಚ್ಚರಗೊಂಡಮೇಲೆ ತನ್ನ ಪತಿಗಳು ಇಲ್ಲದಿರುವುದನ್ನು ಕಂಡು ರೋದಿಸುತ್ತಿರುವಾಗ ತಿಮಿರಾಸುರನೆಂಬ ರಾಕ್ಷಸ ಆಕೆಯನ್ನು ಪೀಡಿಸಲು ಅವನನ್ನು ನಿಗ್ರಹಿಸುವ ಸಲುವಾಗಿ ವಿರಾಟರೂಪ ತಾಳಿ ತಲೆಯ ಮೇಲೆ ಧರಿಸಿದ ಕುಂಭವೇ ಇಂದು ಆರಾಧನೆಗೊಳ್ಳುತ್ತಿರುವ ಕರಗ. ಇದು ಒಂದು ನಂಬುಗೆ. ಬಹುಶಃ ಪಂಪನಲ್ಲಿ ಬರುವ ಕರಗ ಹೋಮ_ಎಂಬ ನುಡಿಗಟ್ಟಿಗೆ ಈ ಕಥೆಯ ಆಧಾರವಿರಬೇಕು. ದ್ವಾಪರಯುಗದಲ್ಲಿ ಸರ್ವಾಲಂಕಾರಭೂಷಿತೆಯಾದ ದ್ರೌಪದಿ ಮಂಗಳಕಲಶವನ್ನು ಹಿಡಿದು ಸ್ವಯಂವರ ಮಂಟಪವನ್ನು ಪ್ರವೇಶಿಸಿದಳು. ಮತ್ಸ್ಯಯಂತ್ರವನ್ನು ಭೇದಿಸಿದ ಅರ್ಜುನನನ್ನೂ ಕುಂತಿಯ ಆಭಿಬಾಷೆಯಂತೆ ಉಳಿದ ನಾಲ್ವರು ಪಾಂಡವ ಸೋದರರನ್ನೂ ಶಾಸ್ತ್ರೋಕ್ತವಾಗಿ ವಿವಾಹವಾದಳು. ಆಗ ಆನಂದಾತಿಶಯದಿಂದ ಕೈಯಲ್ಲಿದ್ದ ಕಲಶವನ್ನು ಶಿರದಲ್ಲಿ ಧರಿಸಿದಳು: ಅದೇ ಕರಗವಾಯಿತು_ಇದು ಮತ್ತೊಂದು ನಂಬುಗೆ. ಕರಗವನ್ನು ರೂಪಿಸುವ, ಹೊರುವ, ವಹ್ನಿಕುಲ ಕ್ಷತ್ರಿಯ ಮನೆತನದ ಹಿರಿಯರು ಪುಜಾರಿಗಳು ಈ ಆಚರಣೆಯ ಮೂಲ ರಹಸ್ಯವನ್ನು ಗೋಪ್ಯವಾಗಿಟ್ಟಿದ್ದಾರೆ. ದೈವಿಕ ಆಚರಣೆಯ ಗುಟ್ಟನ್ನು ಬಹಿರಂಗಪಡಿಸುವುದು ಕುಲಕ್ಕೆ ಕೇಡು, ದೇಶಕ್ಕೆ ಹಾನಿ ಎಂಬುದು ಅವರ ನಿಲುವಾಗಿರಬಹುದು.

ಈ ಉತ್ಸವದ ಆರಾಧನೆಯ ಸಂಪ್ರದಾಯವನ್ನು ನಡೆಸಿಕೊಂಡು ಬಂದಿರುವುದು ಬೆಂಗಳೂರಿನ ಮೂಲನಿವಾಸಿಗಳು ತಿಗಳರು ಎಂದು ಸಾಮಾನ್ಯವಾಗಿ ಕರೆಯಲ್ಪಡುವ ವಹ್ನಿಕುಲ ಕ್ಷತ್ರಿಯರು. ಇವರ ಮಾತೃಭಾಷೆ ತಿಗಳಾರಿ ಭಾಷೆಯಾಗಿದೆ. ಈ ತಿಗಳಾರಿ ಭಾಷೆಯು ಕನ್ನಡ ಮತ್ತು ತಮಿಳು ಮಿಶ್ರಿತ ಭಾಷೆಯಾಗಿರುತ್ತದೆ. ಇವರು 15ನೆಯ ಶತಮಾನದಲ್ಲಿಯೇ ಮೈಸೂರು ಸಂಸ್ಥಾನಕ್ಕೆ ಬಂದು ನೆಲೆಸಿದರೆಂದು ತಿಳಿದುಬರುತ್ತದೆ. ಹೈದರಾಲಿ ದಕ್ಷಿಣ ಭಾರತದ ಮೇಲೆ ದಂಡಯಾತ್ರೆ ಮಾಡಿದಾಗ ವೀರಾವೇಶದಿಂದ ಹೋರಾಡಿದ ಈ ವಹ್ನಿಕುಲ ಕ್ಷತ್ರಿಯರ ಧೈರ್ಯ ಹಾಗೂ ಇವರ ಕುಲವೃತ್ತಿಯಾದ ತೋಟಗಾರಿಕೆಯನ್ನು ಮೆಚ್ಚಿ ತಾನು ಮೈಸೂರಿಗೆ ಹಿಂತಿರುಗುವಾಗ ಈ ಮನೆತನದ ಕೆಲವರನ್ನು ತನ್ನೊಡನೆ ಕರೆತಂದು ಶ್ರೀರಂಗಪಟ್ಟಣದ ಗಂಜಾಂನಲ್ಲೂ ಬೆಂಗಳೂರಿನಲ್ಲೂ ನೆಲೆ ನಿಲ್ಲಿಸಿದನೆಂದು ಪ್ರತೀತಿ ಇದೆ. ಅನಂತರ ಈ ಜನಾಂಗ ಬೆಂಗಳೂರು, ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ವಿಸ್ತರಿಸಿದಂತೆ ಕಾಣುತ್ತದೆ.

ಈ ಜನ ಪ್ರಾರಂಭದಿಂದಲೂ ಪಾಂಡವಾರಾಧಕರು. ಇವರ ಮೂಲಪುರುಷ ಬೆಂಕಿಯಲ್ಲಿ ಜನಸಿದನೆಂದು ಪ್ರತೀತಿ. ಆದ್ದರಿಂದಲೇ ಅಗ್ನಿಸಂಭವೆವಳೂ ಅಪರಿಮಿತ ಪರಾಕ್ರಮಿಯೂ ಪಾಂಡವರ ಪತ್ನಿಯೂ ಆದ ದ್ರೌಪದಿಯ ಹೆಸರಿನಲ್ಲೇ ಕರಗದ ಆಚರಣೆಯನ್ನು ಇವರು ನಡೆಸುತ್ತ ಬಂದಿದ್ದಾರೆ.

ಬೆಂಗಳೂರಿನ ಧರ್ಮರಾಯನ ದೇವಸ್ಥಾನ ಕರಗಮಹೋತ್ಸವದ ಕೇಂದ್ರ. ಈ ದೇವಾಲಯದ ನಿರ್ಮಾಣ ಯಾವಾಗ ಆಯಿತೆಂಬುದಕ್ಕೆ ಸ್ಪಷ್ಟವಾದ ಆಧಾರಗಳಿಲ್ಲ. ಮಾಗಡಿ ಕೆಂಪೇಗೌಡ ಬೆಂಗಳೂರು ನಗರವನ್ನು ಕಟ್ಟುವ ಕಾಲಕ್ಕಾಗಲೇ ಈ ದೇವಾಲಯ ಇತ್ತೆಂದು

ಕೆಲವರು ಹೇಳಿದರೆ, ಮತ್ತೆ ಕೆಲವರು ವಹ್ನಿಕುಲ ಕ್ಷತ್ರಿಯರು ಬೆಂಗಳೂರಿಗೆ ಬಂದು ನೆಲೆಸಿದ ಮೇಲೆ ನಿರ್ಮಾಣವಾಯಿತೆನ್ನುತ್ತಾರೆ. ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರು ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಇನಾಂ ಜಮೀನುಗಳನ್ನು ಕೊಟ್ಟುದಕ್ಕೆ ದಾಖಲೆ ಇದೆ. ದೇವಾಲಯ ವಿಶಾಲವಾದ ಅಂಗಳ, ಅಶ್ವತ್ಥಕಟ್ಟೆ, ಎತ್ತರವಾದ ಕಂಬಗಳ ತೂಗುಯ್ಯಾಲೆಗಳಿಂದ ಕೂಡಿ ಆಕರ್ಷಕವಾಗಿದೆ. ದ್ರಾವಿಡ ಶೈಲಿಯ ಮೂರು ಸಚಿತ್ರ ಗೋಪುರಗಳಿವೆ. ಮಹಾದ್ವಾರದ ಮೂಲಕ ಒಳಗೆ ಪ್ರವೇಶಿಸಿದರೆ ಮುಖ ಮಂಟಪದ ಎರಡು ಕಡೆಗಳಲ್ಲೂ ಕಲ್ಲಿನ ಆನೆಯ ಸುಂದರಾಕೃತಿಗಳಿವೆ. ಮೊದಲರ್ಧ ಭಾಗದ ಮಂಟಪ ಭದ್ರವಾದ ಕೆತ್ತನೆಯ ಶಿಲಾಸ್ತಂಭಗಳ ಮೇಲೆ ನಿಂತಿದೆ. ಉಳಿದರ್ಧ ಭಾಗ ಗರ್ಭಗುಡಿ. ಈ ದೇವಾಲಯದ ಗರ್ಭಗುಡಿಯೊಳಗೆ ಪ್ರೇಕ್ಷಕರ ಎಡಭಾಗಕ್ಕೆ ಧರ್ಮರಾಯಸ್ವಾಮಿ, ಬಲಭಾಗಕ್ಕೆ ಶ್ರೀಕೃಷ್ಣರ ವಿಗ್ರಹಗಳಿವೆ. ಅವೆರಡರ ಮುಂಭಾಗದಲ್ಲಿ ದಿವ್ಯಶಕ್ತಿಯ ಪೀಠವಿದೆ. ಈ ಪೀಠದ ಮೇಲೆಯೇ ಹಸಿಕರಗವನ್ನು ಅಲಂಕರಿಸಿ ಅರ್ಚಿಸುವುದು. ಇದರ ಜೊತೆಗೆ ಅರ್ಜುನ, ದ್ರೌಪದಿ, ಭೀಮಸೇನರ ಸುಂದರ ಮೂರ್ತಿಗಳಿವೆ.

ಬೆಂಗಳೂರು ಕರಗ ಒಂಬತ್ತು ದಿನಗಳ ಸಮಾರಂಭ. ಹೊಸ ವರ್ಷದ ಯುಗಾದಿ ಹಬ್ಬದ ಅನಂತರ ಸಪ್ತಮಿ ಅಥವಾ ಅಷ್ಟಮಿಯಂದು ಧ್ವಜಾರೋಹಣದಿಂದ ಆರಂಭವಾಗಿ ಬಿದಿಗೆಯಂದು ಧ್ವಜಾರೋಹಣದವರೆಗೆ ವಿವಿಧ ಕಾರ್ಯಕ್ರಮಗಳಿರುತ್ತವೆ. ಇವುಗಳಲ್ಲಿ ದ್ವಾದಶಿಯಂದು ನಡೆಯುವ ಸಮುದಾಯ ಆರತಿಸೇವೆ, ತ್ರಯೋದಶಿಯಂದು ಹಸಿಕರಗದ ರಚನೆ ಮತ್ತು ಸ್ಥಾಪನೆ, ಚತುರ್ದಶಿಯ ಪೊಂಗಲುಸೇವೆ ಮತ್ತು ಪುರ್ಣಮಿಯಂದು ನಡೆಯುವ ಕರಗದ ಉತ್ಸವ-ಈ ಕಾರ್ಯಕ್ರಮಗಳು ಪ್ರಮುಖವಾದವು.

ಹಸಿಕರಗ : ಚೈತ್ರಶುದ್ಧ ತ್ರಯೋದಶಿಯ ದಿವಸ ಧರ್ಮರಾಯಸ್ವಾಮಿ ದೇವಾಲಯದ ಪುರ್ವಕ್ಕೆ ಸ್ವಲ್ಪ ದೂರದಲ್ಲಿರುವ ಸಂಪಂಗಿ ಕೆರೆಯ ಅಂಗಳದಲ್ಲಿ ನಡುರಾತ್ರಿಯ ಹೊತ್ತಿಗೆ ಪುಜಾರಿ, ಕುಲಪುರೋಹಿತರು, ವೀರಕುಮಾರರು ಮತ್ತು ಕುಲಸ್ಥರು ಸೇರುವರು. ಅಲ್ಲಿ ಒಂದೆಡೆ ಸ್ಥಳ ಶುದ್ಧಿಮಾಡಿ ಕೆಂಪುಬಣ್ಣದ ಛತ್ರಿಯನ್ನು ನೆಡುವರು. ಹಿಂದಿನ ಏಳು ದಿನಗಳಿಂದ ವ್ರತನಿರತರಾಗಿದ್ದ ವೀರಕುಮಾರರು ಹೊಳೆಯುವ ಹರಿತವಾದ ಕತ್ತಿಗಳನ್ನು ಅರ್ಧಚಂದ್ರಾಕಾರವಾಗಿ ಜೋಡಿಸುವರು. ಇವರು ಕರಗದೇವತೆಯ ಹೆಸರಿನಲ್ಲಿ ತಮ್ಮ ಕುಲಪುರೋಹಿತರು ಮತ್ತು ಹಿರಿಯರ ಸಮ್ಮುಖದಲ್ಲಿ ದೀಕ್ಷೆ ಕೈಗೊಂಡವರು. ದೇವಿಯ ಆರಾಧನೆಯಲ್ಲಿ ಅಚಲವಾದ ಶ್ರದ್ಧೆಭಕ್ತಿಗಳನ್ನು ಇಟ್ಟಿರುವ ಇವರು ಕರಗಕ್ಕೆ ಅಂಗರಕ್ಷಕರು. ಭಕ್ತಿದ್ಯೋತಕವಾಗಿ ಕೈಯಲ್ಲಿರುವ ಅಲಗುಗಳಿಂದ ಎದೆಯ ಮೇಲೆ ಇವರು ಪ್ರಹಾರ ಮಾಡಿಕೊಳ್ಳುತ್ತಿರುತ್ತಾರೆ. ಆಗ ರಕ್ತ ಬಂದರೆ ಔಷಧಿಗೆ ಬದಲಾಗಿ ದೇವಿಯ ಭಂಡಾರವನ್ನು ಗಾಯದ ಮೇಲೆ ಹಾಕಿಕೊಳ್ಳುತ್ತಾರೆ. ಬಿಳಿಯ ಚಲ್ಲಣ, ಸೊಂಟಕ್ಕೆ ಕೆಂಪು ಪಟ್ಟಿ, ತಲೆಯ ಮೇಲೆ ಕಲಾಬತ್ತಿನ ಪೇಟ ಧರಿಸಿರುವ ನೂರಾರು ಸಂಖ್ಯೆಯ ವೀರಕುಮಾರರ ಗುಂಪು ನೋಡಲು ತುಂಬ ಆಕರ್ಷಣೀಯವಾಗಿರುತ್ತದೆ. ಧರ್ಮಕಾರ್ಯನಿರತರಾದ ಈ ಯೋಧರು ಕತ್ತಿ ಹಿಡಿದಿದ್ದರೂ ಶಾಂತಿದೂತರು, ಹಣೆಯಲ್ಲಿ ತ್ರಿನಾಮಧರಿಸಿದ ಇವರ ಮುಖಗಳಲ್ಲಿ ಭಕ್ತಿಭಾವ ತುಂಬಿರುತ್ತದೆ. ಅನಂತರ ಕುಲಪುರೋಹಿತರ ನಿರ್ದೇಶನ ಮತ್ತು ಕುಲವೃದ್ಧರ ನೇತೃತ್ವದಲ್ಲಿ ರಾತ್ರಿ ಸುಮಾರು ಮೂರನೆಯ ಜಾವದ ಹೊತ್ತಿಗೆ ಹಸಿಕರಗ ಸಿದ್ಧವಾಗುತ್ತದೆ. ಕೆಂಪು ಛತ್ರಿಯ ಕೆಳಗೆ, ಅರ್ಧಚಂದ್ರಾಕಾರವಾಗಿ ಜೋಡಿಸಿರುವ ಕತ್ತಿಗಳ ಮರ್ಧ, ಜಲ ತುಂಬಿದ ಕರಗವನ್ನು ಕೆಂಪು ವಸ್ತ್ರ, ದುಂಡುಮಲ್ಲಿಗೆ ಹಾರ, ಅರಿಶಿನ-ಕುಂಕುಮ ಮುಂತಾದ ಮಂಗಳದ್ರವ್ಯಗಳಿಂದ ಅಲಂಕರಿಸಿ ಪುಜೆಗೆ ಅಣಿಮಾಡಲಾಗುತ್ತದೆ. ಈ ವೇಳೆಗಾಗಲೇ ಕರಗದ ಪುಜಾರಿಯನ್ನು ಮಲ್ಲಿಗೆ ಹೂವಿನಿಂದ ಸಿಂಗರಿಸಿರುತ್ತಾರೆ. ಪುಜಾರಿ ಮಹಾಮಂಗಳಾರತಿ ಮಾಡುತ್ತಾನೆ. ಮಣಗಟ್ಟಲೆ ಸುಡುವ ಕರ್ಪುರದ ಹೊಗೆಯೊಂದಿಗೆ ಮಲ್ಲಿಗೆಯ ಪರಿಮಳವೂ ಸೇರಿ ಆವರಣವೆಲ್ಲ ಸುಗಂಧಮಯವಾಗುತ್ತದೆ. ದೇವಿಯ ಸೇವೆಗಾಗಿ ನಿಂತಿರುವ ವೀರಕುಮಾರರು ಗೋವಿಂದನಾಮಸ್ಮರಣೆಮಾಡುತ್ತ ಆವೇಶ ತುಂಬಿ ಎದೆಯ ಮೇಲೆ ಪ್ರಹಾರ ಮಾಡಿಕೊಳ್ಳುತ್ತಾರೆ. ಮಹಾಶಕ್ತಿಯ ಪ್ರೀತ್ಯರ್ಥವಾಗಿ ಮಾಡುವ ಈ ಕಾರ್ಯಕ್ಕೆ ಅಲಗುಸೇವೆ ಎನ್ನುವರು.

ಸುತ್ತುವರಿದ ವೀರಕುಮಾರರ ನಡುವೆ ಪುಜಾರಿ ಭಕ್ತಿಯಿಂದ ಕರಗವನ್ನೆತ್ತಿಕೊಂಡು ತನ್ನ ಸೊಂಟದ ಎಡಭಾಗದಲ್ಲಿ ಗಡಿಗೆ ಇಟ್ಟುಕೊಳ್ಳುವಂತೆ ಇಟ್ಟುಕೊಳ್ಳುತ್ತಾನೆ. ವೀರಕುಮಾರರ ರಕ್ಷಣೆಯಲ್ಲಿ, ಗಂಟೆ ಪುಜಾರಿಯ ಮಾರ್ಗನಿರ್ದೇಶನದಲ್ಲಿ ಪುಜಾರಿ ಗಂಭೀರವಾಗಿ, ಒಮ್ಮೊಮ್ಮೆ ನರ್ತನ ಮಾಡುತ್ತ ಮುಂದುವರಿಯುತ್ತಾನೆ. ಕರಗಮಹೋತ್ಸವದಲ್ಲಿ ಗಂಟೆ ಪುಜಾರಿಯ ಪಾತ್ರ ಮುಖ್ಯವಾದುದು. ಕರಗ ಹೊರಟಾಗ ಈತ ತಾಳಬದ್ಧವಾಗಿ ಗಂಟೆಯ ನಾದ ಮಾಡುತ್ತ, ದೇವಿಯ ಮಹಿಮಾವಳಿಗಳನ್ನು ಉಚ್ಛರಿಸುತ್ತ ಕರಗಕ್ಕೆ ಮಾರ್ಗದರ್ಶನ ಮಾಡುತ್ತ ಮುಂದುವರಿಯುತ್ತಾನೆ. ಈ ಹಕ್ಕೂ ಪುಜಾರಿಯ ಹಕ್ಕಿನಂತೆ ವಂಶಪಾರಂಪರ್ಯವಾಗಿ ಬಂದುದು. ಮಧ್ಯೆ ಕೆಲವೆಡೆ ಪುಜಾರಿ ಮಂಡಿಯೂರಿ ಕುಳಿತಾಗ ಅಲಗುಸೇವೆಯ ಕೈಂಕರ್ಯವಾಗುತ್ತದೆ. ಹೀಗೆ ಮುಂದುವರಿದ ಹಸಿಕರಗ ನಗರಸಭೆ ಕಚೇರಿಯ ಉತ್ತರಭಾಗದಲ್ಲಿರುವ ಏಳುಸುತ್ತಿನ ಕೋಟೆಯ ಸಂಕೇತಸ್ಥಳದಲ್ಲಿರುವ ದೊಡ್ಡ ಹುತ್ತವನ್ನು ಏಳು ಅಥವಾ ಒಂಬತ್ತು ಸಲ ಪ್ರದಕ್ಷಿಣೆಮಾಡಿ ದೇವಾಲಯಾಭಿಮುಖ ವಾಗಿ ಬಂದು ದೇವಸ್ಥಾನ ಮತ್ತು ಹೊರಾಂಗಣದಲ್ಲಿ ಸಿದ್ಧವಾಗಿರುವ ರಥವನ್ನು ಪ್ರದಕ್ಷಿಣೆಮಾಡಿ ನರ್ತನ ಮಾಡುತ್ತದೆ. ಇಷ್ಟಾದ ಮೇಲೆ ಶುಭಮುಹೂರ್ತದಲ್ಲಿ ಸೂರ್ಯೋದಯದ ಒಳಗೆ ಕರಗ ಗರ್ಭಗುಡಿಯನ್ನು ಪ್ರವೇಶಿಸುತ್ತದೆ. ಮೂಲಮೂರ್ತಿಗಳ ಸಮ್ಮುಖದಲ್ಲಿರುವ ಶಕ್ತಿಪೀಠದಲ್ಲಿ ಕರಗವನ್ನು ಪ್ರತಿಷ್ಠಾಪಿಸಿ ಅಲಂಕರಿಸಲಾಗುತ್ತದೆ.

ಮಾರನೆಯ ದಿನ ಚತುರ್ದಶಿ. ಅಂದು ರಾತ್ರಿ ದೇವಾಲಯದಲ್ಲಿ ಮಹಾಭಾರತ ಪ್ರವಚನ, ಸೂರ್ಯೋದಯದ ಹೊತ್ತಿಗೆ ಪೊಂಗಲು ಸೇವೆ ಮುಂತಾದ ಕೈಂಕರ್ಯ ಕಾರ್ಯಗಳಿರುತ್ತವೆ.

ಕರಗ ಮಹೋತ್ಸವ : ಚೈತ್ರಶುದ್ಧ ಹುಣ್ಣಿಮೆಯಂದು ಸಾಯಂಕಾಲದ ವೇಳೆಗೆ ಕರಗ ಹೊರುವ ಪುಜಾರಿಗೆ ವಪನಸಂಸ್ಕಾರಮಾಡಿ, ಕಂಕಣಧಾರಣೆ ಮಾಡಿ. ಕೈತುಂಬ ಕರಿಬಳೆ ತೊಡಿಸುತ್ತಾರೆ. ದೇವಸ್ಥಾನದಲ್ಲಿ ವೈಷ್ಣವಾಗಮ ರೀತಿಯಲ್ಲಿ ಪುಜೆ, ಹೋಮಗಳು ನಡೆಯುತ್ತವೆ. ಅನಂತರ ಅರ್ಜುನ, ದ್ರೌಪದಿಯರ ಕಲ್ಯಾಣೋತ್ಸವವಾಗುತ್ತದೆ. ರಾತ್ರಿ ಸು. 10 ಗಂಟೆಗೆ ಕರಗ ಹೊರುವ ಪುಜಾರಿ, ಗಂಟೆ ಪುಜಾರಿ, ವೀರಕುಮಾರರಾದಿಯಾಗಿ ಸಂಬಂಧಪಟ್ಟವರೆಲ್ಲ ಸಂಪಂಗಿ ಕೆರೆಯಂಗಳದಲ್ಲಿ ಸೇರುತ್ತಾರೆ. ಅಲ್ಲಿ ಪುಜಾರಿಯನ್ನು ಅಚ್ಚಮಲ್ಲಿಗೆ, ಜಡೆಕುಚ್ಚು, ಹಾರಗಳಿಂದ ಶೃಂಗರಿಸಿ, ಅರಿಶಿನ ಬಣ್ಣದ ಸೀರೆ ಉಡಿಸಿ, ಕುಪ್ಪಸ ತೊಡಿಸಿ, ವಕ್ಷಸ್ಥಲವನ್ನು ಹವಳದ ಹಾರ, ರತ್ನಾಭರಣಗಳಿಂದ ಅಲಂಕರಿಸುತ್ತಾರೆ. ಸ್ತ್ರೀರೂಪ ಧರಸಿದ ಪುಜಾರಿ ನವವಧುವಿನಂತೆ ಕಂಗೊಳಿಸುತ್ತಾನೆ. ಅನಂತರ ದಿವ್ಯಶಕ್ತಿಸ್ವರೂಪನಾದ ಪುಜಾರಿಗೆ ಧೂಪ, ದೀಪ, ಆರತಿಗಳ ಅರ್ಚನೆಯಾಗುತ್ತದೆ. ವೀರಕುಮಾರರಿಂದ ಅಲಗುಸೇವೆಯಾದ ಮೇಲೆ ಪುಜಾರಿಯ ಮೈಮೇಲೆ ಆದಿಶಕ್ತಿಯ ಆವಿರ್ಭಾವವಾಗುತ್ತದೆ. ಗಂಟೆಯ ನಾದದ ಮಾರ್ಗದರ್ಶನದಲ್ಲಿ ಮಂಗಳವಾದ್ಯಗಳೊಂದಿಗೆ ಎಲ್ಲರೂ ದೇವಾಲಯವನ್ನು ಸೇರಿದ ಮೇಲೆ ಪುಜಾರಿ ಮಾತ್ರ ಗರ್ಭಗುಡಿಯನ್ನು ಪ್ರವೇಶಿಸುತ್ತಾನೆ. ಬಾಗಿಲು ಮುಚ್ಚುತ್ತದೆ.

ಈ ವೇಳೆಗೆ ದೇವಾಲಯದ ಸುತ್ತಲೂ ಕಿಕ್ಕಿರಿದ ಜನಸ್ತೋಮದ ಸಹಸ್ರಾರು ಕಣ್ಣುಗಳು ದೇವಾಲಯದ ಕಡೆಗೆ ಕೇಂದ್ರೀಕೃತವಾಗುತ್ತವೆ. ಆವರಣದಲ್ಲಿ ಕುಲಸ್ಥರು ಮತ್ತು ಆಹ್ವಾನಿತರನ್ನು ಗೌರವಿಸಿದ ಅನಂತರ ಅರ್ಜುನ, ದ್ರೌಪದಿಯರ ಉತ್ಸವಮೂರ್ತಿಗಳನ್ನು ಹೊತ್ತು ನಿಂತಿರುವ ಭೀಮಗದಾಕಾರದ ರಥ ಪುರ್ವಾಭಿಮುಖವಾಗಿ ಸ್ವಲ್ಪ ದೂರ ಚಲಿಸುತ್ತದೆ. ನಾಗಸ್ವರ, ಶಂಖ, ಗಂಟೆಗಳ ನಾದ ಪ್ರತಿಧ್ವನಿಸುತ್ತಿರುವಾಗ ಮಲ್ಲಿಗೆ ಹೂವಿನಿಂದ ಸಿಂಗರಿಸಿರುವ ಕರಗವನ್ನು ಶಿರದಲ್ಲಿ ಧರಿಸಿದ ಪುಜಾರಿ ದೇವಸುಂದರಿಯಂತೆ ಗರ್ಭಗುಡಿಯಿಂದ ಹೊರಬರುತ್ತಾನೆ. ಮಹಾ ಮಂಗಳಾರತಿಯ ಅನಂತರ ದೇವಸ್ಥಾನವನ್ನು ಬಲವಂದು ಗಂಟೆ ಪುಜಾರಿಯ ಸ್ತೋತ್ರಯುಕ್ತ ನಿರ್ದೇಶನದಲ್ಲಿ ಅಸಂಖ್ಯಾತ ಭಕ್ತರ ಭಕ್ತಿಕಾಣಿಕೆಯನ್ನು ಸ್ವೀಕರಿಸುತ್ತ ಕರಗದ ಮೆರವಣಿಗೆ ಮೊದಲಾಗುತ್ತದೆ. ಕರಗ ಬರುವ ಮಾರ್ಗವನ್ನು ಮೊದಲೇ ಗೊತ್ತುಪಡಿಸಿ ಪ್ರಕಟಿಸಿರುವುದರಿಂದ ಆ ಮಾರ್ಗಗಳ ಇಕ್ಕೆಲಗಳಲ್ಲೂ ಕಟ್ಟಡಗಳ ಉಪ್ಪರಿಗೆಗಳ ಮೇಲೂ ಅಸಂಖ್ಯಾತ ಪ್ರೇಕ್ಷಕರು ನೆರೆದಿರುತ್ತಾರೆ. ಕರಗ ಬರುವ ಮುನ್ಸೂಚನೆಯಾಗಿ ವೀರಕುಮಾರರು ಬರುತ್ತಾರೆ. ಕುಸ್ತಿ, ಲಾಠಿ, ಕತ್ತಿವರಸೆಗಳಲ್ಲಿ ನಿಪುಣರಾದ ವಹ್ನಿಕುಲದ ಯುವಕರು ಉತ್ಸವದ ಮುಂದೆ ತಮ್ಮ ಕೌಶಲ ಪ್ರದರ್ಶಿಸುತ್ತಾರೆ. ಅಂದು ನಗರದ ದೇವಾಲಯಗಳಲ್ಲೆಲ್ಲ ವಿಶೇಷ ಪುಜೆ ನಡೆಯುತ್ತದೆ. ಎಲ್ಲೆಲ್ಲೂ ಸಂಭ್ರಮ ಎದ್ದು ಕಾಣುತ್ತದೆ. ಕರಗ ಬರುವ ಮಾರ್ಗದ ದೇವಾಲಯಗಳಲ್ಲಿ ಕರಗಶಕ್ತಿಗೆ ಪುಜೆ ನಡೆಯುತ್ತದೆ. ಈ ದೇವತೆ ಬರುವ ಹಾದಿಯಲ್ಲಿ ಅರಳೇಪೇಟೆಯಲ್ಲಿರುವ ಮಸ್ತಾನ್ ಸಾಹೇಬರ ದರ್ಗಾದಲ್ಲಿಯೂ ಕರಗಕ್ಕೆ ಪುಜೆ ಸಲ್ಲುತ್ತದೆ.

ಸೂರ್ಯರಶ್ಮಿ ತನ್ನ ಮೇಲೆ ಬೀಳುವುದಕ್ಕೆ ಮುಂಚೆ ಕರಗ ದೇವಸ್ಥಾನವನ್ನು ತಲುಪಬೇಕೆಂಬುದು ನಿಯಮ. ಅದರಂತೆ ಬೆಳಗಿನ ಆರು ಗಂಟೆಯ ವೇಳೆಗೆ ಕರಗ ದೇವಾಲಯವನ್ನು ಸೇರುತ್ತದೆ. ಅನಂತರ ಕರಗಕ್ಕೆ ಜಾತಿ-ಧರ್ಮಗಳ ಭೇದವಿಲ್ಲದೆ ಪುಜೆ ನಡೆಯುತ್ತದೆ. ರಾತ್ರಿ ರಥದ ಜೊತೆಯಲ್ಲೇ ಹೊರಟ ನಗರದ ಅನೇಕ ದೇವರುಗಳ ಪಲ್ಲಕ್ಕಿ, ಮಂಟಪಗಳ ರಂಗುರಂಗಿನ ಉತ್ಸವ ಕರಗದ ಮತ್ತೊಂದು ಆಕರ್ಷಣೆ. ಎಷ್ಟು ದೂರ ನೋಡಿದರೂ ಕಣ್ಣು ಕೋರೈಸುವ ಆ ವೈಭವಪುರ್ಣ ಮೆರವಣಿಗೆಯಲ್ಲಿ ಭಕ್ತರ ಇಷ್ಟಾರ್ಥ ನೇರವೇರಿಸಲು ದೇವರುಗಳೆಲ್ಲ ಒಮ್ಮೆಲೇ ಸೇರಿರುವಂತೆ ತೋರುತ್ತದೆ.ಧ್ವಜಾವರೋಹಣದ ದಿನ ಕರಗವನ್ನು ಜಲದಲ್ಲಿ ವಿಸರ್ಜಿಸಲಾಗುತ್ತದೆ.

ಕರಗದ ಆಚರಣೆ ಆರಂಭವಾದಂದಿನಿಂದಲೂ ಅದರ ವಿಜೃಂಭಣೆ-ವೈಭವಗಳು ಹೆಚ್ಚುತ್ತಿವೆ. ಕರಗದಲ್ಲಿ ಶಕ್ತಿಯ ಆವಿರ್ಭಾವವಾಗುವುದು, ಅದನ್ನು ತಲೆಯ ಮೇಲಿಟ್ಟುಕೊಂಡು ಕೈಗಳ ಆಧಾರವಿಲ್ಲದೆ ಪ್ರಜಾರಿ ನಡೆಯುವುದು-ಇವೆಲ್ಲ ಮಹಿಮೆ ಎಂಬಂತೆ ನಡೆದುಕೊಂಡು ಬರುತ್ತಿವೆ. ಸಂಬಂಧಪಟ್ಟವರು ಹಿರಿಮೆಯನ್ನು ಕುರಿತು ಹೇಳಬಲ್ಲರೇ ಹೊರತು ರಹಸ್ಯದ ಬಗ್ಗೆ ಏನನ್ನೂ ಹೇಳರು. ಆ ದಿವ್ಯಶಕ್ತಿಯ ಆರಾಧನೆಯಲ್ಲಿ ಅವರಿಗಿರುವ ಅಚಲವಾದ ನಂಬುಗೆಯೇ ಆ ಮಹಿಮೆಗೆ ಕಾರಣವಾಗಿದೆ.

ಕರಗದ ಆರಾಧನೆಗೆ ಹಿನ್ನೆಲೆಯಾದ ಪಾಂಡವರ ಅರಾಧನೆ ದಕ್ಷಿಣ ಭಾರತದಲ್ಲೇ ಹೆಚ್ಚು ಪ್ರಚಾರದಲ್ಲಿರುವುದು. ತಮಿಳುನಾಡಿನಲ್ಲಿ ಅನೇಕ ಗ್ರಾಮಗಳಲ್ಲಿ ನೂರಾರು ವರ್ಷಗಳಿಂದ ಕರಗವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ, ಕರಗದ ಉತ್ಸವ ಒಂದು ಸಂಪ್ರದಾಯ ರೀತಿಯ ಧಾರ್ಮಿಕ ವೈಭವವಾಗಿ ಕಂಡು ಬರುವುದು ಬೆಂಗಳೂರಿನಲ್ಲಿ ಮಾತ್ರ.

ವಹ್ನಿಕುಲಕ್ಷತ್ರಿಯ ವಂಶದವರಲ್ಲಿ ಕರಗಶಕ್ತಿಯ ವಿಚಾರದಲ್ಲಿ ಅಪಾರವಾದ ಭಕ್ತಿ ಗೌರವಗಳು ತಲೆಮಾರುಗಳಿಂದ ನೆಲೆಯೂರಿ ನಿಂತಿದೆ. (ಸಿ.ಕೆ.ಪಿ.)