ಏಟು ತಿಂದು ಮೈ ಕೈ ನೋವಿನಿಂದ ಮಗ್ಗುಲು ಹೊರಳುವುದೂ ಕಷ್ಟ ಸಾಧ್ಯ
ವಾಗಿತ್ತು. ಕಣ್ಣುಗಳು ಉರಿಯುತ್ತಿದ್ದುವು. ಉಸಿರು ಬಿಸಿಯಾಗಿತ್ತು.
"ಹೀಗಾಯಿತಲ್ಲಾ ನನ್ನ ಗತಿ," ಎಂದು ಮನಸ್ಸಿನಲ್ಲೆ ಗೋಳಾಡುತ್ತ ಆಕೆ
ಹೊತ್ತು ಕಳೆದಳು.

೧೨


ಪರೀಕ್ಷೆ ಮುಗಿದು ಮಹಡಿಯ ಮೇಲಿನ ಹುಡುಗರು ಕೊಠಡಿ ತೆರವು ಮಾಡಿ
ಊರಿಗೆ ಹೋದರು. ಕೆಳಗಿನ ಮನೆಯ ತಾಯಿ ಮುಂದೆಯೂ ಮನೆ ತನಗೆ ಬೇಕೆಂದು
ಹೇಳಿ,ಬೀಗ ತಗಲಿಸಿ, ಮಕ್ಕಳೊಡನೆ ಊರಿಗೆ ತೆರಳಿದಳು.
ರಂಗಮ್ಮ, 'ಮನೆ ಬಾಡಿಗೆಗೆ ಇದೆ' ಬೋರ್ಡನ್ನು ಹೊರಕ್ಕೆ ತೆಗೆದರು. ಸೊಗ
ಸಾದೊಂದು ಬೋರ್ಡು ಬರೆದುಕೊಡುವೆನೆಂದು ಶಂಕರನಾರಾಯಣಯ್ಯ ಹಿಂದೆ ಹೇಳಿ
ದ್ಧನ್ನು ಅವರು ಮರೆತಿರಲಿಲ್ಲ. ಅವಕಾಶ ಒದಗಿದಾಗ ಆ ವಿಷಯ ಪ್ರಸ್ತಾಪಿಸಿದರಾಯಿ
ತೆಂದು ಅವರು ಅವರೆಗೂ ಸುಮ್ಮನಿದ್ದರು.
ಶಂಕರನಾರಾಯಣಯ್ಯನಿನ್ನೂ ಮನೆಯಲ್ಲೇ ಎದ್ದ. ಬೆಳಗಿನ ಹೊತ್ತು.
ರಂಗಮ್ಮ ರಟ್ಟಿನ ಬೋರ್ಡಿನೊಡನೆ ಅಲ್ಲಿಗೆ ಬಂದರು.
"ಏನಪ್ಪಾ, ಇದ್ದೀರಾ?"
"ಬನ್ನಿ ರಂಗಮ್ನೋರೆ,"
ರಂಗಮ್ಮನವರ ಕೈಲಿದ್ದುದನ್ನು ನೋಡಿ ಅವರು ಬಂದುದರ ಉದ್ದೇಶ ಶಂಕರ
ನಾರಾಯಣಯ್ಯನಿಗೆ ಅರ್ಥವಾಯಿತು.
"ಆ ದಿವಸ ಅದೇನೊ ಬರ್ಕೊಡ್ತೀನೀಂತ ಹೇಳಿದ್ರಿ."
"ಹೌದಲ್ಲ, ಮರ್ತೇಹೋಗಿತ್ತು. ಇಲ್ಕೊಡಿ. ಬರಕೊಡ್ತೀನಿ."
"ಮನೆ ಖಾಲಿಯಾಗ್ಬಿಟ್ಟಿದೆ. ಸದ್ಯಃ ಇದನ್ನೇ ತೂಗಹಾಕ್ತೀನಿ. ಬೇಗ್ನೆ ಬೇರೆ
ಬರ್ಕೊಟ್ಬಿಡಿ."
"ಖಾಲಿಯಾಯ್ತೇನು_ಯಾವುದು?"
"ಅದೇ ಮೇಲ್ಗಡೇದು, ಹುಡುಗರು ಓದ್ತಾ ಇರ್ಲಿಲ್ವೆ?"
"ಓ ಅದಾ?"
"ಯಾವಾಗ ಬರೀತೀರಪ್ಪಾ?"
"ನಾಳೇನೇ."

ರಂಗಮ್ಮ ಹೊರಹೋಗಿ, ಸದ್ಯಕ್ಕೆ ಅದೇ ಇರಲೆಂದು,ಹಳೆಯ ಬೋರ್ಡನ್ನೇ

ತೂಗ ಹಾಕಿದರು. ಬೋರ್ಡು ನೋಡಿದೊಡನೆಯೇ ಯಾರಾದರೂ ಈ ಸಲ ಬರ
ಬಹುದೆಂದು ರಂಗಮ್ಮ ನಂಬಿರಲಿಲ್ಲ. ಯಾಕೆಂದರೆ ಬಾಡಿಗೆಗಿದ್ದುದು ಅನುಕೂಲಗಳಿದ್ದ
ಮನೆಯಲ್ಲ, ಬರಿಯ ಕೊಠಡಿ ಮನೆ . ಮುಂದೆ ಶಾಲೆಗಳು ಆರಂಭವಾಗಿ ಬೇರೆ
ಹುಡುಗರು ಬರುವವರೆಗೂ ಹಾಗೆಯೇ ತೆರವಾಗಿ ಉಳಿದರೂ ಉಳಿಯೆತೇ.
"ರಜಾ ತಗೋಂಡು ಇಲ್ಲೇ ಇದ್ಬಿಟು ಬೋಡು ಬರಕೋಡೀಂದ್ರೆ,"
___ಚಂಪಾ ಗಂಡನಿಗೆ ಹೇಳಿದಳು .
"ಹೂಂ, ಹೌದು. ಬೇರೇನೂ ಕೆಲಸ ಇಲ್ಲ ನಂಗೆ,"ಎಂದು ಆತ ನಟನೆಯ
ಸಿಡುಕನ್ನು ತೋರಿದ.
ಆದರೆ ಆ ಸಂಜೆ ಮನೆಗೆ ಬಂದಾಗ, ಕರಿಯ ಬಣ್ಣ ಬಳಿದಿದ್ದ ಒಂದು ಡಬ್ಬದ
ತುಂಡನ್ನೂ ನುಣುಪಾಗಿದ್ದೊಂದು ಪುಟ್ಟ ಹಲಿಗೆಯನ್ನೂ ಮನೆಗೆ ತಂದ.
"ಚಿಕ್ಕದು ಯಾರಿಗೆ?"
ಎಂದು ಚಂಪಾವತಿ ಕಳಿದಳು .
"ಆ ಚಂದ್ರಶೆಖರಯ್ಯನಿಗೆ ಹೆಸರು ಬರ್ಕೊಡ್ತೀನೀಂತ ಹೇಳಿದ್ದೆ."
"ಅದೂ ಬಿಟ್ಟೀನೊ?"
"ಇದು ಲಂಚ. ವಿಮೆಯ ವಿಷಯ ನನ್ನ ಹತ್ತಿರ ಯಾವತ್ತೂ ಪ್ರಸ್ತಾಪ
ಮಾಡೋದಿಲ್ಲಾಂತ ಆತ ಮಾತು ಕೊಟ್ಟದ್ದಕ್ಕೆ!"
"ಸರಿ! ಸರಿ!"
ಮರುದಿನ ಬೆಳಗ್ಗೆ ಬ್ರಷ್ ಎಣ್ಣೆ- ಬಣ್ಣಗಳು ಉಪಯೋಗಕ್ಕೆ ಸಿದ್ಧವಾದುವು.
ಶಂಕರನಾರಾಯಣಯ್ಯ ಕರಿಯ ಡಬ್ಬದ ಮೇಲೆ ಬರೆದ:
ಮನೆ ಬಾಡಿಗೆಗೆ ಇದೆ
ರಂಗಮ್ಮ ಬಂದು ನೋಡಿಕೊಂಡು ಹೋದರು.
"ಇನ್ನೂ ಒಣಗ್ಬೇಕು. ನಾಳೆ ತಗೊಂಡು ಹೋಗಿ", ಇಂದು 'ಪೇಂಟರ್'
ಶಂಕರನಾರಾಯಣಯ್ಯ ಹೇಳಿದ.
ಆತ ಅಷ್ಟು ಬರೆದಿಟ್ಟುದನ್ನು ಆ ದಿನವೆಲ್ಲ ವಠಾರದ ಅವರಿವರು ಬಂದು ನೋಡು
ತ್ತಲೇ ಇದ್ದರು.
ಮರುದಿನ 'ಮನೆ ಬಾಡಿಗೆಗೆ ಇದೆ' ಎಂಬುದರೆ ಕೆಳಗೆ 'ಒಳಗಡೆ ವಿಚಾರಿಸಿ'
ಎಂದು ಸಣ್ಣ ಅಕ್ಷರದಲ್ಲಿ ಶಂಕರನಾರಾಯಣಯ್ಯ ಬರೆದ.
"ರಂಗಮ್ಮನವರು ವಿಚಾರಿಸೀಂತೆ ಬರೀಬಾರದಾಗೆತ್ತೆ?
__ಚಂಪಾವತಿ ಗಂಡನನ್ನು ಲೇವಡಿ ಮಾಲೆತ್ನಿಸುತ್ತ ಹೇಳಿದಳು.
ಆ ಸಂಜೆ ಶಂಕರನಾರಾಯಣಯ್ಯ ಮನೆಗೆ ಬಂದ ಮೇಲೆ ಹೊಸ ಬೋರ್ಡು

ವಠಾರದ ಹೊರಗಿನ ಗೋಡೆಯನ್ನು ಅಲಂಕರಿಸಿತು. ಬೆನ್ನ ಹಿಂದೆ ಇಲ್ಲವೆ ಎದೆಗೆ
ಅಡ್ಡವಾಗಿ ಕೈ ಕಟ್ಟಿ ನಿಂತಿದ್ದ ವಠಾರದ ಹುಡುಗರ ಎದುರಲ್ಲಿ ಸ್ವತ: ಶಂಕರನಾರಾ

ಯಣಯ್ಯನೇ ಬೋರ್ಡನ್ನು ಅನಾವರಣಾ ಮಾಡಿದ.
"ಹಲಿಗೆಯಾದರೆ ಮಳೇಲಿ ನೆನೆದು ಹೊಗುತ್ತೆ. ಇದು ಡಬ್ಬ. ಮಿಸು
ಕೋದಿಲ್ಲ" ಎಂದು ಶಂಕರನಾರಾಯಣಯ್ಯ ವಿವರಿಸಿದ.
ರಂಗಮ್ಮನ ಸಂತೋ‌‌ಷಕ್ಕೆ ಪಾರವಿರಲಿಲ್ಲ. ಬಾಲ್ಯದಲ್ಲಿ ಅವರ ಮನೆಯಲ್ಲಿ
ಒಮ್ಮೆ ಹಸು ಈದಾಗ ಅದಷ್ಟೆ ಸಂತೋಷ ಇಲ್ಲಿ ಅವರಿಗಾಯಿತು.
ಹುಡುಗರೆಲ್ಲ ಚೆದರಿದ ಮೇಲೆ ಜಯರಾಮು ಕೆಳಗೆ ಬಂದವನು ಬೋರ್ಡನ್ನು
ನೋಡಿದ. ಅಕ್ಷರಗಳು ಮುದ್ದಾಗಿದ್ದುವು.
ಮರುದಿನ ಚಂದ್ರಶೇಖರಯ್ಯನ ಹೆಸರು_ಹಲಿಗೆ ಸಿದ್ದವಾಯಿತು .ಇಂಗ್ಲಿಷಿನಲ್ಲಿ
"ಚಂದರ್ ಶೇಖರ್" ಎಂದು ಶಂಕರನಾರಾಯಣಯ್ಯ ಬರೆದಿದ್ದ . ಅದು ಚಂದ್ರ
ಶೇಖರಯ್ಯನ ಕಿಟಿಕಿಯ ಪಕ್ಕದಲ್ಲಿ ವಿರಾಜಮಾನವಾಯಿತು.
ಸಂಜೆ ತಡವಾಗಿ ಮನೆಗೆ ಬಂದ ಜಯರಾಮು ಹೊಸ ಬೋರ್ಡನ್ನೂ ನೋಡಿದ.
ಆ ಅಕ್ಷರಗಳೂ ಸೊಗಸಾಗಿದ್ದುವು.
ತಾನು ಪೇಂಟರ್ ಶಂಕರನಾರಾಯಣಯ್ಯನನ್ನು ಮಾತನಾಡಿಸಲೇಬೇಕೆಂದು
ಜಯರಾಮು ತೀರ್ಮಾನಿಸಿದ.
ಅದಕ್ಕೆ ಮತ್ತೊಂದು ದಿನ ಕಳೆಯಬೇಕಾಯಿತು.ಆ ಸಂಜೆ ಜಯರಾಮು
ಗೇಟಿನ ಬಳಿ ನಿಂತು ಆತ ಬರುವುದನ್ನು ಇದಿರುನೋಡಿದ. ಸವೀಪ ಬರುತ್ತಲೆ
ಜಯರಾಮು ಕೈಮುಗಿದ.
"ನಮಸ್ಕಾರ."
"ನಮಸ್ಕಾರ."
ತಾನು ಮಾತನಾಡಿಸಿದ್ದನ್ನು ಕಂಡು ಶಂಕರನಾರಾಯಣಯ್ಯನಿಗೆ ಆಶ್ಚರ್ಯ
ವಾಗಬಹುದು ಎಂದುಕೊಂಡಿದ್ದ ಜಯರಾಮು. ಆದರೆ ಆತ ಹಳೆಯ ಸ್ನೇಹಿತರಿಗೆ
ಮರುವಂದನೆ ಮಾಡುವ ಹಾಗೆ ಮುಗುಳ್ನಕ್ಕ.
"ಹೊಸ ಪರಿಚಯ ," ಎಂದ ಜಯರಾಮು, ಸ್ವಲ್ಪ ಸಂಕೋಚದಿಂದಲೇ.
"ನೀವು ಜಯರಾಮು ಅಲ್ವೆ?"
"ಯಾರು ಹೇಳಿದ್ರು?"
"ಇಷ್ಟು ದಿವಸದಿಂದ ನೋಡ್ತಾ ಇದೀನಿ. ನನಗೆ ಆಷ್ಟೊ ಗೊತ್ತಾಗಲ್ವೇನ್ರಿ?....
ನೀವು ಕತೆ ಗಿತೆ ಬರೀತೀರಂತೆ."
"ಓ! ಇಲ್ಲಪ್ಪ!"
"ಸುಳ್ಳು!"
ಶಂಕರನಾರಾಯಣ್ಯನಿಗೆ ಇಷ್ಟೆಲ್ಲ ಹೇಗೆ ತಿಳಿಯಿತೆಂದು ಜಯರಾಮುಗೆ
ಆಶ್ಚರ್ಯ. ತನ್ನ ತಂಗಿ ಹೇಳಿರಬಹುದೆಂಬ ಸಂದೇಹ ಮೂಡಿತು. ಆದರೆ ಆ

ಸಂದೇಹ ಸರಿ ಎಂದು ಭಾವಿಸಲು ಮನಸ್ಸು ಒಪ್ಪಲಿಲ್ಲ.

ವಾಸ್ತವವಾಗಿ ಇಷ್ಟೆಲ್ಲವನ್ನೂ ರಾಧೆ ಚಂಪಾವತಿಗೆ ಹೇಳಿದ್ದಳು; ಚಂಪಾವತಿ
ಗಂಡನಿಗೆ ವರದಿಯೊಪ್ಪಿಸಿದ್ದಳು.
ನೇರವಾಗಿ ಮನೆಗೆ ಹೋಗುವ ಆತುರದಲ್ಲಿದ್ದರೂ, ಶಂಕರನಾರಾಯಣಯ್ಯ
ಒಂದು ಕ್ಷಣ ತಡೆದು ನಿಂತ.
"ಏನು, ಇಲ್ಲಿ ನಿಂತಿದ್ರಿ?" ಎಂದು ಆತ ಜಯರಾಮುವನ್ನು ಕೇಳಿದ. ಯಾಕೆ
ನಿಂತುದು ಎಂದು ಊಹಿಸುವಷ್ಟು ದಕ್ಷ ಮನಃಶಾಸ್ತ್ರಜ್ಞ ಶಂಕರನಾರಾಯಣಯ್ಯ
ನಾಗಿರಲಿಲ್ಲ. ಯಾಕೆಂಬುದನ್ನು ಜಯರಾಮುವೂ ಹೇಳುವಂತಿರಲಿಲ್ಲ.
"ಹೀಗೇ"
ಜಯರಾಮುವಿನ ದೃಷ್ಟಿ ಬೋರ್ಡುಗಳತ್ತ ಸರಿಯಿತು. ಶಂಕರನಾರಾಯಣ
ಯ್ಯನೂ ಅತ್ತ ನೋಡಿದ.
"ತುಂಬಾ ಚೆನ್ನಾಗಿವೆ. ನೀವು ಚೆನ್ನಾಗಿ ಬರೀತೀರಿ."
"ಈ ಬೋರ್ಡುಗಳೆ? ಅಯ್ಯೋ!"
ತನ್ನ ಕೃತಿಯ ಬಗೆಗೇ ಆತನಿಗಿದ್ದ ತಾತ್ಸಾರ ಜಯರಾಮುವನ್ನು ಚಕಿತ
ಗೊಳಿಸಿತು.
"ನೀವು ಬರೆದಿರೋ ಚಿತ್ರಗಳನ್ನು ನಾನು ನೋಡಿಲ್ಲ"
"ಚಿತ್ರಗಳು? ನಾನು ಕಲಾವಿದ ಅಂತ ತಿಳಕೊಂಡ್ರೇನು? ಹಾಗೇನಾದ್ರೂ
ನಾನು ಅಂದೆ ಅಂದ್ರೆ, ನಿಜವಾದ ಕಲಾವಿದರು ತಮಗೆ ಮಾನಹಾನಿಯಾಯ್ತೂಂತ ನನ್ನ
ಮೇಲೆ ಮೊಕದ್ದಮೆ ಹೂಡಬಹುದು!"
ಆ ಸ್ವರದಲ್ಲಿ ವ್ಯಂಗ್ಯವಿತ್ತು, ನೋವಿತ್ತು. ಆ ನಗೆ ಮಾತಿನ ತೆರೆಯ ಹಿಂದೆ
ಸಂತೋಷವನ್ನು ಜಯರಾಮು ಕಾಣಲಿಲ್ಲ. ತನ್ನೆದರು ನಿಂತಿದ್ದ ವ್ಯಕ್ತಿಯ ರಹಸ್ಯ
ವನ್ನು ಭೇದಿಸಬಯಸುವವನಂತೆ ಜಯರಾಮು ಆತನನ್ನೇ ನೆಟ್ಟ ದೃಷ್ಟಿಯಿಂದ
ನೋಡಿದ.
"ನಾನು ವರ್ಣಚಿತ್ರ ತೈಲಚಿತ್ರ ಬರೆಯೋಲ್ಲ ಜಯರಾಮು. ಚಿತ್ರ ಬರೆದು
ಬದುಕೋಕೆ ಆಗೋದಿಲ್ಲ. ನಾನು ಬರೆಯೋದು ಸಿನಿಮಾ ಪೋಸ್ಟರು. 'ಶನಿ
ಮಹಾತ್ಮ್ಯೆ'ಯ ದೊಡ್ಡ ಬೋರ್ಡು ನೋಡಿದೀರೋ ಇಲ್ವೊ? ಆನಂದರಾವ್
ಸರ್ಕಲಿನಲ್ಲೂ ಮೆಜೆಸ್ಟಿಕಿನಲ್ಲೂ ಕಟ್ಟಿ ನಿಲ್ಲಿಸಿದ್ದಾರೆ. ಆ ದೇವರ ಚಿತ್ರ ಬರೆದೋನು
ನಾನೇ. ಇನ್ನೊಂದನ್ನೂ ನೀವು ನೋಡಿರಬೇಕು. 'ಜಣಕ್ ಜಣಕಾಂತ-ಮೈಕೈ
ಬಿಟ್ಕೊಂಡು ಕುಣಿಯೋದು. ಅದನ್ನ ಬರೆದೋನೂ ನಾನೇ."
ಏನನ್ನೋ ಮಾತನಾಡಬೇಕೆಂದು ಜಯರಾಮು ಯತ್ನಿಸಿದ. ಆದರೆ ನಾಲಿಗೆ
ಗಂಟಲು ಆರಿಹೋಗಿದ್ದುವು.
ತನ್ನೊಳಗೆ ಇನ್ನೂ ಹಸುರಾಗಿಯೇ ಇದ್ದ ಗಾಯವೊಂದನ್ನು ಕೆದಕಿದಂತಾಗಿ

ಶಂಕರನಾರಾಯಣಯ್ಯ ಅಷ್ಟು ಮಾತನಾಡಿದ್ದ. ಅದಕ್ಕೆ ಎಂತಹ ಪ್ರತ್ಯುತ್ತರ ಬಂದೀ

ತೆಂಬ ಯೋಚನೆ ಅವನಿಗಿರಲಿಲ್ಲ. ಪ್ರತ್ಯುತ್ತರವನ್ನಾತ ಅಪೇಕ್ಷಿಸಲೂ ಇಲ್ಲ.
"ಬರ್ತೀನಿ" ಎಂದಷ್ಟೇ ಹೇಳಿ ಆತ ಹೆಬ್ಬಾಗಿಲನ್ನು ದಾಟಿ ನಡು ಹಾದಿಯಲ್ಲಿ
ಸಾಗಿ ಓಣಿಯೊಳಕ್ಕೆ ಕಾಲಿಟ್ಟ.
ಪಾದಗಳು ಬೇರುಬಿಟ್ಟು ನೆಲದೊಳಗೆ ಇಳಿದಿದ್ದುವೇನೋ ಎಂಬಂತೆ ಶಿಲಾ
ಪ್ರತಿಮೆಯಾಗಿ ಸ್ವಲ್ಪ ಹೊತ್ತು ಜಯರಾಮು ನಿಂತ.
ಶಂಕರನಾರಾಯಣಯ್ಯನೊಡನೆ ತನ್ನ ಅಣ್ಣ ಮಾತನಾಡುತ್ತಿದ್ದುದನ್ನು ಮೇಲಿ
ನಿಂದಲೆ ಕಂಡಿದ್ದ ರಾಧಾ ಕರೆದಳು:
"ಅಣ್ಣ, ಬಾರೋ...ಬಾ ಅಣ್ಣ."
ಅವರಿಬ್ಬರು ಅದೇನೇನು ಮಾತನಾಡಿದರೆಂದು ತಿಳಿಯುವ ಕುತೂಹಲದಿಂದ
ರಾಧೆಗೆ ನಿಂತಲ್ಲಿ ನಿಲ್ಲಲಾಗುತ್ತಿರಲಿಲ್ಲ.
ಇನ್ನೇನು ಬರುವ ಹೊತ್ತು, ಬಾಗಿಲು ಮುಚ್ಚಬೇಕು, ಎಂದು ಚಂಪಾ ಯೋಚಿ
ಸುತ್ತಿದ್ದಾಗಲೇ ಶಂಕರನಾರಾಯಣಯ್ಯ ಒಳಗೆ ಬಂದುಬಿಟ್ಟು. ಪುಟ್ಟ ಮಗು ತಂದೆಗೆ
ಸ್ವಾಗತ ಬಯಸಿತು. ಅದನ್ನು ಎತ್ತಿಕೊಂಡು ಆತ ಅಡುಗೆಮನೆಯೊಳಕ್ಕೆ ನುಗ್ಗಿದ.
ಒಮ್ಮೆ ಬೀರಿದ ನೋಟದಿಂದಲೇ ಚಂಪಾವತಿ ತಿಳಿದುಕೊಂಡಳು: ಗಂಡ ಎಂದಿ
ನಂತಿರಲಿಲ್ಲ! ಆತನ ಮನಸ್ಸು ಉದ್ವಿಗ್ನವಾಗಿತ್ತೆಂಬುದನ್ನು ಮುಖದ ಬಣ್ಣ ತೋರಿ
ಸುತ್ತಿತ್ತು.
ಊದುಕೊಳವೆಯನ್ನೆತ್ತಿಕೊಂಡು ಸೌದೆ ತುಂಡುಗಳೆಡೆಗೆ ಚಂಪಾವತಿ "ಫ಼ೂ...
ಫ಼ೂ..." ಎಂದಳು. ನಡುವೆ ಮುಖ ತಿರುಗಿಸಿ ಗಂಡನನ್ನು ನೋಡಿ ಕೇಳಿದಳು:
"ಏನಾಯ್ತು?"
"ಏನಿಲ್ಲ. ನಾನು ಬರೆದಿರೋ ಕಲಾಕೃತಿಗಳ ವಿಷಯ ಆ ಹುಡುಗ ಜಯ
ರಾಮು ಕೇಳ್ದ!"
"ಯಾರು ರಾಧೆ ಅಣ್ಣನೇ?"
"ಹೂಂ. ಮಡದಿ ಮೇಲಿರೋನು."
"ಸರಿ. ನಿವೇನಂದಿರಿ?"
"ಶನಿಮಹಾತ್ಮ್ಯೆ ದೇವರ ಚಿತ್ರ ನಾನು ಬರೆದದ್ದು ಅಂದ!"
ಚಂಪಾ ಮಾತನಾಡಲಿಲ್ಲ. ತಾನು ದೊಡ್ಡ ಕಲಾವಿದನಾಗಬೇಕೆಂದು ಶಂಕರ
ನಾರಾಯಣಯ್ಯ ಹಿಂದೆ ಕನಸು ಕಂಡುದಿತ್ತು. ಆದರೆ ಕಲಾವಿದನಾಗಿ ಈ ಪ್ರಪಂಚ
ದಲ್ಲಿ ಬಾಳ್ವೆ ನಡೆಸುವುದು ಕಷ್ಟಸಾಧ್ಯವೆಂಬುದು ಆತನಿಗೆ ಮನವರಿಕೆಯಾಗಲು ಹೆಚ್ಚು
ಕಾಲ ಹಿಡಿದಿರಲಿಲ್ಲ. ಕಹಿ ಮನಸ್ಸು ಮಾಡಿ ಸಿಕ್ಕವರನ್ನೆಲ್ಲ ನಿಂದಿಸುತ್ತ ಕುಳಿತುಕೊಳ್ಳದೆ,
ಶಂಕರನಾರಾಯಣಯ್ಯ ವಾಸ್ತವವಾದಿಯಾಗಿ ಸಿನಿಮಾ ಪೋಸ್ಟರುಗಳ ಚಿತ್ರಕಾರನಾದ,

ಅವನ ಜತೆಯಲ್ಲಿ ಬೇರೆ ಇಬ್ಬರು ದುಡಿಯುತ್ತಿದ್ದರು. ಅವರೆಲ್ಲಿ ಏನು ಚಿತ್ರ ಬರೆದರೂ
ಕೆಳಗೆ ಹಾಕುತ್ತಿದ್ದ ಸಹಿ ಒಂದೇ- ರೂಪ್ ಆರ್ಟ್ಸ್. ಆ ಸಂಸ್ಥೆಯ ಒಡೆಯ ಚಿತ್ರಕಾರ
ನಾಗಿರಲಿಲ್ಲ. ಆದರೆ ಆತ ಸಮರ್ಥನಾದ ಕೊಳ್ಳುವ-ಮಾರುವ, ಮಾರಾಟವನ್ನೇ
ರ್ಪಡಿಸುವ ಯುವಕನಾಗಿದ್ದ. ಅವನ ಸ್ವಂತದ್ದೇ ಆದ ಜಾಹೀರಾತು ಸಂಸ್ಥೆಯೊಂದಿತ್ತು.
ಮೂರು ವರ್ಷಗಳ ಉದ್ಯಮದ ಬಳಿಕ ನಾಲ್ಕು ಕಾಸು ಸುಲಭವಾಗಿ ಆತನ ಕೈಯಲ್ಲಿ
ಓಡಾಡುವಂತಾಗಿತ್ತು. ಆ ಸಂಸ್ಥೆಯ ಚಲಿಸುವ ಒಂದು ಯಂತ್ರ ಶಂಕರನಾರಾಯ
ಣಯ್ಯ. ಆ ಕೆಲಸ ಎಷ್ಟೋ ವೇಳೆ ನೀರಸವಾಗಿ ಆತನಿಗೆ ತೋರಿದರೊ, ಆ ಆವರಣ
ದೊಳಗೇ ಒಂದಿಷ್ಟು ರಸಿಕತೆಯನ್ನು ತುಂಬಲೆತ್ನಿಸುತ್ತ, ಕಲೆಯನ್ನು ಹೊಟ್ಟೆ ಹೊರೆ
ಯುವ ಸಾಧನವಾಗಿ ಬಳಸಿ ಆತ ಕಾಲ ಕಳೆಯುತ್ತಿದ್ದ.
ಹೀಗಿದ್ದರೂ ಆಗೊಮ್ಮೆ ಈಗೊಮ್ಮೆ ಕೈಗೊಡದ ಬಯಕೆಗಳು ಕಣ್ಣು ತೆರೆದು
ಆತನನ್ನುಮಾತನಾಡಿಸುತ್ತಿದ್ದುವು.
ಆಗ ಹೇಗೆ ವರ್ತಿಸಬೇಕೆಂಬುದು ಚಂಪಾವತಿಗೆ ಗೊತ್ತಿತ್ತು.
ಅಂತಹದೇ ಸನ್ನಿವೇಶವಾದ ಈ ಸಂಜೆ...
ಚಂಪಾ ಮೆಲುದನಿಯಲ್ಲಿ ಕೇಳಿದಳು:
"ಸೌತೆಕಾಯಿ ಇದೆ. ಏನು ಮಾಡ್ಲಿ?"
"ಏನಾದರು ಮಾಡೇ."
"ಕೋಸಂಬರಿ ಮಾಡ್ಲೇನು?"
"ಹೂಂ."
ಒಲೆಯ ಎದುರು ಮಗುವನ್ನೆತ್ತಿಕೊಂಡು ಗೋಡೆಗೊರಗಿ ಕುಳಿತಿದ್ದ ಗಂಡಸಿನತ್ತ
ಸರಿದಳು ಚಂಪಾ.
"ಎಷ್ಟೊಂದು ಮುದ್ದಿಸೋದು ಮಗೂನ. ಇಲ್ಕೊಡಿ!"
ಮಗುವನ್ನೆತ್ತಿಕೊಂಡು ಆಕೆ ಬದಿಗೆ ಸರಿದಳು. ಬಾಹುಗಳಿಂದ ಗಂಡನ ಕೊರ
ಳನ್ನು ಬಳಸಿ ಮುಖಕ್ಕೆ ಮುತ್ತು ಕೊಟ್ಟಳು- ಮತ್ತೊಂದು.
"ನನ್ನ ದೇವರಿಗೆ ನೋವಾಯ್ತಲ್ಲ- ಅದಕ್ಕೆ."
ತನ್ನ ತೋಳಿನಿಂದ ಆಕೆಯನ್ನು ಶಂಕರನಾರಾಯಣಯ್ಯ ಆಧರಿಸಿದ. ಉಳಿದು
ದೆಲ್ಲ ಆತನಿಗೆ ಮರೆತು ಹೋಯಿತು.
"ಅಯ್ಯೋ! ಅದೇನೊ ಸದ್ದಾಯ್ತು. ಯಾರು ಬಂದರೊ?"
-ಎಂದು ಚಂಪಾ ಗಡಬಡಿಸಿ ಎದ್ದು ಹೊರಬಂದಳು. ಒಳಗೆ ಕಾಲಿರಿಸಿದ್ದ
ಅಹಲ್ಯಾ ಸರಕ್ಕನೆ ಹಿಂತಿರುಗಿ ಹೋಗುತ್ತಿದ್ದುದು ಕಾಣಿಸಿತು.
ಕರೆದು ನಿಲ್ಲಿಸಬೇಕೆಂದು ಆಕೆಯ ಹೆಸರು ನಾಲಿಗೆಯ ತುದಿಗೆ ಬಂದರೂ ಚಂಪಾ
ತನ್ನನ್ನು ತಾನೇ ತಡೆದಳು.
ಒಳಕ್ಕೆ ಹಿಂತಿರುಗಿದ ಹೆಂಡತಿಯನ್ನು ಶಂಕರನಾರಾಯಣಯ್ಯ ಕೇಳಿದ:
"ಯಾರು ಚಂಪಾ?"
"ಅಹಲ್ಯಾ ಕಣ್ರೀ, ನೋಡಿದಳೋ ಏನೋ?"
"ಏನನ್ನ?"
"ನಾಚಿಕೆ ಇಲ್ಲ ನಿಮಗೆ..."
"ನಿನಗಿದೆ, ಅಲ್ಲ?"
"ಹೋಗ್ರಿ."
"ನೋಡಲಿ ಬಿಡು. ಕಲಿತ್ಕೋತಾಳೆ. ಹಾಡು ಹ್ಯಾಗೂ ಹೇಳಿಕೊಡ್ತಿದೀಯಾ.
ಇದನ್ನೂ-"
"ಸಾಕು, ಥೂ!"
ಒಲೆಯ ಉರಿ ಮತ್ತೊಮ್ಮೆ ಆರಿ ಹೋಗಿತ್ತು. ಚಂಪಾ ಊದುಕೊಳವೆಯನ್ನೆತ್ತಿ
ಕೊಂಡಳು. ಶಂಕರನಾರಾಯಣಯ್ಯ ಸೌತೆಕಾಯಿ ಹೆಚ್ಚತೊಡಗಿದ
...ಹೊರಗೆ ಹೆಸರು-ಹಲಿಗೆ ಗೋಡೆಗೆ ತಗಲಿ ತೂಗುತ್ತಿತ್ತು.
'ಚಂದರ್ ಶೇಖರ್.'
ಚಂದ್ರಶೇಖರಯ್ಯನೆಂದುಕೊಂಡ:
'ಒಳ್ಳೇ ಶಂಕರನಾರಾಯಣಯ್ಯ. ಹೆಸರು ಹಲಿಗೆ ಬರಕೊಡೀಂತ ತಮಾಷೆಗೆ
ಅಂದಿದ್ರೆ ಬರೆದೇ ಬಿಟ್ಟಿದ್ದಾನೆ!.
ಮೋಜು. ರಂಗಮ್ಮನ ವಠಾರದಲ್ಲೊಂದು ಕೊಠಡಿ ಮನೆಗೆ ಹೆಸರು-ಹಲಿಗೆ:
ಹರಿದ ಸೀರೆ ಹಳೆಯ ಚಪ್ಪಲಿಗಳ ಕರಿಯ ಹೆಂಗಸು ಕೈಯಲ್ಲಿ ವ್ಯಾನಿಟಿಬ್ಯಾಗ್ ಹಿಡಿದ
ಹಾಗಿತ್ತು.
ಆ ಮನೆಯನ್ನು ಬಿಟ್ಟುಬಿಡಬೇಕೇಂದು ಎಷ್ಟೋ ಸಾರೆ ಆತ ಯೋಚಿಸಿದ್ದ. ಆದರೆ
ಬೇರೆ ಒಳ್ಳೆಯ ಕೊಠಡಿಯನ್ನು ಹುಡುಕಲು ಆತನಿಗೆ ಬಿಡುವೇ ದೊರೆತಿರಲಿಲ್ಲ. ಬಿಡು
ವಿದ್ದಾಗ ಆಯಾಸವೆನಿಸುತಿತ್ತು. ಆಯಾಸವಿಲ್ಲದೆ ಇದ್ದಾಗ ಹಾಳು ಬೇಸರ. 'ಯಾವು
ದಾದರೂ ಸಿನಿಮಾ ನೋಡೋಣ' ಎನಿಸುತ್ತಿತ್ತು.
ಅಗತ್ಯದ ಕೆಲಸವಿದ್ದರೆ ಉತ್ಸಾಹದಿಂದ ಒಂದೇ ಸಮನೆ ಆತ ದುಡಿಯುತ್ತಿದ್ದ.
ಪ್ರವಾಸ ಹೊಗುತ್ತಿದ್ದ. ದನಿವೆಂಬುದನ್ನೇ ಅವನು ಅರಿಯ. ಅದು ಮುಗಿದು
ಒಮ್ಮೆ ಕಾಲುಚಾಚಿದನೆಂದರೆ, ಚಂದ್ರಶೇಖರಯ್ಯ ಮಹಾ ಸೋಮಾರಿ. ಊಟ
ಮಾಡುವುದಕ್ಕೂ ಹೋಟೆಲಿಗೆ ಹೊತ್ತಿಗೆ ಸರಿಯಾಗಿ ಹೂಗುತ್ತಿರಲಿಲ್ಲ. ತಡವಾಗಿ
ಹೋಗಿ, ಊಟವಿಲ್ಲವೆಂದು, ಪಕ್ಕದ ಹೋಟೆಲಿನಲ್ಲಿ ತಿಂಡಿ ತಿಂದು ಕಾಫಿ ಕುಡಿಯು
ತ್ತಿದ್ದ. ನೈರ್ಮಲ್ಯ ಆತನಿಗೆ ಇಷ್ಟವಾದರೂ ಅದನ್ನು ಕಾಪಾಡಲು ಆತ ಪ್ರಯತ್ನಿಸು
ತ್ತಿರಲಿಲ್ಲ. ಎಂದಾದರೊಮ್ಮೆ ಕೊಠಡಿಯನ್ನು ಅಚ್ಚುಕಟ್ಟಾಗಿಡಲು ಅವನು ಯತ್ನಿಸು
ವುದಿತ್ತು. ಆದರೆ ಒಂದೆರಡು ದಿನಗಳಲ್ಲಿ ಎಲ್ಲವು ಮೊದಲಿನಂತೆಯೇ ಮಾರ್ಪಡು
ತ್ತಿದ್ದುವು.
ಮದುವೆಯಾಗಿದೆಯೆಂದು ಸುಳ್ಳು ಹೇಳಿ ಕೊಠಡಿ ಮನೆ ದೊರಕಿಸಿಕೊಂಡ.
ಬಳಿಕ, ನಿಜ ಸಂಗತಿ ರಂಗಮ್ಮನಿಗೆ ಗೋತ್ತಾಗಿತ್ತು. ರಂಗಮ್ಮ ರೇಗುತ್ತಿದ್ದಾಗಲೂ
ತಮಾಷೆಯಾಗಿಯೇ ಇರಲು ಅತ ಯತ್ನಿಸುತ್ತಿದ್ದ.
ವಠಾರದಲ್ಲಿ ಉಂಟಾದ ಪ್ರಕ್ಷುಬ್ದ ಪರಿಸ್ಥಿತಿ ಶಾಂತವಾಗಿ ಎಷ್ಟೋ ದಿನಗಳಾದ
ಮೇಲೆ, ಪಕ್ಕದಮನೆಯಾತ ಒಳ್ಳೆಯವನು ಎಂದು ಜಯರಾಮಮುವಿನ ತಾಯಿ ಪ್ರಮಾಣ
ಪತ್ರ ಕೊಟ್ಟ ಮೇಲೆ, ರಂಗಮ್ಮ ಒಂದು ದಿನ ಹೇಳಿದ್ದರು:
"ಚಂದ್ರಶೇಖರಯ್ಯ, ನೀವು ಇಷ್ಟೆಲ್ಲಾ ಓದಿದೋರು,ಬುದ್ದಿವಂತ. ಕೈತುಂಬಾ
ಸಂಪಾದನೆ ಇದೆ. ಹೀಗಿದ್ದೂ ಈ ತರಹೆ ಇದೀರಲ್ಲಾ..."
ವಿಷಯವೇನೆಂದು ಊಹಿಸಿ, ಅವನ ಮುಖ ನಸುಗೆಂಪಾಯಿತು.
"ಯಾವ ಥರ ಇದೀನಿ ರಂಗಮ್ನೋರೆ?"
"ಎಷ್ಟು ದೀನಾಂತ ಈ ಕೆಟ್ಟ ಹೋಟ್ಲುಟ ಮಾಡ್ತೀರಪ್ಪಾ?"
ಹೋಟೆಲು ಊಟ ಚೆನ್ನಾಗಿರುತ್ತರೆಂದು ಹೇಳಿದ ಒಬ್ಬ ಮನುಷ್ಯ ಪ್ರಾಣಿ
ಯನ್ನು ಚಂದ್ರಶೇಖರಯ್ಯ ಆವರೆಗೆ ನೋಡಿರಲಿಲ್ಲ.
"ಏನಾಗಿದೆ ರಂಗಮ್ನೋರೆ?"
"ನಿಮ್ಮ ಅವಸ್ಥೆನೋ ನೀವೋ...ದೇವರಿಗೇ ಪ್ರೀತಿ."
ಚಂದ್ರಶೇಖರಯ್ಯ ನಕ್ಕು ಕೇಳಿದ:
"ನಾನು ಏನ್ಮಾಡಿದ್ರೆ ನಿಮಗಿಷ್ಟವಾಗುತ್ತೆ ಹೇಳಿ?"
"ಬಾಯಿಬುಟ್ಟು ಹೇಳ್ಬೇಕೇನಪ್ಪಾ ಅದನ್ನೂ? ಇನ್ನೂ ಹೀಗೇ ಇರ್ಬೇಡಿ...
ನೀವೇನು ಚಿಕ್ಕ ಹುಡುಗ್ನೆ ಈಗ? ಬೇಗ್ನೆ ಒಳ್ಳೆ ಹೆಣ್ಣು ನೋಡಿ ಮದುವೆ ಮಾಡಿ
ಕೊಳ್ಳಿ, ನಿಮ್ಮ ತಂದೆ ತಾಯಿ ಅದು ಹ್ಯಾಗೆ ಸಹಿಸಿಕೊಂಡಿದಾರೊ?"
ಅವರು ಸಹಿಸಿಕೊಂಡಿರಲಿಲ್ಲ. ಹಿರಿಯ ಮಗನಾದ ಚಂದ್ರಶೇಖರಯ್ಯ ಮನೆಗೆ
ಬಂದಾಗಲೆಲ್ಲ ಅವನನ್ನು ಅವರು ಗೋಳು ಹುಯ್ಯುತ್ತಿದ್ದರು. ಆಳು ಕಾಳು ಇಟ್ಟು
ಕೊಂಡು ಮನೆತನದ ಅಲ್ಪ ಆಸ್ತಿಯ ಉಸ್ತುವಾರಿ ಮಾಡುತ್ತಿದ್ದ ಆತನ ತಮ್ಮನಿಗೂ
ಅಣ್ಣನನ್ನು ಕಂಡರಾಗುತ್ತಿರಲಿಲ್ಲ. ಆ ತಮ್ಮನಿಗೆ ಆಗಲೆ ಮದುವೆಯಾಗಲು ಮನ
ಸ್ಸಿತ್ತು. ಹಿರಿಯರು ಸೋದರರಿಬ್ಬರಿಗೂ ಹುಡುಗಿಯರನ್ನು ನೋಡಿ ಇಟ್ಟಿದ್ದರು.
ಆದರೆ ಅಣ್ಣ ಅವಿವಾಹಿತನಾಗಿ ಇರುವಷ್ಟು ಕಾಲ ತಮ್ಮ ಸುಮ್ಮನಿರಬೇಕಾಗಿತ್ತು.
ಚಂದ್ರಶೇಖರಯ್ಯನೇನೋ ಹೇಳಿದ್ದ:
"ಅವನಿಗೆ ಮದುವೆ ಮಾಡಿಸ್ಬಿಡಿ. ಕಾಗದ ಬರೀರಿ. ಬಂದು ಹೋಗ್ತೀನಿ."
"ನಿನಗೆ?"
"ನನಗೆ ಈಗ್ಬೇಡ...."
.... ಕಿರ್ ಕಿರ್ರೆನ್ನುತ್ತಿದ್ದ ಕಬ್ಬಿಣದ ಮಂಚದ ಮೇಲೆ ಅತ್ತಿತ್ತ ಹೊರಳುತ್ತ
ಚಂದ್ರಶೇಖರಯ್ಯ ಕಿಟಕಿಯ ಮೂಲಕ ಹೊರಗೆ ನೋಡಿದ. ಒಂದು ಚೂರು ಅಕಾಶ
ಕಾಣಿಸುತ್ತಿತ್ತು. ಅಲ್ಲಿ ಹಲವು ನಕ್ಷತ್ರಗಳು ಮಿನುಗುತ್ತಿದ್ದವು.