<< ಅಯೋಧ್ಯಾ ಸಂಪುಟಂ >> ಕಿಷ್ಕಿಂದಾ ಸಂಪುಟಂ << ಲಂಕಾ ಸಂಪುಟಂ >> ಶ್ರೀ ಸಂಪುಟಂ <<
ಸಂಚಿಕೆ-1-ಲಂಕೇಶನೊಲಿಸಿದನು ಮಾರೀಚನಂ
ಏಳು, ವೀಣೆಯೆ; ಏಳು, ವಾಕ್ಸುಂದರಿಯ ಕಯ್ಯ
ತ್ರೈಭುವನ ಸಮ್ಮೋಹಿನಿಯೆ, ಕವನ ಕಮನೀಯೆ!
ಮಂತ್ರದಕ್ಷಿಗಳಿಂದೆ ನೋಳ್ಪ ನೀಂ ಸರ್ವಕ್ಕೆ
ಸಾಕ್ಷಿ. ಕಂಡುದನೆಮಗೆ ಗಾನಗೆಯ್ ಶ್ರೀಕಂಠದಿಂ
ಶತತಂತ್ರಿಯಾ. ಪ್ರತಿಭೆ ತಾಂ ಪ್ರಜ್ವಲಿಸುಗೆಮ್ಮೆರ್ದೆಗೆ
ನಿನ್ನ ದರ್ಶನವೆಮ್ಮ ದರ್ಶನಂ ತಾನಪ್ಪವೋಲ್ !
ನಾರಣಪ್ಪಂಗಂತೆ ರನ್ನಂಗೆ ಮೇಣ್ ಪಂಪರಿಗೆ,
ನಾಗವರ್ಮಗೆ ರಾಘವಾಂಕಗೆ ಲಕುಮಿಪತಿಗೆ,
ವಾಲ್ಮೀಕಿ ವ್ಯಾಸರಿಗೆ ಹೋಮರಗೆ ಮಿಲ್ಟನಗೆ
ದಾಂತೆ ಮೊದಲಹ ಮಹಾಕವಿಗಳಿಗೆ ನೀನೊಸೆದು ೧೦
ಕೃಪೆಗೈದ ವೈದ್ಯುತಪ್ರತಿಭೆಯಂ, ಹೇ ದೇವಿ,
ಕಲ್ಪನಾಶಕ್ತಿಯಂ ವಾಙ್ಮಂತ್ರದುಕ್ತಿಯಂ
ಆಯುರಾರೋಗ್ಯಮಂ ಶಾಂತಿ ಸೌಭಾಗ್ಯಮಂ
ದಯಪಾಲಿಸೌ ನಿನ್ನ ಕನ್ನಡ ಕಂದನೀತಂಗೆ,
ಸುರುಳಿಗುರುಳಂದಮೆಸೆವಾತ್ಮಸೌಂದರ್ಯಮಂ
ಮುಡಿಪನರ್ಚಿಸಿ ಮಣಿಯುವೀ ಕವಿ ಕುವೆಂಪುವಿಗೆ !
ಊರ್ಮಿಳೇಶನ ಕರಶರ ವಿಘಾತಿಗಸುರ ಸತಿ
ಮುರಿದ ಬೇಟಕೆ ಕೆರಳಿ, ಪಡಿಗೆಯ್ಮೆಗುಜ್ಜುಗಿಸಿದಳ್ ;
ಪೊಕ್ಕಳ್ ಜನಸ್ಥಾನದಾಸ್ಥಾನಮಂ, ಮೂವರಂ
ಲಂಕೇಶನರಿವ ಮುನ್ನಮೆ ಕೋಸಲಕೆ ಮರಳಿ ೨೦
ಪಿಂತೆರಳಲೀಯದೆಯೆ ತಡೆಯಲ್ ನೆರಂಬಡೆಯೆ ; ಮೇಣ್
ಪಡೆವಳರ್ ಸೋದರರ್ ಖರದೂಷಣರ ಚಿತ್ತದೊಳ್
ಕಾದಾಟಮಂ ಕಡೆಯೆ. ವಿಷಮಂ ಕುಡಿವರಂತೆ, ಕೇಳ್,
ತಂಗೆಯ ನುಡಿಯನೀಂಟಿ, ರಾಮಲಕ್ಷ್ಮಣರೊಡನೆ
ಸೆಣಸಿ, ಸೈನ್ಯಂ ವೆರಸಿ ಪಾಳ್ಪೋದರನಿಬರುಂ ! ಮೇಣ್
ಬೆಂಕೆ ಬಿಂಕಕೆ ತಗುಳಿದೋಲಂತೆ ಆ ಚಂದ್ರನಖಿ
ಲಂಕೇಶ್ವರನ ತಂಗೆ, ಬಾನ್ಗೆ ದಳ್ಳುರಿ ನೆಗೆವವೊಲ್
ಧಾವಿಸಿದಳಗ್ರಜನ ಬಳಿಗತ್ಯುಗ್ರ ಮನದಿಂದೆ !
ಏಳು ವೀಣೆಯೆ, ಏಳು ಹೇ ಅಮೃತಭಾಷಿಣಿಯೆ,
ಹೇಳು ಮುಂದಣ ಕಥಾಕಾವ್ಯಮಂ, ಕೇಳ್ವರ್ಗೆ ೩೦
ರಸವಶತೆಯಿಂ ಕಲಾಪುಲಕಂ ಪಲ್ಲವಿಪ್ಪಂತೆ !
ತನ್ನಯ ಮನೋಹರಿಯ, ಲಂಕೇಶ್ವರಿಯ, ದಯಿತೆ
ಮಂಡೋದರಿಯ ಮೆಯ್ಯ ಮೋಹ ಸರಸಿಯೊಳಾಡಿ
ತಡಿಗೇರ್ದ ಮತ್ತೇಭ ಸನ್ನಿಭ ಪುಲಸ್ತ್ಯಜಂ
ಮೀಸೆಗಯ್ಯಾಗಿ, ಕಿರುನಗೆವೆರಸಿ, ತಂಬುಲಂ
ಹೃದಯರಾಗಮನಧರಕಿತ್ತಂತೆ ಕೆಂಪೆಸೆಯೆ,
ಒರೆದನಿಂತೋಪಳಿಗೆ : “ಪ್ರಿಯೆ, ಪಯಣಮಿದೆ ನಾಳೆ ;
ದೂರಂ, ಮಹತ್ತರಂ ; ಅನಿವಾರ್ಯಮುಂ ದಿಟಂ.
ನಿನ್ನ ದಾಸಿಯರಿತರ ಮಹಿಷಿಯರಿಗದನರುಹಿ
ನನಗಾಗಿ ಮುಂದೆತಳ್ಳೌತಣದ ಕೂಟಮಂ, ೪೦
ವೇಲಾದ್ರಿಸಾನುವನದ ವಿಹಾರಯಾತ್ರೆಯಂ
ಪುಷ್ಪಕವಿಮಾನದಾ. ಬಂದೊದಗಿತೊಯ್ಕನೆಯೆ
ನಿನಗೇತಕಾ ರಾಜಕಾರಣಂ, ಬರಿ ಗಂಡು
ಹಗರಣಂ ?” ಪತಿಯ ಸುಖಮುದ್ರಿತ ಮುಖಕೆ ವಿಕೃತಿ
ಕಂಡು : “ಏನದು ರಾಜಕಾರಣಂ, ದೈತ್ಯೇಂದ್ರ ?
ನಮ್ಮೌತಣಕೆ ಮಿಗಿಲುಗಜ್ಜಮಿನ್ನುಂ ನಿನಗೆ
ತಾನೊಳದೆ, ಕೃತಕೃತ್ಯನಿಗೆ, ಜಗಜ್ಜೇತಂಗೆ ?
ಇಂದ್ರನುದ್ಧಟತನವೆ ? ವಿತ್ತೇಶನವಿನಯವೆ ?
ಯಮನ ಗರ್ವವೆ ? ಮರ್ತ್ಯರಾಜರವಿಧೇಯತೆಯೆ ?”
“ಹಿರಿಯರಿಗೆ ಹಿರಿಯಕೋಟಲೆ ಹಿರಿದೆ ? ಕಿರುಕುಳರ
ಕಿರುಕುಳಮೆ ಪಿರಿದು ! ಮೃಗರಾಜನೇಂ ಮದಕರಿಯ
ದಂತಮಂ ಲೆಕ್ಕಿಪನೆ ? ನೊರಜು ನುಸಿಗಳ ಕಿರಿಯ
ಕಿರಿಕಿರಿಗೆ ರೋಸಿದಪನಲ್ತೆ ? ಆ ದಶರಥನ
ಮಗಂ ರಾಮನೆಂಬೊನಿಂ ನಮ್ಮಾ ಜನಸ್ಥಾನಮ್
ಅಜನಮಾಯ್ತೆಂದು ಬಂದಿದೆ ವಾರ್ತೆ. ಸೋದರರ್,
ಕದನಕೀನಾಶರಾ ಖರದೂಷಣರ್, ನಮ್ಮ
ಕುಲ ಭೂಷಣರ್, ಕಾದಿ ಮಡಿದರಲ್ಲದೆ, ತಂಗೆ
ಚಂದ್ರನಖಿಗವಮಾನಮಾದತ್ತು ! ಪ್ರತಿಫಲಂ
ಮಾರ್ಕೊಳ್ಳದೆಯೆ ಬರಿದೆ ಬಿಟ್ಟಪುದೆ ಭಗಿನಿಯಂ ೬೦
ಭಂಗಿಸಿದನರ್ಧಾಂಗಿಯಂ ? ಮತ್ತಮನುಜರಂ
ಕೊನ್ದ ಆ ಮನುಜರಂ ಕೊನ್ದು ತಿನ್ನದೆ ಬರಿದೆ
ಬಿಟ್ಟಪುದೆ ದನುಜವೈರಂ ? ನಿನಗೆ ದಾಸಿಯಂ
ಮತ್ತೊರ್ವಳಂ ತರ್ಪೆನಾ ಜನಕಜಾತೆಯಂ
ನೆಲದರಿಕೆವೆಸರ ಆ ಸೀತೆಯಂ ! – ನೆನಪಿದೆಯೆ,
ಜೀವಿತೇಶ್ವರಿ, ಸ್ವಯಂವರದ ಆ ತಿಕ್ತಕಥೆ ?
ಮತ್ತೆ ಬಂದೆತ್ತಿ ಬಿಲ್ಲಂ ನಾಣನೇರಿಸುವೆ
ಕೊಪ್ಪಿಗೆಂದಾಂ ಸೂರುಳಂ ತೊಟ್ಟು ಪಿಂತಿರುಗಿ
ಬಂದೆ. ತಪಮಂ ಚರಿಸುತುಗ್ರಮಂ, ರುದ್ರನಿಂ
ಆ ಚಂದ್ರಚೂಡ ಕೋದಂಡಮಂ ತುಂಡೆಸಗೆ
ಬಲ್ಮೆಯ ಬರಂಗಳಂ ಪಡೆದೆ. ಪಡೆದೆಂ ಬರಿದೆ ! ೭೦
ಮಿಥಿಳೆಗಾಂ ಮರಳಿ ಪೋಪನಿತರೊಳೆ, ರಾಜರ್ಷಿ
ತನುಜೆಯಂ ದಶರಥಕುಮಾರಂಗೆರೆದ ವಾರ್ತೆ
ಬಂದತ್ತೆನಗೆ ! ಜನಕನಾ ಗೆಯ್ಮೆ ಸೋಜಿಗಮೆ ?
ಆರ್ಯರಾದರಿಗೆಮ್ಮ ಕೂಡೆ ಕೊಳುಕೊಡೆ ನಂಟು
ಪೇಸಂತೆ ! ನಾವು ರಾಕ್ಷಸರಂತೆ ! ನೀನರಿಯೆ
ನಮ್ಮನೆಂತವರು ಬಣ್ಣಿಪರೆಂಬುದಂ ! ದಶಶಿರಂ
ಎಂಬೆನ್ನ ಬಿರುದನವರೀರೈದು ತಲೆಯೆಂದು
ಚಿತ್ರಿಪರ್ ! ದಶರಥನನಂತು ನಾಂ ಚಿತ್ರಿಪೆವೆ ?
ಪತ್ತು ತೇರೊಳ್ ಪತ್ತು ಸೂಳೆರಡು ಕಾಲ್ಗಳನಿಟ್ಟು ೮೦
ಚರಿಸುವೊಲ್ ಬಣ್ಣಿಪ್ಪೆವೇಂ ? ನಮ್ಮ ಪೆಣ್ಗಳನವರ್
ಕೋರೆಗಳ್ ಕೋಡುಗಳ್‌ವೆರೆಸಿ ಬರೆದಪರಂತೆ !
ನಾವು ನರರಂ ಕಡಿದು, ಬಿಸಿನೆತ್ತರಂ ಕುಡಿದು
ಬರ್ದುಕುವವರಂತೆ ! ಸಂಸ್ಕೃತಿ ನಮ್ಮೊಳಿನಿಸಾನುಮೇನ್
ಇಲ್ಲಂತೆ ! ರಾಕ್ಷಸಕುಲದ ನಾವು ರಾಕ್ಷಸರೆ
ದಿಟಮಂತೆ ! ಸೂರ್ಯಕುಲದವರೆಲ್ಲ ರವಿಯವೊಲ್
ದುಂಡೆಂದು ಬಿಸಿಯೆಂದು ನಾವವರನಾಡುವೆವೆ ?
ನಮ್ಮ ಮಾತಂತಿರ್ಕೆ : ವಾನರಧ್ವಜರೆಲ್ಲರುಂ
ದಿಟದಿ ಕೋತಿಗಳಂತೆ ! – ತೋರ್ಪೆನವರಿಗೆ ನಮ್ಮ
ಸಂಸ್ಕೃತಿ ರುಚಿಯನಿನಿತು ! ಸೀತೆಗೋಸುಗಮೆ ನಾಂ ೯೦
ತಪದಿಂ ಪಡೆದೆನೆನಿತೊ ಶಕ್ತಿಯಂ ; ತವಿಯಲಾ
ಸಂಪದಂ ಸೀತೆಗಾಗಿಯೆ !” ಎಂದು ಮಚ್ಚರಂ
ಕಿಚ್ಚೇಳೆ ಕೆಚ್ಚುನುಡಿದಾಣ್ಮನಂ ನೋಡುತಾ
ಸತಿ ಕಣ್ಣನೀರಂ ಮಿಡಿದಳೊಂದೆ ಸುಯ್ ಸುಯ್ದು.
ಪತಿ ನುಡಿಸೆಯುಂ ತನ್ನ ಹೃದಯವನೊರೆಯಲಾರದೆಯೆ
ನಡೆದಳಲ್ಲಿಂ ಮನೆಯ ದೇಗುಲಕೆ !
“ಪೆಣ್ತನಕೆ
ಸಾಜಂ ಸವತಿಮಚ್ಚರಂ !” ಪೆರ್ಮೆವೆಂಡಿತಿಯ
ಬಗೆಯ ನೋವಿಂಗನ್ನೆಯದ ಟೀಕೆಯಂ ಮಾಡಿ,
ಚಂದ್ರನಖಿಯಿರ್ದೆಡೆಗೆ ನಡೆದನೇಕಾಂತಕ್ಕೆ
ಲಂಕಾಧಿಪಂ. ಚುಂಗುಳಂ ತಿನೆ ಮೊಗಂಗೆಟ್ಟು ೧೦೦
ಸಂಮ್ಲಾನಮಾದ ಮಲರಂತಿರಿರ್ದಾಕೆಯಂ
ಕಾಣುತೆರ್ದೆಯುರಿದುದಣ್ಣಂಗೆ, ತನ್ನರಸಿಕ್ಕೆ
ಮೂಗು ಮುರಿದಂತೆವೋಲ್. ಸಂತೈಸಿದನು ಇಂತು
ನುಡಿಗಿಡಿಯನುಗುಳಿ: “ಸೋದರಿ, ಸತ್ತನೆಂದೆ ತಿಳಿ
ಈ ನಿನ್ನ ವದನ ವಲ್ಮೀಕಮಂ ಕಿಳ್ತೆನ್ನ
ಚಿತ್ತಫಣಿಯಂ ಕೆರಳ್ಜಿದಾತನ್. ಉರಗವನಿರಿದು
ಹೆಡೆಮಣಿಯನಿಳ್ಕುಳಿಗೊಳುವವೋಲೆ ಸೀತೆಯಂ
ಸುಲಿವೆನವಮಾನಕವಮಾನವನೆ ಮುಯ್ಯೊಡ್ಡುವೆನ್.
ಈ ಪೊಸತು ನೋವ್‌ಗಾಳಿಗಾ ಪಳೆಯಳಲ್‌ವೆಂಕೆ
ದಳ್ಳುರಿಯುತಿದೆ, ತಂಗೆ, ದಹಿಸಿ ಕಾನ್ತಾರಮಂ ೧೧೦
ಮತ್ಪ್ರಾಣದಾ !” ರಾಮಲಕ್ಷ್ಮಣರ ತಾರುಣ್ಯಮಂ
ನೆನೆದು ನುಡಿದಳ್ ಪ್ರಣಯ ಕಾರುಣ್ಯದಿಂ : “ಕಯ್ಯೆ
ಸಾಲ್ವುದಕೆ ಕಯ್ದು ಹಂಗೇಕೆ ? ಶಂಕಿಸೆ ಶಕ್ತಿ,
ಗೆಲುವವೋಲಿರೆ ಯುಕ್ತಿ, ಬಿಂಕದಂಕದ ಕೆಚ್ಚು
ಬರಿ ಸಾಹಸಂ. ಗಂಡುಗಲಿ ನೀನಪ್ಪೆಯಾದೊಡಂ,
ಯಮನಂ ಕುಬೇರನಂ ದೇವದೇವೇಂದ್ರನಂ
ಬಾಯ್ಕೇಳಿಸಿಪ್ಪದಟನಾದೊಡಂ, ದಾಶರಥಿ
ಕದನಮುಖದಲಿ ಸುಲಭನೆಂದರಿಯದಿರೊ, ಅಣ್ಣ !
ಕಂಡಿಪ್ಪೆನಾನಾತನಸ್ತ್ರಪ್ರಳಯದಿಂದಮಾ
ದಶಸಹಸ್ರರಿಗಾದ ಪರಿಣಾಮಮಂ ! ಪ್ರಕೃತಿ ೧೨೦
ಮಾತ್ರನಲ್ಲಯ್ ರಾಮನೊರ್ವನೆಯೆ ತಾನೊಂದು
ಪಿರಿಯ ಪಡೆ ; ಪೇಳ್ವುದೇನವನೊಡನೆ ಬೆರಸಿ ಬರೆ
ಲಕ್ಷ್ಮಣಂ ; ತಾಮಜಿಂಕ್ಯರೆ ದಿಟಂ ! ಪೆಣ್ ಪೆಳರೆ
ಗಂಡು ನಗುವುದೆ ಸಾಜಮಾದೊಡಂ, ಅಣ್ಣಯ್ಯ,
ದುಡುಕದಿರೊ ನನ್ನ ಮೇಣೆಮ್ಮ ಖರದೂಷಣರ
ಕೇಡಿಂಗೆ ಕೆರಳಿ.” “ಪೆಣ್ಣಾದೊಡಂ ನೀನೆನಗೆ
ಮತಿಯೊಳುಂ ಧೃತಿಯೊಳುಂ ಗಂಡಿಗೆಣೆ. ನಿನ್ನೆಣಿಕೆ
ಹಗುರವಲ್ತೆನಗೆ. ಕಳುಹಿದೆನು ನಾನದನರಿತೆ
ನಿನ್ನನವರಿರ್ಪೆಡೆಗೆ ತಿಳಿಯಲವರಾಳ್ಮೆಯಂ.”
“ಕೈತವದೊಳವನಿಜಾತೆಯನೆಂತುಟಾದೊಡಂ ೧೩೦
ಕವರ್ತೆಗೊಳ್. ಬೇರುಗೊಯ್ದವನೀರುಹಂಬೋಲೆ
ನಿಸ್ತೇಜನಾದಪಂ, ನಿರ್ವೀರ್ಯನಾದಪಂ,
ತನಗೆ ತಾಂ ಮಳ್ಗುವನೊಣಗಿ ಬಾಡಿ. ಶುಷ್ಕತರು ದಲ್
ದಹನಕೆ ಸುಲಭಸಾಧ್ಯಂ ? ಕಜ್ಜಮೆರಡುಂ ನಿನಗೆ
ಕೈಗೂಡುವುವು : ಪಡೆವೆ ಲಲನೆಯಂ ; ವೈರಿಯುಂ
ಹತನಹನ್ ……. ಹೇ ದೈತ್ಯರಾಜೇಂದ್ರ, ನನ್ನದಿದೊ
ಒರ್ ಬಿನ್ನಪಂ : ನಿನಗೆ ಕೈಸೆರೆಗಳಾಗುವೊಡೆ
ಆ ಇರ್ವರಂ ಬಿಕ್ಕೆ ನೀಡೆನಗೆ. ನನ್ನಿಚ್ಚೆರತಿ
ಹೊಡೆತಣಿವವೊಲ್ ಆ ಧೂರ್ತರಸು ರಸವನೀಂಟೀಂಟಿ
ತೃಪ್ತಿಗೆ ತನಿಯನೆರೆವೆ !”
ಭಗಿನಿಯುಪದೇಶಮಂ ೧೪೦
ಕೇಳ್ದನಾವೇಶದಿಂ. ಸಮನಿಸಿತು ಕೋಪಕ್ಕೆ
ಕಾಮದ ಹದಂ. ಕಣಿವೆಗುರುಳುವ ಝರಿಯ ಜಲಕೆ
ಕಾಲುವೆ ರಚಿಸಿದಂತೆ, ಲಭಿಸಿದುದು ರಾವಣನ
ಸಹಜಕಾಮದ ಕಪಿಗೆ ರಾಜಕಾರಣಫಣಿಯ
ಮಿಣಿಯೇಣಿ. ರೋಮಂಥಿಸಿತು ರತಿರೋಮಹರ್ಷಣದಿ
ಭಾವಜಪ್ರಾಣಪಶು ತಾಂ ಚಂದ್ರನಖಿಯಿಂ ಕೇಳ್ದ
ವೈದೇಹಿ ವರ್ಣನೆಯ ಮೃತ್ಯುಪಾಥೇಯಮಂ
ಮನಂಮಿಕ್ಕು ಮೇದು : ತನುಮಧ್ಯಮೆ ! ವರಾರೋಹೆ !
ತಪ್ತಕಾಂಚನವರ್ಣೆ ! ಪೀನಕುಚೆ ! ಸುಶ್ರೋಣಿ !
ಜಘನ ವಿಸ್ತೀರ್ಣೆ ! ಮೇಣೀಂದ್ರಿಯಗಳಿಂದ್ರಾಣಿ !- ೧೫೦
ನೆನೆನೆನೆದನೊಂದೊಂದು ಪದಮಂ ಸಚಿತ್ರಮಂ,
ಮೋಹಸುರೆಯೀಂಟಿ ಕಲ್ಪನೆ ಕೆರಳಿದಾತ್ಮಕ್ಕೆ
ಸಾಹಸೋನ್ಮಾದಂ ಮದಿಸುವಂತೆ.
ಚಿಂತಿಸಿದನ್
ಏಕಾಂತದೊಳ್ ಉಕ್ಕೆವದ ಕವರ್ತೆವಟ್ಟೆಯಂ.
ತರಿಸಂದನೊಂದು ಹರುವಂ. ಪಳೆಯ ಸಚಿವರುಂ
ಹಿತವರುಂ ತಮ್ಮಂದಿರುಂ ತಿಳಿಯದಂದದೊಳೆ
ಯಾನಶಾಲೆಗೆ ನಡೆದನೇರಿದನು ಧನದನಿಂ
ಗೆಲ್ದು ತಂದಾ ಕಾಮಗಮನದ ವಿಮಾನಮಂ,
ಪುಷ್ಪಕವೆಸರ ಗಗನರಥಮಂ. ದಿಗಂತದಿಂ
ತರತರದ ಬಣ್ಣದುರಿಮುಗಿಲ ಸಿಂಗರದಿಂದೆ ೧೬೦
ರಯ್ಯನೊಯ್ಯನೆ ಚೈತ್ರರವಿಭೈತ್ರಮೇರ್ವವೋಲ್,
ಗಿರಿವಿಪಿನ ಹರ್ಮ್ಯ ರಮಣೀಯಮಾ ಲಂಕೆಯಿಂ
ಮೇಲೇರ್ದುರಾ ನಭೋನೌಕೆ. ತೇಲುತ್ತಿಹುದೊ
ತೈಲವರ್ಣಾಳಿಯಿಂ ಸಮೆದ ಚಿತ್ರಂಗಳಿಂ
ಕೈಗಯ್ದ ಕಲೆಯಮನೆ ಎಂಬವೋಲ್ ಎಸೆದುದಾ
ಪುಷ್ಪಕಂ, ಕೊರಳೆತ್ತಿ ಕಂಡ ನಗರದ ಜನದ
ಕಣ್ಮನಕೆ. ಹೇಮಲಿಪ್ತಂ ರತ್ನಖಚಿತಮದು
ಮಿಂಚಿದತ್ತಿನರಶ್ಮಿಯೊಳ್, ಕಣ್‌ಮುಗುಳೆ ನೋಳ್ಪರ್ಗೆ.
ಬಳಸಿ ಸುತ್ತುಂ ಆ ವಿಮಾನದ ವಿತಾನಮಂ
ಮಾಲೆಯೆಳಲಿದ ಕನಕ ಲಘುಘಂಟಿಕಾ ಶ್ರೇಣಿ ೧೭೦
ದೂರದೆತ್ತರಕೆಸೆದುವೈ ಅರಿಲ್ಗಳೋಲಂತೆ,
ನಾದ ಬಿಂದೂತ್ಕರದ ಸೋನೆ ಜೇನ್ಬನಿ ಸೋರ್ವ
ರುಕ್ಮಬಿಂದುಗಳಂತೆವೋಲ್. ಮುಗಿಲ ಕೆನ್ನೆಯಂ
ಮುದ್ದಿಸುವ ಮಾರುತನ ಕೈ ಎನಲ್ಕೊಪ್ಪಿತಾ
ಬಾನ್ದೇರಿನುತ್ತಮಾಂಗದೊಳತ್ತಮೊತ್ತೊಲೆದಿರ್ದ
ಬಾವುಟಂ : ರಾಕ್ಷಸಕುಲದ ಬಲದ ನೆಲದೊಲಿದ
ಚಂಡಿಕಾಧ್ವಜ ಚಿತ್ರಚಿಹ್ನೆ. ಪುಷ್ಪಕ ಚಲನೆ
ತಾನುಣ್ಮಿದೆಲರಿಗೆ ಕೆದರಿದುದು ಅಶೋಕೋದ್ಯಾನಾ
ತರುಕುಸುಮ ರೇಣು ಆಸಾರ ; ಚೆದರಿದುದಂತೆ
ಚಕಿತ ಖಗ ಚೀತ್ಕಾರ ; ಕಡಲ ತಡಿಯಂ ತುಂಬಿ ೧೮೦
ಲಂಕೆಗಂಚಂ ಕಟ್ಟಿದೊಲ್ ಬೆಳೆದ ತೋಂಟದಿಂ
ಮೂಡಿದತ್ತಡಕೆ ತೆಂಗಿನ ಗರಿಯ ಮರ್ಮರ
ಮನೋಹರ ಚಮತ್ಕಾರ ! ಮಲೆಯ ಪಳುವದೊಳಟ್ಟಿ
ಬೇಂಟೆಯೋಡುವ ಪುಲಿಯ ಪಾಂಗಿನಿಂ, ತೋರ್ದಡಗಿ
ಮತ್ತೆ ಮತ್ತಡಗಿ ತೋರುತೆ, ಮುಗಿಲ ನಡುನಡುವೆ
ತೇಲುತೊಯ್ಯನೆ ದೂರಮೆಯ್ದಿ ಮರೆಯಾದುದಾ
ಬಣ್ಣ ಬಣ್ಣದ ಗಾಳಿದೇರ್, ಲಂಕೆಯ ಜನಕ್ಕೆ
ಸೋಜಿಗದ ಶಂಕೆಯನೊಡರ್ಚಿ !
ವಿಷಯೇಂದ್ರಿಯಂ
ವಿಹ್ವಲಿಸಲಿಂ ಮನಂಗೊಳಿಸುಗುಮೆ ಕಡಲಡವಿ
ಬಾನ್‌ಬಯಲ್ ನಿರತೆ ? ಹಾರಿದನು ಕರ್ಬುರನೃಪಂ ೧೯೦
ಕಣ್‌ಗೆಟ್ಟನೊಲ್ ಪಾರದೇನೊಂದುಮಂ ಪ್ರಕೃತಿ
ಭವ್ಯಂಗಳಂ. ದಾಂಟಿದನು ಮೇಘಮಾರ್ಗದಿಂ
ಸಾಗರದ ನೀಲ ವೈಶಾಲ್ಯಮಂ. ತೀರಮಂ,
ಕಾನನಾಚಲ ವಿಪುಲ ವಿಸ್ತಾರ ಧೀರಮಂ,
ಕಂಡನಾ ಮಾರೀಚನಾಶ್ರಮಸ್ಥಾನಮಂ :
ಬಾಳೆ ಏಲಕ್ಕಿಯಿಂ ತೆಂಗಿನಿಂ ಕೌಂಗಿನಿಂ
ಕಳ್ತಲಿಸಿದೊರ್ ಮಲೆಯ ಮುಡಿಯೊಳೊಪ್ಪಿರ್ದೊಂದು
ಪನ್ನಗುಡಿಯಂ. ಪೃಥಿವಿಗಿಳಿದತ್ತತುಲಮಾ ಪೃಥುಲ
ಪುಷ್ಪಕಂ. ಪೊಕ್ಕನೆಲೆವನೆಗಾ ಶಕ್ರವೈರಿ !
ಚಿತ್ರಭಾನುಗ್ರಸ್ತ ಚೈತ್ರಸುಂದರ ಮಹಾ ೨೦೦
ಚಂದನಶ್ರೀಗಂಧ ಕಾನನೋಜ್ವಲನನಾ
ದೈತ್ಯೇಂದ್ರನಂ ನೋಡಿ ಕಂಡಿದಿರೆಳ್ದುವೋಗಿ
ಬಯಸಿದನು ಸೊಗಬರವನಾ ತಾಟಕಾ ಸುತಂ ;
ದೊರೆಯನುಪಚರಿಸಿದನು ದೊರೆನಿರಿಗೆಯಿಂ ; ಮತ್ತೆ
ನುಡಿಸಿದನ್ : “ರಕ್ಕಸವಳಿಗೆ ಪೆರ್ಮೆ ನೀನಾಗಿಯುಂ
ನನ್ನಾಶ್ರಮಕ್ಕೆಯ್ತಂದುದೆಯೆ ದಿಟಂ ತಪಕೆ
ತಾನಿಂದೆ ಸಿದ್ಧಿ ದೊರೆತಂತೆ !” ಋಷಿಸಂಕಟಕೆ
ಕಂಕಣಂಗಟ್ಟಿ ಪೂಣ್ದಿರ್ದಾರ್ಯಕಂಟಕನ
ಸಾತ್ತ್ವಿಕ ಜಟಾವಲ್ಕಲದ ಮುನಿಯ ವೇಷಮಂ
ಕಂಡು, ಕಿರುನಗೆವೆರಸಿ ಲಂಕೇಶ್ವರಂ : “ಮಾವ, ೨೧೦
ನಿನ್ನನೆಂತುಂ ಮರೆಯಲಕ್ಕುಮೆ ? ಕೃತಜ್ಞನೆಂ
ನಿನಗೇಗಳುಂ. ಓ ಮಹಾಮತಿಯೆ, ಬಾಳ್ವರ್ಗೆ
ಮೇಣು ಮಾಳ್ಪರ್ಗೆ ನಿನ್ನನ್ನರುಸಿರುಸಿರಲ್ತೆ ? ಕೇಳ್,
ದೊರೆಬಲ್ಮೆಗಿಲ್ಲದಿರೆ ಮಂತ್ರಿಜಾಣ್ಮೆಯಮರ್ಕೆ, ಪೇಳ್,
ಗೆಲ್ಗುಮೇನೆರೆತನಂ ? ಪಿಂತೆನಿತೆನಿತೊ ಸೂಳ್ಗೆ
ರಾಜಕಾರಣದೊಳುಂ, ರಣದೊಳುಂ, ಮೇಣಂತೆ
ಸ್ವಂತ ಸಂತೋಷಕಾರಣದೊಳುಂ ನನಗೆ ನೀಂ
ನೆರವಾದುದಂ ಮರೆಯೆನಾಂ. ನಿನಗುಮಾನಂತೆ
ನೆರವಿತ್ತೆನೆಂಬುದೆ ನನಗೆ ಪೆರ್ಮೆ. ಕಷ್ಟದೊಳೆ
ನವೆದೆ ನೀಂ ; ಸಾಹಸಕೆ ಬರ್ದುಕನೆ ಬಲಿಯನಿತ್ತೆ, ೨೨೦
ತೆತ್ತೆ. ಕಲಿಯಾದೊಡಂ ಬಳಲಿದೆ, ಬಿದಿಗೆ ಸೋತೆ ;
ಯತಿವೃತ್ತಿಯಂ ಪಿಡಿದೆ. ಮಾರೀಚ ಮುನಿವರ್ಯ,
ಮರುಗುವೆನು ನಿನಗೆ. ನಿನ್ನಂಬೆಯಂ ಕೊಲ್ಲಿಸಿದ
ತವಸಿಯುಂ, ಮೇಣ್ ಕೊಂದ ಆ ಬಡವು ಬಡಗನುಂ
ತವಿಯದೊಳರಿನ್ನುಮೆನೆ, ನಮ್ಮ ದುರ್ವಿಧಿಗೆಲ್ಲೆ
ತಾನೆಲ್ಲಿ ? ಜಡೆಗೆ ನಾರುಡೆಗೊಲಿಯದೇನಿಹರೆ
ಪೇಳಿನ್ನದಾರಾದೊಡಂ ? ತೀರ್ಚಲಾರದಿರೆ
ನೀಂ ಮುಯ್ಗೆ ಮುಯ್ಯನಾನಾದೊಡಂ ತೀರ್ಚಲ್ಕೆ
ನೀನೊಪ್ಪುವಯ್ ? ಪ್ರೇತಲೋಕದೊಳ್ ತಣಿವವೋಲ್
ತಾಯಿ ತಾಟಕೆ, ನೀಂ ನೆಗಳುವಯ್ ? ನಪುಂಸಕತೆ ದಲ್ ೨೩೦
ಹೀನಬಲನೊಂದು ಸಾತ್ವಿಕತೆ ಕೇಳ್ ; ಮೇಣಾ ತಪಂ
ಹೆಂಬೇಡಿತನಕೊಂದು ಬರಿ ನೆಪಂ !”
ಕಣ್‌ಮುಚ್ಚಿ
ತಲೆಬಾಗಿ ಕೇಳಿದನಳಿಯನೆಂದುದಂ. ನಾಣ್ಚಿ
ನಿಡುಸುಯ್ದನಾ ಮರೆನುಡಿಗಳೀಟಿಯಿರಿತಮಂ
ತಾಳಲಾರದೆ ತಾಳ್ದು. ಪಿರಿದು ಬೇಗಂ ಕಲ್ಲ
ಮೋನದಿಂ ಜಾನಿಸಿದನೆಲ್ಲಮಂ. ರಾಮನಿಂ
ಹತಳಾಗಿ, ಭೂಮಿಗತಳಾಗಿ, ಕುರಿದರಿವೋಗಿ,
ದಹನ ಸಂಸ್ಕಾರಮಿಲ್ಲದೆ ಕಾಡಿನೊಳೆ ಕೊಳೆತು
ನಾರ್ದಬ್ಬೆಯಾ ಪೆಣಂ ಕಣ್ಗೆ ಕಟ್ಟಿತು ಘೋರ
ಚಿತ್ರಮಂ. ಮೂಗಳ್ಕೆಯಳ್ತನಾ ರಾಕ್ಷಸಂ ; ೨೪೦
ಪೊಣ್ಮಿದತ್ತಶ್ರುಧಾರೆ ! ದಿಗ್ಗಜ ಬಲಾನ್ವಿತಂ,
ಕೆಮ್ಮೀಸೆವೊತ್ತ ಪುಲಿಮೊಗದುಗ್ರಗಾತ್ರದಾ
ಮಾಯಾ ಸಮರ್ಥನಾ ಮಾರೀಚದೈತ್ಯನುಂ
ಗೋಳಿಡುವುದಂ ಕಂಡು, ಲಂಕಿಗಂ ಭೋಂಕನೆಯೆ
ಮೇಲೆಳ್ದನಪ್ಪಿದನ್, ಸಂತೈಸಿದನ್ ಮರಳಿ
ಮರಳಿ. ಪುಲಿ ಪುಲಿಯ ಮೋರೆಗೆ ಮೋರೆಯನ್ನಿಟ್ಟು
ನೆಕ್ಕಿ ಮುಂಡಾಡುವೋಲಾಡಿ, ಮಾರೀಚನಂ
ಸೂರೆಮಾಡಿದನಸುವನಿಂತು :
“ಮಾಣ್, ಮಾವ, ಮಾಣ್
ತಿಣ್ಣಳಲಿನಳ್ಕೆಯಂ ! ದಿಕ್ಕಿಲ್ಲದಾತನೊಲ್
ದುಕ್ಕಿಸುವೆ ಏಕೆ ? ಲಂಕೆಗೆ ಲಂಕೆಯುರ್ಕೆಳ್ದು ೨೫೦
ನಿನಗೆ ನೆರಮಂ ನೀಡೆ ತನ್ನ ತೋಳ್ ಚಾಚುತಿದೆ :
ಇದಕೊ ನಾನ್ ಆ ತೋಳ್ ! ತಪೋಮಗ್ನನಯ್ ; ನಿನಗೆ
ತಿಳಿದಪುದದೆಂತು ಲೌಕಿಕರ ಸಂಕಟವಾರ್ತೆ ?”
ಸುಯ್ದೊರೆದನೆಲ್ಲಮಂ, ಚಂದ್ರನಖಿಯಿಂ ಕೇಳ್ದ
ಪಂಚವಟಿ ಮೇಣ್ ಜನಸ್ಥಾನದವಮಾನಮಂ,
ದಾರುಣ ಪರಾಜಯದ ದುಮ್ಮಾನಮಂ. ಕೇಳ್ದು
ಮಾರೀಚನಕ್ಷಿಗಳ್ಗೇನೊ ಭೀತಿಯ ಛಾಯೆ
ಸುಳಿದತ್ತು. ಬೆಳ್ಪೇರಿದುದು ಮೊಗಂ. ಬೆಳ್ಳಾಗಿ
ನೋಡಿದನ್ ಲಂಕೇಶನಂ. ಕಂಡದಂ, ಖತಿಗೆ
ಕಿಡಿಕಿಡಿವೋಗಿ, ಕೂಗಿದನ್ ರಾಕ್ಷಸೇಶ್ವರಂ, ೨೬೦
ವ್ಯಾಘ್ರ ಘರ್ಜನೆಗೆ ಮಲೆ ನಡುಗುವಂದದಿ ನಡುಗೆ
ಮಾರೀಚ ಪರ್ಣಶಾಲೆ : “ತೆಗೆ, ತೆಗೆ ! ಅಧೈರ್ಯಮಂ
ಬಿಡು ! ಹೇ ಕರೀಂದ್ರಬಲಶಾಲಿ, ವೀರಶ್ರೀಯ
ಓಕುಳಿಯ ಒಸಗೆಮಂಚವ ದುಮುಕಿ ಓಡದಿರ್,
ಹೆಂಬೇಡಿಯಾಗದಿರ್ ; ಕುಲಗೇಡಿಯಾಗದಿರ್ ;
ಧೈರ್ಯದ್ರುಮದ ಬೇರ್ಗೆ ಬೆನ್ನೀರನೊಯ್ಯದಿರ್ ;
ಕೊಯ್ಯದಿರೊ ಕರ್ಬುರಕುಲದ ಬಲದ ಗೌರವದ
ಗೋನಾಳಿಯಂ !” ಏಳುತುಬ್ಬೇಗದಿಂ, ಬೆನ್ಗೆ
ಕಯ್ಗಳನಮರ್ಚಿ, ಶತಪಥಮಲೆದನೊದೆವವೋಲ್
ಕ್ಷ್ಮಾವಕ್ಷಮಂ. ತಾಟಕಾತ್ಮಜನನಿತ್ತಳುಕಿ ೨೭೦
ಲಂಕೇಶನಾವೇಶಮಂ, ಕುರಿತೊರೆದನಿಂತು
ದೃಢವಾಣಿಯಿಂ : “ಮುಟ್ಟದಿರ್ಪಂಗೆ ಕೆಂಡಮುಂ
ಕಿಡಿಮಾಣಿಕಮೆ ! ರಾಮನ ಪರಾಕ್ರಮದ ರುಚಿಯ
ಸವಿದೆನಗೆ ನಿನ್ನಣ್ಮುನುಡಿ ಬರಿಯ ಸೊರ್ಕಾಗಿ
ತೋರುತಿದೆ. ಬಾಲ್ಯದಿಂ ಬಲ್ಲೆನಾನಾತನಂ.
ಮಾಡಿಹೆನೊ ಪುರುಷಪ್ರಯತ್ನಗಳೊಳನಿತುಮಂ
ದಾಶರಥಿಯದಟಂ ಮುರಿಯಲೆಂದು. ಕಯ್‌ಬಲ್ಮೆ,
ಮೆಯ್‌ಬಲ್ಮೆ, ಬಿಲ್‌ಬಲ್ಮೆ, ಮಾಯೆಯೊಂದತಿಬಲ್ಮೆ,
ಕೈಗೂಡಲಿಲ್ಲಾವುದುಂ. ಅಯ್ಯೊ, ಕೊಲಲೆಳಸಿ
ನನ್ನ ತಾಯ್‌ಗುಲಿಗನಂ, ಕೊಲೆಯಪ್ಪುದೊಂದುಳಿಯೆ, ಕೇಳ್ ೨೮೦
ಮತ್ತೆಲ್ಲಮಂ ಪಾಡುಪಟ್ಟಿಹೆನೊ ! ಖರವೈರಿ
ಸೋಲನೆಂದುಂ ; ಗೆಲಲಸಾಧ್ಯನಯ್ ! ದೈವಮುಂ
ರಾಮಪಕ್ಷದೊಳಿರ್ದು ಪೊಣರ್ವುದೆನೆ, ಬರಿಬಲುಮೆ
ಸಲ್ಲದಯ್. ಧರ್ಮವರ್ಯವೆ ರಕ್ಷೆಯಾದಾತನಂ
ಧರ್ಮದಿಂದಲೆ ಜಯಿಸವೇಳ್ಕುಮೆಂದಾನಿಂತು
ತಪಕೆ ನೋಂತೆಂ ….” “ಬಡಗರ ಮರುಳ್ಗೆ ಮಂಕಾದೆ
ನೀನೆಲವೊ ಮಾರೀಚ ! ನರಮಾತ್ರನಂ ಪರಮ
ದೈವಮೆಂದಾ ಮೂರ್ಖರಾಡಿದರೆ, ಶಿವಶಿವಾ,
ಬೆಳ್ಪು ನೀನದನೆ ದಿಟಮೆಂದಿಂತು ನಂಬುವುದೆ ?
ಆ ನಂಬುಗೆಯ ನಿನ್ನ ನೂರಾನೆ ಮೆಯ್ಮೆಯಂ ೨೯೦
ಹೊಳ್ಳುಗೈದಿದೆ ಕಣಾ. ಹರುವನೊಂದಂ ನೆನೆದು
ಬಂದೆನೀಯೆಡೆಗೆ. ನಾವಿರ್ವರುಂ ದುಃಖಿಗಳೆ :
ತಾಯ ಕೊಲೆಯಿಂದೆ ನೀನೊಡಹುಟ್ಟು ಕೊಲೆಯಿಂದೆ
ನಾಂ. ತಂಗಿಗೊದಗಿದಪಮಾನವೆಮ್ಮಯ ಕುಲಕೆ
ನಾಣ್ಗೇಡು : ಬಡಗಲೆಸೆದಿಹ ಮಲೆಪು, ತೆಂಕಣದ
ಗೌರವಕೆ ! ಕೆಮ್ಮನಿರೆ ನಾವೆಮ್ಮ ದಕ್ಷಿಣಂ
ಸೂರೆಯಪ್ಪುದೆ ವಲಂ ದಸ್ಯುಶೀಲೋತ್ತರಕೆ.
ದಂಡನೀತಿಯನೊಂದನೆಯೆ ನೆಮ್ಮಿ ನೀಂ ಸೋಲ್ತೆ,
ಮಾರೀಚ. ಬೇರೆ ತಂತ್ರಗಳಿರ್ಪವೆನಿತೆನಿತೊ,
ವೈರಿಯಂ ನಿರ್ವೀರ್ಯಗೊಳಿಸೆ. ಸೀತೆಯನೊಯ್ಯೆ ೩೦೦
ಮಾನಹಾನಿಗೆ ಹೃದಯದೀನನುಂ ಮೇಣಂತೆ
ಶಕ್ತಿಹೀನನುಮಾಗಿ ನಿಸ್ತೇಜನಾದಪಂ
ದಾಶರಥಿ. ನೀರೊಣಗೆ ಪಿರಿಯ ಪೇರಾಲಮುಂ
ಕಿರಿಯೊರಲೆಗುಣಿಸಪ್ಪುದೆನೆ, ರಾಮವಿಕ್ರಮಂ
ಜಳ್ಳಪ್ಪುದೆಮ್ಮ ಕಡುಪಿಗೆ ಸಿಲ್ಕಿ ……” “ಹದನಿದೆಯೊ
ನೀಂ ನೆನೆದುದೆಂದುದದು ? ನೀತಿವೇಳ್ದವರಾರೊ
ನಿನಗಿದಂ, ಹದಿಬದೆಯ ಹರಣಮಂ, ನಿನ್ನ ಮೇಣ್
ಸಕಲ ಲಂಕೆಯ ಮರಣಮಂ ? ಚಂದ್ರಮೌಳಿಯಂ
ಕುರುಡುಗೈದಾ ಬಳಿಕ್ಕವನನಶ್ರಮದಿಂದೆ
ಗೆಲ್ವೆನೆಂದುರಿಯ ಹಣೆಗಣ್ಗೆ ಕೈಯಿಕ್ಕೆಳೆದು ೩೧೦
ಕೀಳ್ವೆಗ್ಗನೋಲೊಣರುತಿರ್ಪೆ ; ಮುಂದರಿಯೆಯೈ ನೀಂ,
ಓ ಕೈಕಸಿಯ ಕಂದಾ ! ರಾಮನ ಪರಾಕ್ರಮಂ
ತಾನೇಕೆ ? ಪಾವನ ಪತಿವ್ರತಾ ಹರಣಮದೆ, ಕೇಳ್,
ನಿನ್ನ ಬಾಳ್ಗುರಿಯಿಕ್ಕುವುದು ಕಣಾ !”
ನಕ್ಕನಾ
ಮಾತಿಗೆ ಕಿಲಕ್ಕನೆ ದಶಗ್ರೀವನೆಕ್ಕಲಂ
ಹೊಂಕಾರ ಮಾತ್ರದಿಂ ಜಾಯಿಲಂಗಳನಟ್ಟಿ
ಕೆದರುವೋಲಿರಿದು ಮಾರೀಚನೊಳ್ನುಡಿಗಳಂ.
ಕಿರಿದು ಬೇಗಂ ತಳುವಿ, ಮತ್ತೆ : “ಶಿಶುಮತಿಗಳಿಗೆ
ಹೇಳಯ್ಯ, ನಿನ್ನ ಹದಿಬದೆತನದ ಹಿರಿಮೆಯಂ !
ಕಟ್ಟುಕತೆಯೊಳಗಲ್ಲದೆಲ್ಲಿಹಳೊ ಪೃಥಿವಿಯಲಿ, ಪೇಳ್, ೩೨೦
ನಿನ್ನಾ ಪತಿವ್ರತಾ ಸ್ತ್ರೀ ? ಜಗತ್ತ್ರಯಮುಮಂ
ದಹಿಸಿದೆ ಮಮಪ್ರತಾಪಜ್ವಾಲೆ ; ಸರ್ವಮಂ
ಶೋಧಿಸಿರ್ಪುದು ನನ್ನ ಸಾಹಸದ ಕಯ್. ನಿನ್ನ ಈ
ವರ್ಣನೆಯ ವರವರ್ಣಿನಿಯನಾವೆಡೆಯೊಳುಂ ನಾಂ
ಸಂಧಿಸಿದೆನಿಲ್ಲಿನ್ನೆಗಂ. ಇನ್ನುಮಾ ಬಯಕೆ ತಾಂ
ಪೆರ್ಬಯಕೆ ಮಾತ್ರಮಾಗುಳಿದಿರ್ಪುದಯ್. ಅಯ್ಯೊ,
ಮಾವಯ್ಯ, ಕೇಳೊರೆವೆನೆನ್ನಾತ್ಮಚರಿತಮಂ,
ಮನ್ಮನೋ ದುರಿತಮಂ. ಪುಟ್ಟುವಾಗಳೆಯೆ ನಾಂ
ನೆತ್ತರೊಳೆ ಪೆಣ್ಣೊಡಲಿನಾಸೆಯಾ ಬೇಟಮಂ
ಪೊತ್ತು ಪುಟ್ಟಿದೆನೈಸೆ ! ಜನ್ಮದೌರ್ಬಲ್ಯಮಂ ೩೩೦
ಜಯಿಸಲೆಂದಾನೆನಿತೆನಿತೊ ನಿಟ್ಟೆಯಂ ಪಟ್ಟು
ಬೇಯಿಸಿದೆನಾತ್ಮಮಂ. ಪಾತಿವ್ರತ್ಯವ ನಂಬಿ,
ಪತ್ನೀವ್ರತಕ್ಕೆಳಸಿ ಕಳೆದೆನಯ್ ತಾರುಣ್ಯಮಂ
ಮುಗ್ಧಬುದ್ಧಿಯಲಿ. ನಾಂ ಬಯಸಿ ಮೋಹಿಪ ಮೊದಲೆ
ಪೆಣ್ತನಂ ಬಯಸಿತೆನ್ನಂ. ಕಾತರಿಸಿತಯ್ಯೊ
ಮೇಲ್ವಾಯುತಾತುರದಿ! ತತ್ತರಿಸುತಂಚಿನೊಳ್
ದಣಿದುಯ್ಯಲಾಡುತಿರ್ದೆನ್ನಾತ್ಮಮೊಯ್ಕನೆಯೆ
ದುಮ್ಮಿಕ್ಕಿದುದೊ ಮನ್ಮಥ ರುಚಿಯ ರಸಾತಳಕೆ !
ಕೇಳಂದಿನಿಂದೆ ಪೆಣ್ತನದೊಳೆನಗಿರ್ದೊಂದು
ಸುಂದರ ಪವಿತ್ರತಾ ಭಾವಂ ಶಿಥಿಲಮಾಗಿ, ೩೪೦
ಭೋಗಭಾವಮೆ ಪೃಥುಲಮಾಯ್ತಯ್. ದಡಕ್ಕಡರೆ
ಸಾಹಸದೊಳೀಜುವುದನಾನುಳಿಯದಿರ್ದೊಡಂ,
ತೇಲಿ, ಹೋರುತೆ, ಕೊಚ್ಚಿಹೋದೆನಾ ಹುಚ್ಚುಹೊಳೆ
ಹೊನಲಿನಲಿ ! ವಶವಾಗದಿರ್ದವರನೊರ್ವರಂ
ಕಂಡೆನಿಲ್ಲಾಂ : ರಾಕ್ಷಸೇಶ್ವರನ ಮೈಸಿರಿಗೆ.
ವಿತ್ತೇಶ ಜೇತನೈಸಿರಿಗೆ, ದಿಕ್ಪಾಲರಂ
ಗೆಲ್ದ ಪೆಂಪಿಗೆ, ನಿಖಿಲ ಭೂಮಿನಾಥರನೊತ್ತಿ
ಬಾಯ್ಕೇಳಿಸಿದ ಯಶೋವೈಭವಕೆ, ರಾವಣನ
ರಸಿಕತೆಗೆ, ಸತ್ತ್ವಕ್ಕೆ, ವೀರ್ಯಕ್ಕೆ, ತೇಜಕ್ಕೆ,
ಜೌವನಕೆ ಕಂಡೆನಿಲ್ಲಾನೊರ್ವಳಂ, ನನಗೆ ೩೫೦
ಮೆಚ್ಚಿ ವಶವಾಗದಿರ್ದಾ ಪವಿತ್ರಾಂಗಿಯಂ !
ಹದಿಬದೆಯರೆಂದು ಹೆಸರಾಂತ ಹೆಣ್ಮಣಿಗಳಂ
ಪರಿಕಿಸಿದೆನವರುಂ ಸುಲಭಮಾದರಯ್. ಕಡೆಗೆ, ಕೇಳ್,
ಹದಿಬದೆಯರಹರೆಂಬ ನಂಬುಗೆ ಸತ್ತುದೆನ್ನೆದೆಗೆ !”
ಮೌನವಾಂತನು ರಾವಣಂ. ತಾಟಕಾತ್ಮಜಂ
ನೋಡುತಿರ್ದನ್ ಬೆರುಗುಬಡಿದಂ ನಡಪಾಡುತಿರ್ದಾ
ದೈತ್ಯನೃಪನಂ ! ಮತ್ತೆ ಪೊಳ್ತಿನಿತನಂತರಂ
ಸೋದ್ವೇಗದಿಂ : “ಇಲ್ಲ, ಬಿಡು, ಮಾರೀಚ, ಎಲ್ಲಿಯೂ
ಇಲ್ಲ, ಆ ನನ್ನ ತಾಯ್ ! ಪುಸಿಯ ಪೊಗಳಲ್, ಅಯ್ಯೊ,
ಪೇಸಿದಪುದೆನ್ನ ಬಾಯ್. ಸಲ್ಲದಯ್ ಪುಸಿಗೆನ್ನ ೩೬೦
ಪೂಜೆ : ಪಾವನೆಯೆನಗೆ ತೋರ್ದಂದು ಧನ್ಯನಾಂ ;
ಧನ್ಯೆ ತಾಂ ! ಕೇಳೊರ್ಮೆ ಧನ್ಯನಪ್ಪಾ ಪುಣ್ಯಮುಂ
ದೊರೆಯಿತೆಂದಿರ್ದೆನ್. ಆ ಸ್ವಪ್ನಮುಂ ಬಿರಿದುದು ಕಣಾ ;
ಮೇಣೆರ್ದೆಗೆ ನಿಚ್ಚಮುಂ ನೆತ್ತರಂ ಸೋರ್ವೊಂದು
ಪಿರಿದಾದುದೇರ್. ವೇದವತಿವೆಸರ ಋಷಿಪತ್ನಿ
ಪುಣ್ಯಸತಿ ತಾನಿರ್ದಳಯ್. ಪಾತಿವ್ರತ್ಯದೊಳವಳ್
ಮೂಜಗದ ಕಣ್ಗೆ ಗುರಿಯರಿಲಾಗೆ, – ದುರ್ಲಭಕೆ
ಪಿರಿದು ಕುದಿಗೊಳ್ವೆನ್ನ ತೃಷೆ ಬಯಸಿತಾಕೆಯಂ.
ಪೆಣ್ಣೆನಿತು ಮೇಲಿರ್ದರನಿತೆನಗೆರ್ದೆಯ ಕಾಯ್ಪು
ಪಿರಿದಪ್ಪುದೆನಗದು ಸಹಜಗುಣಂ, ಅಯ್ಯೋ, ಆ ೩೭೦
ದುರ್ಭಾಗ್ಯೆ ಚಿತೆಯೇರ್ದಳಾತ್ಮಹನನಕೆ ಮನಂ
ಮಾಡಿ. ನಾನೆಂದುಂ ಬಲಾತ್ಕರಿಸೆನೆಂಬುದಂ
ತಿಳಿಯದೆಯೆ ಕೊಂದುಕೊಂಡಳೊ ! ಬಾಳ್ವೆರಸಿ, ನನಗೆ
ವಶವಾಗದಿರ್ದೊಡೆ ನಮಸ್ಕಾರಮಂ ಪದಕೆ,
ಕೇಳ್, ನಿವೇದಿಸುತಿರ್ದೆ ನೈವೇದ್ಯಮಂ, ಸುಲಭಶುಚಿ
ಸಾವನಪ್ಪಿದಳಾದಳ್ ತಿರಸ್ಕಾರ್ಯೆ ! – ಮತ್ತೊರ್ಮೆ,
ಹದಿಬದೆಯರರಸಿ ತಾನೆಂಬಳಿನ್ನೊರ್ವಳಂ
ತಂದೆನವಳರಸನಂ ಸೋಲಿಸಿ ಸೆರೆಗೆ ನೂಂಕಿ.
ಧಾನ್ಯಮಾಲಿನಿಯಾಕೆಯಂ ಬಲ್ಲೆ ನೀನೆನ್ನ
ಮೆಚ್ಚಿನುಪಪತ್ನಿಯಂ. ರಾವಣನ ಬೇಟಕ್ಕೆ ೩೮೦
ಸೋಲದವಳೊರ್ವಳಂ ಕಾಣ್ಬೆನೆಂದಿರೆ, ಕಟ್ಟ
ಕಡೆಗಾಕೆಯುಂ ಸೋಲ್ತಳೆನಗೆ. ಸ್ತ್ರೀ ಗೌರವದ
ಲವಲೇಶದವಶೇಷಮುಂ ಮಳ್ಗಿದತ್ತೆನಗೆ
ನಿಶ್ಶೇಷಮಾಗಿ. ಲಂಕೇಶ್ವರನ ಸಜ್ಜೆಯಂ
ಪಳಿದು, ದಿಟದಿಂ ಪೇಸುವಂಗನೆಯರಿಲ್ಲ, ಕೇಳ್,
ಮಾರೀಚ, ನರಸುರಾಸುರ ಲೋಕದೊಳ್ ! – ಅದಿರ್ಕ್ಕೆ.
ರಾಮನಂ ನಿಸ್ತೇಜನಂ ಮಾಡೆ ಸೀತೆಯಂ
ತರ್ಪೆನದು ರಾಜಕೀಯಂ ; ಧರ್ಮದ ವಿಷಯಮಲ್ತು.
ನೀನೆನಗೆ ನೆರವಾಗವೇಳ್ಕುಮಲ್ಲದೆ ಮೀರ್ದು
ನಡೆಯದಿರ್ ಪ್ರಜೆಯ ಕರ್ತವ್ಯಮಂ ! – ಬೇಗ ತಾಳ್ ೩೯೦
ಕನಕಮೃಗ ರೂಪಮಂ, ಸುಳಿ ಜನಕಜೆಯ ಮುಂದೆ,
ಬಗೆಸೆಳೆದೆಳಸಿ ಬೇಡುವಂತಿನಿಯನಂ. ಪಿಡಿಯೆ
ಬೆನ್ನಟ್ಟಿ ಬರೆ ದಾಶರಥಿ, ದೂರ ದೂರಕ್ಕೆ
ಸೆಳೆದೊಯ್ಯುತಾತನಂ, ಕೂಗು ಸೌಮಿತ್ರಿಯಂ
ದೀನರವದಿಂ. ಬೆಚ್ಚುತೋಡಲ್ಕೆ ಲಕ್ಷ್ಮಣಂ
ರಾಮನಿರ್ಪೆಡೆಗೆ, ನಾಂ ಕಳ್ದುಯ್ವೆನಾ ಜನಕ
ಜಾತೆಯಂ. ವ್ಯರ್ಥಮೆಂದರಿಯದಿರ್ ನಿನ್ನ ಈ
ಕರ್ತವ್ಯಮಂ : ನಿನಗೆ ಖರನ ಧರೆಯನೆ ಕೊಟ್ಟು
ವಿರಚಿಸುವೆ ಪಟ್ಟಾಭಿಷೇಕಮಂ !”
“ಏಗಳುಂ
ನಿನ್ನಾಶೆ ನಿನಗೆ ಮತಿ. ಗತಿಯನ್ಯಮಂ ಕಾಣೆ ೪೦೦
ನೀನಾವಗಂ. ದುಷ್ಟವಾಸನೆಗೆ ತರ್ಕಮಂ
ಸೃಷ್ಟಿಸುವೆ. ಶಿಷ್ಟತಾಭ್ರಾಂತಿಯಿಂದಾತ್ಮವನೆ
ವಂಚಿಸುತ್ತಿರ್ಪೆಯಯ್ ಕಾಮನಿಂತುಟೆ ವಲಂ
ತಾರ್ಕಿಕಾಗ್ರೇಸರಂ ! – ಹಿತವೇಳ್ವೆನಾಲಿಸಾ :
ಮಂಡೆ ಬಲ್ಲಿತ್ತೆಂದು ಬಂಡೆಯಂ ಪಾಯ್ವಂತೆ
ನುರ್ಗ್ಗುತಿಹೆ ನೀಂ ರಾಘವನ ಸತಿಯ ಶಾಪಕ್ಕೆ ;
ದಂಡಧರ ಕಾಲಸಮ ಕೋದಂಡಧರ ರಾಮ
ಕೋಪಕ್ಕೆ ; ಪಾಪಕೂಪಕ್ಕೆ ! ಎಲವೊ ಲಂಕೇಶ,
ಮುಂಗಿಡಿಯನಿಕ್ಕದಿರೊ ಲಂಕೆಯ ವಿನಾಶಕ್ಕೆ !-
ಮಡಿಯಲೆನಗಾಸೆಯಿಲ್ಲಯ್ ರಾಮಬಾಣಕ್ಕೆ ೪೧೦
ಸಿಲ್ಕಿ. ರಕ್ಕಸವಳಿಯ ಕೊಲೆಗೆ ನೆರವಾಗೆನಾಂ
ನೀನೆಂದುದಂ ಗೆಯ್ದು. ಪಟ್ಟಾಭಿಷೇಕಕ್ಕೆ
ದೂರದಿಂ ಕೈಮುಗಿವೆನಿಲ್ಲಿಂದೆ. ದನುಜೇಂದ್ರ,
ತೃಪ್ತನಾಂ; ನಿನ್ನಾ ಕೃಪೆಯನೊಲ್ಲೆ !”
ಮುಖವಿಕೃತಿ
ಭೀಷ್ಮವಾದತ್ತು, ಕೋಪಗ್ರೀಷ್ಮವೊಯ್ಲಿಂದೆ,
ರಾಕ್ಷಸೇಂದ್ರನಿಗೆ. ಸುಯ್ ಸುಯ್ ಸುಯ್ದನಿಂತೆಂದು :
“ರಾಮಶರದಿಂದಾದೊಡಂ ಬರ್ದುಕಿ ಬರ್ಪೊಂದು
ದೂರಾಶೆಯಿರ್ಪುದಯ್. ಬೆಸಕಯ್ಯದಿರಲೆನಗೆ
ನೀನುಳಿ ಬರ್ದುಕಿನಾಸೆಯಂ !” ಎನುತ್ತುರಿದೆಳ್ದು
ಪೊರಮಟ್ಟನೆಲೆವನೆಯಿನುಸಿರೆ ಮಾರೀಚನಿಂ ೪೨೦
ಜಗುಳ್ದುಣ್ಮಿದೋಲ್. ತೆರಳ್ದುಸಿರನಂತೆ ಮರಳ್ಚುವೋಲ್
ರಿಕ್ಕನೆರ್ದೋಡಿದನ್ ; ಚಕ್ರವರ್ತಿಯ ಕಯ್ಯ
ಬೇಡಿದನ್ : “ಕಯ್ಯಿದನೆ ಕಾಲೆಂದು ತಿಳಿಯಯ್ಯ.
ನನ್ನೆಲೆವನೆಯೊಳಕ್ಕೆ ಬಾರಯ್ಯ. ಬೆಸಕಯ್ವೆ
ನಿನ್ನಾಣೆಯಂ. ಮರಣಮೆಂತಾದೊಡಂ ದಿಟಂ
ನನಗೆ. ರಾಮನೊ ನೀನೊ ಸಂಹರಿಸಲೆನ್ನಾಯ್ಕೆ
ರಾಮಬಾಣಂ ! ನಿನ್ನ ಪೇಳ್ದಂತೆಸಗಲದುವೆ ದಲ್
ನಿನಗುಮೆನಗುಂ ಮೇಲ್ಮೆ. ತಾಯ್ಗುಲಿಗನಿಂದಳಿಯೆ
ಮಾತೆಗಾದಂತಾಯ್ತು ಸೇವೆ ; ಮೇಣರಸಂಗೆ
ಬೆಸಕಯ್ದಳಿದ ಜಸಂ. ನಿನ್ನಿಂದೆನಗೆ ಮುಕ್ತಿ ;
ನನ್ನ ಸಾವಕ್ಕೆ ನಿನ್ನಾತ್ಮದುದ್ಧಾರಕ್ಕೆ
ಮೊತ್ತಮೊದಲಣ ಜನ್ನ ಬೇಳ್ವೆ !” – ಲಂಕೇಶ್ವರಂ
ತಕ್ಕೈಸುತುಕ್ಕಿದನ್ ; ತನ್ನ ಕರ್ಮಕ್ಷಯಕೆ
ಕಾರಣವನಪ್ಪುವೋಲಪ್ಪಿದನ್ ಮಾವನಂ,
ಪರಮ ಮಾಯಾನಿಪುಣನಂ, ಕಾಮರೂಪಿಯಂ,
ಮಾರೀಚನಂ. ಪುಷ್ಪಕಕ್ಕೊಯ್ದನಾತನಂ
ಮೃತ್ಯುರಥಕುಯ್ವಂತೆವೋಲ್. ಪ್ರಾಣಮೇರ್ವಂತೆ
ಪಾರಿದತ್ತಾ ವಿಮಾನಂ ಶ್ರೀರಾಮನಾಶ್ರಮಕೆ.
>> ಮುಂದಿನ ಸಂಚಿಕೆ-೨/ಓ ಲಕ್ಷ್ಮಣಾ <<
<< ಅಯೋಧ್ಯಾ ಸಂಪುಟಂ >> ಕಿಷ್ಕಿಂದಾ ಸಂಪುಟಂ << ಲಂಕಾ ಸಂಪುಟಂ >> ಶ್ರೀ ಸಂಪುಟಂ <<