ಕುಮಾರವ್ಯಾಸ ಭಾರತ (ಕವನ)

(ಕುಮಾರವ್ಯಾಸ ಭಾರತ (ಕವನ ಇಂದ ಪುನರ್ನಿರ್ದೇಶಿತ)

ಕುಮಾರವ್ಯಾಸ (ಕವನ)

ಸಂಪಾದಿಸಿ

ಕುಮಾರವ್ಯಾಸನು ಹಾಡಿದನೆಂದರೆ,
  ಕಲಿಯುಗ ದ್ವಾಪರವಾಗುವುದು !
ಭಾರತ ಕಣ್ಣಲಿ ಕುಣಿವುದು ; ಮೆಯ್ಯಲಿ
  ಮಿಂಚಿನ ಹೊಳೆ ತುಳುಕಾಡುವುದು !
ಆ ಕುರುಭೂಮಿಯು ತೋರುವುದು ;
   ಆ ರಣರಂಗದಲಿ,
   ಆ ಸಂಗ್ರಾಮದಲಿ,
ಪಟುಭಟರಾರ್ಭಟ ಕೇಳುವುದು !
   ಮೈ ನವಿರೇಳುವುದು ! ೧

ಹೊಳೆಯುವ ಕೈದುಗಳಾಟದಲಿ,
   ಕಲಿಗಳ ಕದನದ ಕೂಟದಲಿ,
ತಾಗುವ ಗದೆಗಳ ಸಂಘಟ್ಟಣೆಯಲಿ,
 ರಥಚಕ್ರಧ್ವನಿ ಚೀತ್ಕಾರದಲಿ,
  ಸಾಯ್ಯರ ಶಾಪದಲಿ,
   ಬೀಳ್ವರ ತಾಪದಲಿ
ನಸುಸೋತಿರುವರ ಕೋಪದಲಿ,
  ನೆರೆ ಗೆದ್ದಿಹರಾಟೋಪದಲಿ,
ಕೆನೆಯುವ ಹಯಗಳ ಹೇಷಾರವದಲಿ,
     ಕಿವಿ ಬಿರಿಯುವುದು !
     ಎದೆ ಮುರಿಯುವುದು !
ಬಸಿಯುವ ಮಜ್ಜೆಯ ಪಂಕದೊಳೂಡಿ
  ಚಿಮ್ಮುವ ರಕ್ತನ ಬುಗ್ಗೆ ಯ ನೋಡಿ
    ಕಣ್ಣೊಡೆಯುವುದು !
    ಮೈ ನಡುಗುವುದು ! ೨

ಕೇಳಿರಿ ! ಪಾರ್ಥನ ಸಾರಥಿಯು
   ರಣ ಗೀತೆಯನು,
   ರಣ ನೀತಿಯನು,
ಬೋಧಿಸುವನು ನಿರ್ಭೀತಿಯನು !
ಕುರುರಂಗದ ಶರಶಯ್ಯೆಯಲಿ |
  ಭೀಷ್ಮನು ಮಲಗಿಹನು !
ಹೆಣಗಳ ಬಣಬೆಯ ಮಂಚದಲಿ
  ದ್ರೋಣನು ಬಿದ್ದಿಹನು !
ನೆತ್ತರವೀ೦ಟುತಲಿರುವನು ಭೀಮನು
   ಅಯ್ಯೋ, ನೋಡಲ್ಲಿ !
ರಥದಿಂದುರುಳುತಲಿರುವನು ಕರ್ಣನು,
   ಹಾ! ಹಾ! ನೋಡಿಲ್ಲಿ !
ರಣಚಂಡಿಯು ಆ ಬೆಂಕಿಯ ಮಗಳು
ಹೆಣ್ಣಿನ ರೂಪದ ಬರಸಿಡಿಲವಳು !
  ಮುಗುಳ್ಳಗೆ ಬೀರುತ ನೋಡಲ್ಲಿ
ನಿಂತಿರುವಳು ರಣರಂಗದಲಿ
   ದ್ರೌಪದಿ ಮುಡಿಗೆದರಿ ! ೩

ವೈಶಂಪಾಯನ ಸರಸಿಯ ತೀರದಿ
  ತೋರುವರಾರಲ್ಲಿ !
ಕೌರವದೇವನು ಸಿಡಿಲಾಗಿರುವನು
  ಭೀಮನ ಸರಿಸದಲಿ !
ವೈರಿಯ ಎದೆಯನು
  ಒಡೆಯುವ ಗದೆಯನು
ಮೇಲೆತ್ತಿರುವನು ನೋಡಲ್ಲಿ !
ಭೀಮನು ಬಿದ್ದನೆ!
   ಕೌರವ ಗೆದ್ದನೆ!
ಮುಂದಾಗುವುದನು ಕಾಣಲ್ಲಿ !
  ಇದಾವ ನ್ಯಾಯ !
   ಏನನ್ಯಾಯ ! ೪

  ಕೃಷ್ಣನ ಕುಹಕವ ನೋಡಲ್ಲಿ !
ಏನನು ನೋಡುವೆ ? ತಡೆಯುವೆ ಏಕೆ ?
ಕೌರವರಾಯನು ಮಡಿಯಲೆ ಬೇಕೆ ?
  ಯುವಕನೆ ತುಡುಕು ಕಠಾರಿಯನು !
    ಹೊಡೆ ರಣಭೇರಿಯನು !
ನಡೆ, ನಡೆ, ಊದು ತುತ್ತೂರಿಯನು !
   ಕರೆ, ರಣಮಾರಿಯನು ! ೫

ಕುಮಾರವ್ಯಾಸನು ಹಾಡಿದನೆಂದರೆ,
ಕಲಿಯುಗ ದ್ವಾಪರವಾಗುವುದು !
ಭಾರತ ಕಣ್ಣಲಿ ಕುಣಿವುದು ; ಮೆಯ್ಯಲಿ
ಮಿಂಚಿನ ಹೊಳೆ ತುಳುಕಾಡುವುದು !
   ಕಲಿ ಕೆಚ್ಚಾಗುವನು !
   ಕವಿ ಹುಚ್ಚಾಗುವನು ! ೬ [][]
ಕವಿ:ಕೆ. ವಿ. ಪುಟ್ಟಪ್ಪ

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ
  1. ಪುಟ:ಕನ್ನಡದ ಬಾವುಟ.djvu/೧೫೨
  2. ಪುಟ:ಕನ್ನಡದ ಬಾವುಟ.djvu/೧೫೪