ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು ಕಾರಖಾನೆಯನ್ನು ಇವನು ಸೊಲ್ಲಾಪುರದಲ್ಲಿಯೇ ಆರಂಭಿಸಿದನು, ಬುದ್ದಿ ವಾದಿ; ಪುರೋಗಾಮಿ, ವಿಚಾರ ಸರಣಿಯ ಲೇಖಕನೆಂದು ಮಹಾರಾಷ್ಟ್ರಕ್ಕೆ ಇವನು ಚಿರಪರಿಚಿತನಾಗಿದ್ದಾನೆ. ಗಂಗಾಧರಸಂತನೂ ಕೂಡಾ ಮೆಡಿಕಲ ಕಾಲೇಜದಿಂದ ಹೊರಬಿದ್ದು ಹೈದರಾಬಾದದಲ್ಲಿ ದವಾಖಾನೆಯನ್ನು ತೆರೆದು ಆ ವ್ಯವಸಾಯದಲ್ಲಿ ಖ್ಯಾತಿಯನ್ನು ಪಡೆದನು. - ಲಕ್ಷ್ಮಣರಾಯರೇ ಎಲ್ಲಕ್ಕೂ ಚಿಕ್ಕವರು, ಗುರ್ಲಹೊಸೂರೇ ಇವರ ಜನ್ಮಸ್ಥಳ. ೧೮೬೯ ನೇ ಜೂನ ೨೦ ನೇ ದಿನಾಂಕದಲ್ಲಿ ಇವರು ಜನಿಸಿದರು. ಮೂರು-ನಾಲ್ಕು ವರುಷದವರಿರುವಾಗಲೇ ತಾಯಿಯನ್ನು ಕಳೆದುಕೊಂಡ ಇವರಿಗೆ ಮಾತೃಸುಖ ಎಷ್ಟು ದೊರೆತಿರಬೇಕು ! ಧಾರವಾಡದ ಹನುಮನ ಗುಡಿ ಯಲ್ಲಿ ಭಾವೂಪಂತರೆಂಬುವವರು ತೆರೆದ ಶಾಲೆಯಲ್ಲಿ ಇವರ ಓ, ನಾ, ಮಾ. ಶಿಕ್ಷಣ ಪ್ರಾರಂಭವಾಯಿತು. ಹಣ್ಣಿನ ರುಚಿ ಹೀಚಿನಲ್ಲಿಯೇ ಕಂಡುಬರುವಂತೆ ಲಕ್ಷ್ಮಣನ ಲಕ್ಷವು ಓದು-ಬರೆಹಗಳಿಗಿಂತ ಚಿತ್ರಗಳನ್ನು ತೆಗೆಯುವದಲ್ಲಿ ಆಟದ ಸಾಮಾನುಗಳನ್ನು ಸಿದ್ದಪಡಿಸುವದರಲ್ಲಿ ಕಂಡುಬರಹತ್ತಿತು. ಅವನ ಕಲ್ಪಕತೆಯನ್ನು ಕಂಡು ಹಿರಿಯರು ಹಿಗ್ಗಿ ಬೆರಗಾಗುತ್ತಿದ್ದರು. ಆದರೆ ಅಭ್ಯಾಸ ಮಾಡದ ಮೂಲಕ ಗುರುಗಳಿಂದ ಆಗಾಗ ಬೈಗಳನ್ನೂ ಛಡಿಯ ಪ್ರಸಾದವನ್ನೂ ಪಡೆಯಬೇಕಾಗುತ್ತಿತ್ತು, ಲಕ್ಷ್ಮಣರಾಯರ ಪ್ರೀತಿಯ ವಿಷಯ ಗಳೆಂದರೆ ಭೂಮಿತಿ; ಹಾಗೂ ಭೂಗೋಲ, ಸಂಸ್ಕೃತವೆಂದರೆ ಇವರಿಗೆ ತಲೆ ಶೂಲಿ, ಅಭ್ಯಾಸದಲ್ಲಿ ಹಿಂದೆ ಬಿದ್ದರೂ ತನ್ನಲ್ಲಿರುವ ಹುಟ್ಟು ಗುಣಗಳನ್ನು ಬೆಳೆಸಿಕೊಂಡು ತಾನು ಮುಂದೆ ಬರುವೆನೆಂಬ ಆತ್ಮ ವಿಶ್ವಾಸವು ಮಾತ್ರ ಬಾಲ್ಯ ದಲ್ಲಿಯೇ ಅವರಲ್ಲಿ ಉಂಟಾಗಿದ್ದಿತು. ಆದ್ದರಿಂದಲೇ ತಮ್ಮ ಮನದ ಬಯಕೆಯನ್ನು ಧೈಯ್ಯದಿಂದ ತಂದೆಗೆ ತಿಳಿಸಿ, ಅವರ ಸಮ್ಮತಿಯನ್ನು ಪಡೆದ ವಿಷಯ ವನ್ನು ಈ ಮೊದಲೇ ವಿವೇಚಿಸಲಾಗಿದೆ. ಕಾಶೀನಾಥಪಂತರ ಇಬ್ಬರೂ ಹೆಣ್ಣು ಮಕ್ಕಳು ಮದುವೆಯಾಗಿ ಅತ್ತೆಯ ಮನೆಗೆ ಹೋಗಿದ್ದರು. ಈಗ ಅವರಿಗೆ ಮನೆಯ ಯಾವ ಚಿಂತೆಯೂ ಇರಲಿಲ್ಲ. ಪೂಜೆ, ಪುರಾಣ, ಪುಣ್ಯ ಕಥೆಗಳಲ್ಲಿ ಅವರು ಕಾಲ ಕಳೆಯುತ್ತಿದ್ದರು. ನಡುನಡುವೆ ನಾಲ್ಕಾರುದಿನ ಮಕ್ಕಳ ಕಡೆಗೆ ಹೋಗಿರುತ್ತಿದ್ದರು. ಹೀಗೆ ಕಾಲ ಕಳೆಯುತ್ತಿರುವಾಗ ಒಮ್ಮೆ ಸೊಲ್ಲಾಪುರದಲ್ಲಿರುವ ಮಗನ ಮನೆಗೆ ಹೋದಾಗ ಅಕಸ್ಮಾತ್‌ ಚಿಕ್ಕ ಅಪಘಾತವಾಗಿ ೧೮೯೨ ರಲ್ಲಿ ಮರಣ ಹೊಂದಿದರು.