ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ - ಬಯಲಾಟ / ೮೫

ಪರಂಪರೆಯಲ್ಲಿ ನಡೆದು ಬಂದ ಸಂಪ್ರದಾಯವಿರಬೇಕೆಂದು ಅಭಿಪ್ರಾಯಪಟ್ಟಿರುತ್ತಾರೆ. ನಮ್ಮಲ್ಲಿಯ ಕೆಲಮಂದಿ ವಿದ್ವಾಂಸರು, ಪ್ರಾಯಶಃ ಬಯಲಾಟದ ಅಶಾಸ್ತ್ರೀಯ ಗಾನ ನರ್ತನ ಸಂಪ್ರದಾಯವನ್ನು ಲಕ್ಷಿಸಿ, ಹಾಗೂ ಶಾಸ್ತ್ರೀಯ ಸಂಗೀತಕ್ಕಿಂತ ಭಿನ್ನವಾದ ಜಾನಪದ ಗಾನಪದ್ದತಿ ಎಂಬುದರಿಂದ ಯಕ್ಷಗಾನವೆಂಬ ಹೆಸರು ಬಂದುದಿರಬೇಕೆಂದು ಊಹಿಸಿ, ಇದು ಜಾನಪದ ಸಂಪ್ರದಾಯವೆಂದಣಿಸಿದ್ದಾರೆ. ಅಲ್ಲದೆ, ಪೂರ್ವದಲ್ಲಿಯೂ ಇದರ ಹಾಡುವಿಕೆಯು ಶಾಸ್ತ್ರೀಯವಾಗಿ ಇದ್ದಿರಲಿಕ್ಕಿಲ್ಲವೆಂಬ ಭಾವನೆಯಿಂದ, ಪೂರ್ವದ ನಮ್ಮ ಕಾವ್ಯಗಳಲ್ಲಿ ಬರುವ ಸಂಗೀತ ನಾಟ್ಯವರ್ಣನೆಗಳಲ್ಲಿ ಇದಕ್ಕೆ ಆಧಾರಗಳನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ.

ಮಂಗಳೂರಿನ ಹಿರಿಯ ವಿದ್ವಾಂಸರಾಗಿದ್ದ ದಿ| ಮುಳಿಯ ತಿಮ್ಮಪ್ಪಯ್ಯನವರು ಕಳೆದ ೧೯೪೫ನೇ ಇಸವಿಯಲ್ಲಿ ಪ್ರಕಾಶಪಡಿಸಿದ 'ಪಾರ್ತಿಸುಬ್ಬ' ಎಂಬ ತಮ್ಮ ಗ್ರಂಥ ದಲ್ಲಿ, ಅಗ್ಗಳದೇವನೆಂಬ ಕವಿಯ (ಕ್ರಿ. ಶ. ೧೨೦೦-೧೩೦೦) 'ಚಂದ್ರಪ್ರಭ ಪುರಾಣ'ದ ಇದೊಂದು ಪದ್ಯವನ್ನು ಆ ಬಗ್ಗೆ ಉದಾಹರಿಸಿದ್ದಾರೆ :
ತಾಳಮನಿತ್ತು ಸಮ್ಮನಿಸದೊತ್ತುವ ಪಂಚಮನುರಕ್ಕಣಂ
ಮೇಳತೆಯಿಲ್ಲ ಬೀಣೆಯ ಸರಂ ಬಿಡದಿಲ್ಲಿಯೆನಿಪ್ಪ ಠಾಯೆಯಿಂ-
ದಾಣತಿ ಮಾಡಿ ಸಾಳಗದ ದೇಸಿಯ ಗೀತಮನಂದು ಪಾಡುಎಂ
ಪಾಣನನುರ್ವರಾಧಿಪತಿ ಲೀಲೆಯಿನೆಕ್ಕಲಗಾಣನೊರ್ವನಂ ||
ಕೇಳುತ್ತುಮಿರ್ದ೦
(೭-೯೬)

(ಈ ಪದ್ಯಕ್ಕೆ ಮುಳಿಯ ತಿಮ್ಮಪ್ಪಯ್ಯನವರು ಕೊಟ್ಟಿರುವ ಅರ್ಥ ವಿವರಣೆಯನ್ನೂ, ಶಿವರಾಮ ಕಾರಂತರು ತಮ್ಮ 'ಯಕ್ಷಗಾನ ಬಯಲಾಟ' ಗ್ರಂಥದಲ್ಲಿ ಇದೇ ಪದ್ಯಕ್ಕೆ ಹೇಳಿರುವ ಅರ್ಥವನ್ನೂ (ಪು. ೬೬-೬೭) ಉದ್ಧರಿಸಿಕೊಟ್ಟು, ಲೇಖಕರು ತಮ್ಮ ಲೇಖನ ವನ್ನು ಈ ಕೆಳಗಿನಂತೆ ಮುಂದುವರಿಸಿದ್ದಾರೆ : - ಸಂ.)

ಈ ಮಹನೀಯರಿಬ್ಬರ ಅಭಿಪ್ರಾಯಗಳನ್ನು ಸಂಗ್ರಹಿಸಿದರೆ, ಮೊದಲಿನವರದು- 'ತಾಳಮನಿತ್ತು...' ಎಂಬ ಪದ್ಯದಲ್ಲಿ ಹೇಳಿದ ತಾಳಕ್ಕೆ ಸರಿಹೋಗದ ಶ್ರುತಿಗೆ ಸೇರದ ವೀಣೆಗೆ ಹೊಂದಿಕೆಯಾಗದ ಲಕ್ಷಣವು ಯಕ್ಷಗಾನ ಹಾಡುಗಾರಿಕೆಗೊಪ್ಪಿದ್ದು, ಅದೊಂದು ಜಾನಪದ ಗಾನ ಶೈಲಿ, 'ಎಕ್ಕಲಗಾಣ' ಎಂಬುದು 'ಯಕ್ಷಗಾನ' ಎಂಬುದರ ತದ್ಭವ ಎಂದೂ; ಎರಡನೆಯವರದು- 'ಚಂದ್ರಪ್ರಭಪುರಾಣ'ದ ಕವಿಯು 'ದೇಸಿ'ಯಾದ ಯಕ್ಷಗಾನದಲ್ಲಿ ತನಗಿದ್ದ ತಾತ್ಸಾರದಿಂದ ಯಕ್ಷಗಾನವನ್ನು ಉದ್ದೇಶಪೂರ್ವಕವಾಗಿ ನಿಂದಿಸಿದುದಾಗಿದೆ; 'ಎಕ್ಕಲಗಾಣ' ಎಂದರೆ 'ಯಕ್ಷಗಾನ'ವೇ ಸರಿ' ಎಂದೂ ತಾತ್ಪರ್ಯ ವಾಗುತ್ತದೆ.

ಹೀಗೆ ಎಕ್ಕಲಗಾಣ ಎಂಬುದು ಯಕ್ಷಗಾನ ಎಂಬುದರ ಅಪಭ್ರಂಶ ಎಂದು ಹೇಳು ವುದು ಸರಿಯೇ? ಪರಿಶೀಲಿಸೋಣ. ಮೇಲಿನ ಪದ್ಯದಲ್ಲಿ ಕಾಣುವ 'ಎಕ್ಕಲಗಾಣನಂ' ಎಂಬ ಪದವು ಒಬ್ಬ ಗಾಯಕನನ್ನು ಹೆಸರಿಸುವುದೆಂಬುದರಲ್ಲಿ ಯಾರಿಗೂ ಸಂಶಯ ಬರಲಾರದು; ಆದ್ದರಿಂದ 'ಎಕ್ಕಲ-ಗಾಣ'ದಲ್ಲಿಯ 'ಗಾಣ' ಶಬ್ದವು ಸಂಸ್ಕೃತದ 'ಗಾಯನ' ಪದದ ತದ್ಭವ ರೂಪವೇ ಹೊರತು ಹಾಡುವಿಕೆ ಎಂಬ ಅರ್ಥವುಳ್ಳ ಸಂಸ್ಕೃತ 'ಗಾನ' ಶಬ್ದದ ಅಪಭ್ರಂಶವಲ್ಲವೆಂಬುದರಲ್ಲಿಯೂ ಸಂದೇಹ ಬರುವಂತಿಲ್ಲ. 'ಗಾಯಕ' ಎಂಬ ಅರ್ಥವುಳ್ಳ 'ಗಾಣ' ಪದಕ್ಕೆ 'ಎಕ್ಕಲ' ಪದವು ವಿಶೇಷಣವಾಗಿದೆ. - 'ಯಕ್ಷಗಾನ'