ಈ ಪುಟವನ್ನು ಪ್ರಕಟಿಸಲಾಗಿದೆ

೮೬ / ಕುಕ್ಕಿಲ ಸಂಪುಟ

ಶಬ್ದದಲ್ಲಿ 'ಗಾನ' ಎಂಬುದಕ್ಕೆ ಈ ವಿದ್ವಾಂಸರು ಕಲ್ಪಿಸಿರುವಂತೆ ಹಾಡುವಿಕೆ ಎಂಬ ಅರ್ಥವಾದರೆ, ಎಕ್ಕಲಗಾಣ ಮತ್ತು ಯಕ್ಷಗಾನ ಶಬ್ದಗಳೊಳಗೆ ನೇರವಾದ ಅರ್ಥ ಸಂಬಂಧವೇ ಇಲ್ಲ. ಅದೂ ಅಲ್ಲದೆ, ತನ್ನವ ನಿಯಮಗಳನ್ನು ಪರಿಶೀಲಿಸಿದರೆ, 'ಯಕ್ಷ' ಎಂಬುದರ ಅಪಭ್ರಂಶ ರೂಪವು ಸಹಜವಾಗಿ 'ಎಕ್ಕ'ವೆಂದೇ ಆಗಬೇಕು. ಒಂದು ವೇಳೆ 'ಯಕ್ಕ'ವೆಂದಾಗಿ ಮತ್ತೆ 'ಎಕ್ಕ' ಎಂದು ಆಗಿರಬಹುದು ಎಂದು ಹೇಳಿದರೂ, ಅಲ್ಲಿ ತೋರುವ 'ಲ'ಕಾರವೆಲ್ಲಿಂದ ಬಂತು? ಮೊದಲೊಮ್ಮೆ ದಿ|ಮುಳಿಯ ತಿಮ್ಮಪ್ಪಯ್ಯನವರು ಯಕ್ಷಗಾನದ ಕುರಿತು ಬರೆದೊಂದು ಲೇಖನದಲ್ಲಿ 'ಯಕ್ಷಗಾನ'ದ ತದ್ಭವವು 'ಜಕ್ಕಗಾನ'ವೋ 'ಎಕ್ಕಗಾನ'ವೋ ಆಗಿದ್ದಿರಬೇಕೆಂದು ತರ್ಕಿಸಿದ್ದರು. (ಪಂಚಕಜ್ಜಾಯ :ಪುಟ ೧೨೫) ಆದರೆ, ಮತ್ತೆ, 'ಪಾರ್ತಿಸುಬ್ಬ'ದಲ್ಲಿ ಎಕ್ಕಲಗಾಣವು ಯಕ್ಷಗಾನದ ಅಪಭ್ರಂಶವೆಂದು ಹೇಳುವಾಗ ಈ 'ಲ'ಕಾರದ ಗೊಡವೆಯನ್ನೇ ಬಿಟ್ಟುಬಿಟ್ಟಿದ್ದಾರೆ!

ವಸ್ತುತಃ ಮೇಲಿನ 'ಎಕ್ಕಲಗಾಣ' ಎಂಬ ಶಬ್ದವು ಅದೇ ಪದ್ಯದಲ್ಲಿರುವ ಠಾಯೆ, ಸಾಳಗ, ದೇಸಿ ಇತ್ಯಾದಿ ಶಬ್ದಗಳಂತೆ ಸಂಗೀತ ಶಾಸ್ತ್ರದ ಒಂದು ಪಾರಿಭಾಷಿಕ ಪದ. ಎಂದರೆ ಅದು, ಸಂಸ್ಕೃತ 'ಏಕಲಗಾಯನಃ' ಎಂಬುದರ ಅಪಭ್ರಂಶ ರೂಪ. ಯಾವುದೇ ವಾದ್ಯದ ಸಹಾಯವಿಲ್ಲದೆ ಒಬ್ಬಂಟಿಗನಾಗಿ ಹಾಡುವವನು ಎಂದರ್ಥ. ಎಲ್ಲ ಸಂಗೀತ ಶಾಸ್ತ್ರ ಗ್ರಂಥಗಳಲ್ಲಿಯೂ ಗಾಯಕ ಲಕ್ಷಣವನ್ನು ಹೇಳುವಲ್ಲಿ ಇದು ಬರುತ್ತದೆ. ಶಾರ್ಙ್ಗದೇವನ ಸಂಗೀತ ರತ್ನಾಕರದಲ್ಲಿರುವ ಆ ಲಕ್ಷಣ ಶ್ಲೋಕ ಹೀಗಿದೆ-
ಏಕಲೋ ಯಮಲೋ ವೃಂದಗಾಯನಶ್ಚೇತಿ ತೇ ತ್ರಿಥಾ |
ಏಕ ಏವ ತು ಯೋ ಗಾಯೇದಸಾವೇಕಲ ಗಾಯನಃ ||
ಸದ್ವಿತೀಯೋ ಯಮಲಕೋ ಸವೃಂದೋ ವೃಂದಗಾಯನಃ ||
ಇದರ ಅರ್ಥ ಹೀಗಿದೆ- "ಏಕಲ, ಯಮಲ, ವೃಂದ ಎಂದು ಗಾಯಕರಲ್ಲಿ ಮೂರು ಭೇದಗಳು; ಯಾವ ಗಾಯಕನು ಒಂಟಿಯಾಗಿ ಒಬ್ಬನೇ ಹಾಡುತ್ತಾನೋ ಅವನು ಏಕಲ ಗಾಯನನು, ಎರಡನೆಯವನನ್ನು ಕೂಡಿಕೊಂಡು ಹಾಡುವವನು ಯಮಲಗಾಯನನು, ಅನೇಕರೊಡನೆ (ವಾದಕ-ಗಾಯಕರು) ಹಾಡುವವನು ವೃಂದಗಾಯನವೆನಿಸುತ್ತಾನೆ.

ಹಾಡುಗಾರ ಎಂಬರ್ಥದ ಸಂಸ್ಕೃತ 'ಗಾಯನ' ಶಬ್ದವೇ ತದ್ಭವವಾಗಿ 'ಗಾಣ'ವಾಗಿದೆ ಎಂಬುದಕ್ಕೆ ಬೇಕಷ್ಟು ಆಧಾರಗಳಿವೆ. ಪಂಪಭಾರತದ ೫ನೇ ಆಶ್ವಾಸದ ೫೮ನೆಯ ಪದ್ಯದಲ್ಲಿ "ಬೆಳ್ಕೊಡೆಗಳಂತಿರ ಬೆಳ್ಳೂರ, ಗೊಟ್ಟಿಗಾಣರಂತಿರೆ ಮರಿದುಂಬಿ" ಎಂದಿರುವುದು ಒಂದು ನಿದರ್ಶನವಾದರೆ, ಚಂದ್ರಕವಿಯ (ಕ್ರಿ. ಶ. ೧೫ನೆಯ ಶತಕ) 'ವಿರೂಪಾಕ್ಷಾಸ್ಥಾನ ವರ್ಣನೆ' ಎಂಬ ಕಾವ್ಯದಲ್ಲಿ "ಏಂ ಗಡ ಸೀಯನುಣ್ಮಿದುದೊ ಗೇಯದ ಮೆಲ್ಲುಲಿ ಜಾಣಗಾಣನಾ" ಎಂಬುದು ಇನ್ನೊಂದು. ಅದೇ ಕಾವ್ಯದಲ್ಲಿ, ಮೇಲಿನ ಪದ್ಯದಿಂದಲೇ ಹಿಂದಿನ ಗದ್ಯದಲ್ಲಿ ಮತ್ತಮಾ ನಾದಮೂರ್ತಿಯಾದ ಶ್ರೀ ವಿರೂಪಾಕ್ಷನ ಕಟಾಕ್ಷೇಕ್ಷಣದಿ ನವರಸಂಬಡೆದು ಎಕ್ಕಲ ಯಮಳ ವೃಂದ ಗಾಯಕರೆಂಬ ಮೂರು ತೆರದ ಗಾಣನಾಯಕರೊಳಗೆ ಸುಗುಡನೆನಿಸಿದ ಜಾಣಗಾಣಂ ತನಗುಚಿದವಾದ ತಾಣದೊಳ್ ನಿಂದು... ಶಬ್ದ ಢಾಳ ಲವಣಿ ವಹಣಿ ಮೊದಲಾದ ಠಾಯಂಗಳಿಂ ರವೆಗೊಳಿಸಿ ಧ್ರುವ ಮಟ್ಟೆಯ ರೂಪಕ ಝಂಪೆ... ಮೊದಲಾದ ಸಾಳಗ ಸೊಳಮಂ ಪಾಡುವಲ್ಲಿ” ಎಂಬ ವರ್ಣನೆ ಇದೆ.