ಈ ಪುಟವನ್ನು ಪ್ರಕಟಿಸಲಾಗಿದೆ
ಆಂಧ್ರ ಯಕ್ಷಗಾನ - ತುಲನಾತ್ಮಕ ವಿವೇಚನೆ / ೧೩೫

ವಿಲಾಸಗಳನ್ನು (ರತಿಕ್ರೀಡೆ ಇತ್ಯಾದಿಗಳನ್ನು) ಕುರಿತು ವರ್ಣನೆಯಿರುವ ಪ್ರಬಂಧಗಳನ್ನು ತಾಳ ಮೇಳ ಸಹಿತವಾಗಿ ಹಾಡಿ ಕೇಳಿಸುವುದಾಗಿದೆ. ಸಂತಾನಹೀನರೇ ಮೊದಲಾದವರು ಇಂಥಾ ಏಕಾಂತ ಸೇವೆಗಳ ಹರಕೆಗಳನ್ನು ಹೇಳುವುದು ಇದ್ದಿತ್ತೆಂದು ತಿಳಿಯುವುದು. ಈ ಯಕ್ಷಗಾನಗಳು ಆಟಕ್ಕೆ ಪ್ರಶಸ್ತವಾದುವಲ್ಲ. ಈ ಸಂಪ್ರದಾಯವು ಇಂದು ಬಹುಶಃ ನಷ್ಟಪ್ರಾಯವಾಗಿಯೇ ಇದ್ದರೂ ಇರಬಹುದು. ೧೬ನೇ ಶತಕಕ್ಕಿಂತ ಹಿಂದಿನ ಯಕ್ಷಗಾನ ಗಳ ರಚನಾ ಸ್ವರೂಪ ಹೇಗಿದ್ದಿತ್ತೆಂಬುದಕ್ಕೆ ಅಲ್ಲಿಯೂ ಹೆಚ್ಚಿನ ಪುರಾವೆ ದೊರೆಯುವು ದಿಲ್ಲ. ಪ್ರಾಯಶಃ ಮೊದಲೊಮ್ಮೆ ಕಾರಣಾಂತರದಿಂದ ಕ್ಷೀಣ ದಸೆ ಹೊಂದಿದ್ದು ಕ್ರಮೇಣ ಪುನರೂರ್ಜಿತಗೊಂಡು ಯಕ್ಷಗಾನವೆಂಬ (ಪೂಜಾ ಪ್ರಬಂಧ) ಹೆಸರಿನಿಂದ ಮತ್ತೆ ಪ್ರಾಶಸ್ತ್ಯಕ್ಕೆ ಬಂದುದಿರಬೇಕು. ಈಗ ಉಪಲಬ್ಧವಾಗುವಂತಹ ಯಕ್ಷಗಾನಗಳ ರಚನೆಗೆ ಕ್ರಿ. ಶ. ೧೫-೧೬ನೇ ಶತಕದಿಂದ ಪ್ರಾರಂಭವಾಗಿರಬೇಕೆಂದು ವಿದ್ವಾಂಸರ ಅಭಿಪ್ರಾಯ ವಿದೆ. ೧೬ನೇ ಶತಕದಲ್ಲಿ ರಚನೆಯಾದ ಗ್ರಂಥಗಳು ಸುಮಾರು ನೂರಕ್ಕೂ ಮಿಕ್ಕಿ ದೊರೆತಿವೆ. ೧೭-೧೮-೧೯ನೇ ಶತಕಗಳು ಅಲ್ಲಿಯ ಯಕ್ಷಗಾನಗಳ ಊರ್ಜಿತ ಕಾಲ. ೧೬ನೇ ಶತಕದ ಕೊನೆಯ ಭಾಗ ಹಾಗೂ ೧೭ನೇ ಶತಕದ ಪೂರ್ವಭಾಗದಲ್ಲಿ ಕೂಚಿಪುಡಿ ಎಂಬ ಅಗ್ರಹಾರದಲ್ಲಿ ಅಲ್ಲಿಯ ಯಕ್ಷಗಾನವು ವಿಶೇಷ ಶಾಸ್ತ್ರೀಯ ಸಂಸ್ಕಾರಕ್ಕೊಳಪಟ್ಟು 'ಕೂಚಿಪುಡಿ ನೃತ್ಯನಾಟಕ ಸಂಪ್ರದಾಯ'ವೆಂದು ಹೆಚ್ಚಿನ ಮನ್ನಣೆಯನ್ನು ಪಡೆದು ಪ್ರಸಿದ್ಧವಾಗಿದೆ. ಕೇರಳದ ಕಥಕಳಿ ಹೇಗೋ ಹಾಗೆ ಇಂದು ಆ ಕೂಚಿಪುಡಿ ಸಂಪ್ರದಾಯವು ವಿಶುದ್ಧ ಶಾಸ್ತ್ರೀಯ ಸಂಪ್ರದಾಯವೆಂದು ಪರಿಗಣಿಸಲ್ಪಟ್ಟುದಲ್ಲದೆ ದೇಶವಿದೇಶ ಗಳಲ್ಲಿಯೂ ಮನ್ನಣೆಯನ್ನು ಪಡೆದಿದೆ.

ಆಂಧ್ರದ ಬಯಲಾಟದಲ್ಲಿ ಸಾಮಾನ್ಯವಾಗಿ ಭಾಗವತರೊಂದಿಗೆ ಪಾತ್ರಗಳೂ ಹಾಡುವುದಿದೆ (ಇದು ಕರ್ಣಾಟಕದ ಬಯಲಾಟಗಳಲ್ಲಿಯೂ ಕೆಲವೆಡೆ ರೂಢಿಯಲ್ಲಿದೆ.) ಮಾತುಗಳು ನಮ್ಮ ತೆಂಕಮಟ್ಟು ಬಡಗುಮಟ್ಟುಗಳಲ್ಲಿರುವಷ್ಟು ವಿಸ್ತಾರವಾಗಿರುವುದಿಲ್ಲ. ಮಾತುಗಳು ಕವಿರಚಿತವಾಗಿರುವಂತಹ ಯಕ್ಷಗಾನಗಳು ಕಡಿಮೆ. ವಿಜಯನಗರ ಸಾಮ್ರಾಜ್ಯದ ಪತನವಾದ ನಂತರ ಆಶ್ರಿತರಾದ ನಾಯಕ ರಾಜರು ತಮಿಳುನಾಡಿನ ಮಧುರ ತಂಜಾವೂರಿನಲ್ಲಿ ನೆಲಸಿದ ಮೇಲೆ ಆಂಧ್ರ ಯಕ್ಷಗಾನವು ಅಲ್ಲಿ ಬಹಳ ಅಭಿವೃದ್ಧಿಗೆ ಬಂದುದು ಮಾತ್ರವಲ್ಲದೆ ಪ್ರಯೋಗದಲ್ಲಿಯೂ ಕೃತಿರಚನೆಯಲ್ಲಿಯೂ ಶಾಸ್ತ್ರೀಯ ನಾಟಕಗಳ ಛಾಯೆಯನ್ನು ಅಳವಡಿಸಿಕೊಂಡು 'ಯಕ್ಷಗಾನ ನಾಟಕ'ವೆಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಕೃತಿ ರಚನೆಯಲ್ಲಿ ಪಾತ್ರಗಳ ಮಾತುಗಳನ್ನು ಕವಿಗಳೇ ರಚಿಸುವ ಸಂಪ್ರದಾಯವುಂಟಾಗಿತ್ತು. ಈ ಸಂಸ್ಕಾರಕ್ಕೆ ಕಾರಣರಾದವರು ನಾಯಕ ರಾಜರೂ, ಅವರ ನಂತರ ಆಳಿದ ಮಹಾರಾಷ್ಟ್ರದ ನಾಯಕರೂ ಆಗಿರುತ್ತಾರೆ. ಅವರು ಸ್ವತಃ ರಚಿಸಿದ ಅನೇಕ ಯಕ್ಷಗಾನ ನಾಟಕ ಕೃತಿಗಳು ಉಪಲಬ್ದವಿದೆ. ಇಂದಿಗೆ ಆ ಸಂಪ್ರದಾಯವು ಅಲ್ಲಿ ಕ್ಷೀಣಸ್ಥಿತಿಗೆ ಬಂದರೂ ಆ ಕೃತಿಗಳು ಶ್ರವ್ಯಗಳಾಗಿ ಇಂದೂ ಜನಪ್ರಿಯವಾಗಿರುತ್ತವೆ. ತಂಜಾವೂರಿನ ಸಂಪ್ರದಾಯ ಹಾಗಿದ್ದರೆ, ಮೇಲತ್ತೂರು ಎಂಬಲ್ಲಿ ಮಧುರ ನಾಯಕರ ಆಶ್ರಯದಲ್ಲಿ ವಿಶೇಷವಾದ ನಾಟ್ಯಸಂಸ್ಕಾರವನ್ನು ಹೊಂದಿ ಪ್ರಸಿದ್ಧಿಗೆ ಬಂದ ಯಕ್ಷಗಾನವು 'ಮೇಲತ್ತೂರು ನೃತ್ಯನಾಟಕ'ವೆಂದೇ ಹೆಸರಾಗಿದೆ. ತ್ಯಾಗರಾಜರ ಸಮಕಾಲೀನರಾದ ವೆಂಕಟರಾಮ ಶಾಸ್ತ್ರಿಗಳು ಎಂಬ (ಆಂಧ್ರದವರು) ನಾಟ್ಯಶಾಸ್ತ್ರ ಪರಿಣತರು ಆ ಸುಧಾರಿತ ಕ್ರಮಕ್ಕೆ ಕಾರಣಕರ್ತರಾಗಿದ್ದರು.