ಈ ಪುಟವನ್ನು ಪ್ರಕಟಿಸಲಾಗಿದೆ
೧೪೨ / ಕುಕ್ಕಿಲ ಸಂಪುಟ

ದ್ವೈಧೀಭಾವವು ವಿವಿಧ ರಂಗಗಳಲ್ಲಿ ಪಾದ ಪ್ರಸಾರಣವನ್ನು ಮಾಡುತ್ತಿದೆ. ಈ ಕಾಳಗವು ಸರ್ವಥಾ ಪ್ರೇಕ್ಷಣೀಯವಲ್ಲ. ಅದು ಯಕ್ಷಗಾನ ಕಲೆಗೆ ಮಾರಕ, ತೆಂಕು, ಬಡಗು, ಮೂಡು, ಪಡು ಎಂಬ ಭೇದವಿಲ್ಲದೆ ಎಲ್ಲ ತಿಟ್ಟಿನವರಿಗೂ 'ಮುದದಿಂದ ನಿನ್ನ ಕೊಂಡಾಡುವೆನು ಅನವರತ ಮದವೂರ ವಿಘ್ನೇಶ' ಎಂಬ ಯಕ್ಷಗಾನದ 'ಶ್ರೀಗಣ'ವನ್ನು ಕಲಿಸಿದ ಪಾರ್ತಿಸುಬ್ಬನ ಆತ್ಮಕ್ಕೆ ಇದರಿಂದ ಹಿತವಾಗದು.
"ಕಾರಂತರು ಏನೇನು ಹೇಳಿರುವರೂ ಅದನ್ನೆಲ್ಲ ಖಂಡಿಸಬೇಕು, ಅವರು ಮಾಡಿದುದಕ್ಕೆ ದ್ವಿಗುಣಿತವಾದ ಅಧಿಕ್ಷೇಪವನ್ನು ನಾವೂ ಮಾಡಬೇಕು, ಅವರು ಸತ್ಯದ್ರೋಹಿಗಳೆಂದು ಸಾರಬೇಕು. ಆಗ ಮಾತ್ರ ಪಾರ್ತಿಸುಬ್ಬನ ಹೆಸರು ಉಳಿದೀತು' ಎಂಬಂತೆ ನಮ್ಮಲ್ಲಿ ಅನೇಕರು ತಿಳಿದುಕೊಂಡಂತಿದೆ. ಶ್ರೀ ಕಾರಂತರ ಅರ್ಥವಾದ ದಿಂದಲಾಗಿ ನಮ್ಮಲ್ಲಿ ಕೆಲ ಅನಿಷ್ಟ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿರುವುದಕ್ಕಾಗಿ ವ್ಯಸನ ವಾಗುತ್ತದೆ. ಕ್ರಾಂತದರ್ಶಿಗಳಾದ ಶ್ರೀ ಕಾರಂತರು ನಮ್ಮ ಸಾಹಿತ್ಯಕ್ಕೆ ಸಲ್ಲಿಸಿದ ಅಪಾರ ವಾದ ಕಾಣಿಕೆಯನ್ನು ಪಾರ್ತಿಸುಬ್ಬನ ಹೆಸರಿನ ಹೇತುವಿನಿಂದ ಮರೆಯುವುದು ಕೃತಘ್ನತೆ. ಸಾಹಿತ್ಯದಲ್ಲಿ ಮಾತ್ರ ಅಲ್ಲ ವಿವಿಧ ಕಲಾ ಪ್ರಪಂಚದಲ್ಲಿ ಹತ್ತುಮುಖಗಳಲ್ಲಿ ಪ್ರಕಾಶಕ್ಕೆ ಬಂದ ಅವರ ಅಸಾಮಾನ್ಯ ಪ್ರತಿಭೆಯು ಗೌರವಾರ್ಹವಾದುದು. ಯಕ್ಷಗಾನ ಒಂದರಿಂದ ಅವರನ್ನು ಅಳೆಯಲಾಗದು. ಅವರು ಜ್ಞಾನವೃದ್ಧರಾಗಿರುವಂತೆಯ ವಯೋವೃದ್ಧರು, ನಮಗೆ ಹಿರಿಯರು. ಅವರು ಏನೇ ಹೇಳಲಿ, ಸಾಕಷ್ಟು ತಿತಿಕ್ಷೆಯಿಂದ ಅದನ್ನು ಸಾವಧಾನವಾಗಿ ವಿಚಾರಿಸಿ ಅದರಿಂದ ನಮಗೆ ಏನು ಪಾಠ ಕಲಿಯತಕ್ಕುದಿದೆಯೋ ಅದನ್ನು ಕಲಿತುಕೊಂಡು ಕೃತಾರ್ಥರಾಗೋಣ. ಕಿವಿಗೆ ಹಿತವಾಗದ ಶಬ್ದಗಳನ್ನೆಲ್ಲ ಮರೆತು ಬಿಡೋಣ. 'ಯಾದೃಶೋ ಯಕ್ಷಸ್ತಾದೃಶೋ ಬಲಿಃ' ಎಂಬ ನ್ಯಾಯದಿಂದ ಸಿದ್ಧಿಸುವು ದಾದರೂ ಏನು? ಅಜಪುರದ ಸುಬ್ಬನು ರಾಮಾಯಣ ಪ್ರಸಂಗಗಳ ಕರ್ತೃವಲ್ಲವೆಂದು ವಾದಿಸಿದ ಮಾತ್ರದಿಂದ ಪಾರ್ತಿಸುಬ್ಬನ ಕರ್ತೃತ್ವಕ್ಕೆ ಪ್ರಮಾಣವೊದಗಿದಂತಾಗುವುದೆ? ಅಥವಾ 'ಪಾರ್ತಿಸುಬ್ಬನು ಕವಿಯಲ್ಲ' ಎಂಬ ಶ್ರೀ ಕಾರಂತರ ವಾದಕ್ಕೆ ಆಧಾರವಿಲ್ಲವೆಂದು ಘೋಷಿಸಿದ ಮಾತ್ರದಿಂದ ಪಾರ್ತಿಸುಬ್ಬನು ಕವಿ ಎಂಬುದು ಅನುಕ್ತಸಿದ್ಧವಾಗಬಲ್ಲುದೆ? “ನೀನು ಹೇಳಿದ್ದು ತಪ್ಪು' ಎಂಬ ವಾದಕ್ಕೆ 'ನೀನು ಹೇಳಿದ್ದು ತಪ್ಪು' ಅಥವಾ 'ನೀನೂ ಹೇಳಿದ್ದು ತಪ್ಪು' ಎಂಬ ಪ್ರತಿವಾದವು ನ್ಯಾಯವೂ ಅಲ್ಲ. ವಾದದಲ್ಲಿ ಇದು ಪರಾಜಯ ಸೂಚಕವಾದ ಒಂದು ನಿಗ್ರಹಸ್ಥಾನವೆಂದು ಗಣಿಸಲ್ಪಡುತ್ತದೆ. 'ನಾನು ಹೇಳಿದ್ದು ಸರಿ' ಎಂದು ರುಜುಪಡಿಸುವುದೇ ನ್ಯಾಯಸಮ್ಮತವಾದ ಪ್ರತಿಪಕ್ಷಧರ್ಮ, ಸಾಧ್ಯ ಪ್ರಮಾಣ ಗಳಿಲ್ಲದ ಬಲಹೀನನು ಅಂತಹ ಶುಷ್ಕನಿಗ್ರಹಕ್ಕೆ ತೊಡಗುತ್ತಾನೆ ಎಂದರ್ಥ. ಪಾರ್ತಿಸುಬ್ಬನು ಯಕ್ಷಗಾನಕವಿ ಎಂಬುದು ದೃಷ್ಟಪ್ರತ್ಯಯವೆಂದಾದಲ್ಲಿ ಮಾತ್ರ ಶ್ರೀ ಕಾರಂತರ ವಾದದ ಪಕ್ಷಧರ್ಮವನ್ನು ಪ್ರಶ್ನಿಸುವುದಕ್ಕೆ ನಮಗೆ ನ್ಯಾಯತಃ ಅರ್ಹತೆ ಇದೆ. ಪಾರ್ತಿಸುಬ್ಬನು ಯಕ್ಷಗಾನ ಕವಿ; ರಾಮಾಯಣಾದಿ ಪ್ರಸಂಗಗಳ ಕರ್ತೃ ಎಂದು ಹೇಳುವುದಕ್ಕೆ ಈಗ ನಮಗಿರುವ ಆಧಾರವೇನು? ಕೇವಲ ಕರ್ಣಾಕರ್ಣಿಕೆಯಾಗಿ ಬಂದ ಕೆಲವು ಐತಿಹ್ಯಗಳು. 'ಇಲಿ ಹೋಗಿ ಹುಲಿಯಾಯಿತು' ಎನ್ನುವಂತಹ ಐತಿಹ್ಯಗಳನ್ನು ಪ್ರಮಾಣವೆಂದು ಸ್ವೀಕರಿಸಬಹುದೆ? 'ನಾಸಾಧಿತಂ ಕರಣಂ' ಎಂಬ ನ್ಯಾಯ ವಾಕ್ಯದಂತೆ ಸ್ವತಃ ಪ್ರಮಾಣಸಿದ್ಧವಲ್ಲದ ಸಂದಿಗ್ಧ ಹೇಳುವು ನ್ಯಾಯವಾದ ನಿಗಮನವನ್ನು ಹೊಂದಿಸ ಲಾರದು. ಅಥವಾ ಈ ಮೊದಲು ನಮ್ಮಲ್ಲಿ ಹಲವರು ತರ್ಕಿಸಿರುವಂತೆ ರಾಮಾಯಣದ ಪದ್ಯಗಳಲ್ಲಿ ತುಳು ಭಾಷೆಯ ಶಬ್ದಗಳಿವೆ, ಹವೀಕರ ಮಾತಿನ ಪ್ರಯೋಗವಿದೆ, ನಮ್ಮೂರಿನ ನುಡಿಗಟ್ಟುಗಳಿವೆ ಎಂಬಂತಹ 'ಕುಶಕಾಶಾವಲಂಬನ ನ್ಯಾಯ'ದಿಂದ ಸುಬ್ಬನ