ಈ ಪುಟವನ್ನು ಪ್ರಕಟಿಸಲಾಗಿದೆ

೧೮೬ / ಕುಕ್ಕಿಲ ಸಂಪುಟ

ಗಳನ್ನು ಆತನು ಕೇರಳದ ಕಥಕಳಿ ರಾಮಾಯಣದ ಛಾಯಾನುಕರಣೆಯಿಂದ ರಚಿಸಿದ್ದಾಗಿದೆ ಯೆಂದೂ ಕೆಲಮಟ್ಟಿಗೆ ಅದರ ಭಾಷಾಂತರವನ್ನೇ ಮಾಡಿರುವನೆಂದೂ ಅನ್ಯತ್ರ ಸೋದಾಹರಣವಾಗಿ ಸ್ಪಷ್ಟಪಡಿಸಿರುತ್ತೇನೆ. ಸುಬ್ಬನ ಕರ್ತೃತ್ವ ನಿವಾರಣೆಗೆ ಆಧಾರ ವೆಂಬಂತೆ ಶ್ರೀಯುತರು ತೋರಿಸಿದ ಕಾಲಗಣನೆಯು ತೀರ ತಪ್ಪಾಗಿದೆ ಎಂಬುದನ್ನೂ 'ಎಫಮರಿಸ್'ನ ಆಧಾರದಿಂದ ತೋರಿಸಿಕೊಟ್ಟಿದ್ದೇನೆ. ಪಾರ್ತಿಸುಬ್ಬನು ಪಾರ್ತಿಸುಬ್ಬನು ರಚಿಸಿದ 'ಪುತ್ರಕಾಮೇಷ್ಟಿ' ಯಾವುದು, 'ಬಾಲಲೀಲೆ' ಯಾವುದು ಎಂಬುದನ್ನೂ ಈ ಮೊದಲೇ ಶ್ರುತಪಡಿಸಿರುತ್ತೇನೆ. ಆ ಕುರಿತು ಇನ್ನೂ ಹೆಚ್ಚಿನ ವಿಮರ್ಶೆಗೆ ಈ ಲೇಖನದಲ್ಲಿ ಅವಕಾಶವಿಲ್ಲ. ಆದರೆ, ಹೀಗೆ ನಾನು ನಿರೂಪಿಸಿರುವ ಒಂದೆರಡು ವಿಷಯಗಳಿಗೆ ಶ್ರೀಯುತರು ಆಕ್ಷೇಪವೆತ್ತಿರುವುದರ ಕುರಿತು ಸಮಾಧಾನಗಳನ್ನು ಪ್ರಕೃತ ಹೇಳ ಬೇಕಾಗಿದೆ- ಕೊಟ್ಟಾರಕರ ಮಹಾರಾಜನ ರಾಮಾಯಣವನ್ನು ಪಾರ್ತಿಸುಬ್ಬನು ಅನುಕರಿ ಸಿದ್ದಾನೆ ಎಂದು ನಾನು ಹೇಳಿದುದಕ್ಕೆ ಪ್ರತಿಯಾಗಿ ಶ್ರೀಯುತರು ಈ ಕನ್ನಡ ರಾಮಾಯಣ ಪ್ರಸಂಗಗಳನ್ನೇ ಕೊಟ್ಟಾರಕರನು ಮಲೆಯಾಳಕ್ಕೆ ಭಾಷಾಂತರಿಸಿದ್ದಾಗಿದೆ ಎಂದು ಹೇಳುತ್ತಾರೆ. (ಬ್ರಹ್ಮಾವರದ ಕರ್ಣಾಟಕ ಸಂಘದಿಂದ ಪ್ರಕಾಶಿಸಲ್ಪಟ್ಟ 'ನಮ್ಮ ಅಜಪುರ' ಎಂಬ ಗ್ರಂಥದಲ್ಲಿ).

ಮೂಲಕೃತಿ ಯಾವುದು, ಭಾಷಾಂತರ ಯಾವುದು ಎಂಬುದು ಉಭಯ ಭಾಷಾಜ್ಞಾನ ವುಳ್ಳ ವಿದ್ವಾಂಸರಿಗೆ ಮಾತ್ರ ಸ್ವತಏವ ತಿಳಿಯಬಹುದಾದುದರಿಂದ, ಆ ಕುರಿತು ಹೆಚ್ಚೇನೂ ಇಲ್ಲಿ ಉತ್ತರ ಹೇಳುವ ಅವಶ್ಯ ಕಾಣುವುದಿಲ್ಲ. ಕೊಟ್ಟಾರಕರನ ಗ್ರಂಥರಚನೆಯ ಕಾಲವಂತೂ ಪಿ. ಗೋವಿಂದಪಿಳ್ಳೆ ಎಂಬ ವಿದ್ವಾಂಸರು ಬರೆದ ಸುಪ್ರಸಿದ್ಧವಾದ ಮತ್ತು ಬಹುಮಾನ್ಯವಾದ 'ಮಲೆಯಾಳ ಭಾಷಾಚರಿತ್ರಂ' ಎಂಬ ಬೃಹದ್ಗಂಥದಲ್ಲಿ ಕೊಲ್ಲಂ ವರ್ಷ ೭೩೮-೭೪೨ (ಕ್ರಿ. ಶ. ೧೫೬೩-೧೫೬೭) ಈ ಮಧ್ಯಕಾಲವೆಂದು ಸಾಧಾರವಾಗಿ ನಿರ್ಣಯಿಸಲ್ಪಟ್ಟಿದೆ. (ಮಲೆಯಾಳ ಭಾಷಾಚರಿತ್ರಂ ಪುಟ ೧೯೪-೧೯೮). ನಮ್ಮ ಯಕ್ಷಗಾನ ರಾಮಾಯಣ ಪ್ರಸಂಗಗಳ ಕಾಲವನ್ನು ಶ್ರೀ ಕಾರಂತರು ಇದಕ್ಕಿಂತಲೂ ಹಿಂದಕ್ಕೊಯ್ಯುತ್ತಾರೆಯೇ?

ಇನ್ನು ಕನ್ನಡ ಯಕ್ಷಗಾನ ರಾಮಾಯಣದಲ್ಲಿರುವಷ್ಟು ರಾಗತಾಳಗಳ ವಿಪುಲತೆಯು ಕೇರಳದ ರಾಮನಾಟದಲ್ಲಿದೆಯೆಂದೂ ತಾನು ತಿಳಿಯಲಾರೆ ಎನ್ನುತ್ತಾರೆ. ಶ್ರೀಯುತರು ನಿಜವಾಗಿಯೂ ಇದನ್ನು ತಿಳಿದಿಲ್ಲವೆಂಬುದು ಸತ್ಯ. ತಿಳಿದಿದ್ದರೆ ಸರ್ವಥಾ ಹೀಗೆ ಹೇಳುತ್ತಿದ್ದಿಲ್ಲ. ಇನ್ನಾದರೂ ತಿಳಿದುಕೊಂಡರೆ ಸಮಾಧಾನವಾದೀತು.

ಪಾರ್ತಿಸುಬ್ಬನ ರಾಮಾಯಣ 'ಪಂಚವಟಿ' ಪ್ರಸಂಗದಲ್ಲಿರುವಂತೆ ' ಸೀತೆಯ ಪರ್ಣಶಾಲೆಯ ಮುಂದೆ ಲಕ್ಷ್ಮಣನು ಗೆರೆ ಎಳೆದ ವಿಚಾರ ಮತ್ತು ಶೂರ್ಪಣಖಿಯ ಕುಚಚ್ಛೇಧನ ವಿಚಾರವು ಕನ್ನಡ ರಾಮಾಯಣಗಳಲ್ಲಿಲ್ಲ. 'ಮಲೆಯಾಳದಲ್ಲಿ ಮಾತ್ರವೇ ಇವೆ' ಎಂದು ನಾನು ಹೇಳಿದ್ದೇನೆ. 'ಅದೂ ತಪ್ಪೇ' ಎಂದು ಆರೋಪಿಸಿ 'ಬತ್ತಲೇಶ್ವರ ಕವಿಯು ಬರೆದ ಕೌಶಿಕ ರಾಮಾಯಣದಲ್ಲಿ ಈ ಎರಡೂ ವಿಚಾರಗಳು ಬಂದಿವೆ. ಕವಿ ಚರಿತ್ರೆಕಾರರು ಬತ್ತಲೇಶ್ವರ ಕವಿಯ ಕಾಲವನ್ನು ೧೪೦೦ ಎಂದು ಹೇಳಿದ್ದಾರೆ. ಕೌಶಿಕ ರಾಮಾಯಣದ ತಾಡವಾಲೆಗಳು ಉತ್ತರ ಕನ್ನಡದ ಕುಂದಾಪುರ, ಉಡುಪಿ ಮತ್ತು ಮಲೆನಾಡಿನ ಸೆರಗುಗಳಲ್ಲಿ ಧಾರಾಳ ಸಿಗುತ್ತವೆ' ಎಂದೂ ತೋರಿಸಿದ್ದಾರೆ.

ಲಕ್ಷ್ಮಣನು ಗೆರೆ ಎಳೆದ ವಿಚಾರವು ಕೇರಳದ ಕೊಟ್ಟಾರಕರನ ರಾಮಾಯಣದಲ್ಲಿರು ವಂತಹದಲ್ಲವೆಂದೂ, 'ಮಹಾನಾಟಕ'ವೆಂದು ಖ್ಯಾತಿಯುಳ್ಳ ಸಂಸ್ಕೃತ 'ಹನೂಮನ್ನಾಟಕ'