ಈ ಪುಟವನ್ನು ಪ್ರಕಟಿಸಲಾಗಿದೆ

ಶ್ರೀ ಕಾರಂತರ ಯಕ್ಷಗಾನ ಸಂಶೋಧನೆ


ಶ್ರೀ ಶಿವರಾಮ ಕಾರಂತರು ಯಕ್ಷಗಾನ ಬಯಲಾಟ'ವೆಂಬ, ಬಹುಮಾನಿತವಾಗಿ ಪ್ರಸಿದ್ಧಿ ಹೊಂದಿದ ತಮ್ಮ ಸಂಶೋಧನಾತ್ಮಕ ಬೃಹದ್‌ಗ್ರಂಥದಲ್ಲಿ ಪ್ರಯತ್ನಪೂರ್ವಕ ಸಾಧಿಸಿದ ಪ್ರಕಾರ ಕುಂಬಳೆ ಪಾರ್ತಿಸುಬ್ಬನು ಕವಿಯೇ ಆಗಿರಲಿಲ್ಲವೆಂದೂ ಆತನು ರಚಿಸಿರುವ ಐರಾವತ, ರಾಮಪಟ್ಟಾಭಿಷೇಕ, ಪಂಚವಟಿಯೇ ಮೊದಲಾದ ಎಲ್ಲ ಪ್ರಸಂಗ ಗಳೂ ವೆಂಕಾರ್ಯನ ಮಗ ಸುಬ್ಬನೆಂಬ, ಹನುಮದ್ರಾಮಾಯಣ ಕಾವ್ಯದ ಮತ್ತು ರುಕ್ಕಿಣೀ ಸ್ವಯಂವರ, ಪಾರಿಜಾತಗಳೆಂಬ ಯಕ್ಷಗಾನ ಪ್ರಬಂಧಗಳ ಕರ್ತೃವಾದ ಶ್ರೀ ಕಾರಂತರು ಬ್ರಹ್ಮಾವರದವನೆಂದು ಹೇಳುವ (ಆಡುವಳ್ಳಿಯ) ಕವಿಯಿಂದ ರಚಿಸಲ್ಪಟ್ಟಿತೆಂದೂ ಜನರಲ್ಲಿ ನಂಬಿಕೆ ಹುಟ್ಟುವುದಕ್ಕೆ ಆಸ್ಪದವಾಗಿದೆಯಷ್ಟೆ.

ಪಾರ್ತಿಸುಬ್ಬನದೆಂದೇ ಪ್ರಸಿದ್ಧಿಯುಳ್ಳ ಮೇಲೆ ಹೇಳಿದ ಪ್ರಸಂಗಗಳನ್ನು ಬಾಲ್ಯ ದಿಂದಲೇ ಓದಿ ಅಭ್ಯಾಸ ಮಾಡಿದ ನಾನೂ ಆ ಪ್ರಸಂಗಗಳ ತಾಳೆಯೋಲೆಯ ಮತ್ತು ಕಾಗದದ ಹಲವು ಪ್ರತಿಗಳನ್ನು ಸಂಗ್ರಹಿಸಿ, ಚೆನ್ನಾಗಿ ಪರಿಶೀಲಿಸಿ ಅವುಗಳು ವೆಂಕಾರ್ಯನ ಮಗ ಸುಬ್ಬನಿಂದ ರಚಿಸಲ್ಪಟ್ಟುವಲ್ಲವೆಂದೂ, ಪಾರ್ತಿಸುಬ್ಬನೇ ಅವುಗಳ ಕರ್ತೃವೆಂಬ ವಿಷಯದಲ್ಲಿ ಯಾವ ಸಂದೇಹವೂ ಇಲ್ಲವೆಂದೂ ನಿರ್ಧಾರಕ್ಕೆ ಬಂದಿರುವುದು ಮಾತ್ರ ವಲ್ಲದೆ ಪಾರ್ತಿಸುಬ್ಬನ ದೇಶಕಾಲ ನಿರ್ಣಯಕ್ಕೆ ಸಾಕಷ್ಟು ಸರಿಯಾದ ಆಧಾರವುಳ್ಳ ದಾಖಲೆಗಳನ್ನೂ ಆತನು ರಚಿಸಿದ ಯಕ್ಷಗಾನವಲ್ಲದ ತುಂಡುಪದಗಳನ್ನು ಸಹ ಸಂಗ್ರಹಿ ಸಿರುತ್ತೇನೆ. ಕಾಸರಗೋಡು ಪ್ರಾಂತದ ಪ್ರಸಿದ್ಧ ಕೂಡ್ಲು ಮನೆತನದವರಾದ ಶ್ರೀ ಕೂಡು ಈಶ್ವರ ಶ್ಯಾನುಭೋಗರೂ ಆತನ ಕಾಲನಿರ್ಣಯಕ್ಕೆ ಆಧಾರಭೂತವಾದ ಕೆಲವು ಪುರಾತನ ದಾಖಲೆಗಳನ್ನು ಪ್ರೀತಿಪೂರ್ವಕ ಒದಗಿಸಿಕೊಟ್ಟಿರುತ್ತಾರೆ. ಅದಕ್ಕಾಗಿ ನಾನವರಿಗೆ ಕೃತಜ್ಞನು.

ಹೀಗೆ ಈ ವರೆಗೆ ಉಪಲಬ್ಧವಾದ ಎಲ್ಲ ಪ್ರಾಮಾಣಿಕವಾದ ಆಧಾರಗಳನ್ನು ನಿರೂಪಿಸಿ ಪಾರ್ತಿಸುಬ್ಬನ ಕಾಲ ಮತ್ತು ಕೃತಿಗಳ ವಿಚಾರವಾಗಿ, ಈ ವರೆಗೆ ಸಮಗ್ರವಾಗಿ ಮುದ್ರಿತವಾಗದಿರುವ ಆತನ ಕೃತಿಗಳ ಸಮೇತ ಸದ್ಯ ಒಂದು ಗ್ರಂಥವನ್ನು ಪ್ರಕಟಿಸ ಲಿಕ್ಕಿರುವೆನಾದರೂ, ಪ್ರಕೃತ ಶ್ರೀ ಕಾರಂತರು ಪಾರ್ತಿಸುಬ್ಬನ ಕರ್ತೃತ್ವವನ್ನೇ ಅಲ್ಲಗಳೆದು ಬ್ರಹ್ಮಾವರದವನೆಂಬ ಇನ್ನೊಬ್ಬನಿಗೆ ಅದನ್ನು ಸಾಧಿಸಿಕೊಡಲು ಪ್ರಬಲ ಆಧಾರಗಳೆಂದು ಅವರು ಸ್ವೀಕರಿಸಿದ ಯಕ್ಷಗಾನ ಪ್ರಬಂಧಗಳ ತಾಡವಾಲೆಯ ಪ್ರತಿಗಳಿಗೆ ಅವರು ತೋರಿಸಿಕೊಟ್ಟ ಕಾಲದ ಸಂಧಾನವು ಅಕ್ಷಮ್ಯವೆನ್ನಬೇಕಾದ ಪ್ರಮಾದಗಳಿಂದ ಕೂಡಿದೆ ಎಂಬುದು ಇನ್ನೂ ಯಾರ ಗಮನಕ್ಕೂ ಬಂದ ಹಾಗಿಲ್ಲ ಎಂಬುದರಿಂದ ಯಾರಿಗಾದರೂ ಅದರ ತಥ್ಯಾಂಶವನ್ನು ಪರಿಶೀಲಿಸಲು ಅನುಕೂಲವಾಗಲೆಂದು ಈಗ ಮೊದಲಾಗಿ ಈ ಕೆಳಗೆ ಕೆಲವು ಉದಾಹರಣೆಗಳನ್ನು ಕೊಟ್ಟಿರುತ್ತೇನೆ.

'ಯಕ್ಷಗಾನ ಬಯಲಾಟ'ದಲ್ಲಿ ಶ್ರೀ ಕಾರಂತರು ಉಲ್ಲೇಖಿಸಿದ ಯಕ್ಷಗಾನ ಪ್ರಬಂಧ ಪ್ರತಿಗಳ ಕಾಲಸೂಚಕವಾದ ಸಂವತ್ಸರ, ಮಾಸ, ತಿಥಿ, ವಾರಾದಿಗಳಿಗೆ ಸರಿಯಾದುವೆಂದು ಅವರು ಕೊಟ್ಟ ಇಂಗ್ಲಿಷು ಇಸವಿ, ತಿಂಗಳು, ತಾರೀಕುಗಳು ಅದೆಷ್ಟು ಅಸಂಬದ್ಧವಾಗಿವೆ