ಈ ಪುಟವನ್ನು ಪ್ರಕಟಿಸಲಾಗಿದೆ

೧೯೬ / ಕುಕ್ಕಿಲ ಸಂಪುಟ

ಎಂದು ಪರಾಮರ್ಶಿಸಿದಲ್ಲಿ ತಿಳಿಯಬಹುದಾಗಿದೆ. ಅವರು ಕೊಟ್ಟ ತಿಥಿ, ವಾರಾದಿಗಳನ್ನು, ಸ್ವಾಮಿ ಕಣ್ಣು ಪಿಳ್ಳೆಯವರು ರಚಿಸಿದ ಸರ್ವಮಾನ್ಯವಾದ ಕಾಲನಿರ್ಣಯ ಕೋಶದಲ್ಲಿ (Indian Ephamaries by Swami Kannu Pillai) ಹೋಲಿಸಿ ನೋಡಲಾಗಿ ಕಂಡುಬಂದ ಹಲವು ದೋಷಗಳಲ್ಲಿ ಮಾದರಿಗಾಗಿ ಕೆಲವನ್ನು ಈ ಕೆಳಗೆ ಕೊಟ್ಟಿರುತ್ತೇನೆ. ಸನ್ಮಾನ್ಯ ಗ್ರಂಥದಲ್ಲಿಯೂ ಅಸಂಖ್ಯಾತವೆಂಬಷ್ಟು ದೋಷಗಳು ಸಂಭವಿಸುವುದಕ್ಕೆ ವ್ಯಸನಪಟ್ಟಷ್ಟೂ ಕಡಿಮೆ.

೧. ಶ್ರೀ ಕಾರಂತರು ಪ್ರಬಲವಾಗಿ ಆಧರಿಸಿದ 'ಕರ್ಕಿಯ ತಾಡವಾಲೆ ಸಂಪುಟ'ದಲ್ಲಿ ಸೇರಿದ ಪ್ರಸಂಗವೆನ್ನಲಾದ ಪಂಚವಟಿ ವಾಲಿಸುಗ್ರೀವರ ಕಾಳಗವನ್ನು ಪ್ರತಿ ತೆಗೆದ ಕಾಲವು 'ಆಂಗೀರಸ ಭಾದ್ರಪದ ಶುಕ್ಲ ೧೧, ಸೌಮ್ಯವಾರ' ಎಂದು ಕೊಟ್ಟಿದ್ದಾರೆ.

(ಯಕ್ಷಗಾನ ಬಯಲಾಟ, ಪು. ೨೦೬, ಅಡಿಟಿಪ್ಪಣಿ ನಂ. ೧ ಮತ್ತು ಪುಟ ೨೮೧

ಶಶಿ ಪರಿಶಿಷ್ಟ, ನಂ. ೪೪) ಕ್ರಿಸ್ತಶಕದಲ್ಲಿ ಇದಕ್ಕೆ ಸರಿಯಾದ ತಾರೀಕು ೧೮-೮-೧೭೫೨ ಎಂದು ತೋರಿಸಿದ್ದಾರೆ. ಆಂಗೀರಸ ಭಾದ್ರಪದ ಶು. ೧೧ ತಾ. ೧೯-೯-೧೭೫೨ನೇ ಮಂಗಳವಾರವಾಗುತ್ತದೆ. ೧೮೧೨ನೇ ಇಸವಿಯಲ್ಲಿ ಈ ದಿನವು ಗುರುವಾರವಾಗು ತದೆ. ೧೮೭೨ನೇ ಇಸವಿಯಲ್ಲಿ ಈ ದಿನವು ಶುಕ್ರವಾರವಾಗಿದೆ. ಶ್ರೀಯುತರು ಕೊಟ್ಟ, ತಾ. ೧೮-೮-೧೭೫೨ ಎಂಬುದು ಆಂಗೀರಸ ಶ್ರಾವಣ ಬಹುಳ ೫ ಮಂಗಳ ವಾರವಾಗಿದೆ. ಅದು ಭಾದ್ರಪದಮಾಸವೇ ಅಲ್ಲ.

೨. ಪಟ್ಟಾಭಿಷೇಕದ ಒಂದು 'ತಾಡವಾಲೆ'ಯ ಪ್ರತಿಯ ಕಾಲವು 'ಪ್ರಜೋತ್ಪತ್ತಿ ಸಂವತ್ಸರದ ಮಾಘ ಬ ೪ ಬುಧವಾರ'ವೆಂದು ಕೊಟ್ಟಿದ್ದಾರೆ. (ಯಕ್ಷಗಾನ ಬಯಲಾಟ, ಪರಿಶಿಷ್ಟ ನಂ. ೩೬) ಈ ದಿನಕ್ಕೆ ತಾ. ೨೫-೧೨-೧೭೫೧ ಸರಿಯಾಗಿದೆ ಎಂದೂ ಬರೆದಿದ್ದಾರೆ. ಇದು ತಪ್ಪು. ನ್ಯಾಯವಾಗಿ ಈ ದಿನವು ತಾ. ೨೮-೨-೧೮೭೨ಕ್ಕೆ ಸರಿಯಾಗಿದೆ.

೩. ಇನ್ನೊಂದು ಪ್ರತಿ ಪಟ್ಟಾಭಿಷೇಕದ 'ತಾಡವಾಲೆ'ಯ ಕಾಲವನ್ನು 'ವಿಶ್ವಾವಸು ಶ್ರಾವಣ ಶುದ್ಧ ೧೦ ಬುಧವಾರ'ವೆಂದು ಕೊಟ್ಟಿದ್ದಾರೆ. (ಯಕ್ಷಗಾನ ಬಯಲಾಟ, ಪರಿಶಿಷ್ಟ ನಂ. ೩೮). ಅದಕ್ಕೆ ತಾ. ೨೫-೭-೧೭೮೭ ಸರಿಯಾಗಿದೆಯೆಂದೂ ಕೊಟ್ಟಿದ್ದಾರೆ. ಇದು ತಪ್ಪು. ವಿಶ್ವಾವಸು ಶ್ರಾವಣ ಶುದ್ಧ ೧೦ ಬುಧವಾರವು ನ್ಯಾಯವಾಗಿ ತಾ. ೧೩-೮-೧೮೪೫ರಂದಾಗುತ್ತದೆ.

೪. ಸಭಾಲಕ್ಷಣ 'ತಾಡವಾಲೆ' ಪ್ರತಿಯಕಾಲವು 'ಭಾವ ಶ್ರಾವಣ ಶುದ್ಧ ೧೧ ಭಾನುವಾರ' ಎಂದು ಕೊಟ್ಟಿದ್ದಾರೆ. (ಯಕ್ಷಗಾನ ಬಯಲಾಟ, ಪರಿಶಿಷ್ಟ ನಂ. ೫೫) ಅದಕ್ಕೆ ಸರಿಯಾದ್ದು ತಾ. ೩೦-೬-೧೭೫೪ ಎಂದೂ ತೋರಿಸಿದ್ದಾರೆ. ಇದು ತಪ್ಪು ನ್ಯಾಯವಾಗಿ ಭಾವ ಸಂವತ್ಸರದ ಶ್ರಾವಣ ಶುದ್ಧ ೧೧ ಭಾನುವಾರ, ತಾ. ೨೩-೮-೧೮೭೪ನೇ ದಿನ ಬಂದುದಾಗಿದೆ.

೫. ಇಂದ್ರಜಿತು ಕಾಳಗ : ಈ 'ತಾಡವಾಲೆ'ಯ ಪ್ರತಿಯು ವಿಶ್ವಾವಸು ಭಾದ್ರಪದ ೧೫ ಶುಕ್ರವಾರದ್ದೆಂದು ಹೇಳಿದ್ದಾರೆ. (ಯಕ್ಷಗಾನ ಬಯಲಾಟ, ಪರಿಶಿಷ್ಟ ನಂ. ೬) ತಾ. ೨೬-೯-೧೭೮೭ ಇದಕ್ಕೆ ಸರಿಯೆಂದೂ ಬರೆದಿದ್ದಾರೆ. ಇದು ಸರಿಯಲ್ಲ. ನ್ಯಾಯವಾಗಿ ಈ ದಿನವು ತಾ. ೨೮-೯-೧೯೦೫ ಆಗಿದೆ.