ಈ ಪುಟವನ್ನು ಪ್ರಕಟಿಸಲಾಗಿದೆ

ಶ್ರೀ ಕಾರಂತರ ಯಕ್ಷಗಾನ ಸಂಶೋಧನೆ / ೧೯೭

೬. ಧ್ರುವಚರಿತ್ರೆ : ಇದರ ಕಾಲವನ್ನು ಧಾತು ಸಂದ ಧನು ತಿಂಗಳು ೯ ಶುಕ್ರವಾರ ಎಂದು ಕೊಟ್ಟಿದ್ದಾರೆ. (ಯಕ್ಷಗಾನ ಬಯಲಾಟ, ಪರಿಶಿಷ್ಟ ೩೨). ಇದರ ತಾರೀಕು ೨೩-೧೨-೧೮೧೪ ಎಂದು ಶ್ರೀ ಕಾರಂತರು ಕೊಟ್ಟಿರುವುದು ತಪ್ಪು, ನ್ಯಾಯವಾಗಿ ಆದು ೨೨-೧೨-೧೮೭೬ ಆಗಿದೆ.

೭. ಸುಭದ್ರಾ ಕಲ್ಯಾಣ : ಇದರ ಕಾಲವನ್ನು 'ಮನ್ಮಥ (ಗತ) ಪುಷ್ಯ ಬ. ೫ ಶುಕ್ರವಾರ ಎಂದು ಕೊಡಲಾಗಿದೆ. (ಯಕ್ಷಗಾನ ಬಯಲಾಟ, ಪುಟ ೨೨೭. ಅಡಿಟಿಪ್ಪಣಿ ಮತ್ತು ಪರಿಶಿಷ್ಟ ೫೬). ಇದಕ್ಕೆ ಸರಿಯಾದ್ದು ತಾ. ೨೩-೧೨-೧೭೭೪ ಎಂದೂ ಶ್ರೀ ಕಾರಂತರು ಹೇಳುತ್ತಾರೆ. ಇದು ನ್ಯಾಯವಾಗಿ ತಾ. ೨೭-೧೮೩೭ ಆಗಿರುತ್ತದೆ. ಶ್ರೀ ಕಾರಂತರು ಕೊಟ್ಟ ತಾ. ೨೩-೧೨-೧೭೭೪ ಎಂಬುದು ಮನ್ಮಥ (ಗತ) ಎಂದರೆ ದುರ್ಮುಖಿಯೂ ಅಲ್ಲ, ಮನ್ಮಥವೂ ಅಲ್ಲ. ಜಯ ಸಂದ ಮಾರ್ಗಶಿರ ಬ. ೫ ಶುಕ್ರವಾರವಾಗುತ್ತದೆ. ಈ ಅಬದ್ಧವಾದ ೧೭೭೪ ಎಂಬುದನ್ನು ಕಟ್ಟಿಕೊಂಡು ಶ್ರೀಯುತರು ದಿ| ಐರೋಡಿ ಶಿವರಾಮಯ್ಯನವರು ಪ್ರಾಯಃ ಸರಿಯಾದ ಪ್ರಮಾಣ ಗಳಿಂದ ನಿರ್ಣೈಸಿರುವ ಮೇಲಿನ ಎರಡು (೬, ೭) ಪ್ರಸಂಗಗಳ ಕರ್ತೃವಾದ ಹಟ್ಯಂಗಡಿ ರಾಮಭಟ್ಟರ ಕಾಲವನ್ನು ೬೦ ವರ್ಷಕ್ಕೆ ಹಿಂದೆ ಹಾಕಿದ್ದಾರೆ! (ಯಕ್ಷಗಾನ ಬಯಲಾಟ, ಪುಟ ೨೨೬-೨೨೭).

೮. ತಾಮ್ರಧ್ವಜ ಕಾಳಗ : ಈ 'ತಾಡವಾಲೆ'ಯ ಕಾಲವು ಪ್ರಮೋದೂತ ಸಂದ ಪುಷ್ಟ ಶು. ೯ ಸೋಮವಾರ ಎಂದು ಕೊಟ್ಟಿದ್ದಾರೆ. (ಯಕ್ಷಗಾನ ಬಯಲಾಟ, ಪರಿಶಿಷ್ಟ ೨೯). ಇದಕ್ಕೆ ಅವರು ಕೊಟ್ಟ ತಾರೀಕು ೧೪-೧೨-೧೭೫೦. ಇದು ತಪ್ಪು ನ್ಯಾಯವಾಗಿ ಅದು ೧೨-೧-೧೯೩೧ ಆಗುತ್ತದೆ.

೯. ಚಂದ್ರಾವಳಿ : ಕಾರಂತರು ಕೊಟ್ಟ ಕಾಲ 'ಸ್ವಭಾನು ಆಷಾಢ ಶು. ೪ ಆದಿತ್ಯವಾರ ಅದಕ್ಕೆ ಅವರದೇ ಆದ ಇಸವಿ, ತಾರೀಕು (ಯಕ್ಷಗಾನ ಬಯಲಾಟ, ಪರಿಶಿಷ್ಟ ನಂ. ೨೮) ೧೭-೫-೧೭೧೩. ನ್ಯಾಯವಾಗಿ ಅದು ೮-೭-೧೮೮೩ ಆಗುತ್ತದೆ. ೧೦. ಬಭ್ರುವಾಹನ ಕಾಳಗ : ಇದರ ಪ್ರತಿಗೆ ಕೊಟ್ಟಿರುವ ಕಾಲ 'ಸರ್ವಜಿತು ಆಶ್ವಿಜ ಶುದ್ಧ ೭ ಶುಕ್ರವಾರ, (ಯಕ್ಷಗಾನ ಬಯಲಾಟ, ಪರಿಶಿಷ್ಟ ನಂ. ೪೫). ಅದಕ್ಕೆ ಸರಿ ಎಂದು ಶ್ರೀ ಕಾರಂತರು ಕೊಟ್ಟಿರುವ ಕಾಲ ತಾ. ೧೦-೧೦-೧೭೬೬. ನ್ಯಾಯವಾಗಿ ಆಗಬೇಕಾಗಿದ್ದ ತಾರೀಕು ೨೩-೯-೧೮೮೭.

ಶ್ರೀ ಕಾರಂತರು 'ಯಕ್ಷಗಾನ ಬಯಲಾಟ' ಪುಸ್ತಕದಲ್ಲಿ ಕೊಟ್ಟಿರುವ ಎಲ್ಲ ಪ್ರಬಂಧ ಗಳ ಕಾಲದ ಪಟ್ಟಿಯನ್ನು Indian Ephemarisನಲ್ಲಿ ಹೋಲಿಸಿ ನೋಡಿದಲ್ಲಿ ಪಾರ್ತಿಸುಬ್ಬ ಕವಿಕೃತವೆಂದು ಪ್ರಸಿದ್ದಿ ಇರುವ ಯಕ್ಷಗಾನ ಪ್ರಬಂಧಗಳ ಕ್ರಿ. ಶ. ೧೮೦೦ಕ್ಕೆ ಹಿಂದಣ ಪ್ರತಿಗಳು ಅವರಿಗೆ ದೊರೆತದ್ದೇ ಇಲ್ಲವೆಂದು ಸ್ಪಷ್ಟವಾಗುತ್ತದೆ. ಯಾರು ಬೇಕಾದರೂ ಎಫಮರೀಸಿನಲ್ಲಿ ಹೋಲಿಸಿ ನೋಡಿ ಶ್ರೀ ಕಾರಂತರ ಸಂಶೋಧನೆಯ ಯಾಥಾರ್ಥವನ್ನು ಕಂಡುಕೊಳ್ಳಬಹುದು. ನಾನಿಲ್ಲಿ ಮಾದರಿಗಾಗಿ ಕೆಲವನ್ನು ಮಾತ್ರ ಕೊಟ್ಟಿರುವುದರಿಂದ ಕಾರಂತರು 'ಬಯಲಾಟ'ದಲ್ಲಿ ಕೊಟ್ಟ ಕಾಲಗಳ ಪಟ್ಟಿಯಲ್ಲಿ ಮಿಕ್ಕುಳಿದುವೆಲ್ಲ ಸರಿಯಾಗಿವೆ ಎಂದು ಯಾರೂ ದಯವಿಟ್ಟು ತಿಳಿದುಕೊಳ್ಳಬಾರದು. ಸದೋಷವಾದ ಕಾಲಗಣನೆಯನ್ನು ಅವಲಂಬಿಸಿ ಮಾಡಿಕೊಂಡಿರುವ ತಮ್ಮ ಅಭಿಪ್ರಾಯ ಗಳನ್ನು ಶ್ರೀ ಕಾರಂತರು ಬದಲಾಯಿಸಿಕೊಳ್ಳಬಹುದೆಂದು ನಂಬುತ್ತೇನೆ.