ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ದೃಶ್ಯ ಪ್ರಯೋಗದ ಶಾಸ್ತ್ರೀಯತೆ / ೩೭

ವೈಶಿಷ್ಟ್ಯಗಳನ್ನು ಅಳವಡಿಸಿಕೊಂಡು ರೂಢಿಗೆ ಬಂದ ನವೀನ ಪದ ಸಾಹಿತ್ಯವಾದ ಧ್ರುವಾದಿ ಪ್ರಬಂಧಗಳನ್ನೂ ಸಲಕ್ಷಣವಾಗಿ ನಿರೂಪಿಸಿದ್ದಲ್ಲದೆ 'ಗಾಂಧರ್ವಂ ಮಾರ್ಗಃ ಗಾನಂ ದೇಶೀ' ಎಂದು ಸಾರಿದನು. ಚಿರಪರ್ಯುಷಿತವಾದ ಮಾರ್ಗ ಪದ್ಧತಿಯನ್ನು ಪ್ರತ್ಯೇಕಿಸಿ ಹಿಂದುಳಿಸಿ ದೇಶೀಯ ಪದ್ಧತಿಯ ಗಾನವನ್ನೇ ಮುಂದಕ್ಕೆ ತಂದು ಗಾನಕ್ಕೂ 'ದೇಶಿ'ಗೂ ಭಿನ್ನತ್ವವಿಲ್ಲವೆಂದನು. ಪ್ರಬಂಧಗಳಲ್ಲಿಯೂ 'ಏಲಾದಿಃ ಶುದ್ಧ ಇತ್ಯುಕ್ತೋ ಧ್ರುವಾದಿಃ ಸಾಲಗೋ ಮತಃ' ಎಂದು ಲೋಕರೂಢಿಯನ್ನನುಸರಿಸಿ ಸ್ಥೂಲವಾದ ಎರಡು ಭೇದಗಳನ್ನಾಗಿ ವಿಂಗಡಿಸಿ, ಅವುಗಳ ಅವಾಂತರ ಭೇದಗಳಿಗೆಲ್ಲ ಪ್ರತ್ಯೇಕ ಲಕ್ಷಣಗಳನ್ನು ವಿಸ್ತರಿಸಿ ನಿರೂಪಿಸಿದನು. ಸಂಗೀತ ಪ್ರಪಂಚದಲ್ಲಿ ಶಾರ್ಙ್ಗದೇವನು ಮಾಡಿರುವ ಶಾಸ್ತ್ರೀಯ ವಿಶ್ಲೇಷಣೆಯ ಮಹತ್ವಕ್ಕೂ, ಸಮಗ್ರ ಭಾರತ ವರ್ಷದ ನಾನಾ ದೇಶಗಳಲ್ಲಿ ಸ್ವಾಭಾವಿಕವಾಗಿಯೂ ವಿದೇಶೀಯ ಸಂಸ್ಕೃತಿಯ ಸಂಪರ್ಕದಿಂದಲೂ ಬಹುಧಾ ಭಿನ್ನವಾಗಿದ್ದ ದೇಶೀಯ ಗಾನ ಸಂಪ್ರದಾಯಗಳನ್ನೆಲ್ಲ ಒಂದೂ ಬಿಡದಂತೆ ಸಂಗ್ರಹಿಸಿ, ಅವುಗಳಿಗೆಲ್ಲ ವಿಶಿಷ್ಟ ಲಕ್ಷಣಗಳನ್ನು ನಿರೂಪಿಸಿದ ಅವನ ಮಹಾ ಸಾಹಸಕ್ಕೂ ಅವನ ಚಿಕಿತ್ಸಕ ಬುದ್ಧಿ ಸಾಮರ್ಥ್ಯಕ್ಕೂ ಅವನ ಶಾಸ್ತ್ರೀಯ ವಿಮರ್ಶಾ ಪಾಂಡಿತ್ಯಕ್ಕೂ ಯಾವ ಕಾಲದಲ್ಲಿಯೂ ಯಾರೂ ಬೆರಗಾಗಬೇಕು. ಅವನನ್ನು ನಾದ ವೇದದ ವ್ಯಾಸನೆಂದು ಕರೆದರೂ ಕಡಿಮೆಯೇ, ಅವನೇ ಸಂಗೀತಶಾಸ್ತ್ರವನ್ನು, 'ಲಕ್ಷ ಪ್ರಧಾನಂ ಖಲು ಶಾಸ್ತ್ರ ಮೇತತ್' ಎಂದು ಹೇಳಿ ಬದಲಾವಣೆ ಹೊಂದುವ ಲಕ್ಷ್ಯಕ್ಕನುಗುಣವಾಗಿ ಶಾಸ್ತ್ರದ ಲಕ್ಷಣಗಳೂ ಹೆಚ್ಚು ಕಡಿಮೆಯಾಗುತ್ತ ಹೋಗಬೇಕೆಂದು ಸೂಚಿಸಿರುವಂತೆಯೇ ಅವನ ಉತ್ತರ ಕಾಲದಲ್ಲಿ ಹುಟ್ಟಿದ ಅನೇಕ ಸಂಗೀತ ಶಾಸ್ತ್ರ ಗ್ರಂಥಗಳಲ್ಲಿ ರಾಗಾದಿಗಳ ಲಕ್ಷಣಗಳಲ್ಲಿಯೂ ಹೆಸರುಗಳಲ್ಲಿಯೂ ಎಷ್ಟೆಷ್ಟೋ ಮಾರ್ಪಾಡುಗಳಾಗಿವೆ.

ಹೀಗೆ ಭಿನ್ನ ಸಂಪ್ರದಾಯ ಲಕ್ಷಣಗಳನ್ನು ನಿರೂಪಿಸುತ್ತ ಬಂದಿರುವ ಸಂಗೀತ ಶಾಸ್ತ್ರ ಗ್ರಂಥಗಳಲ್ಲಿ ಅರ್ವಾಚೀನತಮವಾದ ಪ್ರಸಿದ್ಧ ಲಕ್ಷಣ ಗ್ರಂಥವು ವೆಂಕಟಮಖಿಯ 'ಚತುರ್ದಂಡೀ ಪ್ರಕಾಶಿಕೆ' ಎಂಬುದು. ಪ್ರಚಲಿತ ಸಂಗೀತ ಪದ್ಧತಿಗೆ ಮೂಲಾಧಾರ ಎಂದೆನ್ನಲಾಗುವ ಗ್ರಂಥವಿದು. ಆಧುನಿಕ ಪದ್ಧತಿಯು ಕೆಲಮಟ್ಟಿಗೆ ಅವನ ಲಕ್ಷಣಗಳಿಂದಲೂ ಭಿನ್ನವಾದ ದಾರಿಯನ್ನು ಅನುಸರಿಸುತ್ತಿದೆ ಎಂಬುದು ಪ್ರಕೃತ ಲಕ್ಷಿಸಬೇಕಾದ ವಿಚಾರ. ಆತನು ಹೊಸತಾಗಿ ನಿರೂಪಿಸಿದ ಎಪ್ಪತ್ತೆರಡು ಮೇಳಕರ್ತರಾಗಗಳೂ ಜನ್ಯರಾಗಗಳೂ ಆತನ ಕಾಲದಲ್ಲಿ ರೂಢಿಯಲ್ಲಿರಲಿಲ್ಲವಾದರೂ ತದನಂತರ ಆಧುನಿಕ ಸಂಗೀತದ ತ್ರಿಮೂರ್ತಿಗಳೆಂದು ಪ್ರಸಿದ್ಧವಾದ ತ್ಯಾಗರಾಜರು, ದೀಕ್ಷಿತರು, ಶ್ಯಾಮ ಶಾಸ್ತ್ರಿಗಳು ಬಹುಮಟ್ಟಿಗೆ ಆತನ ಪದ್ಧತಿಯನ್ನು ರೂಢಿಗೆ ತಂದವರು. ಆ ರೂಢಿಯೇ ಇಂದಿನ ಸಂಗೀತ ಸಂಪ್ರದಾಯ. ವೆಂಕಟಮಖಿಯಿಂದ ಹಿಂದಿನ ಕಾಲದಲ್ಲಿ ನಮ್ಮ ಕರ್ಣಾಟಕ ಸಂಗೀತದ ಗಾನ ಸಂಪ್ರದಾಯವೂ, ರಾಗ ಲಕ್ಷಣಗಳೂ, ರಾಗದ ಹೆಸರುಗಳೂ, ಪ್ರಬಂಧದ ಸ್ವರೂಪಗಳೂ ಇಂದಿರುವುದಕ್ಕಿಂತ ಬಹಳ ಮಟ್ಟಿಗೆ ಭಿನ್ನವಾಗಿದ್ದುವು. ಆದ್ಯ ನರಹರಿದಾಸರಿಂದ ಪುರಂದರದಾಸರು, ಕನಕದಾಸರು, ತಾಳಪಾಕಂ ಅಣ್ಣಮಾಚಾರ್ಯರು ಮುಂತಾದ ಪ್ರಸಿದ್ಧ ವಾಗ್ಗೇಯಕಾರರ ಕಾಲದಲ್ಲಿ ನಮ್ಮ ಸಂಗೀತದ ಸಂಪ್ರದಾಯವು ಹೇಗಿತ್ತೆಂಬುದನ್ನು ಸಂಗೀತ ರತ್ನಾಕರದ ವ್ಯಾಖ್ಯಾನಕಾರನಾದ ಕಲ್ಲಿನಾಥ, ಪುಂಡರೀಕ ವಿಠಲ, ರಾಮಾಮಾತ್ಯ, ದಾಮೋದರ ಪಂಡಿತ ಮುಂತಾದವರ ಶಾಸ್ತ್ರ ಗ್ರಂಥಗಳಲ್ಲಿ ಕಾಣುವ ಲಕ್ಷಣಗಳಿಂದ ಮಾತ್ರ ಊಹಿಸಬೇಕಷ್ಟೆ ಅಲ್ಲದೆ ಅಂದಿನ ಲಕ್ಷ್ಯವು ಇಂದು ಕಣ್ಮರೆಯಾದಂತಿದೆ. ವೆಂಕಟಮಖಿಯ ತಂದೆಯಾದ ಗೋವಿಂದ ದೀಕ್ಷಿತನು ತನ್ನ ಶಾಸ್ತ್ರ ಗ್ರಂಥದಲ್ಲಿ ವಿದ್ಯಾರಣ್ಯ ಸ್ವಾಮಿಗಳ ಮತವನ್ನು ನಿರೂಪಿಸಿದ ಭಾಗದಿಂದಲೂ ಪೂರ್ವ