ಸಮುದ್ರನು ಚೆನ್ನಾಗಿ ತಿಳಿದವನಾಗಿದ್ದುದರಿಂದ, ಚಂದ್ರಮತಿಗೆ ಯಾವಾಗಲೂ ಶ್ರಮೆಯೆಂದು ತೋರದಂತೆ ಒಳ್ಳೆಯ ಮಾತುಗಳನ್ನಾಡಿ ಪ್ರೋತ್ಸಾಹಪಡಿಸಿ ಉಪಾಯವಾಗಿ ಓದಿಸುತ್ತೆ, ಸ್ವಲ್ಪ ಕಾಲ ಆಡುವುದಕ್ಕೆ ಬಿಟ್ಟು ಆ ಆಟದಲ್ಲಿಯೂ ಆವುದೋ ಒಂದು ಉಪಯುಕ್ತವಾದ ವಿಷಯವನ್ನೇ ಕಲಿಸುತ್ತಿದ್ದನು; ಮಕ್ಕಳಿಗೆ ಗೊಂಬೆಗಳನ್ನು ನೋಡುವುದರಲ್ಲಿ ಅತ್ಯುತ್ಸಾಹ ವೆಂಬುದನ್ನರಿತು, ಗೋಡೆಯಲ್ಲಿ ಚಿತ್ರಪಟಗಳ ಬಳಿಗೆ ಅವಳನ್ನು ಆಗಾಗ ಕರೆದುಕೊಂಡುಹೋಗಿ, ಅಲ್ಲಿಯ ಕಲ್ಲುಕಂಭಗಳ ಮೇಲೆಯೂ ಕೆತ್ತಲ್ಪಟಿದ್ದ ವಿಗ್ರಹಗಳನ್ನು ತೋರಿಸಿ ಅವುಗಳ ವಿಷಯದಲ್ಲಿ ವಿನೋದಕರಗಳಾದ ಕೆಲವು ಕಥೆಗಳನ್ನು ಹೇಳಿ ತನ್ಮೂಲವಾಗಿಯೂ ನೀತಿಯನ್ನು ಕಲಿಸುತ್ತಿದ್ದನು. ಆ ಬಾಲೆಯು ಗ್ರಹಿಸಲಾರದಂತಹ ವಿಷಯವನ್ನೆಂದೂ ಆತನು ಹೇಳುತ್ತಿರಲಿಲ್ಲ; ಹೇಳಿದುದರ ಅರ್ಧವೇ ತಿಳಿಯದಂತೆ ಕುರುಡು ಪಾಠವಾಗಿ ಒಂದು ಪದ್ಯವನ್ನಾಗಲಿ ಹಾಡನ್ನಾಗಲಿ ಹೇಳಿಕೊಡಲಿಲ್ಲ. ಓದಿಸಿದ ವ್ಯಾಕರಣಾದಿಲಕ್ಷಣಗಳೊಡನೆ ಭಾಷಾಭಿವೃದ್ಧಿಗೋಸುಗ ಲಕ್ಷಗಳನ್ನೂ ಕಲಿಸಿ ಓದಿದುದೆಲ್ಲವೂ ಪ್ರಯೋಜನಕರವಾಗುವಂತೆ ಮಾಡಿದನು. ಬುದ್ಧಿವಿಕಾಸವೂ, ವಿಭಾಗಜ್ಞಾನವೂ ಉಂಟಾಗಲೆಂಬ ಅಭಿಪ್ರಾಯದಿಂದ, ಸಾಧಾರಣವಾಗಿ ಗೃಹಕೃತ್ಯವನ್ನು ನಿರ್ವಹಿಸುವುದಕ್ಕೆ ಬೇಕಾಗುವುದಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಗಣಿತಶಾಸ್ತ್ರವನ್ನು ಕಲಿಸಿದನು. ಮುಂದೆ ಸಂಸಾರ ಭಾರವೆಲ್ಲ ಮೇಲೆ ಬಿದ್ದು ಅನೇಕ ಕಷ್ಟಗಳು ಸಂಭವಿಸಿ ಶರೀರವನ್ನು ಧರಿಸಿರುವುದೇ ದುಸ್ಸಹವಾಗಿ ತೋರುವಂತಹ ಕಾಲದಲ್ಲಿ ಮನಸ್ಸಿಗೆ ಉಲ್ಲಾಸವನ್ನೂ, ವಿಶ್ರಾಂತಿಯನ್ನೂ ಉಂಟುಮಾಡುವುದಕ್ಕೋಸುಗ ಗಾನವಿದ್ಯಾಭ್ಯಾಸವನ್ನು ಮಾಡಿಸಿ ಭಕ್ತಿರಸಪುಷ್ಟಗಳಾದ ಹಾಡುಗಳನ್ನೂ, ಪದ್ಯಗಳನ್ನೂ ಬಗೆಬಗೆಯ ರಾಗಗಳಿಂದ ಕಿವಿಗಿಂಪಾಗಿರುವಂತೆ ಹಾಡುವುದಕ್ಕೂ ಸಾಮರ್ಥ್ಯವನ್ನುಂಟುಮಾಡಿದನು. ಲೋಕದಲ್ಲಿ ಸಾಧಾರಣವಾಗಿ ಬಾಲಕರಾಗಲಿ ಬಾಲಕಿಯರಾಗಲಿ ತಾವು ಕಲಿತುದನ್ನು ಇತರರಿಗೆ ಕಲಿಸತಕ್ಕ ಆಶ್ಚರಕರವಾದ ಸ್ವಭಾವವುಳ್ಳವರಾಗಿರುವರಾದುದರಿಂದ, ಈಗ ಚಂದ್ರಮತಿಯೂ ತಾನು ಗುರುವೆಂದೆಣಿಸಿ ತನ್ನ ಒಡನಾಡಿಯರನ್ನಾಗಲಿ, ಅವರಿಲ್ಲದಿದ್ದರೆ ಗೊಂಬೆ ಮೊದಲಾದುವುಗಳನ್ನಾಗಲಿ ಶಿಷ್ಯರಂತೆ ಏರ್ಪಡಿಸಿಕೊಂಡು, ತಾನು
ಪುಟ:ಚಂದ್ರಮತಿ.djvu/೧೫
ಈ ಪುಟವನ್ನು ಪ್ರಕಟಿಸಲಾಗಿದೆ
೮
ಚ೦ದ್ರಮತಿ.