ಈ ಪುಟವನ್ನು ಪ್ರಕಟಿಸಲಾಗಿದೆ
ಒಂಭತ್ತನೆಯ ಪ್ರಕರಣ
೫೧

ಚಂದ್ರ-ತಮ್ಮ ಅನುಗ್ರಹದಿಂದ ಈಗ ನನಗೆ ಸಮಸ್ತ ಧರ್ಮಗಳೂ ತಿಳಿದುವು. ಆವವಿಷಯದಲ್ಲಿ ಹೇಗೆ ನಡೆದುಕೊಳ್ಳಬೇಕೋ ಲೇಶವಾದರೂ ತಿಳಿಯದೆ ಕುರುಡಿಯಂತಿದ್ದ ನನಗೆ ತಾವು ಜ್ಞಾನೋಪದೇಶಮಾಡಿ ಕಣ್ಣುಗಳನ್ನು ತೆರೆಯಿಸಿ ಕಾವಾಡಿದಿರಿ. ತಮ್ಮ ಋಣದ ಉಪಕಾರವನ್ನು ಹೇಗೆ ತಾನೇ ನಾನು ತೀರಿಸಲಾದೀತು?

ಗುರು- ನಾನು ಹೇಳಿದರೀತಿಯಲ್ಲಿ ನಡೆದುಕೊಳ್ಳುತ್ತೆ ಮುಂದೆ ನೀನು ಹೆಸರನ್ನು ಹೊಂದುವುದೇ ನನ್ನ ಸಾಲಕ್ಕೆ ಪರಿಹಾರ. ಧರ್ಮವನ್ನು ಸುಮ್ಮನೆ ಕೇಳುವುದರಿಂದ ಪ್ರಯೋಜನವೇನೂ ಇಲ್ಲ; ಕೇಳಿದುವುಗಳನ್ನು ಮರೆಯದೆ ಅದರಂತೆ ನಡೆದುಕೊಳ್ಳುವುದರಿಂದ ಇಹಪರಗಳೆರಡರಲ್ಲಿಯೂ ಸಕಲ ಶ್ರೇಯಸ್ಸೂ ಉಂಟಾಗುವುದು. ಕೆಲವರು ಸತ್ಪೃವರ್ತನವುಳ್ಳವರಾಗಿ ಬಾಳುವುದು ಬಹು ಕಷ್ಟಕರವಾದುದೆಂದು ಭಾವಿಸಿರುವರು. ಅಭ್ಯಾಸವಾದ ಬಳಿಕ ಅದರಷ್ಟು ಸುಲಭವಾದ ಕಾರ್ಯವು ಮತ್ತಾವುದೂ ಇಲ್ಲ. ಗೇಣುದ್ದದ ಹೊಟ್ಟೆಗೋಸುಗ ಮಹಾಸಮುದ್ರಗಳನ್ನು ದಾಟಿಯೂ, ಹೊರಲಾರದಷ್ಟು ಭಾರವನ್ನು ಹೊತ್ತೂ, ಪ್ರಾಣದಾಸೆಯನ್ನು ಬಿಟ್ಟು ಯುದ್ದಗಳಲ್ಲಿ ಕಾದಾಡಿಯೂ, ಕಷ್ಟಪಡುವಂಥವರಿಗೆ ಸತ್ಯ, ಶಾಂತತೆ, ಭೂತ ದಯೆ ಇವುಗಳನ್ನು ಹೊಂದಿ ಬಾಳುವುದಸಾಧ್ಯವೆಂದರೆ ಯಾರಾದರೂ ನಗದಿರುವರೆ? ಮನಸ್ಸಿಗೆ ಆಯಾಸವನ್ನುಂಟುಮಾಡಿ ಇಲ್ಲದುದನ್ನು ಹೊಸವಾಗಿ ಕಲ್ಪಿಸಿಕೊಂಡು ಹೇಳುವುದಕ್ಕಿಂತ ನಾಲಗೆಯ ಕೊನೆಯಲ್ಲಿದ್ದು ತನ್ನಷ್ಟಕ್ಕೆ ತಾನೇ ಅಪ್ರಯತ್ನವಾಗಿ ಹೊರಕ್ಕೆ ಬರುವುದಕ್ಕೆ ಸಿದ್ದವಾಗಿರುವ ಸತ್ಯವನ್ನು ಆಡುವುದು ಕಷ್ಟವೆಂದರೆ ಯಾರು ನಂಬಬಲ್ಲರು? ಲೋಕದಲ್ಲಿ ಎಲ್ಲರಿಗೂ ಸಾಧುಗಳನ್ನು ಪ್ರೀತಿಸುವುದೂ ದುಷ್ಟರನ್ನು ದ್ವೇಷಿಸುವದೂ ಸಹಜಗುಣಗಳಾಗಿರುವುವು. ಈಗ ನಾವು ನೋಡುತ್ತಿರುವವರನ್ನು ಮಾತ್ರವೇ ಅಲ್ಲದೆ ಯಾವಾಗಲೋ ಇದ್ದು ಕಧೆಗಳಲ್ಲಿ ಉಕ್ತರಾದ ಯೋಗ್ಯರನ್ನು ಭೂಷಿಸುತ್ತೆ ಅಯೋಗ್ಯರನ್ನು ದೂಷಿಸುತ್ತಿರುವೆವು. ನಮಗೆ ಅಂತಹ ಅಭಿಪ್ರಾಯವುಂಟಾಗುವುದಕ್ಕೆ ಯೋಗ್ಯರು ನಮಗೆ ಮಾಡಿದ ಅಪಕಾರವಾವುದು? ಅಯೋಗ್ಯರು ಮಾಡಿದ ಅಪಕಾರವಾವುದು? ಜನರು ಆಯಾ ಜನರನ್ನು ಪ್ರೀತಿಸುವುದಕ್ಕೂ ದ್ವೇಷಿಸುವುದಕ್ಕೂ ಅವರವರ ಸುಗುಣ