ಈ ಪುಟವನ್ನು ಪ್ರಕಟಿಸಲಾಗಿದೆ
೬೪
ಚ೦ದ್ರಮತಿ.

ನಕ್ಷತ್ರಕನು ಮಾರ್ಗದಲ್ಲಿ ಮಲಗಿಬಿಟ್ಟು, ತಾನು ಇನ್ನು ಮುಂದೆ ಬರಲಾರೆನೆಂದೂ, ಬಲು ಬಾಯಾರಿಕೆಯುಂಟಾಗಿರುವುದೆಂದೂ ಚಲವಿಡಿದು ಕುಳಿತನು. ಆ ರಾಜದಂಪತಿಗಳು ತಮ್ಮ ಪುತ್ರನನ್ನು ಕೆಳಗಿಳಿಸಿ ನಡೆಯಿಸುತ್ತ ಈ ನಕ್ಷತ್ರಕನನ್ನು ತಮ್ಮ ಹೆಗಲಮೇಲೆ ಹೊತ್ತುಕೊಂಡು ಮುಂದೆ ಹೊರಟು ತಣ್ಣೆಳಲಿಂದ ಮನೋಹರವಾದ ಒಂದು ಆಲದ ಮರದ ಕೆಳಗೆ ಮಲಗಿಸಿದರು. ಆಗ ಚಂದ್ರಮತಿಯು ತನ್ನ ಸೆರಗಿನಿಂದ ನಕ್ಷತ್ರಕನಿಗೆ ಗಾಳಿಹಾಕುತ್ತ ಉಪಚರಿಸುತ್ತಿರಲು, ಹರಿಶ್ಚಂದ್ರನು ನಕ್ಷತ್ರಕನಿಗೋಸುಗ ಸಿಹಿನೀರನ್ನು ತರಬೇಕೆಂದು ಎಲ್ಲಿಯೋ ಹೊರಟುಹೋದನು. ಬಳಿಕ ನಕ್ಷತ್ರಕನು ಎದ್ದು ಕುಳಿತುಕೊಂಡು ಚಂದ್ರಮತಿಯೊಡನೆ ಪ್ರಸಂಗಿಸಲಾರಂಭಿಸಿದನು.

ನಕ್ಷ-ಅಮ್ಮ! ನೀನು ಆಗರ್ಭ ಶ್ರೀಮಂತರಾದ ಮಾತಾಪಿತೃಗಳ ಹೊಟ್ಟೆಯಲ್ಲಿ ಜನಿಯಿಸಿದೆ. ಬಾಲ್ಯದಲ್ಲಿ ಬಹುಮಂದಿ ಪರಿಚಾರಿಣಿಯರಿಂದ ಸೇವಿತಳಾಗಿ ಕಷ್ಟವೆಂತಹುದೆಂಬುದನ್ನರಿಯದೆ ಬೆಳದೆ. ಇಂತಹ ನಿನಗೆ ಈತನನ್ನು ಮದುವೆಯಾದುದರಿಂದ ಘೋರಾರಣ್ಯಗಳಲ್ಲಿ ಹಲವು ಬಗೆಯ ಕಷ್ಟಗಳನ್ನನುಭವಿಸಬೇಕಾದ ಗತಿಯು ಸಂಭವಿಸಿತಲ್ಲಾ!

ಚ೦ದ್ರ-ಎಲಾ! ಹುಚ್ಚನೇ! ಪತಿಯಸಾನ್ನಿಧ್ಯದಲ್ಲಿರುವ ನನಗೆ ಇದಾವುದೂ ಕಷ್ಟವಲ್ಲ. ಮಹಾರಾಜನ ಪುತ್ರಿಯೇ ಆಗಿದ್ದರೂ ಪತ್ನಿಯು ಪತಿಗೆ ಪರಿಚಾರಿಣಿಯೇ ಅಲ್ಲವೆ? ರಾಜ್ಯವನ್ನು ಕಳೆದುಕೊಂಡು ಅಡವಿಗಳಲ್ಲಿ ಅಲೆಯುತ್ತಿರುವುದರಿಂದಲೇ ಈಗ ನನ್ನ ಪತಿಯ ಸೇವೆಯನ್ನು ನಾನೇ ಮಾಡುವಂತಹ ಭಾಗ್ಯವುಲಭಿಸಿರುವುದು. ಎಂತಹ ಕಷ್ಟವನ್ನಾದರೂ ಸಹಿಸಿಕೊಂಡು ನೀತಿ ಬಾಹಿರನಾಗದೆ ಇರುವಂತಹ ಪತಿಯನ್ನು ಹೊಂದಿರುವುದರಿಂದ ಲೋಕದಲ್ಲಿ ನನಗಿಂತ ಧನ್ಯಳಾದ ಸ್ತ್ರೀಯು ಮತ್ತಾವಳಿರುವಳು?

ನಕ್ಷ-ಅಮ್ಮಾ! ನೀನು ನನಗೋಸುಗ ಪಡುತ್ತಿರುವ ಭ್ರಮೆಯನ್ನು ಕಂಡು ನಾನು ಮೆಚ್ಚಿದೆನು. ನನ್ನ ಮಾತನ್ನು ಕೇಳಿ ನೀನೂ ನಿನ್ನ ಮಗನೂ ಅಯೋಧ್ಯೆಗೆ ಬನ್ನಿರಿ. ನಾನು ವಿಶ್ವಾಮಿತ್ರರಿಗೆ ತಿಳಿಸಿ ನಿನ್ನ ಮಗನಿಗೇ ಪಟ್ಟಾಭಿಷೇಕವನ್ನು ಮಾಡಿಸುವೆನು.