ಚಂದ್ರ-ನನಗೆ ಪತಿಯ ಸಾನ್ನಿಧ್ಯವೇ ಸರ್ವಸೌಖ್ಯಪ್ರದವು. ಆತನೆಲ್ಲಿರುವನೋ ನಾನೂ ಅಲ್ಲಿಯೇ ಇರತಕ್ಕವಳು. ಪತಿಯನ್ನಗಲಿದ್ದಪಕ್ಷದಲ್ಲಿ ದಿವ್ಯಮಂದಿರಗಳೆಲ್ಲವೂ ನನಗೆ ಮಹಾರಣ್ಯಗಳಾಗುವುವು. ಈಗ ನೀನಾಡಿದುದು ಅಂತಿರಲಿ, ಇನ್ನು ಮುಂದೆ ನೀನೆಂದೂ ನನ್ನೊಡನೆ ಇಂತಹ ಮಾತುಗಳನ್ನಾಡಬೇಡ.
ಚಂದ್ರಮತಿಯ ಮಾತು ಮುಗಿದೊಡನೆಯೇ ಹರಿಶ್ಚಂದ್ರನು ಸಿಹಿ ನೀರನ್ನು ತೆಗೆದುಕೊಂಡುಬಂದು ನಕ್ಷತ್ರಕನಿಗೆ ಕೊಟ್ಟನು. ಇಷ್ಟರಲ್ಲಿ ಕಾಳ್ಗಿಚ್ಚು ನಾಲ್ಕುದಿಕ್ಕನ್ನೂ ವ್ಯಾಪಿಸಿ ಅಂತರಿಕ್ಷವನ್ನು ಸೋ೦ಕುತ್ತಿರುವ ಜ್ವಾಲೆಗಳಿಂದ ಅವರಿದ್ದ ಪ್ರದೇಶವನ್ನೂ ಸುಡತೊಡಗಿತು. ಹರಿಶ್ಚಂದ್ರನು ಆವದಿಕ್ಕಿಗೆ ಹೋಗುವುದಕ್ಕೂ ಏನುಮಾಡುವುದಕ್ಕೂ ತಿಳಿಯದೆ ಕಳವಳಿಸುತಿದ್ದನು. ಅಷ್ಟರಲ್ಲಿ ಚಂದ್ರಮತಿಯು ಪತಿಯ ಸಮೀಸಕ್ಕೆ ಬಂದು" ನೀವು ನನಗೋಸುಗ ಚಿ೦ತಿಸದೆ ಮೊದಲು ಈ ಬ್ರಾಹ್ಮಣಕುಮಾರನನ್ನು ಹೊರಕ್ಕೆ ಬಿಟ್ಟು ಪ್ರಾಣರಕ್ಷಣೋಪಾಯವನ್ನು ಮಾಡಿರಿ, ಸಾಧ್ಯವಾದರೆ ಲೋಹಿತಾಸ್ಯನನ್ನೂ ರಕ್ಷಿಸಿ, ನನಗೆ ಆಯುಷ್ಯವಿದ್ದು ನಿಮ್ಮ ಸೇವೆಯನ್ನು ಮಾಡುವ ಭಾಗ್ಯವು ಸ್ಥಿರವಾಗಿರುವುದಾದರೆ ಹಿಂದೆಯೇ ನಾನೂ ಬಂದು ನಿಮ್ಮನ್ನು ಸೇರುವೆನು. ಹಾಗಿಲ್ಲದಿದ್ದರೆ ಈ ಯಜ್ಞೇಶ್ವರನಿಗೆ ಆಹಾರವಾಗಿ ಪುಣ್ಯ ಲೋಕವನ್ನು ಸೇರುವೆನು" ಎಂದು ನುಡಿಯಲು ಹರಿಶ್ಚಂದ್ರನಿಗೆ ದುಃಖವು ಮಿತಿಮೀರಿತು. ಮುಳ್ಳು ಚುಚ್ಚಿಕೊಂಡು ಬಾಧೆಪಡುತ್ತಿರುವ ಹೆಂಡತಿಯನ್ನು ಅಗಲಲಾರದೆ ಆಗಳಾತನು ಅತ್ಯಂತ ಶೋಕಾಕ್ರಾಂತನಾದನು. ಇಷ್ಟರಲ್ಲಿ ದೈವಾನುಗ್ರಹದಿಂದ ಗಾಳಿಯು ಮತ್ತೊಂದು ದಿಕ್ಕಿಗೆ ಬೀಸಿದುದರಿಂದ ಉರಿಯು ಬೇರೆ ದಿಕ್ಕಿಗೆ ತಿರುಗಿ ಇವರಿದ್ದ ಪ್ರದೇಶವನ್ನು ಬಿಟ್ಟು ಬಿಟ್ಟಿತು. ಹೀಗೆ ಬಹು ಕಷ್ಟಗಳನ್ನನುಭವಿಸುತ್ತೆ ನಿತ್ಯ ಪ್ರಯಾಣಗಳನ್ನು ಮಾಡಿ ಅವರೆಲ್ಲರೂ ಹತ್ತು ದಿನಗಳಲ್ಲಿ ಕಾಶೀಪಟ್ಟಣವನ್ನು ಸೇರಿದರು.