ಈ ಪುಟವನ್ನು ಪರಿಶೀಲಿಸಲಾಗಿಲ್ಲ.




 ೧೫೪                           ನೋವು

      ಅಡುಗೆಯವನು ಟ್ರೇಯಲ್ಲಿ ಉಪಾಹಾರದ ತಟ್ಟೆಗಳನ್ನು ತಂದ.              
      ಹೇಳಲೋ ಬೇಡವೋ ಎಂದು ಎರಡು ಮೂರು ಸಲ ಯೋಚಿಸಿದ ಬಳಿಕ ಧೈರ್ಯ 
  ತಂದುಕೊಂಡು. " ವಿಷ್ಣುಮೂರ್ತಿಗಳೇ, ನೀವು ಎರಡು ತಪ್ಪುಗಳು ನಿಮ್ಮಿಂದ ಆಗಿವೆ 
  ಅಂದಿರಿ. ಇನ್ನೊಂದನ್ನೂ ಹೇಳಬೇಕಾಗಿತ್ತು!" ಎಂದರು ಶ್ರಿನಿವಾಸಯ್ಯ.
      ತಟ್ಟೆಗಳನ್ನು ನೋಡಿದೊಡನೆ ವಿಷ್ಣುಮೂರ್ತಿಯವರಿಗೂ ಅದು ಹೊಳೆದಿತ್ತು.      
      "ಹೌದಲ್ಲ!ಶಕ್ತ್ಯನುಸಾರ ಭಕ್ತಿ ಅಂತ ಏನೋ ತಿಂಡಿತೀರ್ಥ ಮಾಡಿದ್ವಿ.ರಾಯರಲ್ಲೂ 
  ಈ ಕಾರ್ಯಕ್ರಮ ಇದೆ ಅನ್ನೋದನ್ನ ಮರೀಬಾರದಾಗಿತ್ತು."
      ಮೋಹನರಾಯರು ನಸುನೆಕ್ಕು ಅಂದರು :
      "ದೊಡ್ತದಲ್ಲ ವಿಷ್ಣುಮೂರ್ತಿಗಳೇ.  ಇದು ಅಲ್ಪೋಪಹಾರ.  ಯಾವ ಲೆಕ್ಕಕ್ಕೆ ? 
  ತಗೊಳ್ಳಿ ಶ್ರಿನಿವಾಸಯ್ಯನವರೇ.  ತಗೊಳ್ಳಿ ಪದ್ಮನಾಭರಾವ್. ತಗೊಳ್ಳೀಪ್ಪಾ."
      ನೀಡಿದುದನ್ನು ಸ್ವೀಕರಿಸುವುದರ ಹೊರತು ಬೇರೆ ಧಾರಿ ಇರಲಿಲ್ಲ. 
      ಮೋಹನರಾಯರ ಪತ್ನಿ  ಮಗಳೊಡನೆ  ಬಂದರು.  ಆರತಿ  ಈಗ  ವಿಲಾಸಿನಿಯಲ್ಲ 
  ವಧುಪರೀಕ್ಷೆಯಲ್ಲವೆ ಅದು?  ಬಹಳ ಬೆಲೆಯ ರೇಷ್ಮೆ ಸೀರೆಯನ್ನು ಮೈತುಂಬ ಹೊದೆದ. 
  ಕೊಂಡು,ಗಂಭೀರವಾಗಿ ಆ ಲತಾಂಗಿ ಬಂದ ರೀತಿ ಶ್ರಿನಿವಾಸಯ್ಯನವರಿಗೆ ಮೆಚ್ಚುಗೆಯಾಯಿತು 
  ನಿರಾಶೆಯಾದುದು ಪದ್ಮನಾಭನಿಗೆ.ಅವನೆಂದುಕೊಂಡ. ಒಳ್ಳೆಯ ವಾಕಿಂಗ್ ಸ್ಟಿಕ್. ಪ್ರಮದೆ- 
  ಸುಬ್ಬಿ-ಕನಕಲತೆಯರಿಗೂ ಈಕೆಗೂ ಧ್ರುವಗಳ ಅಂತರ...
      ಅದರೆ ಅ ಕಣ್ಣುಗಳು! ತುಟಿಗಳು! 
      ಆರತಿ ಕಳ್ಳ ನೋಟದಿಂದ ಅವನನ್ನು ನೋಡುವುದರಲ್ಲಿ ನಿರತಳಾಗಿದ್ದಳು : ವುಲ್ಲನ್ 
  ಪ್ಯಾಂಟ್ ಬುಶ್ ಶರ್ಟಿನ ಕೆಂಪನೆಯ ಹುಡುಗ...
      ಅವರ ನೋಟಗಳು ಸಂಧಿಸಿದಾಗ ಪದ್ಮನಾಭನಿಗೆ ರೋಮಾಂಚವಾಯಿತು. [ಅವಳಿಗೂ 
  ಅಷ್ಟೆ.]  ಅವನ ನಿರಾಶೆ ಸಮಾಧಾನಕ್ಕೆ ಎಡೆಮಾಡಿಕೊಟ್ಟಿತು.
      "ಆರತೀನ ಏನಾದರೂ ಕೇಳೋದಿದ್ದರೆ ಕೇಳಬಹುದು," ಎಂದರು ಮೋಹನರಾಯರು. 
      ಲಾಯರ್   ರಾಯರು  ಆ   ಸನ್ನಿವೇಶದಲ್ಲಿ   ವಿಚಾರಣೆಯನ್ನು   ಮುನ್ನೆಡೆಸುವ  
  ನ್ಯಾಯಾಧೀಶರಾಗಿದ್ದರು.
      ಆದರೆ  ವಕೀಲರಾಗಿ ಪ್ರಶ್ನೆಗಳ ಮಳೆ ಸುರಿಸಲು ಶ್ರಿನಿವಾಸಯ್ಯ ಸಿದ್ಧರಿರಬೇಕುಲ್ಲ  ? 
      "ಛೆ ! ಛೆ ! ಕೇಳೋದು ಏನೂ ಇಲ್ಲ," ಎಂದರು.
      ಅಷ್ಟರತನಕ ಪ್ರಯಾಸದಿಂದ ತುಟಿಗಳನ್ನು ಬಿಗಿಹಿಡಿದಿದ್ದ ವಿಷ್ಣುಮೂರ್ತಿಯವರಿಗೆ 
  ಮಾತಿನ ಆಕ್ಷಿ ಬಂತು.
      "ನಾನೊಂದು ಹೇಳ್ಲಾ ಶ್ರಿನಿವಾಸಯ್ಯನವರೇ. ಈಗಿನ ಕಾಲ್ದಲ್ಲಿ ಹುಡುಗ-ಹುಡುಗಿ 
  ಮದುವೆಗೆ ಮುಂಚೆ ಪರಸ್ಪರ ಮಾತನಾಡೋದು ತಪ್ಪಲ್ಲ. ಬೇಕಿದ್ದರೆ ಪದ್ಮನಾಭರಾಯರೂ 
  ಮೋಹನರಾಯರ ಮಗಳೂ ಒಂದೈದು ನಿಮಿಷ..."
       ಶ್ರಿನಿವಾಸಯ್ಯ ಅಂದರು : 
  " ಛೆ ! ಛೆ ! ಅದರ ಅಗತ್ಯ ಏನು? ... ಅಲ್ಲಾ, ಅದೂ ಸರೀನೇ ಅನ್ನಿ."
  ತೀರ್ಪಿತ್ತರು ಮೋಹನರಾಯರು :