ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಆದರೆ, ' ವಿಜೃಂಭಣೆಯಿಂದ ಜರಗಿತು' ಎಂದು ಬರೆಯಲು ಮಳೆ ಬಿಡಬೇಕಲ್ಲ. ಶ್ರೀನಿವಾಸಯ್ಯನವರ ಮನೆಯಲ್ಲಿ ಊಟವಾದೊಡನೆಯೇ ಗಜಾನನ ಹೊಗೆಯಟ್ಟದಿಂದ ಕೆಳಗಿಳಿಸಿದ ಕೊಡೆಯನ್ನು ಪಡೆದು, ಹೆಂಡತಿಯನ್ನೂ ಮಗುವನ್ನೂ ಕರೆದುಕೊಂಡು, " ನೀವು ಸ್ವಲ್ಪ ಮುಂಚೇನೇ ಬಂದ್ಭಿಡಿ, ಗೋವಿಂದರಾವ್ " ಎಂದು ಹೇಳಿ ತನ್ನ ಭವನಕ್ಕೆ ಹೋದ. ಕಾವಲಿಗೆಂದು ಗೋವಿಂದನ ಮನೆಯ ಬೀರನನ್ನು ಅಲ್ಲಿ ಬಿಟ್ಟಿದ್ದ ಗಜಾನನ. - ಮಳೆ ಹನಿಯತೊಡಗಿದಾಗ ಸುತ್ತುಮುತ್ತಲಿಂದ ಮೂವರು ನಾಲ್ವರು ಬಂದು ಬೀರನಿಗೆ ಜತೆಯಾಗಿದ್ದರು: ವೆಂಕಟಪ್ಪನಲ್ಲಿಂದ ಕೊಂಡುತಂದಿದ್ದ ಬೀಡಿಗಳನ್ನು ಸೇದಿ ಮುಗಿಸಿದ್ದರು. - - ವಿಫ್ನೇಶ್ವರನ ಹೆಸರು ಹೊತ್ತ ಭವನವೆಂದು ಮಳೆಗೆ ಕನಿಕರವೆ? ಮನೆಯೊಳಗೆಲ್ಲ ನೀರು. ಕೈಗೂಸಿಗೆಲ್ಲಿ ನೆಗಡಿಯಾಗುವುದೋ ಎಂಬ ಭಯ ಗಜಾನನ ಹೆಂಡತಿ ಜಲಜೆಗೆ. ಸ್ವಲ್ಪ ಹೊತ್ತಿಗೆ ಹಿಂದೆ ಶ್ರೀನಿವಾಸಯ್ಯನವರ ಮನೆಯಲ್ಲಿ ನಗರದಿಂದ ಬಂದವರನ್ನು ನೋಡುತ್ತ ಸಂತುಷ್ಟಳಾಗಿದ್ದ ಜಲಜಾ, ಈಗ ಅತ್ಯಂತ ವ್ಯಥಿತೆ. " ಇದೆಂಥಾ ಗ್ರಹಾಚಾರ ಅಂದ್ರೆ.... ಹೀಗೂ ಉಂಟೆ? ನಗರದಲ್ಲೇ ಇದ್ದಿದ್ರೆ ಇಂಥಾ ಅವಸ್ಥೆಯಾಗ್ತಿತ್ತೆ? ಅಯ್ಯೋ... ಗಜಾನನನಿಗೆ ಸಿಟ್ಟು ಬಂತು. " ಒಳ್ಳೇ ದಿವಸ ಅಬದ್ದ ಮಾತಾಡ್ಬೇಡ. ನನಗೋಸ್ಕರ ಈ ಸ್ವರ್ಗಕ್ಕೆ ಬಂದದ್ದು ಅಂದ್ಕೋ‍ಂಡಿಯಾ? ಮಗೂಗೆ ಬೆಚ್ಚಗೆ ಹೊದಿಸಿ ಒಳಗೆ ಎಲ್ಲಾದರೂ ಮಲಗಿಸು. ಸೋರಿರೋ ನೀರೆಲ್ಲಾ ಹಿಂಡಿ ತೆಗಿ. ಉಪ್ಪಿಟ್ಟು ಕೇಸರೀಭಾತಾದರೂ ಮಾಡ್ಬೇಕಲ್ಲ?" - ಜಲಜೆ ಒಳಹೋಗಿ ಮಗುವಿನ ಒದ್ದೆ ಫ್ರಾಕನ್ನು ತೆಗೆದು ಇನ್ನೊಂದನ್ನು ಹಾಕಿದಳು. ತೋಯ್ದಿದ್ದ ತನ್ನ ಸೀರೆಯನ್ನು ಬಿಚ್ಚಿ ಆ ಸಂಜೆ ಉಡಬೇಕೆಂದು ಯೋಚಿಸಿದ್ದ ರೇಶಿಮೆ ಸೀರೆಯನ್ನು ಟ್ರಂಕಿನಿಂದ ಹೊರತೆಗೆದು ಉಟ್ಟಳು. ಮೂಲೆಯಲ್ಲಿ ಕುಳಿತು ಮಗುವಿಗೆ ಮೊಲೆಯೂಡಿಸಿದಳು. ಅಲ್ಲಿಯೇ ತಟ್ಟಿ ಮಲಗಿಸಿ, ಕಂಬಳಿ ಹೊದಿಸಿ, ಸೀರೆಯ ನೆರಿಗೆ ಹಿಡಿದು ಮೊಣಕಾಲುಗಳ ಮೇಲಕ್ಕೆ ಎತ್ತಿ ಕಟ್ಟಿ, ಕೆಲಸಕ್ಕೆ ಅಣಿಯಾದಳು. ಬೀರ ಗಜಾನನಿಗೆ ಅಂದ : - "ಈಗ ಯಾನೂ ಮಾಡ್ಬೇಡಿ, ಬುದ್ದಿ. ಈ ಮಳೆ ಚಂಜೇಮಟ ಸುರೀತೈತೆ. ಆಮ್ಯಾಕೆ ಎಲ್ಲಾ ಸರಿಮಾಡಿದ್ರಾಯ್ತು." "ಈ ಮಳೆ ಇನ್ನೊಂದರ್ಧ ಘಂಟೇಲಿ ನಿಲ್ಲೋದಿಲ್ಲ, ಅಂದ್ಯಾ?" ಗಜಾನನ ಕೇಳಿದ. " ಒರಗ್ನೋಡಿ. ಕಾಣ್ಸಾಕಿಲ್ವ ? ಏಸು ಕಪ್ಪಾಗೈತೆ!" - ಮಳೆ ನಿಲ್ಲದೇ ಇದ್ದರೆ ಆಮಂತ್ರಿತರು ಬರುವ ಬಗೆ ಹೇಗೆ? ಬರುತ್ತಾರೆ ಎಂದಿಟ್ಟುಕೊಳ್ಳೋಣ. ಅವರಿಗೆ ಒಂದೊಂದು ಗುಟುಕು ಬಿಸಿ ಕಾಫಿ ಮಾಡಿಕೊಡಲು ಹಾಲು? ಗೋವಿಂದ ಹಾಲಿನ ಸರಬರಾಜಿಗೆ ಒಬ್ಬನನ್ನು ಗೊತ್ತುಮಾಡಿ ಕೊಟ್ಟಿದ್ದ. ಆದರೆ ಆ ಮನುಷ್ಯ ಹಾಲು ತರುವನೆಂಬ ಭರವಸೆ ಏನು? -