ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು


      ಕಟ್ಟುಗಳನ್ನು ಬಿಚ್ಚಿ ಗಜಾನನ ಬೋರ್ಡನ್ನು ಹೊರಕ್ಕೆ ತೆಗೆದಿದ್ದ.  ನಾಲ್ಕಾರು ಬಣ್ಣಗಳನ್ನು ಬಳಸಿ ಬರೆದಿದ್ದ ಅಕ್ಷರಗಳು : ಮೇಲೆ ||ಶ್ರೀ|| ದಪ್ಪಗೆ ವಿಘ್ನೇಶ್ವರ ಭವನ ಕಾಫೀ ಕ್ಲಬ್, ಕೆಳಗೆ ಮಾಲಿಕರ ಹೆಸರು. ಮೂಲೆಯಲ್ಲಿ 'ಪೇಂಟರ್: ವಿ. ಎಸ್. ರಾವ್.'
      “ ಚೆನ್ನಾಗಿದೆ," ಎಂದಿದ್ದ ಗೋವಿಂದ. 
      " ಗಣೇಶ ಭವನದ ಬೋರ್ಡೂ ಇವನೇ ಬರೆದದ್ದು. ಶ್ರೀಪತಿ ಅಂತ." 
      " ಸರಿ.”
      ಯಾವುದೋ ಸಾಮಾನು ತಗಲಿ ಬೋರ್ಡಿನ ಎಡ ಮೂಲೆಯಲ್ಲಿ ಸ್ವಲ್ಪ ತರಚಿಕೊಂಡಿತ್ತು, ಗಜಾನನ ಅದನ್ನು ಬೆರಳುಗಳಿಂದ ಮೃದುವಾಗಿ ಮುಟ್ಟಿದ್ದ, ಒಳಗಿನ ಕಸಿವಿಸಿಯನ್ನು ತೋರ್ಪಡಿಸದೆ.
      ಅದನ್ನು ಗಮನಿಸಿದ ಗೋವಿಂದ ಅಂದಿದ್ದ: 
     " ಮೂಲೇಲಿ ಬಣ್ಣ ಹೋಗಿರೋದು ಕಾಣಿಸೋದಿಲ್ಲ. ಫಸ್ಟ್ ಕ್ಲಾಸಾಗಿದೆ ಬೋರ್ಡು. ತೂಗಹಾಕೋಕೆ ಕೊಂಡಿಗಳನ್ನೂ ಇಟ್ಟಿದ್ದಾನೆ. ಎಷ್ಟು ರೂಪಾಯಿ?"
     "ಗೊತ್ತಿಲ್ಲ. ವಿಷ್ಣುಮೂರ್ತಿ ಮಾವನೇ ಕೊಟ್ರು. ಹತು ರೂಪಾಯಂತ ಕಾಣುತ್ತೆ." -
     "ಹುಂ, ಕಾಸು ಖರ್ಚಿಲ್ದೆ ಸ್ವಂತದ್ದೊಂದು ಹೋಟ್ಲು ಮಾಡ್ಕೊಂಡೆ, ಅನ್ನು."
     " ಹೆಹ್ಹೆ "
     [ಮಾತನಾಡುತ್ತ ಗೋವಿಂದ ಆಗಾಗ್ಗೆ ಜಲಜೆಯತ್ತ ನೋಡಿದ್ದ. ತಾಯಿಯಾಗಿ ಮರಳಿದ ಮೇಲೆ ಕಣ್ಣಿಗೆ ಹಬ್ಬವಾಗಿದಾಳಲ್ಲಾ ಎನಿಸಿತ್ತು ಅವನಿಗೆ. ನಿರ್ಲಜ್ಜ ನೋಟದಿಂದ ಅವಳನ್ನು ನೋಡುವುದು ತಪ್ಪಲ್ಲ: ಇನ್ನು ಹೇಗೂ ಸಂಬಂಧಿಕರು ತಾನೆ – ಎಂದುಕೊಂಡಿದ್ದ. ತನ್ನ ಹೆಂಡತಿಯ ವಿಷಯದಲ್ಲಿ ಗೋವಿಂದ ತೋರಿದ ಆಸಕ್ತಿ ಗಜಾನನನ ಲಕ್ಷ್ಯಕ್ಕೆ ಬಂದಿರಲಿಲ್ಲ.]
    ..... ಈಗ ಗಜಾನನ ತನ್ನೆಷ್ಟಕ್ಕೆ ಗೊಣಗಿದ :
     " ಈ ಗೋವಿಂದರಾಯನಾದರೂ ಬಂದಿದ್ದರೆ......"
     ಗೋವಿಂದ ಬರಲು ಮತ್ತೂ ಒಂದು ಘಂಟೆ ಕಾಲ ಹಿಡಿಯಿತು. ಸರ್ವಾಲಂಕೃತನಾಗಿ ಪಾಯಜಾಮವನ್ನು ಒಂದು ಕೈಯಲ್ಲಿ ಮೇಲಕ್ಕೆತ್ತಿ ಇನ್ನೊಂದರಲ್ಲಿ ಕೊಡೆ ಹಿಡಿದು ಕೊಂಡು ಬಂದವನೇ, "ಇದೆಂಥಾ ಕಳೆ ಮುಖದ್ಮೇಲೆ? ಸ್ವಲ್ಪ ನಗೋದಕ್ಕೆ ಕಲಿ ಗಜಾನನ. ಹಾಲು ಬಂತೆ ? ಎಲ್ಲಿ ಬೀರ ?" ಎಂದ.
     ಬೀರನಾಗಲೇ ಎದ್ದು ನಿಂತಿದ್ದ. 
    " ಹಾಲು ಬರ್ಲಿಲ್ಲ ಗೋವಿಂದರಾವ್, ಐದು ಘಂಟೆ ಆಗ್ಹೋಯ್ತು, ಪಟೇಲರೂ ಕಾಣೆ," ಎ೦ದ ಗಜಾನನ.
    " ಐದಾದರೆ ಏನೀಗ? ಮಳೆ ನಿಲ್ಲೋದು ಬೇಡ್ವೆ ಗಜಾನನ? ನೀನೂ ಸರಿ. ಏ ಬೀರ, ಈ ಕೊಡೇನ ತಗೊಂಡ್ಹೋಗಿ ಮನೇಲ್ಕೊಡು. ಎಲ್ಲಿ ಗಜಾನನ, ಇನ್ನೊಂದಿದೆಯಲ್ಲ ಅದನ್ನೂ ಕೊಟ್ಟಿರು. ಹ್ಞ. ವಾಪ್ಸು ಬರ್ತಾ ಲಕ್ಕನ ಮನೆಗ್ಹೋಗಿ ಹಾಲು ತಂದ್ಬಿಡು, ಬೀರ.” 
    “ ಹೂಂ ಬುದ್ದಿ," ಎಂದ ಬೀರ.