ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೨ ನೋವು

   "ನಡಿ. ನಿಂತ್ಕೋಬೇಡ ಮುಖ ನೋಡ್ಕೊಂಡು. ಕುದ್ರೆ ಮೇಲ್ಕುಂತಂಗೆ 

ಹೋಗ್ಬೇಕು ನೋಡು."

   ಗೋವಿಂದ – ಗಜಾನನರು ಕೊಟ್ಟ ಕೊಡೆಗಳನ್ನು ಕೈಯಲ್ಲಿ ತೂಗಹಾಕಿಕೊಂಡು

ತಾನು ಮಳೆಯಲ್ಲಿ ತೋಯಿಸಿಕೊಳ್ಳುತ್ತ ಬೀರ ಹೊರಟ.

   "ಮಳೆ ಸುರೀತಿದೆ. ಹಾಲಿನ ಪಾತ್ರೇನ ಭದ್ರ ಮುಚ್ಚಿ ತಗೊಂಡ್ಬಾ," ಎಂದ ಗಜಾನನ.
   ಅದಕ್ಕೂ ಬೀರ 'ಹೂಂ ಬುದ್ದಿ' ಎಂದನಾದರೂ ಮಳೆಯ ಜೋರೋ ಸದ್ದಿನಲ್ಲಿ 

ಅದು ಕೇಳಿಸಲಿಲ್ಲ.

   ಗೋವಿಂದ ಪಡಸಾಲೆಗೆ ಹೋದ. ಅವನೇ ದೊರಕಿಸಿಕೊಟ್ಟಿದ್ದ ಒಂದು ಹಳೆಯ

ಮೇಜಿನಮೇಲೆ, ನಗರದಿಂದ ತಂದಿದ್ದ ಲಾಟೀನನ್ನು ಜಲಜ಼ೆ ಹಚ್ಚಿ ಇಟ್ಟಿದ್ದಳು.

   ಅಲ್ಲೇ ಒಳ ಬಾಗಿಲಲ್ಲಿ ಅವಳು ನಿಂತಿದ್ದಳು. ಲಾಟೀನಿನ ಬೆಳಕು ಆ ಮುಖದಮೇಲೆ 

ಬಿದ್ದು ಅದು ಅತ್ಯಂತ ಆಕರ್ಷಕವಾಗಿ ಗೋವಿಂದನಿಗೆ ಕಂಡಿತು.

   "ಭಾಗ್ಯದ ದೀಪ, ಅತ್ತಿಗೆ" ಎಂದ ಗೋವಿಂದ, ತನ್ನ ಕಣ್ಣುಗಳಲ್ಲೂ ತುಟಿಗಳಲ್ಲೂ

ಜೀವ ತುಂಬಿಕೊಂಡು.

   ಜಲಜೆ ಮುಗುಳುನಗೆಯ ಪ್ರತಿಕ್ರಿಯೆ ವ್ಯಕ್ತಪಡಿಸಿದಳು.
   ಪಡಸಾಲೆಯಲ್ಲಿ ನಾಲ್ಕು ಬೆಂಚುಗಳಿದ್ದುವು, ಗೋಡೆಗಳಿಗೆ ತಾಗಿಕೊಂಡು. ಆ ದಿನದ 

ಮಟ್ಟಿಗೆ ಉಪಯೋಗಿಸಲೆಂದು ಹಳ್ಳಿಯ ಶಾಲೆಯಿಂದ ಗೋವಿಂದ ಅವುಗಳನ್ನು ಕೊಡಿಸಿದ್ದ.

   ಗೋವಿಂದ ಸುತ್ತಲೂ ಒಮ್ಮೆ ನೋಡಿ, ಜಲಜೆಯ ಕಡೆಗೆ ಮುಗುಳುನಗೆ ಬೀರಿ,

ಅಂದ:

   "ಹುಂ. ತಿಂಡಿಗಳನ್ನಿಡೋಕೆ ಒಂದು ಕಪಾಟು; ನಾಲ್ಕು ಮೇಜುಗಳು, ಕುರ್ಚಿಗಳು. 

ಒಂದು ರೇಡಿಯೋ. ಹೊರಗೆ ಎರಡು ಬೆಂಚುಗಳು – ಇಷ್ಟು ಬೇಕು, ಅಲ್ವೆ ಗಜಾನನ? ಅಲ್ವೆ ಅತ್ತಿಗೆ?"

   ಜಲಜೆ ಏನನ್ನೂ ಹೇಳಲಿಲ್ಲ.
   ಗಜಾನನನೆoದ:
   "ಗೋವಿಂದ ದೇವರ ದಯೆ ಒಂದಿದ್ದರೆ ಎಲ್ಲಾ ಆಗುತ್ತೆ!"
   "ಹೆಹ್ಹೆ!" 
   "ಸದ್ಯಃ ಪಟೇಲರು, ನಿಮ್ಮ ಭಾವೀ ಮಾವ, ತಂದೆಯವರು, ವಕೀಲರು ಇವರೆಲ್ಲಾ 

ಕೂತ್ಕೊಳ್ಳೋಕೆ ಕುರ್ಚಿಗಳು ಬೇಕಲ್ಲ."

   "ಅದೇ? ತಂದರೆ ನಮ್ಮನೆಯಿಂದ ತರ್ಬೇಕು. ಪಟೇಲರ ಮನೆಯಿಂದ ತರ್ಬೇಕು... 

ಒಂದು ಹೇಳ್ಲಾ ಗಜಾನನ? ಆ ಕಡೇದೊಂದು ಬೆಂಚು ಎತ್ತಿ ಈ ಮೇಜಿನ ಹಿಂದೆ ಇಡು. ಇವತ್ತಿಗೆ ಸಾಕು. ಏನ್ಹೇಳೀಯಾ?”

   "ಅಪ್ಪಣೆ! ಪಟೇಲರು ಬರಬೌದು, ಅಲ್ವೆ? ಅಥವಾ ಮಳೇಂತ......"
   "ಬರ್ತಾರೆ ಕಣಯ್ಯ."
   "ಅಂತೂ ನಮ್ಮ ಕ್ಲಬ್ಬಿನ ಉದ್ಘಾಟನೆ ಕತ್ತಲಾದ್ಮೇಲೆ ಅನ್ನಿ. ಅನ್ಯಾಯವಾಗಿ

ತಿಂಡಿ ಎಲ್ಲ ತಣ್ಣಗಾಗ್ಹೋಯ್ತು."