ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೨ ನೋವು

          ಪದ್ಮನ ತಂದೆ ಕರೆಯಲೆಂದು ಬಂದಾಗ ಮನೆಯಲ್ಲಿ ನಿಂತುಕೊಂಡು ಹಿರಿಯರ 
     ಸಂಭಾಷಣೆಗೆ ಕಿವಿಗೊಟ್ಟಿದ್ದಳು ಆಕೆ.
          "ಲಗ್ನ ಯಾವ ಟೇಮಿಗೆ ?
          "ಹನ್ನೊಂದೂ ನಾಲ್ವತ್ತೈದು."
          "ಸರಿ, ಬುಡಿ. ಎರಡು ಗಂಟೆಗೆಲ್ಲಾ ಊಟ ಆಕ್ಬೌದು." 
          "ಹೂಂ ಶಾಮಣ್ಣ: ನೀವೆಲ್ರೂ ಬರ್ಬೇಕು. ದಿಬ್ಬಣದ ಜತೇಲೇ. ರಂಗಣ್ಣನಂತೂ 
     ಅಲ್ಲೇ ಇರ್ತಾನೆ."
          "ನೋಡಾನ."
          "ನೋಡೋದು ಗೀಡೋದು ಒಂದೂ ಇಲ್ಲ. ಅಮ್ಮ ಅಂದ್ಲು, ಕರೆಯೋಕೆ ನಾನೂ 
     ಬರ್ತೀನಿ, ಅಂತ. ಶುಭ ಕಾರ್ಯ, ಚೆನ್ನಾಗಿರೋದಿಲ್ವಲ್ಲ. ನಾನು ಕರೆದ್ಬಿಟ್ಟು ಬರ್ತೀನಿ ಅಂದೆ."
          "ಒಳ್ಳೇ ಕೆಲಸ ಮಾಡಿದ್ರಿ."
          "ಬರ್ಲಾ ನಾನು ಹಾಗಾದರೆ? ಎಲ್ಲಿ, ಸುಬ್ಬಿ ಕಾಣಿಸ್ಲಿಲ್ವೇ..."
          "ಒಳಗಡೆ ಎಲ್ಲೋ ಇರ್ಬೇಕು." 
          ಎರಡು ನಿಮಿಷಗಳ ಮೌನ. ತಂದೆ ತನ್ನನ್ನು ಹೊರಕ್ಕೆ ಕರೆಯಬಹುದೆಂದು ಆಯಪ್ಪ  
     ಕುಳಿತರೋ ಏನೋ. ಆದರೆ ತಂದೆ 'ಸುಬ್ಬೀ' ಎನ್ನಲಿಲ್ಲ. ನಿಮಿಷ ಕಾದು ಆಯಪ್ಪ ಎದ್ದಿರಬೇಕು.
          "ನಾನು ಬರ್ಲೆ ಹಾಗಾದರೆ ?"
          "ಊ ಊ ಓಗ್ಬನ್ನಿ."
          ತನ್ನ ತಂದೆ ಅವರನ್ನು ಅಂಗಳದ ತನಕ ಹಿಂಬಾಲಿಸಿದರು. ಅಂಗಳಕ್ಕಿಳಿದ ಮೇಲೂ 
     ಸಣ್ಣ ಪುಟ್ಟ ಮಾತುಗಳಿರಲೇಬೇಕು, ಸಾಧಾರಣವಾಗಿ. ಯಾರು ಬಂದರೂ ಅಷ್ಟೆ. ಆದರೆ 
     ಈ ಸಲ ಮಾತ್ರ ಮಾತಿಲ್ಲ.
          -ಲಗ್ನ ಯಾವ ಟೇಮಿಗೆ ?
          –ಹನ್ನೊಂದೂ ನಾಲ್ವತ್ತೈದು.
          [ನಗರದಲ್ಲಿ ಮದುವೆ. ನಿರ್ದಿಷ್ಟವಾಗಿ ನಿಮಿಷಗಳನ್ನೂ ತಿಳಿಸಿದ್ದರು ಶ್ರೀನಿವಾಸಯ್ಯ!]
          ಹನ್ನೊಂದೂ ನಾಲ್ವತ್ತೈದು ಅಂದರೆ? ಹನ್ನೆರಡಕ್ಕಿಂತ ಕಡಮೆ. ಅಂದರೆ ಮಧಾಹ್ನದ 
     ಹೊತ್ತು.
          ಇವತ್ತು ಮದ್ಯಾಹ್ನ. 
          ಹೊರಗೆ ಮಳೆಯ ಗೆರೆಗಳು. ಆಕಾಶದಿಂದ ಭೂಮಿಗೆ ನೇರವಾಗಿ. ಸೂಜಿಯ ಹಾಗೆ 
     ಕೋಟಿ ಕೋಟಿ ಸೂಜಿಗಳು . ಹಾಗೆ ಚುಚ್ಚಿದರೆ ಭೂಮಿಗೆ ಎಷ್ಟು ನೋವಾಗುವುದೊ ?
          ಆ ಗೆರೆಗಳಿಗಿಂತ ಭಿನ್ನವಾಗಿತ್ತು ಮೇಲ್ಛಾವಣಿಯಿಂದ ಅಂಗಳಕ್ಕೆ ಸುರಿಯುತ್ತಿದ್ದ ನೀರು.
          ಸದ್ಯಃ ಸೋರುವುದೆಲ್ಲ ಮೊದಲ ಮಳೆಗೆ ಮಾತ್ರ.
          ಆಶ್ಚರ್ಯ. ಆವತ್ತು  ಎಷ್ಟೊಂದು ಅತ್ತೆ ! ಈಗ ಅಳು ಬರುವುದಿಲ್ಲ.
          ಮಳೆ ಎಂದರೇನು ? ಎಲ್ಲಿಂದ ಬರುತ್ತಿದೆ ಈ ನೀರು ? ಸ್ವರ್ಗದಲ್ಲಿರುವ ದೇವತೆಗಳೆಲ್ಲ 
     ಅಳುತ್ತಿರುವರೊ. ಅವರ ಕಣ್ಣೀರೇ ಈ ಜಲಧಾರೆಯೊ ?
          ಮುನಿಯ ಸತ್ತ ಆ ದಿವಸ ಬಿಸಿಲಿತ್ತು. ರಣರಣ ಬಿಸಿಲು.