ಈ ಪುಟವನ್ನು ಪರಿಶೀಲಿಸಲಾಗಿದೆ

೩೨ ನೋವು

"ಎದರ್ಬೇಡಿ, ಅತ್ತೆಮ್ಮ. ನಾಳೆಗೆ ವಾಸಿಯಾಯ್ತದೆ." ಧೈರ್ಯ ನೀಡುವ ಮಾತುಗಳನ್ನಾಡುವುದು ಡಾಕ್ಟರಾದವನ ವೃತ್ತಿಗುಣ. ನಾಗಮ್ಮನೆಂದರು :

" ಆಗಲಿ ಮೊಗ, ನಿನ್ನ ನಾಲಿಗೆ ಗುಣದಿಂದ ಅಂಗೇ ಆಗಲಿ, ನಿದ್ದೆ ಬಂದ್ಬಿಟ್ಟೈತೆ, ಎಚ್ಚರಾದ್ರೆ ಒಂದಿಷ್ಟು ಹಾಲಾದರೂ ಕುಡಿಸ ಬಹುದಾಗಿತ್ತು." -

" ಏನೂ ಬೇಡಿ, ಅತ್ತೆಮ್ಮ. ಒಂದು ರಾತ್ರೆ ಉಪವಾಸ ಇದ್ರೇನೇ ಒಳ್ಳೆದು."

"ಊಂ.. ನೀನು ಮನಿಕ್ಕೋ ರಂಗ." 
ರಂಗಣ್ಣ ಸುರುಳಿ ಸುತ್ತಿದ್ದ ತನ್ನ ಹಾಸಿಗೆಯನ್ನು ಬಿಡಿಸಿದ. ಮಲಗಲು ಮನಸ್ಸಾಗಲಿಲ್ಲ. ಮೇಜಿನ ಕೆಳಗಿದ್ದ ಸ್ಟೂಲನ್ನು ಹೊರಕ್ಕೆಳೆದ. ಲ್ಯಾoಪಿನ ಬತ್ತಿಯನ್ನು ಹಿರಿದುಗೊಳಿಸಿದ. ಗೋಡೆಯ ಗೂಡಿನಲ್ಲಿ ಅವನ ಅಧ್ಯಯನದ ಮೂರು ಪುಸ್ತಕಗಳಿದ್ದವು. ಅವುಗಳ ಮಗ್ಗುಲಲ್ಲಿ ಕೈಗಡಿಯಾರವಿತ್ತು. ವೇಳೆ ನೋಡಿದ. ಹತ್ತೂವರೆ ಘಂಟೆ, ವಾಚನ್ನೂ 'ಸಾವಿಲ್ಸ್ ಮೆಡಿಸಿನ್' ಗ್ರಂಥವನ್ನೂ ಎತ್ತಿಕೊಂಡು, ಮೇಜಿನ ಮೇಲಿರಿಸಿ, ಸ್ಟೂಲಿನ ಮೇಲೆ ಕುಳಿತು, ಪುಸ್ತಕವನ್ನು ಬಿಡಿಸಿ, ಪರಿವಿಡಿಯನ್ನು ನೋಡಿ, ಪುಟಗಳನ್ನು ಕಂಡುಹಿಡಿದು ಓದತೊಡಗಿದ.

ಸ್ವಲ್ಪ ಹೊತ್ತಾದ ಮೇಲೆ ಪಡಸಾಲೆಯ ಗೋಡೆ ಗಡಿಯಾರದಲ್ಲಿ ಒಂದು ಬಾರಿಸಿತು. ರಂಗಣ್ಣನ ದೃಷ್ಟಿ ಎದುರಿಗಿಟ್ಟುಕೊಂಡಿದ್ದ ವಾಚಿನತ್ತ ಹರಿಯಿತು. ಅದರಲ್ಲಿ ಹತ್ತೂ ಐವತ್ತು. ಮನೆ ಗಡಿಯಾರ ಇಪ್ಪತು ನಿಮಿಷ ಹಿಂದೆ–ಎಂದುಕೊಂಡ. ಕತ್ತು ತಿರುಗಿಸಿ ಮಗ್ಗುಲ ಕೊಠಡಿಯತ್ತ ನೋಡಿದ. ಸುಭದ್ರೆಯ ಪಕ್ಕದಲ್ಲಿ ತಮ್ಮ ಚಾಪೆಯನ್ನೂ ಕಂಬಳಿಯನ್ನೂ ಹಾಸಿಕೊಂಡು, ಅದರ ಮೇಲೆ ಬೆನ್ನ ಬಾಗಿಸಿ ಕುಳಿತೇ ಇದ್ದರು ನಾಗಮ್ಮ. ರಂಗಣ್ಣ ಎದ್ದು ಹಿತ್ತಲ ಬಾಗಿಲಿಗೆ ಹೋಗಿ ಬಂದ. ಜಗಲಿಯಲ್ಲಿ ನಿಂತು ಅಂಗಳದತ್ತ ದಿಟ್ಟಿಸಿದ. ಘನೀಭವಿಸಿದ್ದ ಇರುಳಲ್ಲಿ ಅವನ ತಂದೆಯೊಂದು ಪ್ರತಿಮೆಯಾಗಿದ್ದರು. 'ಅಪ್ಪಾ' ಎಂದು ಕರೆಯೋಣವೆ ಎನ್ನಿಸಿತು. ಆದರೆ ಧೈರ್ಯ ಬರಲಿಲ್ಲ. ತನ್ನ ಕೊಠಡಿಗೆ ಹೋಗಿ ಲ್ಯಾoಪ್ ಆರಿಸಿ ಹಾಸಿಗೆಯ ಮೇಲೆ ಉರುಳಿದರು. ಆ ದಿನದ ಘಟನೆಗಳೆಲ್ಲ ಮತ್ತೊಮ್ಮೆ ರಂಗಣ್ಣನ ಕಣ್ಣೆದುರು ಸುಳಿದವು. ಮುನಿಯನ ಶವವೂ ಅವನಿಗೆ ಕಾಣಿಸಿತು. ಕಣ್ಣುಗಳನ್ನು ಆತ ಭದ್ರವಾಗಿ ಮುಚ್ಚಿಕೊಂಡ. ಅವನಿಗೆನ್ನಿಸಿತು :

'ಸುಬ್ಬಿ ಹೆದರಿ ಜ್ವರ ಬರಿಸಿಕೊಂಡದ್ದು ಒಳ್ಳೆದೇ ಆಯ್ತು. ಇದಾದ ಮೇಲೆ ತುಳಿದ ಅಡ್ಡ ದಾರಿಯಿಂದ ಸರಿದಾರಿಗೆ ಅವಳು ವಾಪಸಾಗಲೂಬಹುದು.'

ಹಾಗೆಯೇ ಅವನಿಗೆ ನಿದ್ದೆ ಬಂತು. ಕನಸಿನಲ್ಲಿ ಆತ ಭಾಗ್ಯನಗರಕ್ಕೆ ಹೋಗಿ ಒಬ್ಬ ಔಷಧಿ ವಾಪಾರಿಯಿಂದ ಕೆಲ ಔಷಧಿಗಳನ್ನು ಕೊಂಡ... ...ಮಗನನ್ನು ಗೌಡರು ಒಳಕ್ಕೆ ಕಳುಹಿಸಿದ ಮೇಲೆ ಅವರ ಮನಸ್ಸು ನಿರಾತಂಕವಾಗಿ ಅತ್ತಿತು. ಕಣ್ಣುಗಳು ಒಣ ನೆಲ. ಒಳಗೆ ಮಾತ್ರ, ಗುಡುಗು. ಯಾಕೆ ಹೀಗಾಯಿತು? ಯಾಕೆ ಹೀಗಾಯಿತು? ಪದ್ಮನ ಜತೆ ಸುಬ್ಬಿ ದಿಬ್ಬದ ಹತ್ತಿರ ಹೋದಳೆಂದು ಮಗ ಮೊದಲು ಹೇಳಿದಾಗ