ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ೩೩

ಶಾಮೇಗೌಡರು ದಂಗಾಗಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಅದರ ಪೂರ್ಣ ಅರ್ಥ ಅವರಿಗಾಯಿತು. ನೀರಿಲ್ಲದ ಆಳ ಬಾವಿಯಲ್ಲಿಳಿದು ಉಸಿರು ಕಟ್ಟಿಸಿಕೊಂಡಂತಾಯಿತು ಅವರಿಗೆ. ಮಗಳಿಗೆ ಹೊಡೆಯಬಹುದು, ಬಡಿಯಬಹುದು, ಬುದ್ದಿ ಕಲಿಸಬಹುದು. ಅದು ದೊಡ್ಡ ಮಾತಲ್ಲ. ಆ ನಂಬಿಕೆ ಗೌಡರಿಗೆ ಇಲ್ಲದಿಲ್ಲ.

ಆದರೆ, ತಮ್ಮ ಮಗಳನ್ನು ಶ್ರೀನಿವಾಸಯ್ಯನ ಮಗನೊಂದಿಗೆ ಹಳ್ಳಿಯವರು ಕಂಡಿರ ಬಹುದಲ್ಲ? ಹಾಡೇ ಹಗಲು ಅವನೊಟ್ಟಿಗೆ ಅಲೆಯಲು ಹೋದಳಲ್ಲ ಬಸವಿ? ನೋಡಿದ ಜನ ಆಡದೆ ಇರುತ್ತಾರೆಯೆ? ಈ ವಯಸ್ಸಿನಲ್ಲಿ ಅಪನಿಂದೆಗೆ ಅಪಖ್ಯಾತಿಗೆ ತುತ್ತಾಗುವಂತಾಯಿತೆ ತಾವು ?.

ಆ ಹುಡುಗ ಪದ್ಮ ನಗರದಲ್ಲಿ ಶೋಕಿ ಜೀವನ ನಡೆಸುತ್ತಿರಬೇಕು. ರಜೆಯಲ್ಲಿ ಇಲ್ಲಿ ಬಂದರೆ ಸುಮ್ಮನಿರಲಾಗುವುದಿಲ್ಲವಲ್ಲ. ಅವನ ಮುಟ್ಟಾಟಕ್ಕೆ ಭೇರೆ ಯಾರೂ ಸಿಗದೆ ಹೋದರೆ ಹಳ್ಳಿಯಲ್ಲಿ? ತಮ್ಮ ಮಗಳೇ ಬೇಕಾದಳೆ?

ಬೇರೆ ಬೇರೆ ಜನವಾದರೂ ಈವರೆಗೆ ಒಡಹುಟ್ಟಿದವರ ಹಾಗಿದ್ದೆವು ಶ್ರೀನಿವಾಸಯ್ಯ ಮತ್ತು ತಾವು. ಈವರೆಗೆ ಅಂದರೆ, ಇನ್ನು ಆ ಬಾಂಧವ್ಯ ಸಾಧ್ಯವಿಲ್ಲ ಎಂದಲ್ಲವೆ? ಶ್ರೀನಿವಾಸಯ್ಯನ ತಂದೆ ಗೋಪಾಲಕೃಷ್ಣಯ್ಯನವರೊಡನೆ ತಮ್ಮ ತಂದೆ ಎಷ್ಟು ಬೇಕೋ ಅಷ್ಟು ಸಂಬಂಧ ಇರಿಸಿಕೊಂಡಿದ್ದರು. ತಮ್ಮ ಕಾಲದಲ್ಲಿ ಪರಸ್ಪರ ಗೌರವ ಗಾಢಸ್ನೇಹವಾಯಿತು. ತಮ್ಮ ಮಕ್ಕಳ ಕಾಲಕ್ಕೆ– ಗೌಡರಿಗೆ ವ್ಯಥೆಯಾಯಿತು, ಪಶ್ಚಾತ್ತಾಪವಾಯಿತು. ತಾವೂ ತಮ್ಮ ತಂದೆ ದ್ಯಾವೇ ಗೌಡರಂತೆ ಆ ಮನೆತನದೊಡನೆ ಎಷ್ಟು ಬೇಕೋ ಅಷ್ಟೇ ಸಂಬಂಧ ಇರಿಸಿಕೊಂಡಿದ್ದರೆ ಈ ದುಸ್ಥಿತಿ ಒದಗುತ್ತಿರಲಿಲ್ಲ....

..ಗೌಡರು ಎದೆಯು ಕೂದಲ ಮೇಲೆ ಕೈಯಾಡಿಸಿದರು. ಚಳಿ ಎನಿಸಿತು. ಮಗನ ಕೊಠಡಿಯ ಕಡೆ ನೋಡಿದರು. ದೀಪವಿರಲಿಲ್ಲ.

         ಏಳಲು ಯತ್ನಿಸಿದರು. ಆದರೆ ಬಲಗಾಲಿಗೆ ಜೋಮು ಹಿಡಿದಿತ್ತು, ಆ ಕಾಲನ್ನು ಚಾಚಿ, ತೊಡೆಗೆ ಚಿವುಟಿದರು. ಮುಷ್ಟಿಯಿಂದ ಗುದ್ದಿದರು. ಕ್ರಮೇಣ ಕಾಲು ಜೀವ ತಳೆಯಿತು. ಬಹಿರ್ದೆಶೆಗೆ ಹೋದರು. ಆದರೆ ದೇಹ ಕಡಿದೊಗೆದ ಮರವಾಗಿತ್ತಲ್ಲ ? ಅವರಿಗೆನಿಸಿತು. ಬಹಳ ಹೊತ್ತಿನಿಂದ ಈ ಶರೀರ ತನ್ನ ಕ್ರಿಯೆಗಳನ್ನೆಲ್ಲ ನಿಲ್ಲಿಸಿಬಿಟ್ಟಿರಬೇಕು.

ಮಲಗುವುದಕ್ಕೆ ಮುಂಚೆ ಗೌಡರು ಕೊಟ್ಟಿಗೆಗೆ ಹೋಗಿ ಎತ್ತುಗಳನ್ನೂ ಹಸುಗಳನ್ನೂ ನೋಡಿ ಮಾತನಾಡಿಸಿ ಬರಬೇಕು. ಮನೆಯ ಒಳಬಂದವರು, ಹೋಗಿ ಬರುವುದಲ್ಲವೆ ಮೇಲು-ಎಂದು, ಕಂದೀಲಿಗೆ ಕೈ ಚಾಚಿದರು, ಕಂದೀಲು ಎಟಕಲಿಲ್ಲ. ಗೋಡೆಯನ್ನು ಸಮಿಾಪಿಸಿಯೇ ಇರಲಿಲ್ಲ ಅವರು. ಬೇಡ ಇವತ್ತು ಬೇಡ ಎಂದುಕೊಂಡರು. ಮೆಲ್ಲನೆ ಜಗಲಿಗೆ ಹೋಗಿ ತಲೆ ಬಾಗಿಲಿನ ಅಗಣಿ ಹಾಕಿ ಬಂದರು.

         ಕೋಣೆಗಳ ಬಾಗಿಲುಗಳನ್ನು ಮುಚ್ಚಿತ್ತು, ರಂಗಣ್ಣನಾಗಲೀ ನಾಗಮ್ಮನಾಗಲೀ ಚಿಲಕ ಹಾಕುತ್ತಿರಲಿಲ್ಲ. ಬೇಕಿದ್ದರೆ, ಕದ ನೂಕಿ ಮಗಳು ಮಲಗಿರುವುದನ್ನು ತಾವು ನೋಡ ಬಹುದು. ಜ್ವರ ಬಂದಿದೆಯಲ್ಲವೆ ಅವಳಿಗೆ ? ಹೆದರಿಕೊಂಡಳು ಅಲ್ಲವೆ ?

ಗೌಡರು ಪಲ್ಲಂಗದ ಮೇಲೆ ಕುಳಿತರು.