ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ನೋವು

೭೧

"ನನಗೂ ಹಾಗೇ ಅನಿಸುತ್ತೆ."
"ಇನ್ನೆಲ್ಲಾದರೂ ಪದ್ಮನಿಗೆ ಹೆಣ್ಣು ನೋಡ್ಬೇಕು. ಏನೇ ಆಗಲಿ, ಗೋವಿಂದನಿಗೂ
ಪದ್ಮನಿಗೂ ಒಟ್ಟಿಗೆ ಈ ವರ್ಷವೇ ಮದುವೆ ಮಾಡ್ಲಿಡೆಯೋದು ಯೋಗ್ಯ."
"ಹೌದಮ್ಮ... ಪದ್ಮನ ಓದು ಇನ್ನೊಂದು ವರ್ಷ ಇದೆ. ಅದು ಮುಗಿಯೋ
ತನಕ ಕಾಯೋದು ಬೇಡ ಅಂತೀಯ ?"
"ಓದಿಗೇನು ? ಮದುವೆ ಆದ್ಮೇಲೂ ಓದಿ ಮುಗಿಸ್ತಾನೆ.”
"ನಿಜವೇ. ಆದರೆ ಪದ್ಮ ಒಪ್ಪಬೇಕಲ್ಲ."
"ಅವನನ್ನು ಒಪ್ಸೋದು ದೊಡ್ಡ ಕೆಲಸವೆ? ರೂಪವಂತೆಯಾಗಿರೋ ಹುಡುಗೀನ
ಮೊದಲು ನೋಡು. ಸ್ವಲ್ಪ ಓದಿರ್ಬೇಕು."
"ವಿಷ್ಣುಮೂರ್ತಿಯ ಮಕ್ಕಳೂ ವಿದ್ಯಾವತಿಯರೇ, ಎಸ್.ಎಸ್.ಎಲ್.ಸಿ.ಯಾಗಿದೆ."
"ಗೋವಿಂದನಿಗಿಂತ ಜಾಸ್ತಿ ಓದಿದ ಹಾಗಾಯ್ತಲ್ಲ!"
"ಅದೇನಿದ್ದರೂ ಗೋವಿಂದನ ವಿಷಯದಲ್ಲಿ ಆತನಿಗೆ ಭಾರೀ ವಾತ್ಸಲ್ಯ. ಅಲ್ದೆ.
ವಿದ್ಯೆ ಕಮ್ಮಿ ಅಂತ ಬುದ್ದಿ ಕಮ್ಮಿಯೇ?"
"ಗೋವಿಂದ ನಿಭಾಯಿಸ್ಕೊಳ್ತಾನೆ, ಬಿಡು. ಪದ್ಮನಾಭನಿಗೆ ಹಾಗಲ್ಲ. ಅವನಿಗೆ
ಸೋಂಕಿರೋ ಜಾಡ್ಯ ಇದೆಯಲ್ಲ. ಅದನ್ನ ನಿವಾರಿಸುವಂಥ ಹುಡುಗಿ ಬೇಕು. ಅರ್ಥವಾಯ್ತೆ?”
"ಹೂನಮ್ಮ."
"ಹಳ್ಳೀ ಹುಡುಗೀನ ಅವನು ಮದುವೆಯಾಗೋದು ಕಾಣೆ."
ಹಾಗೆ ನುಡಿದ ದೊಡ್ಡಮ್ಮನಿಗೆ ಗೋಪಾಲನ ಕೊಠಡಿಯಿಂದ ಯಾವ ಸದ್ದೂ ಬರುತ್ತಿಲ್ಲ
ಎಂಬುದು ಗೋಚರಕ್ಕೆ ಬಂತು.
ಅವರೆಂದರು:
"ಭಾಗೀ, ಶ್ರೀಪಾದು ಮಲಗಿದ್ನೆ ? ಅಡುಗೆಮನೆಗೆ ಹೋಗಮ್ಮ." ಮಾವನ ಹಾಗೂ
ಅವರ ಅಮ್ಮನ ಮಾತುಕತೆಗೆ ಕಿವಿಗೊಟ್ಟು ಬಾಗಿಲ ಮರೆಯಲ್ಲಿ ನಿಂತಿದ್ದ ಭಾಗೀರಥಿ ನಿದ್ದೆ
ಹೋಗಿದ್ದ ಮಗುವನ್ನು ಬಿಟ್ಟು ಹೊರಕ್ಕೆ ಬರಬೇಕಾಯಿತು. ಏನೋ ತಪ್ಪು ಮಾಡಿದವಳಂತೆ
ವಿವರ್ಣವಾಗಿತ್ತು ಮುಖ.
ಹಿರಿಯ ಮೊಮ್ಮಗನ ಮಡದಿ ಅವಿತು ಕೇಳಿದಳೆಂಬುದನ್ನು ದೊಡ್ಡಮ್ಮ ಗಮನಿಸಿದ
ರಾದರೂ ಸಿಟ್ಟಾಗಲಿಲ್ಲ. ಮನೆಯ ಮಾತು ಕೇಳಿಸಿಕೊಂಡರೆ ತಪ್ಪೆನು ? ನಾಳೆ ಅವಳೇ
ಅಲ್ಲವೆ ಮನೆತನದ ಹಿರಿಯ ಯಜಮಾನಿತಿಯಾಗಿ ಎಲ್ಲವನ್ನೂ ತೂಗಿಸಿಕೊಂಡು ಹೋಗ
ಬೇಕಾದವಳು ?
ಒಳಹೋಗುತ್ತಲಿದ್ದ ಭಾಗೀರಥಿಗೆ ಅವರೆಂದರು:
"ಒಂದಿಷ್ಟು ಚಿತ್ರಾನ್ನ, ಶ್ಯಾವಿಗೆ ಖೀರು ಮಾಡ್ಬೇಕಮ್ಮ. ಹಪ್ಪಳ ಸಂಡಿಗೆ ಕರೀಬೇಕು.
ಹೋಗು ಮಡಿ ಉಟ್ಕೊ. ನಾನೂ ಬರ್ತೀನಿ."
"ಹೂಂ," ಎಂದು ಭಾಗೀರಥಿಗೆ ಅಡುಗೆಮನೆ ಸೇರಿದಳು.
ದೊಡ್ಡಮ್ಮ ಮಗನಿಗೆ ಅಂದರು:
"ಜಾತಕ ಸರಿಹೋಯ್ತೂಂತಾದ್ಮೇಲೆ ನೀನೊಮ್ಮೆ ನಗರಕ್ಕೆ ಹೋಗಿ ನೋಡ್ಕೊಂಡ್ಬಾ."