ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು

೭೩

"ಇವರು ಹೋಟ್ಲು ಶುರು ಮಾಡೋದು ನಿಮ್ಮನ್ನ ಅವಲಂಬಿಸಿದೆ ಕೃಷ್ಣೇಗೌಡರೆ,"
ಎಂದ ಗೋವಿಂದ.
"ನಮ್ಮನ್ನೇ ?"
"ಹೂ ಮತ್ತೆ. ಗ್ರಾಮ ಚಾವಡಿ ಪಕ್ಕದ ಖಾಲಿ ಕಟ್ಟಡ ನೀವು ಕೊಟ್ಟರೆ ಕಾಫಿ-ಚಾ."
"ಕೊಡಾನ, ಕೊಡಾನ."
ವಿಷ್ಣುಮೂರ್ತಿ ನಿತ್ಯ ಮುಗುಳ್ನಗೆಯನ್ನು ತುಟಿಗಳ ಮೇಲೆ ಮೂಡಿಸಿ, "ಕಟ್ಟಡ
ನೋಡ್ಕೊಂಡು ಬರೋಣವೆ?" ಎಂದರು.
"ಅದಕ್ಕೇನಂತೆ ? ನಡೀರಿ," ಎಂದ ಕೃಷ್ಣೇಗೌಡ.
...ಗೋವಿಂದನೂ ಅವನ ಭಾವೀ ಮಾವನೂ ಹಳ್ಳಿಯಲ್ಲಿ ನಡೆದಾಡುತ್ತಿದ್ದಾಗ,
ಅಡುಗೆಮನೆಯಲ್ಲಿ ಕಾರ್‍ಯನಿರತಳಾದ ಭಾಗೀರಥಿ, "ಒಳ್ಳೇದಾಯ್ತು ಒಬ್ಬಳೇ ದುಡಿಯೋದು
ತಪ್ಪುತ್ತೆ. ಇನ್ನಿಬ್ಬರು ಬರ್‍ತಾರಲ್ಲ," ಎಂದುಕೊಂಡಳು.
ಒಂದು ಸಂಗತಿಯಿಂದ ಮಾತ್ರ ಅವಳಿಗೆ ಸ್ವಲ್ಪ ಭಯವೆನಿಸಿತ್ತು. ಶಾಮೇಗೌಡನ
ಸಂಸಾರಕ್ಕೂ ಈ ಮನೆಗೂ ಇದ್ದ ಸ್ನೇಹ ಮುಗಿಯಿತಲ್ಲ? ಇದರಿಂದ ಕೆಡುಕೇನಾದರೂ
ಆಗಬಹುದೆ? ಮೈದುನ ಪದ್ಮ ಗೌಡರ ಮಗಳ ಜತೆ ಸಲಿಗೆಯಿಂದ ವರ್ತಿಸಬಹುದು ಅಂತ
ಯಾರು ಎಣಿಸಿದ್ದರು? ಹಾಗೆ ಮಾಡಬಾರದಿತ್ತು. ನಗರಕ್ಕೆ ಹೋಗಿ ಕಾಲೇಜಿನಲ್ಲಿ ಓದುವವರೆಲ್ಲ
ಹೀಗೆಯೇ ಇರುತ್ತಾರೋ ಏನೋ. ಒಮ್ಮೆ ಮೈದುನನ ಕೊಠಡಿಯಿಂದ ಹೊಗೆ ಬಂತೆಂದು
ಅಲ್ಲಿಗೆ ಓಡಿದ್ದಳಲ್ಲ? ಕಿಟಿಕಿ ಬಾಗಿಲುಗಳನ್ನು ಮುಚ್ಚಿತ್ತು. ಆದರೂ ಸಂದಿಯಿಂದ ಬಂದಿತ್ತು
ಹೊಗೆ. ಬಾಗಿಲು ತಳ್ಳಿದಾಗ ಕಂಡುದೇನು? ಕೈಯಲ್ಲಿ ಸಿಗರೇಟು ಹಿಡಿದಿದ್ದ ಪದ್ಮನಾಭ
ಬೆಚ್ಚಿಬಿದ್ದಿದ್ದ. ಅವನ ತೆರೆದ ಬಾಯಿಯಿಂದ ಹೊಗೆ ಹೊರಡುತ್ತಿತ್ತು.[ಅದನ್ನು ಸ್ಮರಿಸಿಕೊಂಡು
ಭಾಗೀರಥಿಗೆ ನಗು ಬಂತು.] ಮನೆಯಲ್ಲಿ ಬೇರೆ ಯಾರೂ ಆಗ ಇರಲಿಲ್ಲ. ಭಾಗೀರಥಿ ಅಂದಿದ್ದಳು:
"ಆಹ್ಹಾ ! ದೊಡ್ಡಮ್ಮನಿಗೆ ಹೇಳ್ಲಾ?"
ಪದ್ಮನಾಭ ಅಂಗಲಾಚಿದ್ದ:
"ಬೇಡಿ, ಅತ್ತಿಗೆ. ದಯವಿಟ್ಟು ಬೇಡಿ."
"ದೊಡ್ಡಮ್ಮನೇ ಬಂದರೂಂತ ಹೆದರಿದಿರೇನೋ?"
"ಹಾಗಲ್ಲ ಅತ್ತಿಗೆ. ಪ್ಲೀಸ್!"
"ನಂಗೆ ಇಂಗ್ಲಿಷ್ ಬರೋಲ್ಲ. ಅಬ್ಬ ! ಎಂಥ ಘಾಟು !"
“ಬಾಗಿಲು ಎಳ್ಕೊಳ್ಳಿ, ಅತ್ತಿಗೆ. ಹಚ್ಚಿದ್ದನ್ನ ಸೇದ್ಬಿಡ್ತೀನಿ."
"ಇನ್ನು ಯಾವತ್ತೂ ಕುಡೀಕೂಡ್ದು, ಹಾಂ?"
" ಇಲ್ಲ, ಇಲ್ಲ..."
ಭಾಗೀರಥಿ ದೊಡ್ಡಮ್ಮನಿಗೆ ಹೇಳಿರಲಿಲ್ಲ. ಆದರೆ ಆ ರಾತ್ರೆ ಗಂಡನಿಗೆ ವರದಿ ಮಾಡಿದ್ದಳು.
ಗೋಪಾಲ ಅಂದುದಿಷ್ಟೆ:
"ಹುಂ. ಅಂತೂ ದುಡ್ಡು ಪೋಲು ಮಾಡೋಕೆ ಕಲ್ತಿದಾನೆ."
ಅಲ್ಲಿಗೆ ಆ ಪ್ರಕರಣ ಮುಗಿದಿತ್ತು.
ಇನ್ನು ಪದ್ಮನ ಹೆಂಡತಿಯಾಗಿ ಬರುವವಳು ರೂಪಸಿ. ಗೊವಿಂದನ ಕೈಹಿಡಿಯು