ಈ ಪುಟವನ್ನು ಪರಿಶೀಲಿಸಲಾಗಿದೆ
೧೦೨
ಭಾರತ ದರ್ಶನ

ವಿದೆ. ಅನೇಕರೀತಿಯಿಂದ ವ್ಯವಸಾಯವನ್ನು ಹತೋಟಿಯಲ್ಲಿಡಲಾಗಿತ್ತು. ಬಡ್ಡಿಯ ದರವನ್ನು ನಿಗದಿಮಾಡಲಾಗಿತ್ತು. ಆಹಾರ ವಸ್ತುಗಳು ಪೇಟೆಗಳು, ಕೈಗಾರಿಕೆಗಳು, ವಧಾಸ್ಥಾನಗಳು, ಕಾಲ್ನನಡೆಗಳು, ರಕ್ಷಣೆ, ನೀರಿನ ಹಕ್ಕುಗಳು, ಆಟಪಾಟಗಳು, ವೇಶ್ಯಾವಾಟಿಕೆಗಳು, ಪಾನೀಯ ಮಂದಿರಗಳು ಇವುಗಳ ಪರಿಶೀಲನೆ ಮೇಲಿಂದಮೇಲೆ ನಡೆಯುತ್ತಿದ್ದವು. ತೂಕ ಮತ್ತು ಅಳತೆಯ ಪ್ರಮಾಣವನ್ನು ನಿಗದಿಮಾಡಲಾಗಿತ್ತು, ಆಹಾರಧಾನ್ಯಗಳ ಕಳ್ಳ ಶೇಖರಣೆ ಮತ್ತು ಬೆರಕೆ ಮಾಡುವುದನ್ನು ಉಗ್ರವಾಗಿ ಶಿಕ್ಷಿಸಲಾಗುತ್ತಿತ್ತು. ವ್ಯಾಪಾರ ತೆರಿಗೆಯನ್ನು ವಿಧಿಸಲಾಗಿತ್ತು. ಅದೇ ರೀತಿ ಧರ್ಮಾ ಚರಣೆಗೂ ಒಂದು ವಿಧವಾದ ತೆರಿಗೆ ವಿಧಿಸಲಾಗಿತ್ತು. ದೇವಸ್ಥಾನಗಳಲ್ಲಿ ಯಾವುದಾದರೂ ನಿಯಮದ ಉಲ್ಲಂಘನೆ ಅಥವಾ ಅಸಭ್ಯ ವರ್ತನೆ ನಡೆದಾಗ ದೇವಸ್ಥಾನದ ಹಣವೆಲ್ಲ ಸರ್ಕಾರದ ಬೊಕ್ಕಸಕ್ಕೆ ಸೇರುತ್ತ ಇತ್ತು. ಶ್ರೀಮಂತರು ರಾಷ್ಟ್ರದ ಭೀಕರ ಸಂಕಟವನ್ನು ದುರುಪಯೋಗ ಪಡಿಸಿಕೊಂಡು ಲಾಭಬಡಕರಾದರೆ ಅಥವ ಹಣವನ್ನು ದುರುಪಯೋಗ ಪಡಿಸಿಕೊಂಡರೆ ಅವರ ಆಸ್ತಿ ಎಲ್ಲವೂ ಸರ್ಕಾರಕ್ಕೆ ಸೇರುತ್ತಿತ್ತು. ಆರೋಗ್ಯ ರಕ್ಷಣೆಯೂ ಮತ್ತು ಆಸ್ಪತ್ರೆಗಳ ವ್ಯವಸ್ಥೆಯೂ ಚೆನ್ನಾಗಿತ್ತು. ಮುಖ್ಯ ನಗರಗಳಲ್ಲಿ ವೈದ್ಯರಿರುತ್ತಿದ್ದರು. ವಿಧವೆಯರು, ಅನಾಥರು, ರೋಗಿಗಳು, ಮತ್ತು ಅಂಗವಿಹೀನರಿಗೆ ಸರ್ಕಾರವು ವೇತನ ಕೊಡುತ್ತಿತ್ತು. ಕ್ಷಾಮ ನಿವಾರಣೆಯ ಕಾರ್ಯವು ರಾಷ್ಟ್ರದ ವಿಶೇಷ ಕರ್ತವ್ಯವಾಗಿತ್ತು. ಕ್ಷಾಮ ನಿವಾರಣೆ ಮತ್ತು ಆಹಾರ ಪೂರೈಕೆಗೆ ರಾಜ್ಯದ ಎಲ್ಲ ಕಣಜಗಳಲ್ಲಿ ಬೆಳೆದ ದವಸದಲ್ಲಿ ಅರ್ಧವನ್ನು ಸದಾ ಮೀಸಲಾಗಿ ಕಾದಿಡುತ್ತಿದ್ದರು.

ಪ್ರಾಯಶಃ ಈ ನಿಯಮಗಳು ಮತ್ತು ನಿಬಂಧನೆಗಳೆಲ್ಲವೂ ಹಳ್ಳಿಗಳಿಗಿಂತ ಪಟ್ಟಣಗಳಿಗೆ ಹೆಚ್ಚಾಗಿ ಅನ್ವಯಿಸುತ್ತಿದ್ದವೆಂದು ತೋರುತ್ತದೆ. ಪ್ರಾಯಶಃ ಮಾತಿಗಿಂತ ಕಾರ್ಯವು ಬಹು ಹಿಂದೆ ಇತ್ತೆಂದು ತೋರುತ್ತದೆ. ಆದರೂ ಮಾತು ಕೇಳಲು ಅದ್ಭುತವಾಗಿದೆ. ಗ್ರಾಮಾಂತರ ಪ್ರಜೆಗಳಂತೂ ಪೂರ್ಣ ಸ್ವತಂತ್ರರಾಗಿದ್ದರು,

ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಅಸಂಖ್ಯಾತ ವಿಷಯಗಳು ಅಡಗಿವೆ. ರಾಜ್ಯ ನೀತಿ ಮತ್ತು ರಾಜ್ಯ ಕಾಠ್ಯದ ಎಲ್ಲ ಅಂಶಗಳೂ ಅದರಲ್ಲಿ ವಿವರಿಸಲ್ಪಟ್ಟಿವೆ. ರಾಜ, ಆತನ ಪ್ರಧಾನಿಗಳು, ಮಂತ್ರಿಗಳು, ಮಂತ್ರಾಲೋಚನಾಸಭೆ, ರಾಜ್ಯದ ವಿವಿಧ ಅಂಗಗಳು, ಯುದ್ಧ ಮತ್ತು ಶಾಂತಿ ಕಾಲದ ರಾಜನೀತಿ ಎಲ್ಲ ಅದರಲ್ಲಿದೆ. ಹಸ್ತಿ, ಅಶ್ವ, ರಥ, ಪದಾತಿಗಳನ್ನೊಳಗೊಂಡ ಚಂದ್ರಗುಪ್ತನ ಮಹಾ ಸೇನೆಯ ವಿವರವಿದೆ. ಆದಾಗ್ಯೂ “ಬರೀ ಸಂಖ್ಯೆ ಇದ್ದರೆ ಮಾತ್ರ ಸಾಲದು. ಶಿಸ್ತು ಸಂಘಟನೆ ಮತ್ತು ಸರಿಯಾದ ನಾಯಕತ್ವವಿಲ್ಲದೆ ಅದೇ ಒಂದು ಭಾರವಾಗಬಹುದು” ಎಂದಿದ್ದಾನೆ ಚಾಣಕ್ಯ. ರಕ್ಷಣೆ ಮತ್ತು ಕೋಟೆಕೊತ್ತಲಗಳ ವಿಷಯವನ್ನೂ ತಿಳಿಸಿದ್ದಾನೆ.

ಅದರಲ್ಲಿ ಉಲ್ಲೇಖಿಸಿರುವ ಇತರ ವಿಷಯಗಳೆಂದರೆ ವ್ಯಾಪಾರ ಉದ್ಯಮ, ಶಾಸನ ರೀತಿ, ನ್ಯಾಯಾ ಸ್ಥಾನಗಳು, ಸ್ಥಳೀಯ ಆಡಳಿತ, ಸಾಮಾಜಿಕ ಸಂಪ್ರದಾಯಗಳು, ವಿವಾಹ ಮತ್ತು ವಿವಾಹ ವಿಚ್ಛೇದನ, ತೆರಿಗೆ ವಿಧಿಸುವ ನೀತಿ ಮತ್ತು ತೆರಿಗೆಗಳು, ವ್ಯವಸಾಯ, ಗಣಿಗಳು ಮತ್ತು ಕಾಶ್ಯಾಗಾರಗಳ ಕೆಲಸ, ಕುಶಲಕರ್ಮಿಗಳು, ಪೇಟೆಗಳು, ಹಣ್ಣಿನ ವ್ಯವಸಾಯ, ಕೈಗಾರಿಕಾ ವಸ್ತು ನಿರ್ಮಾಣ; ನೀರಾ ವರಿ ಕೆಲಸಗಳು, ನಾಲೆಗಳು, ಹಡಗುಗಳು ಮತ್ತು ಯಾನಸೌಕಯ್ಯ, ಸಂಘಗಳು, ಜನಗಣಿತಿಯ ಕೆಲಸ, ಮೀನು ಹಿಡಿಯುವುದು, ವಧಾಗೃಹಗಳು, ರಹದಾರಿಗಳು, ಸೆರೆಮನೆಗಳು, ವಿಧವಾ ವಿವಾಹಕ್ಕೆ ಅವಕಾಶವಿತ್ತು. ಕೆಲವು ಸಂದರ್ಭಗಳಲ್ಲಿ ವಿವಾಹವಿಚ್ಛೇದನಕ್ಕೂ ಅವಕಾಶವಿತ್ತು.

ಚೀನ ದೇಶದಲ್ಲಿ ತಯಾರಾದ 'ಚೀನ ಪಟ್ಟ' ಎಂಬ ರೇಷ್ಮೆ ಬಟ್ಟೆಯ ಹೆಸರಿನ ಉಲ್ಲೇಖವಿದೆ. ಭಾರತದಲ್ಲಿ ತಯಾರಾದ ರೇಷ್ಮೆಯನ್ನು ಈ ಬಟ್ಟೆಯಿಂದ ಗುರ್ತಿಸಲು ಈ ರೀತಿ ಕರೆದಿದ್ದಾರೆ.

——————


* (ಪ್ರಾಯಶಃ ಚತುರಂಗದ ಆಟ ಈ ಸೈನ್ಯದ ನಾಲ್ಕು ಅಂಗಗಳ ಭಾವನೆಯಿಂದಲೇ ಹುಟ್ಟಿರಬೇಕು. ನಾಲ್ಕು ಜನರು ಆಡುವ ಈ ಆಟವನ್ನು ಆಲ್ಬೆರುನಿ ವರ್ಣಿಸಿದ್ದಾನೆ.)