ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ
137

ಪ್ರಯೋಗಿಸಿವೆ. 'ಗುಣಸುಂದರಿ' ಕೂಡ, ಪ್ರಯೋಗ ರೂಪದಲ್ಲಿ ಮಾರ್ಪಾಡು ಮಾಡಿದರೆ, ಸತ್ವವುಳ್ಳ ಕಥೆ, ಆದರೆ ಅದನ್ನು 'ಪಾಪಣ್ಣ ವಿಜಯ'ವಾಗಿ ಭಾವಿಸುವುದು ಅ-ಕಲಾತ್ಮಕ. ಅದು ಗುಣಸುಂದರಿ, ಚಂದ್ರಸೇನ ಚರಿತೆಯೇ ಆಗಬೇಕು.
ಆಧುನಿಕ ವಸ್ತುವನ್ನು ರಂಗದ ಪರಿಕರವಾಗಿ ಉಪಯೋಗಿಸುವಾಗ, ಖಚಿತವಾದೊಂದು ಕಲಾಧೋರಣೆ ಇಲ್ಲವಾದರೆ, ಅದು ಬರಿಯ ತೆಳುವಾದ, ಈ ಕೆಲವೊಮ್ಮೆ ಹಾನಿಕಾರಕವಾದ ಬರಿಯ ನವೀನ ಆಕರ್ಷಣೆ (cheap novelty) ಆಗಿ ಬಿಡುತ್ತದೆ. ಮರದ ಆಭರಣ, ಹತ್ತಿ ಬಟ್ಟೆಗಳು ನಿರ್ಮಿಸುತ್ತಿದ್ದ ಅತಿ ಸುಂದರ ವೇಷ ಆಕಾರವನ್ನು, ಮಣಿ ಸರಕು ಮತ್ತು ನೈಲೆಕ್ಸ್ ಬಟ್ಟೆಗಳು ನಾಶ ಮಾಡಿ ಬಿಟ್ಟಿವೆ. ಪುಂಡು ವೇಷದ ಭುಜಕೀರ್ತಿಯ ಸ್ಥಾನಕ್ಕೆ ಬಂದ ಪುಗ್ಗೆ (ಫ್ರಿಲ್ಸ್) ಪೌರಾಣಿಕ ವೀರರನ್ನು ಐರೋಪ್ಯ ರಾಜಕುಮಾರರಂತೆ ಮಾಡಿವೆ. (ಫ್ರಿಲ್ ಎನ್ನುವುದು ಪೋರ್ಚುಗೀಸ್ -ಇಂಗ್ಲೀಷ್ ಮೂಲದಿಂದ ಬಂದ ವಸ್ತ್ರ ವಿನ್ಯಾಸ)
ರಂಗದಲ್ಲಿ ಸೌಲಭ್ಯಕ್ಕಾಗಿ, ನಾವು ಬಳಸುವ ಟ್ಯೂಬುಗಳು ವೇಷಗಳ ಕಾಂತಿಯನ್ನು ಸಪಾಟಾಗಿ, ಫ್ಲಾಟ್ ಮಾಡಿ ಮಂಕಾಗಿಸುತ್ತವೆ. ಇವು ಅವಿಚಾರಿತ ನವೀನ ವಸ್ತು ಪ್ರಯೋಗದ ಉದಾಹರಣೆ. ಇದೇ ತರ್ಕವನ್ನು ಕಥಾನಾವೀನ್ಯಕ್ಕೂ ವಿಸ್ತರಿಸಿ ನೋಡಬಹುದು.
ಕಲೆಯಲ್ಲಿ ಪ್ರಯೋಗ, ನಾವೀನ್ಯ ಮತ್ತು ಕಲಾರೂಪ ವಿಸ್ತರಣಕ್ಕೆ ಶೈಲಿಯ ಅರಿವು, ಅದರ ಮಿತಿಯ ತಿಳಿವು ಎರಡೂ ಬೇಕು. ಸುಧಾರಣೆ ಎಂಬುದು ಸು-ಧಾರಣೆ ಆಗಬೇಕು, ಕಲೆಯ ಧಾರಣಾಶಕ್ತಿಯನ್ನು ನೋಡಿ, ಅದನ್ನು ಅದೇ ಆಗಿ ವಿಸ್ತಾರಗೊಳಿಸುವ ಕೆಲಸ ಅದು. ತುಂಬ ಜವಾಬ್ದಾರಿಯ, ಸಿದ್ಧತೆಯ ಅಗತ್ಯವಿರುವ ಕೆಲಸ. ಅಷ್ಟು ಮಾಡಲಾಗದಿದ್ದರೆ, ಇರುವ ಸಾಂಪ್ರದಾಯಿಕ ಸೌಂದರ್ಯವನ್ನಾದರೂ ಬೆಳೆಸೋಣ, "ಹೊಸತು ಕಟ್ಟಲಾಗದಿದ್ದರೆ, ಹಳತನ್ನಾದರೂ ರಕ್ಷಿಸೋಣ” ಎಂಬ ನಿಲುಮೆ ಈಗ ಅತ್ಯಂತ ತುರ್ತಿನ ಅಗತ್ಯವಾಗಿ ನಿಂತಿದೆ. ತೇಪೆ, ತುರುಕುವಿಕೆ, ರೂಪಭಂಗಗಳಿಂದ ಕಲೆ ಸುಧಾರಣೆ ಆಗುವುದಿಲ್ಲ. ಕಲೆಯ ಅಂದವನ್ನು ನಾಶಪಡಿಸಿದ ಯಾ ಬೆಳೆಸುವ ಹೊಣೆ ವಿಶೇಷತಃ ನಮ್ಮ ಕಾಲದ ಜನರ ಮೇಲೆ ಬಿದ್ದಿದೆ. ಕಾರಣ -ಈಗ ಬದಲಾವಣೆಗಳು ಬಹುವೇಗದಿಂದ ಆಗುತ್ತಿವೆ. ಕಲೆಗಳ, ವ್ಯವಸಾಯೀಕರಣ ತಪ್ಪಲ್ಲ. ಆದರೆ ಮಾರ್ಕೆಟೀಕರಣ, ಅಭಿರುಚಿ ಪತನ (ವಲ್ಗರೈಸೇಶನ್)ಗಳಿಂದಾಗಿ, ಒಂದು

ಸುಂದರ ಮಾಧ್ಯಮದ ವಿರೂಪೀಕರಣಕ್ಕೆ ನಾವು ಸಾಕ್ಷಿಗಳಾಗಬೇಕಾಗಿ ಬಂದಿದೆ. ಇನ್ನಷ್ಟು

• ಡಾ. ಎಂ. ಪ್ರಭಾಕರ ಜೋಶಿ