ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ
59

ಹಾಡುವಿಕೆಯು ಪ್ರಸಂಗಕ್ಕೆ ಸಂಗೀತರೂಪವನ್ನು ನೀಡುತ್ತದೆ. ರಾಗ, ನಾದ, ಭಾವಗಳಿಂದ ಸಂವಹನಗೊಳಿಸುತ್ತದೆ. ಅದಕ್ಕೆ ಹಿಮ್ಮೇಳವು ಜೊತೆ ಸೇರಿ, ಈ ಕ್ರಿಯೆಯನ್ನು ಪೂರೈಸುತ್ತದೆ. ಈ ಹಾಡುಗಾರಿಕೆ (ಭಾಗವತಿಕೆ) ಹಿಮ್ಮೇಳಗಳು ರಂಗದ ನೃತ್ಯ, ಮಾತು, ಚಲನೆಗಳಿಗೆ ಆಧಾರ ಮತ್ತು ನಿಯಂತ್ರಕ. ಈ ಹಿಮ್ಮೇಳಕ್ಕೂ ಯಕ್ಷಗಾನದ ವೇಷ, ನೃತ್ಯ, ಅಭಿವ್ಯಕ್ತಿ, ವಿಧಾನಗಳಿಗೂ ಸಂಬಂಧವಿದೆ. ಚೆಂಡೆ-ಮದ್ದಲೆಗಳೆಂಬ ವಾದ್ಯಗಳು, ಪದ್ಯದೊಂದಿಗೆ ಮಾತ್ರವಲ್ಲದೆ ಪ್ರವೇಶ, ಬೇಟೆ, ಜಲಕೇಳಿ, ಯುದ್ಧ, ಉದ್ಭವ, ನಿಧನ, ನಿರ್ಗಮನ, ಏಳು, ಬೀಳು - ಮುಂತಾದ ಹಲವು ಘಟನೆ, ಭಾವನೆಗಳಿಗೆ ಹಿಮ್ಮೇಳವು ನಾದ, ಲಯ ಒದಗಿಸುತ್ತದೆ. ಮಾತಿಗೂ ಅಲ್ಲಲ್ಲಿ ಗತ್ತು ಒದಗಿಸುತ್ತದೆ. ವಾದ್ಯಗಳು, ಕ್ರಿಯೆಗಳಿಗೆ ಆಧಾರ, ಭಾವಕ್ಕೆ ಪೂರಕ. ಅದಕ್ಕೂ ವಿಶಿಷ್ಟ 'ಕ್ರಮ'ಗಳಿವೆ. ಹಾಡು ಹಿಮ್ಮೇಳ, ವಾದ್ಯಗಳು ಪಾತ್ರಾನುಗುಣವಾಗಿ, ಭಾವಾನುಗುಣವಾಗಿ, ಕಾಲಾನುಗುಣವಾಗಿ (ಪ್ರದರ್ಶನದ ಅವಧಿ ಮತ್ತು ಪೂರ್ವ, ಮಧ್ಯ, ಉತ್ತರ ಇತ್ಯಾದಿ ಘಟ್ಟ) ಸೂಕ್ಷ್ಮ ವ್ಯತ್ಯಾಸಗಳನ್ನು ಹೊಂದಿರುತ್ತವೆ. ಇದರಲ್ಲಿ ಅಪಾರ ಪರಿಜ್ಞಾನ, ಕೌಶಲ, ಕಲೆಗಾರಿಕೆಗಳ ಸಂಗತಿಗಳಿವೆ.

-6-

'ಅರ್ಥ'ವೆಂಬ ಮಾತುಗಾರಿಕೆಯು ಪದ್ಯಗಳನ್ನಾಧರಿಸಿದ ಆಶುಭಾಷಣ, ಅಂದರೆ, ಹಲವು ಕಲಾವಿದರು ರಂಗದಲ್ಲಿ ನಿರ್ಮಿಸುವ ನಾಟಕ ಅದು. ಅರ್ಥಗಾರಿಕೆಯೆಂಬುದು ನಮ್ಮ ದೇಶದ ಶ್ರೇಷ್ಠ ವಾಙ್ಮಯ'ಪ್ರಕಾರಗಳಲ್ಲಿ ಒಂದಾಗಿದೆ, ವಿವಿಧ ಕ್ಷೇತ್ರಗಳ ಉನ್ನತೋನ್ನತವಾದ ಸೃಜನದ ಮಾದರಿಗಳ ಜೊತೆ ಹೋಲಿಸಲು ಅರ್ಹವಾಗಿದೆ. ಪದ್ಯಗಳ ಸ್ಥೂಲವಾದ ಆಧಾರದಿಂದ ಸಾಗುವ ಈ ಮಾತುಗಾರಿಕೆಯು ಒಂದು ಬಗೆಯ ಆಶುನಾಟಕ. ಈ ನಾಟಕ ರಚನೆಗೆ ಅಧಾರವಾದ ಕ್ರಮಗಳೂ, ವ್ಯವಸ್ಥೆಯೂ ಉಂಟು. ಪೀಠಿಕೆ, ಸಂವಾದ, ಸ್ವಗತಗಳನ್ನು, ಪದ್ಯದ, ಪ್ರಸಂಗದ ಮತ್ತು ಪಾತ್ರದ ಒಟ್ಟು ಸ್ವರೂಪಕ್ಕೂ, ವಿಶಿಷ್ಟ ಸನ್ನಿವೇಶಕ್ಕೂ ಹೊಂದಿಸಿ ಅರ್ಥವನ್ನು ನುಡಿಯಲಾಗುತ್ತದೆ. ಅದರಲ್ಲಿ ಎತ್ತುಗಡೆ (ಸಂದರ್ಭ ಕೊಡುವಿಕೆ), ಸಂಕ್ಷೇಪ, ವಿಸ್ತಾರ, ವಾದ ಸಂವಾದ ಮೊದಲಾಗಿ ವಿಧಾನಗಳಿವೆ. ಶತಮಾನಗಳಿಂದ ಬೆಳೆದು ಬಂದಿರುವ ಅರ್ಥಗಾರಿಕೆಗೆ, ಹಲವು ಪರಂಪರೆಗಳೂ, ಶ್ರೀಮಂತವಾದ ಕಲಾಸ್ವರೂಪವೂ ಇವೆ.

ಪದ್ಯ ಅರ್ಥಗಳ ಸಂಬಂಧವು ಬಹಳ ರಹಸ್ಯಮಯ. ಕಲಾವಿದನ ಸಂಸ್ಕಾರ, ಚಿಂತನ, ಪಾಂಡಿತ್ಯ, ಅನುಭವ, ಕಲ್ಪನೆ, ಮೊದಲಾದುವುಗಳನ್ನು ಹೊಂದಿಕೊಂಡು, ಅರ್ಥಗಾರಿಕೆಯನ್ನು

• ಡಾ. ಎಂ. ಪ್ರಭಾಕರ ಜೋಶಿ