ಈ ಪುಟವನ್ನು ಪ್ರಕಟಿಸಲಾಗಿದೆ
60
ಮುಡಿ

ರಚಿಸಿ ಮಂಡಿಸಲು ವಿಫುಲವಾದ ಅವಕಾಶಗಳಿವೆ, ಸವಾಲುಗಳಿವೆ. ಪ್ರಸಂಗದ ಸರಿಯಾದ ಮಾಹಿತಿ, ನಾಟಕೀಯ ಕೌಶಲ, ಭಾಷೆಯ ಹಿಡಿತ, ಸ್ವರಸಾಮರ್ಥ್ಯ, ಕಲ್ಪನಾಶೀಲತೆ, ಕ್ಷಿಪ್ರ ಪ್ರತಿಕ್ರಿಯಾ ಸಾಮರ್ಥ್ಯ, ಸಂವಾದಗುಣ, ಅನುಭವ ಮೊದಲಾದ ಹತ್ತಾರು ಗುಣಗಳನ್ನು ಅರ್ಥಗಾರಿಕೆ ಬಯಸುತ್ತದೆ. ಆಶುಭಾಷಣದಲ್ಲಿರುವ ಸ್ವಾತಂತ್ರ್ಯವೆ ಅದರ ದೊಡ್ಡ ಶಕ್ತಿ, ಮತ್ತು ಅದರ ದೌರ್ಬಲ್ಯವೂ ಹೌದು. ಅನೇಕ ಕಲಾವಿದರು, ಯಕ್ಷಗಾನದ ಮಾತುಗಾರಿಕೆಯನ್ನು ಉತ್ಕೃಷ್ಟ ಮಟ್ಟದಲ್ಲಿ ನಿರ್ವಹಿಸಿ ಬೆಳೆಸಿದ್ದಾರೆ. ನೃತ್ಯದಂತೆಯೇ ಅರ್ಥದ ವಿಧಾನ, ಸ್ವರ, ವಿಷಯ, ವೇಗ ಮೊದಲಾದುವು ಪಾತ್ರ ಸ್ವಭಾವಕ್ಕನುಗುಣವಾಗಿ ಇರಬೇಕಾದುದು ಅಪೇಕ್ಷಿತ. 'ಅನುಭವ' ಎಂದು ಹೇಳಲಾಗುವ ಪುರಾಣ ಮಾಹಿತಿ, ಸಂಪ್ರದಾಯದ ಅರಿವುಗಳು ಅರ್ಥಗಾರಿಕೆಯಲ್ಲಿ ಮುಖ್ಯ. ಪಾತ್ರವು ಪೌರಾಣಿಕವಾದರೂ, ಪ್ರಸಂಗದ ಕಥೆಯು ನಿಶ್ಚಿತವಾಗಿದ್ದರೂ ಅರ್ಥಗಾರಿಕೆಯ ಸಾಧ್ಯತೆಗಳು ಅನಂತ. ಇಲ್ಲಿ ಪ್ರಸಂಗವು ನಿಮಿತ್ತ, ಅರ್ಥದಾರಿಯ ಗ್ರಹಿಕೆ, ಲೋಕಗ್ರಹಿಕೆಗಳಿಂದ ಅರ್ಥದ ವಿಸ್ತರಣ. ಅದರ ಹೆಸರಾದ 'ಅರ್ಥ ಮಾತಾಡುವಿಕೆ' ಎಂಬುದು ಅರ್ಥಪೂರ್ಣ, ಕಾರಣ ಅರ್ಥೈಸುವಿಕೆ. ತಾನೇ ಪಾತ್ರವಾಗಿ 'ಮಾತಾಡುವುದು'!

-7-

ಪ್ರದರ್ಶನಕ್ಕೆ ಪ್ರಸಂಗದ ಅಳವಡಿಕೆಯು 'ಮನೋಧರ್ಮ'ಕ್ಕೆ ಅವಕಾಶ ನೀಡುತ್ತದೆ. ಪ್ರಸಂಗದಲ್ಲಿಲ್ಲದ ಪಾತ್ರಗಳು ಬರುತ್ತವೆ. ಇರುವ ಪಾತ್ರಗಳನ್ನು ಲೋಪಗೊಳಿಸುವುದಿದೆ. ಸನ್ನಿವೇಶಕ್ಕೆ ಅಗತ್ಯವಿರುವ ಪದ್ಯಗಳನ್ನು ಸೇರಿಸಿ (ಕಿಸೆಪದ್ಯ) ಹಾಡುವುದುಂಟು. ಕತೆಯನ್ನು ಹಾರಿಸುವುದಿದೆ. ಪ್ರಸಂಗ ಸಂಪಾದನ ರಂಗದಲ್ಲೆ ಜರಗುವುದಿದೆ. ಈ ಕೆಲಸವು ಒಪ್ಪಂದದಿಂದ ಪೂರ್ವಭಾವಿಯಾಗಿ ನಡೆಯಬಹುದು. ಒಟ್ಟಿನಲ್ಲಿ ರಂಗದ ಕ್ರಿಯೆಗೆ ಆಧಾರವಾದ ಪ್ರಸಂಗದ ಸಾಗುವಿಕೆಯ ಅನೇಕ ಅಂಶಗಳಿಗೆ ಭಾಗವತನೆಂಬ ಹಾಡುಗಾರನೂ, ಹಿಮ್ಮೇಳವೂ ಕಾರಣ ಮತ್ತು ಹೊಣೆಗಾರ ಸ್ಥಾನದಲ್ಲಿರುತ್ತವೆ.

-8-

ಪ್ರದರ್ಶನವನ್ನು ರೂಪಿಸುವ, ಅದರಲ್ಲಿ ಪ್ರಭೇದಗಳನ್ನು ಕಾಣಿಸುವ ಒಂದು ಅಂಶವು 'ತಿಟ್ಟು' ಎಂಬ ಪ್ರಾದೇಶಿಕ ಶೈಲಿಭೇದ, ತೆಂಕು-ಬಡಗು-ಉತ್ತರಕನ್ನಡವೆಂಬ ಮೂರು

ಡಾ. ಎಂ. ಪ್ರಭಾಕರ ಜೋಶಿ