ಈ ಪುಟವನ್ನು ಪ್ರಕಟಿಸಲಾಗಿದೆ

ಸಾಮಗರಂತಹ ಪ್ರಖ್ಯಾತ ಕಲಾವಿದರೊಂದಿಗೆ ಭಾಗವಹಿಸುತ್ತಾ ಬಂದ ಜೋಶಿ ಅವರಷ್ಟೇ ಎತ್ತರದ ಕೀರ್ತಿ, ಪ್ರಸಿದ್ಧಿಯನ್ನು ಪಡೆದಿದ್ದಾರೆ. ಶೇಣಿ ಸಾಮಗರ ಬಗ್ಗೆ ಒಂದು ಮಾತಿದೆ. ಒಂದು ಹೊಸೆದ ಹಗ್ಗ: ಇನ್ನೊಂದು ಮಸೆದ ಕತ್ತಿ, ಒಂದು ಕಟ್ಟಿ ಕೆಡವಿದರೆ ಇನ್ನೊಂದು ಕತ್ತರಿಸಿ ಚೆಲ್ಲುತ್ತದೆ ಅಂತ. ಜೋಶಿ ತಮ್ಮ ಅರ್ಥಗಾರಿಕೆಯಲ್ಲಿ ಈ ಎರಡನ್ನೂ ರೂಢಿಸಿಕೊಂಡವರು. ಅವರು ಕಟ್ಟಿ ಕೆಡಹುವ ಹೊಸೆದ ಹಗ್ಗವೂ ಆಗಬಲ್ಲರು; ಕತ್ತರಿಸಿ ಚೆಲ್ಲುವ ಕತ್ತಿಯೂ ಆಗಬಲ್ಲರು. ಆದರೆ ಇದೇ ಅವರ ಅರ್ಥಗಾರಿಕೆಯ ಮುಖ್ಯ ದ್ರವ್ಯವಲ್ಲ. ಅವರೊಬ್ಬ ಸರಸಂಭಾಷಣಾಕಾರರು, ತಾಳಮದ್ದಳೆ ಯಲ್ಲಿ ಸಂಭಾಷಣೆಗೆ ಹೆಚ್ಚು ಒದಗಿಬರಬಲ್ಲವರು. ಹೇಳುವಂತಹ ಸ್ವರಭಾರವಾಗಲೀ, ಶ್ರುತಿ ಮನೋಹರತೆಯಾಗಲೀ ಜೋಶಿಯವರದು ಅಲ್ಲ. ಆದರೂ ಅವರು ಜನಮಾನಸ ದಲ್ಲಿ ನೆಲೆಯೂರಿದ ಪರಿ, ಬೀರಿದ ಪ್ರಭಾವ ಅಸದೃಶವಾದುದು. ಅರ್ಥಧಾರಿಯೊಬ್ಬನಿಗೆ ವಿಶೇಷ ಕಂಠಸಂಪತ್ತು ಬೇಕು; ಸ್ವರಭಾರ ಬೇಕು; ಯಕ್ಷಗಾನ ಶೈಲಿ ಇರಬೇಕು ಎಂಬ ಸಾಂಪ್ರದಾಯಿಕ ನಂಬಿಕೆಯನ್ನು ಸುಳ್ಳುಮಾಡಿದವರು ಜೋಶಿ, ಅದಕ್ಕೆ ಅವರು ಕಂಡುಕೊಂಡ ಹಾದಿ-ಸರಸ ಸಂಭಾಷಣೆ, ಸಂವಾದಪ್ರಧಾನವಾದ ಮೊನಚಾದ, ಚಿಂತನಶೀಲ, ವಿಚಾರಪೂರ್ಣ ಮಾತು. ಪಾತ್ರೋಚಿತವಾಗಿ ಇಂದಿನ ರಾಜಕಾರಣದ ವಿದ್ಯಮಾನವನ್ನು ಅಂದಿನ ಪುರಾಣಕ್ಕೆ ಅನ್ವಯಿಸಿ ಹೇಳುವುದು, ಸಮಾಜದ ರೀತಿ- ನೀತಿಗಳನ್ನು ವಿಡಂಬಿಸಿ ಅರ್ಥಗಾರಿಕೆಗೆ ಸ್ವಾರಸ್ಯ ತುಂಬುವುದು, ಸದಭಿರುಚಿಯ ಹಾಸ್ಯದ ಹೊದಿಕೆಯಲ್ಲಿ ಪ್ರಖರ ವೈಚಾರಿಕತೆಯನ್ನು ಬಿತ್ತುವುದು, ಪಾತ್ರಶಿಲ್ಪವನ್ನು ಕೊನೆಯವರೆಗೂ ಕಾದುಕೊಳ್ಳವುದು. ಇಂತಹ ಗುಣಸಂಪತ್ತುಗಳೇ ಅವರನ್ನು ಅಗ್ರಮಾನ್ಯ ಕಲಾವಿದರನ್ನಾಗಿ ಮಾಡಿವೆ. ಕೆಲವು ಪಾತ್ರಗಳು ಅವರಿಗೇ ಮೀಸಲು ಎಂಬಂತಹ ಖ್ಯಾತಿ ಪಡೆದವರು ಅವರು. ಅವರು ವಾಲಿ, ರಾವಣ, ಮಾಗಧ, ಕೌರವ, ಅರ್ಜುನ, ಭೀಷ್ಮ, ಪರಶುರಾಮ, ವೀರಮಣಿಯಂತಹ ಪಾತ್ರಗಳನ್ನು ಚಿತ್ರಿಸುವ ರೀತಿ ಅನನ್ಯ ವಾದುದು.

ಜೋಶಿ ಒಬ್ಬ ಅರ್ಥಧಾರಿಯಷ್ಟೇ ಅಲ್ಲ. ಅವರೊಬ್ಬ Academic Person — ಪಾಂಡಿತ್ಯದ, ಶೈಕ್ಷಣಿಕ ಶಿಸ್ತಿನ ಮನುಷ್ಯ ಕಲಾವಿದರಲ್ಲಿ ಇಂತಹ ವ್ಯಕ್ತಿಗಳನ್ನು ನೋಡುವುದು ಬಹು ಅಪರೂಪ. ಜೋಶಿ ತಮ್ಮ ಬದುಕನ್ನು ಒಂದೇ ಮುಖವಾಗಿ ತಿರುಗಿಸಿ, ಒಂದೇ ಒಂದು ಧೈಯ-ಸಾಧನೆಗಾಗಿ ಮೀಸಲಾಗಿರಿಸಿದವರಲ್ಲ. ಹಲವು ಕೆಲಸಗಳನ್ನು ಆವಾಹಿಸಿಕೊಂಡು ಅನವರತ ದುಡಿಯುವುದು ಅವರ ಸ್ವಭಾವ. ಡಾ.ಕೆ.ಶಿವರಾಮ ಕಾರಂತರು ತಮ್ಮ “ಹುಚ್ಚು ಮನಸ್ಸಿನ ಹತ್ತು ಮುಖಗಳು” ಆತ್ಮವೃತ್ತದಲ್ಲಿ ಸೋಲು ಗೆಲುವಿನ ಬಗ್ಗೆ ವ್ಯಾಖ್ಯಾನಿಸುವಾಗ ಒಂದು ಮಾತನ್ನು ಹೇಳುತ್ತಾರೆ- “ಎಲ್ಲಿಯ ತನಕ ನಾವು ಕೆಲಸದಲ್ಲಿ ಆಸಕ್ತಿಯನ್ನು ವಹಿಸುತ್ತೇವೋ, ಅದರ ಅವಶ್ಯಕತೆಯನ್ನೂ, ಚೆಲುವನ್ನೂ ಮನಗಾಣುತ್ತೇವೋ, ಅಲ್ಲಿಯ ತನಕ ಕೆಲಸವೇ ಆನಂದ” ಎಂದು. ಇದು ಜೋಶಿಯವರಿಗೆ ಅತ್ಯಂತ ಸಮಂಜಸವಾಗಿ ಒಪ್ಪುವ ಮಾತು. ಅವರು ಯಾವುದೇ ಕೆಲಸವನ್ನು

ವಾಗರ್ಥ ಗೌರವ / 33