ಈ ಪುಟವನ್ನು ಪ್ರಕಟಿಸಲಾಗಿದೆ

ಅರ್ಧ ಫರ್ಲಾಂಗಿನಷ್ಟು ದೂರದಿಂದ ಈಗ ಸುಮಾರು 30 ವರ್ಷಗಳ ಹಿಂದೆ. ಆಗ ನಾನು ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದೆ. ಒಂದು ದಿನ ಮುಸ್ಸಂಜೆಯ ವೇಳೆ ನನ್ನ ಕಾರ್ಯಾಲಯದ ಪಕ್ಕದಲ್ಲಿ ಇದ್ದ ನೆಹರೂ ಮೈದಾನದಲ್ಲಿ ಮೈಕಾಸುರನ ತಾರಕ ಧ್ವನಿ ಕೇಳಿ ಬಂದಾಗ ಅದೇನದು ಎಂದು ಶೋಧಿಸುವ ಬಯಕೆಯಿಂದ ಮೈದಾನಿನತ್ತ ನಡೆದುಕೊಂಡು ಹೋದರೆ ಕಂಡದ್ದು ಅಕ್ಷರಶಃ ಸಹಸ್ರಾರು ಜನರ ಜಂಗುಳಿ, ನಡುವೆ ಬಹು ಎತ್ತರದಲ್ಲೊಂದು ತಾತ್ಕಾಲಿಕ ವೇದಿಕೆ; ವೇದಿಕೆಯ ಮೇಲೆರಡು ಮನುಷ್ಯಾಕೃತಿಗಳು - ದೂರ ಮತ್ತು ಅಸಮರ್ಪಕ ಹೊನಲು ಬೆಳಕಿನಲ್ಲಿ ಅಸ್ಪಷ್ಟವಾಗಿ ಕಾಣಿಸುತ್ತಿದ್ದಾರೆ. ಅವರೊಲ್ಲಬ್ಬ ಸ್ಪುರದ್ರೂಪೀ ತರುಣ ಎಂಬುದು ಖಚಿತವಾಗಿ ಕಾಣುತ್ತದೆ. ಹತ್ತಾರು ಧ್ವನಿವರ್ಧಕಗಳ ಮೂಲಕ ಎಲ್ಲಾ ದಿಕ್ಕಿನಿಂದ ಕಿವಿಗೆ ರಾಚುವಂತೆ ಅಸ್ಥಲಿತವಾಗಿ ಹರಿದು ಬರುತ್ತಿದ್ದ ಮಾತಿನ ಓಘ, ವಿಷಯ ವಿಸ್ತಾರ, ಶಬ್ದಗಳ ಜಾಲವನ್ನು ನೇಯುವ ಚಾಕಚಕ್ಯತೆ, ಪರಸ್ಪರ ಮಾತಿಗೆ ಮಾತು ಪೋಣಿಸುತ್ತಾ ಮಂದ್ರ-ತಾರಕಗಳ ಸಮರ್ಥ ಉಪಯೋಗದಿಂದ ಪೂರ್ವಪಕ್ಷ ಪ್ರತಿಪಕ್ಷದ ಮಂಡನೆ, ಖಂಡನೆಗಳನ್ನು ಸ್ಥಾಪಿಸುವ ಕೌಶಲ ಇವೆಲ್ಲಾ ನನ್ನನ್ನು ಒಮ್ಮೆಲೇ ಸೆಳೆದು ನಿಲ್ಲಿಸಿತು. ಇಬ್ಬರೂ ಮಹನೀಯರೂ 'ಆಸ್ತಿಕತೆ' ಮತ್ತು 'ನಾಸ್ತಿಕತೆ'ಯ ಪರ ವಿರೋಧ ಚರ್ಚೆಯಲ್ಲಿ ತೊಡಗಿದ್ದಾರೆಂದು ಮನದಟ್ಟಾಯಿತು. ಕೇಳಿದಂತೆಲ್ಲಾ ಇನ್ನಷ್ಟು ಕೇಳಬೇಕೆಂಬ ಆಸೆಯುಂಟಾಯಿತು. ಪಕ್ಕದಲ್ಲಿದ್ದವರೊಡನೆ ವಿಚಾರಿಸಿದಾಗ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಬ್ಬರೂ ನಾನು ಅದುವರೆಗೆ ಕೇವಲ ಕೇಳಿ, ಓದಿ ಪರಿಚಯಿಸಿಕೊಂಡಿರುವ ಅಂದಿನ ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯಕ, ಸಾಂಸ್ಕೃತಿಕ ರಂಗಗಳಲ್ಲಿ ಅನನ್ಯ ಕೃಷಿ ಮಾಡಿ ಮನೆಮಾತಾಗಿದ್ದ ವಿದ್ವನ್ಮಣಿಗಳು. ತುಲನಾತ್ಮಕವಾಗಿ ತರುಣರಾಗಿದ್ದವರು ಶ್ರೀ ಪ್ರಭಾಕರ ಜೋಶಿ ಮತ್ತೊಬ್ಬರು ಬಹಮಾನ್ಯ ವಿದ್ವಾಂಸ ಶ್ರೀ ಪೆರ್ಲ ಕೃಷ್ಣ ಭಟ್ಟ ಅವರು ಎಂದು ತಿಳಿದುಬಂತು. ಆ ಸಂದರ್ಭವನ್ನು ನನ್ನ ಮಟ್ಟಿಗೆ ಶ್ರೀ ಜೋಶಿಯವರಿಗೆ ಸಂಬಂಧಿಸಿದಂತೆ 'Love at first sight” ಎಂದು ಬಣ್ಣಿಸದೆ ನಿರ್ವಾಹವಿಲ್ಲ. ಎಷ್ಟೋ ವರ್ಷಗಳ ನಂತರ ನಾನು 'ಶ್ರೀಮಚ್ಛಂಕರ ದಿಗ್ವಿಜಯ' ಕೃತಿಯನ್ನು ಬರೆಯುತ್ತಾ ಶ್ರೀ ಶಂಕರ-ಮಂಡನಮಿಶ್ರರ ನಡುವೆ ನಡೆದ ವಾಗ್ಯುದ್ಧದ ಪರಿಚ್ಛೇದವನ್ನು ಬರೆಯುವಾಗ ಈ ಮಂಗಳೂರಿನ ಮೂವತ್ತು ವರ್ಷಗಳ ಹಳೆಯ ಚಿತ್ರಣ ಆಗೀಗ ಮನಃಪಟಲದಲ್ಲಿ ಮೂಡಿದ್ದಿದೆ. ಸ್ವತಃ ತರ್ಕಶಾಸ್ತ್ರ ಮತ್ತು ಸಾಹಿತ್ಯ ವಿದ್ಯಾರ್ಥಿಯಾಗಿದ್ದ ನನಗೆ ಅಂದಿನ ಆ ಮೂರು ಸಂಜೆಗಳಷ್ಟು ದೀರ್ಘವಾದ ಕಾರ್ಯಕ್ರಮದಲ್ಲಿ ನಾನು ಅನುಭವಿಸಿದ ಉಭಯವಾದಿಗಳ ವಿಷಯದ ಮೇಲೆ ಹಿಡಿತ, ಆಕರ ಸಂಪತ್ತು, ಭಾಷೆಯ ಸೊಗಸು, ಕಂಠಸಿರಿ, ಮಂಡನ-ಖಂಡನಗಳ ಕೌಶಲ, ಅನುದ್ವೇಗಕರ ಸಂವಹನ ಶೈಲಿ, ಪ್ರತಿವಾದಿಯ ಶಬ್ದ, ಅರ್ಥಜಾಲದಲ್ಲಿ ಸಿಲುಕದೆ ನುಣುಚಿಕೊಳ್ಳುವ ವೈಖರಿ-ಇವನ್ನು ನೆನೆದುಕೊಂಡರೆ ರೋಮಾಂಚನವಾಗುತ್ತದೆ. ಅಂದೇ ನಾನು, ದೂರದ ಮಾಳದಲ್ಲಿ ಹುಟ್ಟಿದವರಾದರೂ ಮಂಗಳೂರಿನಲ್ಲಿ ನಮ್ಮ ಸಮೀಪದಲ್ಲೇ ನೆಲೆನಿಂತಿರುವ ಶ್ರೀ ಜೋಶಿಯವರನ್ನು ಒಮ್ಮೆಯಾದರೂ ಭೆಟ್ಟಿಯಾಗ

ವಾಗರ್ಥ ಗೌರವ / 39