ಈ ಪುಟವನ್ನು ಪ್ರಕಟಿಸಲಾಗಿದೆ

ನನ್ನ ಷಷ್ಟ್ಯಬ್ದವನ್ನು ಶಿರಸಿಯ ನೆಲಮಾವು ಮಠದಲ್ಲಿ ಪ್ರೊ. ಜಿ.ಎನ್. ಭಟ್ಟರು ಸಂಘಟಿಸಿದ್ದರು. ಇದನ್ನು ಸಂಘಟಿಸಿ ಇದಕ್ಕಾಗಿ ದುಡಿದ ಸಮಿತಿಯ ಸದಸ್ಯರು, ಕಾರ್ಯಕರ್ತರು ಶುದ್ಧವಾದ ಪ್ರೀತಿ ಅಭಿಮಾನಗಳಿಂದ ಇದನ್ನು ಮಾಡಿದ್ದಾರೆ. ನನ್ನಿಂದ ಯಾವುದೇ ಪ್ರಯೋಜನ ಅವರಿಗಿಲ್ಲ. ನನಗವರು ಋಣಿಗಳೂ ಅಲ್ಲ. ಕೇವಲ ಪ್ರೀತಿ. ಸಾಂಸ್ಕೃತಿಕ ಕ್ಷೇತ್ರದ ದುಡಿಮೆಗೆ, ಕೇಶಕ್ಕೆ, ಸಾರ್ಥಕ್ಯ ಒದಗುವುದು ಇಂತಹ ಕ್ಷಣಗಳಲ್ಲಿ. ಮನ್ನಣೆಯ ವಿಷಯದಲ್ಲಿ ನಾನು ಅದೃಷ್ಟಶಾಲಿಯೇ, ಅರ್ಹತೆ ಪಾಂಡಿತ್ಯಗಳನ್ನು ಮೀರಿದ ಮಾನ್ಯತೆಯನ್ನು ನಾನು ಗಳಿಸಿದ್ದೇನೆ.
ಮಿತ್ರರಾದ ವಿ ಗ.ನಾ. ಭಟ್ಟರು, ಸೀತಾರಾಮ ದಾಮ್ಲಯವರು, ಬಾಲ್ಯಮಿತ್ರ ಬಾಲಚಂದ್ರ ಡೋಂಗ್ರೆಯವರು, ಮತ್ತವರ ಸಹಕಾರಿಗಳು ಮಾಡಿರುವ ಸಿದ್ಧತೆ, ಸಂಘಟನೆ, ನೀಡಿದ ಮಾನ ಸಂಮಾನ ಆತಿಥ್ಯಗಳಿಗೆ ನಾನೇನು ಕೊಡಬಲ್ಲೆ, ಹತ್ತು ಬೆರಳಿನ ಕಾಣಿಕೆ – ನಮಸ್ಕಾರ ಮಾತ್ರ. ಮೈಸೂರಿನ ಜಗಮೋಹನ ಅರಮನೆಯಲ್ಲಿ ಕಲಾಸಂಪದದ ಬಳಿ ಈ ಸಮಾರಂಭ ನಡೆದಿದೆ. ಮೈಸೂರು ಮಹಾರಾಜ ಪರಂಪರೆ ಸಂಸ್ಕೃತಿ ಕ್ಷೇತ್ರಕ್ಕೆ ನೀಡಿದ ಪೋಷಣೆ ಅಸಾಧಾರಣವಾದುದು. ಯಕ್ಷಗಾನದ ಮಹಾಕವಿ ಭಾಗವತ ನಂಜುಂಡ ಕವಿ, ಹಲವು ಪ್ರಸಂಗಗಳ ಕವಿ ಅಳಿಯ ಲಿಂಗರಾಜರು ಮೈಸೂರಿನವರು. ಶ್ರೀಕ್ಷೇತ್ರ ಧರ್ಮಸ್ಥಳದ ಯಕ್ಷಗಾನ ಮೇಳವು ಕ್ರಿ.ಶ. 1800ರ ಸುಮಾರಿಗೆ ಇಲ್ಲಿ ಬಂದು ದಶಕಗಳ ಕಾಲ ನೆಲೆಯಾಗಿದ್ದುದು ಪ್ರಸಿದ್ಧ ವಿಚಾರ. ಶ್ರೀ ಚಾಮುಂಡೇಶ್ವರಿಯ ಈ ಊರಿನಲ್ಲಿ, ಅನೇಕ ಯಕ್ಷಗಾನ ಕಲಾವಿದರು, ನನ್ನ ಬಂಧುಮಿತ್ರರು ನೆಲೆಸಿದ್ದಾರೆ. ನಂಜುಂಡ ಕವಿಯ ವೃಷಬೇಂದ್ರ ವಿಲಾಸವನ್ನು ಪ್ರದರ್ಶನಕ್ಕೆ ಅಳವಡಿಸಿ ನಿರ್ದೇಶಿಸುವ ಒಂದು ಅವಕಾಶ ಕೆಲವು ವರ್ಷಗಳ ಹಿಂದೆ ಒದಗಿದುದನ್ನು (ಜೆ.ಎಸ್.ಎಸ್. ಸಂಸ್ಥೆಯ ಮೂಲಕ), ಹಲವು ಬಾರಿ ಮೈಸೂರಿಗೆ ಬಂದು ಕಾರ್ಯಕ್ರಮಗಳನ್ನು ನೀಡಿರುವುದನ್ನೂ ಸ್ಮರಿಸುತ್ತೇನೆ. ನನಗೆ ಭಾರತೀಯ ತತ್ವಶಾಸ್ತ್ರದಲ್ಲಿ ಆಸಕ್ತಿ ಮೂಡಲು ಕಾರಣವಾದ ಗ್ರಂಥ “ಹಿಂದೂದರ್ಶನ ಸಾರ'ದ ಲೇಖಕರಾದ ಪಂಡಿತರತ್ನಂ ಲಕ್ಷ್ಮೀಪುರಂ ಶ್ರೀನಿವಾಸಾಚಾರ್ಯರು ಮೈಸೂರಿನವರೆಂಬುದು ಉಲ್ಲೇಖನೀಯ. ಜಗದ್ವಿಖ್ಯಾತ ವಿದ್ಯಾಕೇಂದ್ರ ಮೈಸೂರು ವಿಶ್ವವಿದ್ಯಾಲಯವಿರುವ, ಸಾಹಿತಿ ಕಲಾವಿದರು ತುಂಬಿರುವ ಈ ನೆಲೆಯಲ್ಲಿ ಸಂಮಾನಗೊಳ್ಳುವುದು ದೊಡ್ಡ ಗೌರವ.
ಯಾರಿಗೆಲ್ಲ ಕೃತಜ್ಞತೆ ಹೇಳಲಿ? ಬೆಳಗಾರ ನಾನೆದ್ದು ಯಾರಾರ ನೆನೆಯಲಿ? ಎಂದು ಜನಪದ ಕವಿ ಹಾಡಿದಂತೆ ನನ್ನ ಕಲಾ ಸಾಹಿತ್ಯಯಾನದಲ್ಲಿ ಪ್ರೇರಣೆ, ಬೆಂಬಲ, ಪ್ರೋತ್ಸಾಹ ನೀಡಿದವರು ಅಸಂಖ್ಯ. ಎಲ್ಲರಿಗೆ ನನ್ನ ಹೃದಯ ವಂದನೆ.

ನನ್ನ ಊರು ಕಾರ್ಕಳ ತಾಲೂಕಿನ ಮಾಳ, ಪಶ್ಚಿಮ ಘಟ್ಟಕ್ಕೆ ತಾಗಿದ ತಾಲೂಕಿನ ಕೊನೆಯ ಗ್ರಾಮದ ಕೊನೆಯ ಮನೆ ನಮ್ಮದು. ಹಿರಿಯರಿಂದ ಬಂದ ಚಿಕ್ಕ ಕೃಷಿ. ಪ್ರಶಾಂತ ಪರಿಸರ. ಹಲವು ಅನುಕೂಲ ಪ್ರತಿಕೂಲಗಳನ್ನು ಹೊಂದಿ ಬೆಳೆದವನು

ವಾಗರ್ಥ ಗೌರವ / 52