ಈ ಪುಟವನ್ನು ಪ್ರಕಟಿಸಲಾಗಿದೆ

ನಾನು. ನನ್ನ ತಂದೆ ನಾರಾಯಣ ಜೋಶಿಯವರು ಸಂಸ್ಕೃತ, ಮರಾಠಿ ವಿದ್ವಾಂಸರು. ಅಮ್ಮ ಲಕ್ಷ್ಮೀಬಾಯಿ (ಚಂದ್ರಾವತಿ) ಓರ್ವ ಅದ್ಭುತ ಮಹಿಳೆ. ಒಂದು ಅಕ್ಷರ ಬರೆಯುವಷ್ಟು ತಿಳಿಯದ, ಅತ್ಯಂತ ವಿದ್ಯಾವತಿಯಾಗಿ ಬಾಳಿದ ತ್ಯಾಗ-ದುಡಿಮೆಗಳ ಮೂರ್ತಿ. ನನ್ನ ಅಜ್ಜ (ಮಾತಾಮಹ) ಅನಿರುದ್ಧ ಭಟ್ಟರು ವಿಖ್ಯಾತ ಮದ್ದಳೆಗಾರರು, ಗುರು, ಅಣ್ಣಂದಿರು ಮೃದಂಗ ಮದ್ದಳೆ ವಾದಕರು. ಊರಲ್ಲಿದ್ದ ಹಿರಿಯ ಸಮರ್ಥ ಕಲಾವಿದರು, ಶ್ರೀ ಪರಶುರಾಮ ಯಕ್ಷಗಾನ ಸಂಘ ಇವುಗಳಿಂದ ಯಕ್ಷಗಾನದ ಸಮೃದ್ಧ ವಾತಾವರಣವಿತ್ತು. ನಾನು ಕಲಿತ ಪ್ರಾಥಮಿಕ ಶಾಲೆ - ಶ್ರೀ ಗುರುಕುಲ ಶಾಲೆ ಮಾಳ, ಶ್ರೀ ಪರಶುರಾಮ ದೇವಸ್ಥಾನದ ಸಾಂಸ್ಕೃತಿಕ ವಾತಾವರಣ ಈ ಎಲ್ಲದರ ಗಾಢವಾದ ಪ್ರಭಾವದಲ್ಲಿ ಬೆಳದು, ಮುಂದೆ ಉಜಿರೆ, ಕಾರ್ಕಳ, ಧಾರವಾಡಗಳಲ್ಲಿ ಕಲಿತು, ವಿವಿಧ ಪ್ರಭಾವಗಳಿಗೆ ಒಳಗಾಗಿ ಬೆಳೆದವನು. ಕಾರ್ಕಳದ ಶ್ರೀ ಅನಂತಶಯನ ಯಕ್ಷಗಾನ ಸಂಘ, ಶ್ರೀ ವೆಂಕಟರಮಣ ಯಕ್ಷಗಾನ ಕಲಾ ಸಮಿತಿ ಇವು ನನ್ನ ಅರ್ಥಗಾರಿಕೆಗೆ ಪ್ರಧಾನ ವೇದಿಕೆಗಳಾದವು. ಮುಂದೆ ಮಂಗಳೂರಿನಲ್ಲಿ ನೆಲೆಯಾದಾಗ ವಿಸ್ತಾರವಾದ ಸಂಪರ್ಕ. ಮಂಗಳೂರಿನಂತಹ ಅನುಕೂಲಕರ ಕೇಂದ್ರದಲ್ಲಿ ನನಗೆ ನೆಮ್ಮದಿಯ ಉದ್ಯೋಗವಿತ್ತ ಸಂಸ್ಥೆ ಬೆಸೆಂಟ್ ವಿದ್ಯಾಸಂಸ್ಥೆ. ಇವರೆಲ್ಲರಿಗೆ ನಾನು ಸದಾ ಋಣಿ.
ಮುಂದೆ ವೈಯಕ್ತಿಕ ಮತ್ತು ಸಾಂಸ್ಥಿಕವಾದ ನೆಲೆಗಳಲ್ಲಿ ನನ್ನ ವಿವಿಧ ಆಸಕ್ತಿಗಳು ಸಾಗಿದವು. ಅಸಂಖ್ಯ ಮಿತ್ರರು, ಅಭಿಮಾನಿಗಳು, ಪ್ರೋತ್ಸಾಹಕರು ನನ್ನನ್ನು ಬೆಳೆಸಿದರು. ನಾಡಿನಾದ್ಯಂತ, ಪ್ರಾಂತ, ಪರಪ್ರಾಂತಗಳಲ್ಲಿ, ವಿದೇಶಗಳಲ್ಲಿ ನಾನು ಕಾರ್ಯಕ್ರಮಗಳಲ್ಲಿ ಭಾಗಿಯಾದೆ. ಸಂಘ ಸಂಸ್ಥೆಗಳಲ್ಲಿ ಕಾರ್ಯಕರ್ತನಾಗಿ, ಸಂಘಟಕನಾಗಿ, ಪದಾಧಿಕಾರಿ ಯಾಗುವ ಅವಕಾಶ ಸಿಕ್ಕಿತು. ನಾಡಿನ ಅನೇಕ ಧೀಮಂತರ, ಶ್ರೇಷ್ಠರ, ಸಾಧಕರ ಒಡನಾಟ ದೊರಕಿತು. ವಿಸ್ತಾರವಾದ ಸಂಚಾರ ಒದಗಿತು.
ನನ್ನ ಅರ್ಥಗಾರಿಕೆಯ ಬಗೆಗೆ ನಾನು ಹೆಚ್ಚೇನೂ ಹೇಳಬಯಸುವುದಿಲ್ಲ. ಮಹಾನ್ ಕಲಾವಿದರಾದ ಸಾಮಗರು, ಶೇಣಿಯವರು, ದೇರಾಜೆ – ಹೀಗೆ ಅನೇಕರ ಸಹಕಲಾವಿದ ನಾಗಿ ಬೆಳೆದದ್ದು ಅಲಭ್ಯ ಯೋಗ, ನಮ್ಮಂತಹವರ ಕಾಲುಗಳು ಅಂತಹವರ ಹೆಗಲ ಮೇಲೆ ಇವೆ. ಆ ದೊಡ್ಡ ಪರಂಪರೆಗೆ, ಜೊತೆಗೆ ನನ್ನೆಲ್ಲ ಹಿರಿ, ಕಿರಿಯ ಸಹಕಲಾವಿದರಿಗೆ, ಬಂಧು ಮಿತ್ರರಿಗೆ ತಲೆಬಾಗುತ್ತೇನೆ.
ಕರಾವಳಿ, ಮಲೆನಾಡುಗಳ ಎಷ್ಟೆಷ್ಟೋ ಕಡೆ, ಅನ್ನಾನ್ಯ ಪ್ರದೇಶಗಳಲ್ಲಿ ಜನರಿತ್ತ ಆಹ್ವಾನ, ಮನ್ನಣೆ, ಪ್ರೋತ್ಸಾಹ, ಪ್ರೀತಿ, ಆತಿಥ್ಯ ಅದೆಂತಹುದು? ವರ್ಣನೆಗೆ ಮೀರಿದ್ದು, ಆಯೆಲ್ಲ ವ್ಯಕ್ತಿ, ಸಂಸ್ಥೆ, ವೇದಿಕೆಗಳಿಗೆ ಮಣಿಯುತ್ತೇನೆ. ಅವರೆಲ್ಲರ ಋಣ ತೀರಿಸಲಾರೆ. ನನ್ನಿಂದಾಗುವಷ್ಟು ಸಾಂಸ್ಕೃತಿಕ ಕಾರ್ಯವನ್ನು ಮುಂದುವರಿಸುವುದೇ ಸಂದಾಯದ ದಾರಿ ಎಂದು ಭಾವಿಸುತ್ತೇನೆ.

ನನ್ನ ವೈಯಕ್ತಿಕ, ಸಾಂಸ್ಕೃತಿಕ ಯತ್ನ ಯಶಸ್ಸುಗಳಲ್ಲಿ ಬಲು ದೊಡ್ಡ ಪಾಲು ನನ್ನ ಮನೆಯವರದು. ನನ್ನ ಕುಟುಂಬ, ಬಂಧುವರ್ಗ, ಮುಖ್ಯವಾಗಿ ನನ್ನ ಮನೆಯವಳು

ವಾಗರ್ಥ ಗೌರವ / 53