ಈ ಪುಟವನ್ನು ಪ್ರಕಟಿಸಲಾಗಿದೆ
91

ಎತ್ತಿಕೊಂಡ, ಸ್ವೀಕರಿಸಿದ. ಅವರು ಪರಶಿವನ ಒಡನೆ ಬೆರೆತುಕೊಂಡರು. ಅವನಲ್ಲಿ ಸಮರಸರಾದರು.
ಬಸವಣ್ಣನವರಿಗೆ, ಹಿಂದೆ ಆರುಹಿದ ಮೇರೆಗೆ, ಇಬ್ಬರು ಗುರುಗಳು. ಈಶಾನ್ಯಮುನಿಗಳು ಒಬ್ಬರು, ಪ್ರಭುದೇವರು ಇನ್ನೊಬ್ಬರು. ಒಬ್ಬರು ಅವರಿಗೆ ಸಗುಣಭಕ್ತಿಯನ್ನು ಕಲಿಸಿದರು. ಇನ್ನೊಬ್ಬರು ನಿರ್ಗುಣ ಭಕ್ತಿಯನ್ನು ಕಲಿಸಿದರು. ಈಶಾನ್ಯಮುನಿಗಳು ಬಸವಣ್ಣನವರಿಗೆ ಸಗುಣ ಸಂಗಮನಾಥನ ಸ್ಥಾವರ ಲಿಂಗದ ಹಾಗೂ ಇಷ್ಟಲಿಂಗದ ಪೂಜೆ-ಧ್ಯಾನಗಳನ್ನೂ ಪಂಚಾಕ್ಷರೀ ಬೀಜಮಂತ್ರದ ಜಪವನ್ನೂ ಉಪದೇಶಿಸಿದರು. ಬಸವಣ್ಣನವರಲ್ಲಿ ಭಕ್ತಿಯು ಬೆಳೆದು, ಅವರಲ್ಲಿ ನಿಷ್ಠೆಯು ದೃಢವಾಗಿ ನೆಲೆಗೊಂಡು, ಅವರು ಎಲ್ಲವೂ ಪರಶಿವನ ಪ್ರಸಾದವೆ೦ದು ಬಗೆದು ಅದನ್ನು ಬಳಸತೊಡಗಿದರು, ಪ್ರಸಾದ ಜೀವಿಗಳಾದರು. ಅದರಿಂದ ಅವರ ಅಂತರಂಗವು ಪರಿಶುದ್ಧವಾಯಿತು. ಅದರ ಫಲವಾಗಿ ಅವರು ಸಗುಣ ಮಹೇಶನ ದರ್ಶನವನ್ನು ಪಡೆದರು. ಅವರು,
“ಹೊನ್ನ ಹಾವುಗೆಯ ಮೆಟ್ಟಿದವನ,
ಮಿಡಿಮುಟ್ಟಿನ ಕೆಂಜೆಡೆಯವನ
ಮೈಯಲ್ಲಿ ವಿಭೂತಿ ಧರಿಸಿದವನ
ಕರದಲ್ಲಿ ಕಪಾಲ ಪಿಡಿದವನ
ಅರ್ಧನಾರೀಯಾದವನ
ಎನ್ನ ಮನಕ್ಕೆ ಬಂದವನ
ಸದ್ಭಕ್ತರ ಹೃದಯಲ್ಲಿಪ್ಪವನ
ಮಾಡಿದ ಪೂಜೆಯಲೊಪ್ಪವನ
ಕೂಡಲಸಂಗಯ್ಯನೆಂಬವನ"
ಕಂಡರು. ಅವನ ಆದೇಶ ಪಡೆದರು. ಇಲ್ಲಿಗೆ ಈಶಾನ್ಯ ಮುನಿಗಳ ಕಾರ್ಯವು ಮುಗಿದಂತಾಗುವದು. ಮುಂದೆ ಅದನ್ನು ಪ್ರಭುದೇವರು ಮುಂದುವರಿಸಿದರು.