ಈ ಪುಟವನ್ನು ಪ್ರಕಟಿಸಲಾಗಿದೆ
93

ಸ್ವರ್ಗಮೃತ್ಯುಪಾತಾಳದೊಳಗೆ
ಒಬ್ಬನೇ ದೇವ ಕೂಡಲಸಂಗಮದೇವ !

ಮುಂದೆ ಈ ಏಕೋದೇವನೇ ತಮ್ಮ ಸಾರಸರ್ವಸ್ವ, ತಮ್ಮ ಗತಿ ಮತಿ ಎಂದು ಅವರು ಭಾವಿಸಿದರು.

ತಂದೆ ನೀನು, ತಾಯಿ ನೀನು ;
ಬಂಧು ನೀನು ಬಳಗ ನೀನು ;
ನೀನಲ್ಲದೆ ಮತ್ತಾರೂ ಇಲ್ಲವಯ್ಯಾ.
ಕೂಡಲಸಂಗಮದೇವಾ,
ಹಾಲಲದ್ದು ನೀರಲದ್ದು,
ಎನ್ನಾಪತ್ತು ಸುಖದುಃಖ ನೀನೇ ಕಂಡಯ್ಯಾ.
ಮತ್ತಾರೂ ಇಲ್ಲ ; ಹರಹರಾ ನೀನೇ ಕಂಡಯ್ಯಾ !
ಎನ್ನ ಮಾತಾಪಿತನೂ ನೀನೇ ಕಂಡಯ್ಯಾ !
ಕೂಡಲಸಂಗಮದೇವಾ !

ಎಂದು ಬಸವಣ್ಣನವರು ಪರಶಿವನಿಗೆ ಅರಿಕೆ ಮಾಡಿಕೊಂಡರು. ತರುವಾಯ ಆತನ ಒಲುಮೆ ಇಲ್ಲದೆ ಏನೂ ಲಭಿಸದು, ಆತನ ಕರುಣವೇ ಆತನನ್ನು ಕಾಣಿಸಬಲ್ಲದು. 'ಯಮೇವೇಷ ವೃಣುತೇ ತೇನ ಲಭ್ಯಃ ಆತನೊಲಿದವನೇ ಆತನನ್ನರಿವ, ಆತನ ಕರುಣವು ಅಸಾಧ್ಯವಾದುದನ್ನು ಸಾಧ್ಯಗೊಳಿಸುವದು ಎಂದು ಅವರಿಗೆನಿಸಿತು.

ನೀನೊಲಿಯಿತ್ತೇ ಪುಣ್ಯ; ನೀನೊಲ್ಲದುದೇ ಪಾಪ ಕಂಡಯ್ಯಾ,
ಸಕಲ ಜೀವದೊಳಗೆ ಅನುಶ್ರುತನಾಗಿದ್ದೆಯಯ್ಯಾ,
ನೀನೊಲಿದವನೇ ನಿಮ್ಮನ್ನರಿವನು.
ಪ್ರಸಾದಾದ್ದೇವತಾಭಕ್ತಿಃ । ಪ್ರಸಾದೋ ಭಕ್ತಿಸಂಭವಃ ।
ಯಥಾಂಕುರಸ್ತಥಾ ಬೀಜಂ । ಬೀಜತೋ ವಾ ತಥಾಂಕುರಃ ।।
ನೀನೊಲಿದವನೇ ಧನ್ಯ ಜಗಕ್ಕೆ ಪಾವನ,
ಕೂಡಲಸಂಗಮದೇವಾ !