ಈ ಪುಟವನ್ನು ಪ್ರಕಟಿಸಲಾಗಿದೆ
121

ಶರಣರ ಮಾರ್ಗದರ್ಶನದಿಂದ ಸಾಕ್ಷಾತ್ಕಾರವು ಸಹಜವಾಗಿ ಪ್ರಾಪ್ತವಾಗಬಹುದು, ಎಂಬುದು ಬಸವಣ್ಣನವರ ಆಶ್ವಾಸನ.
ಸದ್ಗುಣ ಸಂಪಾದನೆ :
ಶರಣರಾದ ಸದ್ಗುರುಗಳು ಭಕ್ತರಿಗೆ ಸದಾಚಾರ ಸದ್ಭಕ್ತಿಗಳ ಸಾಧನವನ್ನು ಅರುಹುವರು. ಸದ್ಗುಣಗಳ ಸಂಪಾದನವೇ ಸದಾಚಾರ. ಬಸವಣ್ಣನವರು ಎಲ್ಲ ಸಂತರಂತೆ ಕೆಲ ಪ್ರಧಾನ ಸದ್ಗುಣಗಳನ್ನು ಆಯ್ದು ಅವನ್ನು ತಮ್ಮ ಜೀವನದಲ್ಲಿ ಬಳಸಲು ಭಕ್ತರಿಗೆ ಉಪದೇಶಿಸಿರುವರು. ಅವರು ಮೊದಲು ಪ್ರತಿಯೊಬ್ಬರು ತಮ್ಮ ತಮ್ಮ ಅವಗುಣಗಳನ್ನು ಅಳಿಸಲು ಪ್ರಯತ್ನಿಸಬೇಕು. ಅನ್ಯರನ್ನು ತಿದ್ದಲು ಹವಣಿಸಬಾರದು, ಎಂದು ಹೇಳಿರುವರು.
ಲೋಕದ ಡೊಂಡ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ
ಮೆಚ್ಚ ಕೂಡಲಸಂಗಮದೇವ
ಈ ಬಗೆಯ ಎಚ್ಚರವನ್ನು ಕೊಟ್ಟು ಬಸವಣ್ಣನವರು ಸದ್ಗುಣಗಳನ್ನೂ ಅವುಗಳ ಮುಕುಟಮಣಿಯಾದ ಸತ್ಯವನ್ನೂ ಸಂಪಾದಿಸಲು ಒಳ್ಳೆಯ ಒತ್ತಾಯದಿಂದ ಬೋಧಿಸಿರುವರು :
ಆನೆಯನೇರಿಕೊಂಡು ಹೋದಿರೆ ನೀವು:
ಕುದುರೆಯನೇರಿಕೊಂಡು ಹೋದಿರೆ ನೀವು ;
ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರೆ, ಅಣ್ಣಾ?
ಸತ್ಯದ ನಿಲವನರಿಯದೆ ಹೋದಿರಲ್ಲಾ !
ಸದ್ಗುಣವೆಂಬ ಫಲವ ಭಿತ್ತಿ ಬೆಳೆಯದೆ ಹೋದಿರಲ್ಲಾ !
ಅಹಂಕಾರವೆಂಬಸದ ಮದಗಜವೇರಿ
ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ!