ಈ ಪುಟವನ್ನು ಪ್ರಕಟಿಸಲಾಗಿದೆ
150

ಕಾರಣನಾದವನು. ಅವೆಲ್ಲ ಆತನಲ್ಲಿಯೇ ಮೊಳೆಯುವವು, ಆತನಲ್ಲಿಯೇ ಬಾಳುವವು, ಬೆಳೆಯುವವು. ಆತನಲ್ಲಿಯೇ ಅಳಿಯುವವು. ಆತನನ್ನು ಯಾವ ರೂಪದಲ್ಲಿಯೂ ಪೂಜಿಸಬಹುದು. ಯಾವ ನಾಮದಿಂದಲೂ ನೆನೆಯಬಹುದು. ಬೇರೆ ಬೇರೆ ಭಕ್ತರ ಭಾವದೊಲು, 'ಅವರವರ ದರುಶನಕೆ, ಅವರವರ ವೇಷದಲಿ, ಆತನೇ ನಿಲ್ಲುವ' ಎಂಬ ಮಹೋನ್ನತ ಸಂದೇಶವನ್ನು ಬೇರೆ ಒಬ್ಬ ಹಿರಿಯ ಶರಣರು ಸಲ್ಲಿಸಿ ಇರುವರು.
ಶ್ರೀ ಬಸವಣ್ಣನವರು ಸಾಕ್ಷಾತ್ಕರಿಸಿಕೊಂಡ ಪರಮಶಿವನು- ಭಗವಂತನು ಸಚ್ಚಿದಾನಂದನು, ಜ್ಯೋತಿರ್ಮಯನು, ಪರಮಾನಂದ- ಮಯನು. ಆತನು ಅಣೋರಣೀಯಾನ್, ಮಹತೋ ಮಹೀಯಾನ್' “ಕಿರಿಯದಕ್ಕಿಂತ ಕಿರಿಯ, ಹಿರಿಯದಕ್ಕಿಂತ ಹಿರಿಯ !' ಓರ್ವ ಕವಿಯು ಬಣ್ಣಿಸಿದ ಮೇರೆಗೆ ಆತನು :
ಕಾಂತಿಸಾಗರ, ನಾದಸಾಗರ, ಅಮೃತಸಾಗರ ।
ಜ್ಞಾನ-ಬಲ-ಕಾರುಣ್ಯಸಾಗರ, ಶಾಂತಿಸಾಗರ ।
ಇರುವನು ! ಭಗವಂತನು ಇರುವದೆಲ್ಲಿ? ಎಲ್ಲೆಡೆಯಲ್ಲಿ ವಿಶೇಷವಾಗಿ ಶರಣರ ಹೃದಯದಲ್ಲಿ ದೇಹದೇಗುಲದಲ್ಲಿ 'ಎನ್ನದೇಹವೇ ದೇಗುಲ, ಕಾಲೇ ಕಂಭಗಳು, ಸಿರ ಹೊನ್ನ ಕಳಸವಯ್ಯಾ' ಎಂದು ಬಸವಣ್ಣನವರು ಉಸುರಿರುವರು. ಅವರ ಈ ಮಾತನ್ನೇ ಸರ್ವಜ್ಞನು ಈ ಬಗೆಯಾಗಿ ವಿಶದಗೊಳಿಸಿರುವ :
ದೇಹ ದೇವಾಲಯವು ಜೀವವೇ ಶಿವಲಿಂಗ ।
ಭಾವಪುಷ್ಪದಿ ಭಜಿಸಲು ಮುಕ್ತಿಸಂ ।
ದೇಹ ಬೇಡೆಂದ ಸರ್ವಜ್ಞ ॥
ದೇಹದೇವಾಲಯದಲ್ಲಿಯ ಆತ್ಮಲಿಂಗವನ್ನು ಭಾವಪುಷ್ಪಗಳಿಂದ ಭಜಿಸಿ ಮುಕ್ತಿಯನ್ನು ಪಡೆಯಲು ಅವನು ಬೋಧಿಸಿರುವ, ಭಕ್ತಿಯಿಂದ ಆತ್ಮನನ್ನು ಪರಮಾತ್ಮನನ್ನು ಭಜಿಸಿದರೆ ಮುಕ್ತಿಯು ನಿಸ್ಸಂದೇಹವಾಗಿ ಲಭಿಸುವದು ಎಂಬುದಾಗಿ ಆತನು ಬಸವಣ್ಣನವರ ಸಂದೇಶವನ್ನು ಅರುಹುವನು.