ಈ ಪುಟವನ್ನು ಪ್ರಕಟಿಸಲಾಗಿದೆ

8

ಸುವರ್ಣಶೇಖರನು ತಲೆದೂಗಿದನು. ಆ ದೈವಾಂಶ ಪುರುಷನು ಆತನನ್ನು ಕುರಿತು, "ಹಾಗಾದರೆ ನಿನಗೆ ಏತರಿಂದ ತೃಪ್ತಿಯಾಗುವುದು? ಎಲ್ಲಿ, ನೋಡೋಣ, ತಮಾಷೆಗಾದರೂ ಹೇಳು?" ಎಂದನು. ಸುವರ್ಣಶೇಖರನು ಹೇಳುವುದಕ್ಕೆ ಮನಸ್ಸು ಬಾರದೆ ಸ್ವಲ್ಪ ಕಾಲ ಸುಮ್ಮನಿದ್ದನು ಆದರೆ ಬಂದಿರುವ ಮಹಾತ್ಮನು ತನ್ನನ್ನು ಅನುಗ್ರಹಿಸುವುದಕ್ಕಾಗಿಯೇ ಹೀಗೆ ಹೇಳುತ್ತಿರಬಹುದೆಂದು ಭಾವಿಸಿ, ಕಾಲಹರಣಮಾಡಿದರೆ ಸಮಯವು ತಪ್ಪಿ ಹೋದೀತೆಂದು ಚಿಂತಿಸುತ್ತ, ಕೇಳಲೇ, ಬೇಡವೇ? ಹೇಗೆ ಕೇಳುವುದು? ಎಷ್ಟು ಬೇಕೆಂದು ಹೇಳುವುದು?" ಎಂದು ಸುವರ್ಣಶೇಖರನು ಡೋಲಾಯಮಾನಮಾನಸನಾಗಿದ್ದನು. ಕಡೆಗೆ ಒಂದು ಒಳ್ಳೆಯ ಯೋಚನೆಯು ಆತನ ಮನಸ್ಸಿಗೆ ಹೊಳೆದು "ಇದಾದರೆ ಸರಿ, ಇದನ್ನೇ ಹೇಗಾದರೂ ಕೇಳಬೇಕು" ಎಂದುಕೊಂಡು, ತಲೆಯನ್ನು ಎತ್ತಿ, ಅಪರಿಚಯಸ್ಥನ ಮುಖವನ್ನೇ ನೋಡಲಾರಂಭಿಸಿದನು. ಆಗ ಆ ಮಹಾಪುರುಷನು ಸುವರ್ಣಶೇಖರನನ್ನು ಕುರಿತು, "ಏನಯ್ಯಾ, ಅರಸೆ, ಕಡೆಗೆ ಏನೋ ಒಂದು ತೃಪ್ತಿಕರವಾದ ತೀರ್ಮಾನವನ್ನೆ ಮಾಡಿದಂತಿರುವೆ, ಅದೇನು? ನಿನ್ನ ಇಷ್ಟವನ್ನು ತಿಳಿಸು," ಎಂದನು. ಅದಕ್ಕೆ ಸುವರ್ಣಶೇಖರನು "ಎಲೈ ಮಹಾತ್ಮನೆ, ವಿಶೇಷವೇನೂ ಇಲ್ಲ. ಇಷ್ಟೊಂದು ಕಷ್ಟ ಪಟ್ಟುಕೊಂಡು ಈ ಚಿನ್ನವನ್ನು ಕೂಡಿಹಾಕುವುದು ನನಗೆ ಬಹು ಬೇಸರವಾಗಿದೆ. ಇಷ್ಟಾಗಿಯೂ ಕೂಡಿಹಾಕಿರುವ ರಾಶಿಯೂ ಸ್ವಲ್ಪವೆ. ನಾನು ಮುಟ್ಟಿದುದೆಲ್ಲವೂ ಚಿನ್ನವಾಗುತ್ತ ಹೋದರೆ ಸಾಕು" ಎಂದನು. ಇದನ್ನು ಕೇಳಿ ಆ ಮಹಾತ್ಮನು ಮುಗುಳುನಗೆ ನಕ್ಕು, "ಸುವರ್ಣಸ್ಪರ್ಶವೆ: ಶಹಬಾಸ್, ಸುವರ್ಣಶೇಖರನೆ, ಶಹಬಾಸ್! ಒಳ್ಳೆಯ ಯೋಚನೆಯನ್ನೇ ಮಾಡಿದೆ ಇಂತಹ ಯೋಚನೆಯ ಹೊಳೆದುದು ಅಸಾಧಾರಣವೇ ಸರಿ.