-೭೨-
ಹಿಡಿದ ಕಬ್ಬಿಣ ತುಂಡನ್ನೂ ಹುಡುಗರು ಪರೀಕ್ಷಿಸಿ ಬಂಡೆಗಳ ಮೇಲೆ ಆಮ್ಲಜನಕದ ಪರಿಣಾಮವನ್ನು ತಿಳಿಯಬಹುದು].
ನಾವಿರುವ ಊರಿನ ಬೀದಿಗಳನ್ನು ದಾಟಿ ಊರಹೊರಗೆ ಒ೦ದು ಬೈಲಿನಲ್ಲಿ ಸೇರಿ ಸುತ್ತಲು ಕಾಣುವ ನೆಲವನ್ನು ಕುರಿತು ಸ್ವಲ್ಪ ವಿಚಾರಮಾಡುವ. ನಮಗೆ ಕಾಣುವ ಪ್ರದೇಶವು ಗುಡ್ಡಗಾಡು, ಬೈಲು, ಇಳಕಲು ಇವುಗಳಲ್ಲಿ ಯಾವದೇ ಇರಲಿ ಅಲ್ಲಿ ನೆಲದ ಮೇಲೆ ಸಾಧಾರಣವಾಗಿ ಮಣ್ಣು ಹರಡಿರುವದು. ಮಣ್ಣು ಸಸ್ಯಗಳಿಗೆ ನಿಲ್ಲುವದಕ್ಕೆ ವಸತಿಯಾಗಿರುವದಲ್ಲದೆ ಅವು ಬದುಕಿ ಬಾಳುವದಕ್ಕೆ ಅವಶ್ಯವಾದ ಆಹಾರವನ್ನು ಒದಗಿಸುತ್ತದೆ. ನೆಲದ ಮೇಲೆ ಕಾಣುವ ಮಣ್ಣು ಕೆಲವು ಸ್ಥಳಗಳಲ್ಲಿ ಬಹಳ ಆಳದವರೆಗೂ ವ್ಯಾಪಿಸಿರುತ್ತದೆ. ಕೆಲವು ಸ್ಥಳಗಳಲ್ಲಿ ಮಣ್ಣು ಒಂದು ಅಡಿ(ಫೂಟ) ಅಥವಾ ಕೆಲವು ಇಂಚುಗಳು ಮಾತ್ರ ದಪ್ಪವಿದ್ದು ಅದರ ಕೆಳಗೆ ಬಿರುಸಾದ ಬಂಡೆ ಇರುತ್ತದೆ. ಒಂದು ಪ್ರದೇಶದಲ್ಲಿ ಆಳವಾದ ಒಂದು ತಗ್ಗನ್ನೂ ತೋಡಿದರೆ, ಮಣ್ಣು ಮತ್ತು ಅದರ ಕೆಳಗೆ ಇರುವ ತರಗಳು ಕಾಣುವವು. ಅವುಗಳನ್ನು ಮಣ್ಣು, ಕೆಳ ಮಣ್ಣು, ಬಂಡೆ ಎಂದು ಹೇಳುತ್ತೇವೆ. ನೆಲದ ಮೇಲ್ಭಾಗದಲ್ಲಿ ಕಾಣುವ ಮಣ್ಣು ಕೆಳಮಣ್ಣಿಗಿಂತ ಹೆಚ್ಚು ಕಪ್ಪಾಗಿರುತ್ತದೆ.
ಬಂಡೆಗಳಲ್ಲಿ ಭಿನ್ನ ಭಿನ್ನ ಜಾತಿಗಳಿರುವಂತೆ ಮಣ್ಣಿನಲ್ಲಿಯೂ ಭಿನ್ನ ಜಾತಿಗಳಿರುತ್ತವೆ. ಉಸುಬಿನ ಕಲ್ಲುಗಳಿಂದ ಬರುವ ಪುಡಿಯಿಂದ ಉಸುಬಿನ ಭೂಮಿಯುಂಟಾಗುತ್ತದೆ; ಕರೇಕಲ್ಲಿನಿಂದ ಆಗುವ ಪುಡಿಯಿಂದ ಕರೇಮಣ್ಣಿನ ಭೂಮಿ ಯುಂಟಾಗುತ್ತದೆ; ಸುಣ್ಣದ ಕಲ್ಲುಗಳಿಂದ ಬರುವ ಪುಡಿಯಿಂದ ಸುಣ್ಣದ ಭೂಮಿ ಯುಂಟಾಗುತ್ತದೆ. ಮಣ್ಣಿನಲ್ಲಿ ಯಾವ ಯಾವ ಅಂಶಗಳಿರುತ್ತವೆ? "ಯಾವದಾದರೂ ಒಂದು ಸ್ಥಳದಲ್ಲಿ ಮಳೆ ಬಂದಾಗ ನಾವು ತಿರುಗಾಡಿದರೆ, ನಮ್ಮ ಕಾಲಿಗೆ ಮಣ್ಣು ಅಂಟಿಕೊಳ್ಳುವದಷ್ಟೇ. ಮಣ್ಣಿನಲ್ಲಿ ಜಿಗಟು ಸ್ವಭಾವವಿರುವದೇ ಇದಕ್ಕೆ ಕಾರಣವು. ಪ್ರತಿಯೊಂದು ಜಾತಿಯ ಮಣ್ಣಿನಲ್ಲಿ ಜಿಗಟು ಗುಣವನ್ನು ಹೊಂದಿರುವ ಭಾಗವು (ಜೇಡಿ) ಕೆಲವು ಪ್ರಮಾಣದಿಂದ ಇದ್ದೇ ಇರುವದು. ಇದೇ ರೀತಿಯಲ್ಲಿ ಮಣ್ಣಿನಲ್ಲಿ ಉಸುಬಿನಂಶವು ಸೇರಿರುತ್ತದೆ. ಇದು ಕರೇ ಮಣ್ಣಿನಲ್ಲಿ ಕೆಂಪು ಅಥವಾ ಬಿಳೇ ಮಣ್ಣಿನಲ್ಲಿರುವಷ್ಟು ಹೆಚ್ಚಾಗಿರುವದಿಲ್ಲ. ಮಣ್ಣಿನಲ್ಲಿ ಉಸುಬಿನ ಭಾಗವು ಹೆಚ್ಚಾದರೆ, ಅದರ ಜಿಗಟು ಕಡಿಮೆಯಾಗುವದು. ಮಣ್ಣಿನಲ್ಲಿ ಇವೆರಡು ಭಾಗಗಳಲ್ಲದೆ ಸಸ್ಯಗಳ ಮತ್ತು ಪ್ರಾಣಿಗಳ ಸಂಬಂಧವಾದ ವಸ್ತುಗಳು ಸೇರಿರುತ್ತವೆ. ಈ ಕಾರಣದಿಂದಲೇ ನೆಲದ ಮೇಲಿರುವ ಮಣ್ಣು ಕೆಳಮಣ್ಣಿಗಿಂತ ಸ್ವಲ್ಪ ಕಪ್ಪಾಗಿರುತ್ತದೆ.