ಈ ಪುಟವನ್ನು ಪ್ರಕಟಿಸಲಾಗಿದೆ
೬೮
ಹಳ್ಳಿಯ ಚಿತ್ರಗಳು

ಅಲ್ಲಿ ಒಂದು ಗುರುತು ಸಿಕ್ಕಿದ ನಂತರ ಮತ್ತೆ ಹಿಂದಿರುಗಿಸಿ ಊರನ್ನು ಮುಟ್ಟಿದರು. ಎತ್ತಿನ ಬುದ್ದಿವಂತಿಕೆಗೆ ಮೆಚ್ಚಿ ಜೋಡಿದಾರರೇ ಆ ಎತ್ತುಗಳನ್ನು ಕೊಂಡುಕೊಂಡರು.

ನಾನು ಮೊದಲೇ ಹೇಳಿದಂತೆ ಜೋಡಿದಾರರಿಗೆ ಸಿಟ್ಟು ಬಂದರೆ ತಮ್ಮನ್ನು ತಾವು ಶಿಕ್ಷಿಸಿಕೊಳ್ಳುತ್ತಿದ್ದರೇ ಹೊರತು ಇತರರನ್ನು ಶಿಕ್ಷಿಸುತ್ತಿರಲಿಲ್ಲ. ನಮ್ಮ ಸ್ಕೂಲಿನಲ್ಲಿ ಈಗ ಕೆಲವು ವರ್ಷಗಳ ಹಿಂದೆ ಒಬ್ಬ ಮುಖ್ಯೋಪಾಧ್ಯಾಯರಿದ್ದರು. ಅವರು ಹುಡುಗರನ್ನು ಬಹಳವಾಗಿ ಹೊಡೆಯುತ್ತಿದ್ದರು. ಅವರು ಹುಡುಗರಾಗಿದ್ದಾಗ ಅವರಿಗೆ ಛಡಿ ಏಟು, ಕೋದಂಡ, ಕುರ್ಚಿ ಕೂರುವುದು, ಮುಂತಾದ ಶಿಕ್ಷೆಗಳೆಲ್ಲಾ ಆಗಿದ್ದುವಂತೆ. ಅದರಿಂದಲೇಯಂತೆ ಅವರು ವಿದ್ಯೆಯನ್ನು ಕಲಿತುದು. ಈ ಅಭಿಪ್ರಾಯದಿಂದಲೇ ಅವರು ಛಡಿ ಏಟಿಲ್ಲದೆ ವಿದ್ಯೆ ಬರುವುದಿಲ್ಲವೆಂದು ಹೇಳುತ್ತಾ, ಹುಡುಗರಿಗೆಲ್ಲಾ ಚೆನ್ನಾಗಿ ಏಟುಗಳನ್ನು ಕೊಡುತ್ತಿದ್ದರು. ಒಂದು ದಿವಸ ಜೋಡಿದಾರರ ಮಗನಿಗೆ, ಪಾಠ ಒಪ್ಪಿಸಲಿಲ್ಲವೆಂದು ಚೆನ್ನಾಗಿ ಏಟು ಬಿತ್ತು. ಅವನು ಅಳುತ್ತಾ ಮನೆಗೆ ಹೋಗಿ ತಂದೆಯೊಂದಿಗೆ ಹೇಳಿದನು. ಜೋಡಿದಾರರು ಕೈಯಲ್ಲಿ ಒಂದು ಬೆತ್ತವನ್ನು ಹಿಡಿದುಕೊಂಡು ಮಗನನ್ನೂ ಕರೆದುಕೊಂಡು, ಸ್ಕೂಲಿಗೆ ಬಂದರು. ಅವರನ್ನು ಕಂಡು ಮುಖ್ಯೋಪಾಧ್ಯಾಯರು “ಇವರು ನನ್ನನ್ನು ಏನು ಮಾಡುತ್ತಾರೋ" ಎಂದು ಬೆದರಿದರು. ಜೋಡಿದಾರರು ಬಂದು 'ಹೆಡ್ ಮಾಸ್ಟರನ್ನು' ಬಯ್ಯಲಿಲ್ಲ. ಸ್ಕೂಲಿನಲ್ಲಿ ಗಟ್ಟಿಯಾಗಿ ಮಾತನಾಡಲಿಲ್ಲ. ಮೊದಲೇ ಏಟು ತಿಂದು ಅಳುತ್ತಿದ್ದ ಮಗನನ್ನು ಕಂಬದ ಹತ್ತಿರ ನಿಲ್ಲಿಸಿ ಬಲವಾಗಿ ಹೊಡೆದರು. ಅನಂತರ ಮುಖ್ಯೋಪಾಧ್ಯಾಯರನ್ನು ಕುರಿತು "ಸ್ವಾಮಿ ತೃಪ್ತಿಯಾಯಿತೆ? ನಿಮ್ಮ ಕೆಲಸವನ್ನು ನಾನೇ ಮಾಡಿದ್ದೇನೆ” ಎಂದು ಹೇಳಿ ಮನೆಗೆ ಹೊರಟುಹೋದರು. ಮುಖ್ಯೋಪಾಧ್ಯಾಯರ ಮುಖವು ನಾಚಿಕೆಯಿಂದ ಪೆಚ್ಚಾಯಿತು. ಅಲ್ಲಿಂದ ಮುಂದೆ ಅವರು ಒಬ್ಬ ಹುಡುಗನನ್ನೂ ಹೊಡೆಯುವ ತಂಟೆಗೆ ಹೋಗಲಿಲ್ಲ.