ಈ ಪುಟವನ್ನು ಪ್ರಕಟಿಸಲಾಗಿದೆ
ನಮ್ಮ ಜೋಡಿದಾರರ ಕೆಲವು ಚಿತ್ರಗಳು
೬೯

೮. ಜೋಡಿದಾರರ ಹೊಟ್ಟೆಯ ಪ್ರಮಾಣವು

ಜೋಡಿದಾರರಿಗೆ ಹೊಟ್ಟೆ ಮಿತಿಮೀರಿ ಬೆಳೆದಿದ್ದಿತೆಂದು ಮೊದಲೇ ಹೇಳಿದ್ದೇನೆ. ಆದರೆ ಅವರಿಗೇನೋ ಅದು ನಂಬಿಕೆ ಇರಲಿಲ್ಲ. "ಯಾರಿಗೂ ಇಲ್ಲದ ಹೊಟ್ಟೆ ನನಗೇನು ಬಂದಿರೋದು” ಎಂದು ಅವರು ಕೇಳುತ್ತಿದ್ದರು. ಇದು ಒಂದುಸಲ ಅವರ ನಿದರ್ಶನಕ್ಕೆ ಬಂದುಬಿಟ್ಟಿತು. ಯಾರೋ ಒಬ್ಬ ಹುಡುಗನು ಅವರನ್ನು 'ಹೊಟ್ಟೆ ಜೋಡಿದಾರರು' ಎಂದುಬಿಟ್ಟನು. ಜೋಡಿದಾರರಿಗೆ ಬಹಳ ಸಿಟ್ಟು ಬಂದಿತು. ಅವನನ್ನು ಹೊಡೆಯಬೇಕೆಂದು ಓಡಿಸಿಕೊಂಡು ಹೊರಟರು. ಹುಡುಗ ಊರನ್ನು ಒಂದು ಸುತ್ತು ಸುತ್ತಿದ. ಮುಂದೆ ಓಡಲಾರದೆ ಸೋತು ಬಿದ್ದ. ಹಿಂದೆ ಶತ್ರುವು ಕಣ್ಣನ್ನು ಕೆಂಪಗೆ ಮಾಡಿಕೊಂಡು ಓಡಿಸಿಕೊಂಡು ಬರುತ್ತಿದ್ದಾನೆ, ಏನುಮಾಡುವುದು? ಊರ ಮುಂದೆ ಒಂದು ಆಂಜನೇಯನ ದೇವಸ್ಥಾನವಿದೆ. ಒಳಕ್ಕೆ ದನಕರುಗಳು ನುಗ್ಗದಂತೆ ಪ್ರಾಕಾರದ ಗೋಡೆಹಾಕಿದ್ದಾರೆ. ಬಾಗಿಲಿನ ಬದಲು ಒಂದು ಚಿಕ್ಕ ಕವಡಿಯಿದೆ. 'ಆವಶ್ಯಕತೆಯು ಮುಖ್ಯ ಉಪಾಧ್ಯಾಯ'ನೆಂಬ ಗಾದೆಯುಂಟಷ್ಟೆ. ಹುಡುಗನಿಗೆ ಕೂಡಲೆ ಹೊಳೆಯಿತು. ಅವನು ಕವಡಿಯನ್ನು ದಾಟಿ ಗುಡಿಯನ್ನು ಸೇರಿಬಿಟ್ಟನು. ಜೋಡಿದಾರರು ದಾಟುವುದಕ್ಕೆ ಹೋಗುತ್ತಾರೆ. ಹೊಟ್ಟೆಯೇ ಹಿಡಿಯಲಿಲ್ಲ. ಹುಡುಗ ಒಳಗಡೆ ಕೈಯಿಂದ ಚೇಷ್ಟೆ ಮಾಡುತ್ತಾ ಇವರನ್ನು ಹಾಸ್ಯಮಾಡಿ ನಗುತ್ತಲಿದ್ದ. ಆಗ ಜೋಡಿದಾರರಿಗೆ ಜನರು ತಮ್ಮನ್ನು ಹೊಟ್ಟೆಯ ಜೋಡಿದಾರನೆನ್ನುವುದರ ಅರ್ಥವು ಸ್ಪಷ್ಟವಾಯಿತು.

ಸುಪ್ರಸಿದ್ದ ಆಂಗ್ಲೇಯ ಪ್ರಬಂಧಕಾರನಾದ 'ಅಡಿಸನ್' ಎಂಬುವನು ತನ್ನ 'ಸ್ಪೆಕ್ಟೇಟರ್' ಪತ್ರಗಳೊಂದರಲ್ಲಿ ಒಂದು ಬೊಜ್ಜು ಬೆಳೆದವರ ಸಂಘದ ವಿಷಯವನ್ನು ಹೇಳುತ್ತಾನೆ. ಆ ಸಂಘಕ್ಕೆ ಸದಸ್ಯರಾಗಲು ಕೆಲವು ನಿಯಮಗಳಿದ್ದುವಂತೆ. ಅವುಗಳಲ್ಲಿ ಅತ್ಯಂತ ಪ್ರಾಮುಖ್ಯವಾದುದು ಈ ಮುಂದೆ ಹೇಳುವುದು. ಸಂಘದ ಕಛೇರಿಯಲ್ಲಿ ಎರಡು ಕವಡಿಗಳಿದ್ದುವಂತೆ. ಒಂದು ಕವಡಿಯು ಬಹಳ ದೊಡ್ಡದಾಗಿ ಅದರ ಮೂಲಕ ಯಾರು ಬೇಕಾದರೂ ನುಸಿಯಬಹುದಾಗಿದ್ದಿತಂತೆ. ಮತ್ತೊಂದು ಸ್ವಲ್ಪ ಚಿಕ್ಕದು.